ಕೊಡಗಿನ ಅಡುಗೆಯಲ್ಲಿ ಬಳಕೆಯಾಗುವ ಕಾಚಂಪುಳಿ ಬಗ್ಗೆ ಗೊತ್ತಾ? ಇದರಲ್ಲಿರುವ ಆರೋಗ್ಯಕಾರಿ ಗುಣಗಳೇನು?

ಹಿಂದಿನ ಕಾಲದಲ್ಲಿ ಕೊಡಗು ಹೀಗಿತ್ತಾ? ಎಂದು ಕೇಳಿದರೆ ಖಂಡಿತಾ ಇರಲಿಲ್ಲ ಎಂಬ ಉತ್ತರವೇ ಬರುತ್ತದೆ. ಆಗಿನ ಕಾಲದಲ್ಲಿ ಕೃಷಿಯೇ ಜೀವಾಳವಾಗಿತ್ತು. ಕೃಷಿಯೊಂದಿಗೆ ಬದುಕು ಕಟ್ಟಿಕೊಂಡು ಕಾಡಿನೊಂದಿಗೆ ಒಡನಾಟ ಹೊಂದಿದ್ದಲ್ಲದೆ, ಕಾಡು ಉತ್ಪನ್ನಗಳನ್ನು ಬಳಕೆ ಮಾಡಿಕೊಂಡು ಅದನ್ನು ನಿತ್ಯ ಆಹಾರಗಳಲ್ಲಿ ಬಳಕೆ ಮಾಡುತ್ತಾ ಅದರ ಆರೋಗ್ಯಕಾರಿ ಗುಣಗಳಿಂದ ರೋಗಮುಕ್ತ ಜೀವನ ನಡೆಸುತ್ತಾ ಬಂದಿದ್ದರು. ಇಂತಹ ಉತ್ಪನ್ನಗಳಲ್ಲಿ ಪಣಂಪುಳಿ(ಉಪ್ಪಾಗೆ)ಯಿಂದ ತಯಾರು ಮಾಡುವ ಕಾಚಂಪುಳಿಯೂ ಒಂದಾಗಿದೆ.
ಮುಂಗಾರು ಆರಂಭವಾಗುತ್ತಿದ್ದಂತೆಯೇ ಪಣಂಪುಳಿ(ಉಪ್ಪಾಗೆ) ಕೊಯ್ಲುಗೆ ಬರುತ್ತದೆ. ಸಾಮಾನ್ಯವಾಗಿ ಇದು ಕಾಡು ಉತ್ಪನ್ನವಾಗಿರುವುದರಿಂದ ನೆಟ್ಟು ಬೆಳೆಸುವುದಕ್ಕಿಂತ ಹೆಚ್ಚಾಗಿ ಕಾಡುಗಳಲ್ಲಿ, ತೋಟಗಳಲ್ಲಿ ಅದಾಗಿಯೇ ಹುಟ್ಟಿ ಬೆಳೆಯುತ್ತದೆ. ಇದು ಹಣ್ಣಾಗಿ ಉದುರಲು ಆರಂಭಿಸಿದಾಗ ಅದನ್ನು ಆಯ್ದು ತಂದು ಅದರಿಂದ ಕಾಚಂಪುಳಿ ತಯಾರು ಮಾಡಿ ಅದನ್ನು ಅಡುಗೆಯಲ್ಲಿ ಬಳಕೆ ಮಾಡುವುದು ಹಿಂದಿನಿಂದಲೂ ನಡೆದು ಬಂದಿದೆ.
ಅದರಲ್ಲೂ ಅಡುಗೆಗಳಲ್ಲಿ ಕಾಚಂಪುಳಿ ಹೆಚ್ಚು ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಇದೊಂದು ಕಾಡು ಉತ್ಪನ್ನವಾಗಿದ್ದು, ಕೊಡಗಿನ ಕಾಡುಗಳಲ್ಲಿ, ಕಾಫಿ ತೋಟಗಳ ನಡುವೆ ಮರವಾಗಿ ಬೆಳೆಯುತ್ತದೆ. ಕಾಡಿನಲ್ಲಿ ಮರವಾಗಿ ಬೆಳೆಯುವ ಉಪ್ಪಾಗೆ ಮಳೆಗಾಲದಲ್ಲಿ ಹಣ್ಣಾಗುತ್ತದೆ. ಈ ಹಣ್ಣನ್ನು ತಂದು ಅದರೊಳಗಿನ ಬೀಜಗಳನ್ನು ತೆಗೆದು ಒಣಗಿಸಲಾಗುತ್ತಿದೆ. ಇದಕ್ಕೆ ಉತ್ತಮ ಬೆಲೆಯೂ ಇದೆ. ಇದರ ಜೊತೆಗೆ ಇದೇ ಹಣ್ಣನ್ನು ಕೊಳೆಯಲು ಹಾಕಿ ಅದರಿಂದ ಬರುವ ರಸವನ್ನು ಚೆನ್ನಾಗಿ ಕುದಿಸಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅದನ್ನು ಬಾಟಲಿಯಲ್ಲಿ ತುಂಬಿಸಿಟ್ಟುಕೊಳ್ಳುತ್ತಾರೆ. ಅದುವೇ ಕಾಚಂಪುಳಿಯಾಗಿದೆ.
ಕಾಚಂಪುಳಿಯನ್ನು ಅಡುಗೆ ಮತ್ತು ಕೆಲವು ಸಂದರ್ಭಗಳಲ್ಲಿ ಮನೆ ಔಷಧಿಯಾಗಿಯೂ ಬಳಸಿಕೊಳ್ಳಲಾಗುತ್ತದೆ. ಇನ್ನು ಕಾಚಂಪುಳಿ ತಯಾರು ಮಾಡುವ ಉಪ್ಪಾಗೆಯನ್ನು ಹಿಂದಿಯಲ್ಲಿ ಬಿಲಿಟಿ ಆಮ್ಲಿ, ಇಂಗ್ಲೀಷ್‌ನಲ್ಲಿ ಮಲಬಾರ್ ಗಾಂಬೂಗೆ, ತುಳುವಿನಲ್ಲಿ ಮಂತಪುಳಿ, ಮಲೆಯಾಳಂನಲ್ಲಿ ಕುಟ್ಟಪುಳಿ, ತಮಿಳುವಿನಲ್ಲಿ ಕೊಟುಕ್ಕಾಪುಳಿ, ತೆಲುಗಿನಲ್ಲಿ ವೃಕ್ಷಾಮ್ಲ ಎಂದು ಕರೆಯಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಗಾರ್ಸಿನಿಯಾ ಇಂಡಿಕಾ.
ಈ ಉಪ್ಪಾಗೆಯಲ್ಲಿರುವ ‘ಹೈಡಾಕ್ಸಿ ಸಿಟ್ರಿಕ್’ ಎಂಬ ವಸ್ತುವಿಗೆ ಮಾನವನ ದೇಹದ ಕೊಬ್ಬನ್ನು ಕರಗಿಸುವ ಶಕ್ತಿ ಇದೆ. ಗಾರ್ಸಿನಿಯಾ ಕುಟುಂಬಕ್ಕೆ ಸೇರಿದ ಎಲ್ಲಾ ಪ್ರಬೇಧದ ಹಣ್ಣುಗಳಲ್ಲಿಯೂ ಸಹಾ ಕೊಬ್ಬು ಕರಗಿಸಲು ಸಹಕಾರಿಯಾಗಬಲ್ಲಂತಹ ರಾಸಾಯನಿಕಗಳು ಕಂಡುಬಂದಿದೆ. ಆದರೆ, ಉಪ್ಪಾಗೆಯ ಹಣ್ಣುಗಳಲ್ಲಿ ಇದು ಹೇರಳವಾಗಿದೆ ಎಂದು ಬೆಂಗಳೂರಿನ ಇಕೋ ವಾಚ್ ಸಂಸ್ಥೆಯ ಸಸ್ಯ ಸಂಶೋಧನಾ ಸಹಾಯಕ ಎಂ.ಬಿ.ನಾಯ್ಕ ಕಡಕೇರಿ ಅಭಿಪ್ರಾಯಪಟ್ಟಿದ್ದಾರೆ.
ಮಾರ್ಚ್‌ನಲ್ಲಿ ಹೂ ಬಿಟ್ಟು ಜೂನ್ ಜುಲೈ ತಿಂಗಳಲ್ಲಿ ಹಣ್ಣಾಗುತ್ತದೆ. ಬಿದ್ದ ಅಥವಾ ಕೊಯ್ಲು ಮಾಡಿದ ಹಣ್ಣು ಕಾಯಿಗಳನ್ನು ಹೆಣೆದ ಬಿದಿರುವಿನ ತಟ್ಟಿ, ಕಬ್ಬಿಣದ ಪರದೆ ಮೇಲೆ ಬೆಂಕಿಯ ಶಾಖದಿಂದ ಒಣಗಿಸಿ ಬಳಿಕ ಮಾರಾಟ ಮಾಡಲಾಗುತ್ತದೆ. ಈ ಹಣ್ಣನ್ನು ಒಣಗಿಸಿ ಬಳಿಕ ಬೇಯಿಸಿ ಅದರಿಂದ ಬಿಡುವ ರಸವನ್ನು ಅಥವಾ ಹಣ್ಣನ್ನು ನೇರವಾಗಿ ಕೊಳೆಯಲು ಹಾಕಿ ಅದರಿಂದ ಸಿಗುವ ದ್ರವವನ್ನು ಮಣ್ಣಿನ ಮಡಕೆಯಲ್ಲಿ ಚೆನ್ನಾಗಿ ಕುದಿಸುತ್ತಾ ಹೋಗಿ ಕೊನೆಯಲ್ಲಿ ಗಟ್ಟಿಯಾಗುವ ಕಪ್ಪಗಿನ ದ್ರವವೇ ಕಾಂಚಪುಳಿ. ಇದನ್ನು ಹಂದಿಮಾಂಸ ಮತ್ತು ಮೀನು ಸಾರಿಗೆ ಇದನ್ನು ಬಳಸುವುದರಿಂದ ರುಚಿ ಹೆಚ್ಚುವುದಲ್ಲದೆ, ಆರೋಗ್ಯಕ್ಕೂ ಸಹಕಾರಿಯಾಗಿದೆ.
ಇದು ಜಂತುಹುಳು ನಿವಾರಣೆಗೆ ಅಪೂರ್ವ ಔಷಧಿ. ಹಣ್ಣಿನ ಸಿಪ್ಪೆಯಲ್ಲಿರುವ ಆಮ್ಲದಿಂದ ಕೊಲೆಸ್ಟ್ರಾಲ್ ಮತ್ತು ಬೊಜ್ಜು ನಿಯಂತ್ರಕ. ಕಾಲಿನ ಬಿರುಕುಗಳಿಗೆ ಇದರ ಬೀಜದ ಎಣ್ಣೆಯನ್ನು ಸವರುವುದರಿಂದ ಬಿರುಕು ಮುಚ್ಚುತ್ತದೆ. ಕೆಮ್ಮು ಗಂಟಲು ಕಟ್ಟಿಕೊಳ್ಳುವುದು ಕಂಡು ಬಂದರೆ ಗಂಟಲಿಗೆ ಕಾಚಂಪುಳಿಯನ್ನು ಹಚ್ಚಿ ಅದರ ಮೇಲೆ ತೆಳುವಾಗಿ ಸುಣ್ಣ ಸವರಿದರೆ ಗಂಟಲು ನೋವು ಕಡಿಮೆಯಾಗುತ್ತದೆ. ಬೀಜದಿಂದ ತೆಗೆದ ಎಣ್ಣೆಯನ್ನು ತುಪ್ಪದಂತೆ, ಎಣ್ಣೆಯಂತೆ ಅಡುಗೆಗೂ ಬಳಸಲಾಗುತ್ತಿದೆ. ಕಾಚಂಪುಳಿ ತಯಾರಿ ಕಷ್ಟದ ಕೆಲಸ ಜತೆಗೆ ಸೌದೆಯೂ ಹೆಚ್ಚಾಗಿ ಬಳಸಲ್ಪಡುವುದರಿಂದ ಉತ್ಪಾದನೆ ಕಡಿಮೆಯಾಗುತ್ತಿದೆ. ಬೇಡಿಕೆ ಹೆಚ್ಚುತ್ತಿದೆ.
B.M.Lavakumar