ArticlesLatest

ಮೈಸೂರಿನಲ್ಲಿ ಬಾಲ್ಯದ ದಿನಗಳನ್ನು ನೆನಪಿಸುತ್ತಿರುವ “ಕಥೆ ಕೇಳೋಣ ಬನ್ನಿ” ವಿಶಿಷ್ಟ ಕಾರ್ಯಕ್ರಮ

ಸಾಂಸ್ಕೃತಿಕ  ನಗರಿ ಮೈಸೂರಿನ ಕುವೆಂಪು ನಗರದಲ್ಲಿರುವ ಡಾ ಸಿಂಧುವಳ್ಳಿ ಅನಂತಮೂರ್ತಿ ರವರ ಮನೆ  ಮೊದಲ “ಗೃಹರಂಗ”- ಎಂದೇ ಪ್ರಸಿದ್ಧಿ ಪಡೆದಿದೆ!. ಅದೇ ಸುರುಚಿ ರಂಗಮನೆಯ ಕಲಾಸುರುಚಿ!. ವಾಸವಾಗಿದ್ದ ಮನೆಯನ್ನೇ ಅನೇಕ ರಂಗ ಚಟುವಟಿಕೆ, ಸಾಹಿತ್ಯ ಕಾರ್ಯಕ್ರಮಗಳಿಗೆ ಮೀಸಲಿಟ್ಟಿರುವುದು ಈ ಒಂದು ಮನೆಯ ವಿಶೇಷ!.  ಈಗಲೂ ಕೂಡ ಈ ಒಂದು ಸುರಚಿ ರಂಗಮನೆಯನ್ನು ಶ್ರೀಮತಿ ವಿಜಯಾ ಸಿಂಧುವಳ್ಳಿ ಅವರ ಸಾರಥ್ಯದಲ್ಲಿ ನಡೆಯುತ್ತಾ ಹೋಗುತ್ತಿದೆ.  

ಸಿಂಧುವಳ್ಳಿ ಅನಂತಮೂರ್ತಿಯವರು ಇದ್ದ ಕಾಲದಿಂದಲೂ ಕೂಡ ಇಲ್ಲಿಗೆ ಅನೇಕ ಪ್ರಸಿದ್ಧ ವ್ಯಕ್ತಿಗಳು, ಸಾಹಿತಿಗಳು ಬರುತ್ತಿದ್ದರು. ಸಿಂಧುವಳ್ಳಿ ಅನಂತಮೂರ್ತಿ ಅವರ ನಿಧನದ ನಂತರ ಅವರ ಶ್ರೀಮತಿ ವಿಜಯಾ ಸಿಂಧುವಳ್ಳಿ ರವರು ಅವರ ಮನೆಯಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಮುಖ್ಯವಾಗಿ ಇಲ್ಲಿ ಒಂದು ನಿಯಮದಂತೆ ಕಾರ್ಯಕ್ರಮಗಳು ನಡೆಯುತ್ತವೆ. ಸಾರ್ವಜನಿಕ ವ್ಯಕ್ತಿಗಳು ನಡೆಸುವ ಕಾರ್ಯಕ್ರಮಗಳಿಗೆ ಹೆಚ್ಚಾಗಿ ಅವಕಾಶ ಕೊಡುವುದಿಲ್ಲ. ಆದರೇ ರಂಗ ಚಟುವಟಿಕೆಗಳಿಗೆ, ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಮೀಸಲಾಗಿದೆ.

ಸಿಂಧುವಳ್ಳಿ ಅನಂತಮೂರ್ತಿಯವರ ಮಗಳಾದ ಸುಮನಾ ಡೊಂಗ್ರೆ ಮತ್ತು ಅಳಿಯ ಶಶಿಧರ್ ಡೊಂಗ್ರೆ ಕಾರ್ಯಕ್ರಮಗಳ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಇವರಿಬ್ಬರೂ ಕೂಡ ಸಾಹಿತ್ಯ, ನಾಟಕ ಜೊತೆಗೆ ಅನೇಕ ಪುಸ್ತಕಗಳಿಗೆ ಲೇಖನಗಳನ್ನು ಬರೆಯುವುದರ ಮೂಲಕ ಮತ್ತಷ್ಟು ಮಾಹಿತಿಯನ್ನು ನೀಡುತ್ತಿದ್ದಾರೆ. ಇವರ ಜೊತೆಯಲ್ಲಿ ಸಂಚಾಲಕರಾದ  ನಾಗರಾಜು ಮತ್ತು ಬಾಲಕೃಷ್ಣಯ್ಯ ಇವರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೆ ಪ್ರದೀಪ್ ರವರು ಯೂಟ್ಯೂಬ್ ಲೈವ್ ಮಾಡಲು ನೆರವಾಗುತ್ತಿದ್ದಾರೆ. ಜೊತೆಗೆ ನಾಟಕ ಕಾರ್ಯಕ್ರಮಗಳಲ್ಲೂ ಕೂಡ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕಲಾಸುರುಚಿಯಲ್ಲಿ ಮೂರು ಕಾರ್ಯಕ್ರಮಗಳು ಜನಪ್ರಿಯತೆ ಪಡೆದಿವೆ. ವಾರದ ಕಾರ್ಯಕ್ರಮವಾದ “ಕಥೆ ಕೇಳೋಣ ಬನ್ನಿ”, ತಿಂಗಳಿಗೆ ಒಮ್ಮೆ ಎರಡನೆಯ ಭಾನುವಾರ “ಸೈನ್ಸ್ ಸಂಜೆ”, ಪ್ರತೀ ತಿಂಗಳಿಗೊಮ್ಮೆ “ಸಾಹಿತ್ಯ ಚಾವಡಿ”  ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತದೆ.  ಈ ಮೂರು ಕಾರ್ಯಕ್ರಮಗಳಿಗೂ ಕೂಡ ವೀಕ್ಷಕರು ಹೆಚ್ಚಾಗಿ ಆಗಮಿಸುತ್ತಿರುವುದು ವಿಶೇಷ!. ಕಾರ್ಯಕ್ರಮದಿಂದ ಕಾರ್ಯಕ್ರಮಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಅಲ್ಲದೆ ಅನೇಕ ರಂಗ ಚಟುವಟಿಕೆಗಳು ಕೂಡ ನಡೆಯುತ್ತವೆ. ಸಮಾನ ಮನಸ್ಕರು ಕೂಡ ಇಲ್ಲಿ ಚರ್ಚಾ ಕಾರ್ಯಕ್ರಮಗಳನ್ನ ಆಯೋಜನೆ ಮಾಡುತ್ತಾರೆ. ಜೊತೆಗೆ ಸಾಹಿತ್ಯ ಪುಸ್ತಕಗಳ ಬಿಡುಗಡೆ, ಸಂವಾದ, ಚರ್ಚೆ ಒಟ್ಟಿನಲ್ಲಿ  ನಿರಂತರವಾಗಿ ಯಾವುದಾದರೂ ಚಟುವಟಿಕೆಗಳು ಇಲ್ಲಿ ನಡೆಯುತ್ತವೆ.

ಮುಖ್ಯವಾಗಿ ಮಕ್ಕಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ “ಕಥೆ ಕೇಳೋಣ ಬನ್ನಿ” ಕಾರ್ಯಕ್ರಮವು ಒಂದು ದಾಖಲೆಯನ್ನು ನಿರ್ಮಿಸಿದೆ. ಕಳೆದ ವಾರ 900 ಕಂತನ್ನು ಪೂರೈಸಿದೆ. ಮೊನ್ನೆ ಶನಿವಾರ 11.10.2025 ರಂದು ನಡೆದ 901 ನೇ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಲು ಅವಕಾಶ ಸಿಕ್ಕಿತು!. ಆ ದಿನ ನಾನು ಆರು ಕಥೆಗಳನ್ನು ಮಕ್ಕಳಿಗೆ ಹೇಳಿದೆ. ವಿಶಿಷ್ಟ ರೀತಿಯಲ್ಲಿ ನನಗೆ ಅನುಭವವಾಯಿತು. ಇದೇ ಕಲಾಸುರಚಿಯಲ್ಲಿ ನಾನು ನೂರಾರು ಕಥೆಗಳನ್ನ ಕೇಳಿದ್ದೇನೆ. ಒಬ್ಬೊಬ್ಬರೂ ಒಂದೊಂದು ಕಥೆಯನ್ನು ಹೇಳುವಾಗಲು ಕೂಡ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನ ಕೇಳಬಹುದು. ಜೊತೆಗೆ ಈ ಒಂದು ಕಾರ್ಯಕ್ರಮದಲ್ಲಿ ವಿಭಿನ್ನ ಪೌರಾಣಿಕ, ಇತಿಹಾಸ, ಸಾಹಿತ್ಯ, ರಾಜ ರಾಣಿಯರ ಕಥೆಗಳು, ಇನ್ನಿತರ ಕಥೆಗಳು ಕೂಡ ಬಂದಿವೆ. ಅದರಲ್ಲೂ ಪಂಚತಂತ್ರ, ರಾಮಾಯಣ ಮಹಾಭಾರತದಂತ ಪಾತ್ರಗಳನ್ನು ಒಳಗೊಂಡ, ಪ್ರಾಣಿ-ಪಕ್ಷಿ, ವ್ಯಕ್ತಿ, ರಾಜರು ಹೀಗೆ ಅನೇಕ ಕಥೆಗಳು ಮಕ್ಕಳಿಗೆ ಒಂದಲ್ಲ ಒಂದು ರೀತಿಯ ಸಂದೇಶವನ್ನು ನೀಡುತ್ತವೆ.

ಜನಮನದಲ್ಲಿ ವಿವಿಧ ಲೇಖನಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅದರಿಂದಾಗಿ ಈ ಕಾರ್ಯಕ್ರಮಕ್ಕೆ ವಾರದಿಂದ ವಾರಕ್ಕೆ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕರೆದುಕೊಂಡು ಬರುತ್ತಿದ್ದು ಒಂದು ರೀತಿಯಲ್ಲಿ ಆರೋಗ್ಯಕರ ಬೆಳವಣಿಗೆಯಾಗಿದೆ. ಏಕೆಂದರೆ ಇವತ್ತಿನ ಕಾಲದಲ್ಲಿ ಓದೇ ಮುಖ್ಯ ಎನ್ನುವಂತಾಗಿದ್ದು, ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ. ಕ್ರಿಯಾತ್ಮಕವಾಗಿ ಆಟಗಳನ್ನು ಕೂಡ ಆಡುತ್ತಿಲ್ಲ. ಅದರಿಂದ ಶಾಲೆ ಬಿಟ್ಟ ನಂತರ ಮನೆಯ ನಾಲ್ಕು ಗೋಡೆಗಳ ನಡುವೆ ಬಂದಿಯಾಗಿದ್ದಾರೆ. ಅವರಿಗೆ ಒಂದು ರೀತಿಯಲ್ಲಿ ಏಕಾಂಗಿತನ ಕಾಡುತ್ತಿದೆ. ಇದರಿಂದಾಗಿ ಅನೇಕ ಮಾನಸಿಕ, ದೈಹಿಕ ರೋಗಗಳು ಕೂಡ ಬರುತ್ತಿವೆ. ಆರೋಗ್ಯ ಅಂಕಿ ಅಂಶದ ಪ್ರಕಾರ ಚಿಕ್ಕ ಮಕ್ಕಳಲ್ಲೇ ಕೂಡ ಹೃದಯಾಘಾತ ಹೆಚ್ಚಾಗಿ ಸಂಭವಿಸುತ್ತಿದೆ. ಏಕೆಂದರೆ ಮಕ್ಕಳು ಯಾವುದೇ ಒಂದು ಪಠ್ಯೇತರ ಚಟುವಟಿಕೆಗಳಲ್ಲಿ, ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಇರುವುದರಿಂದ ಈ ಸಮಸ್ಯೆಯು ನಿರಂತರವಾಗಿ ಕಾಡುತ್ತಿದೆ.

ಸುರುಚಿ ರಂಗಮನೆಯ ಸಂಚಾಲಕರಲ್ಲಿ ಒಬ್ಬರಾದ ಬಾಲಕೃಷ್ಣಯ್ಯ ರವರು ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ…… ಈ ಒಂದು ಕಾರ್ಯಕ್ರಮ ದಲ್ಲಿ ನಾವು ಕೂಡ ಕಥೆಯನ್ನ ಕೇಳುತ್ತ ಒಂದಲ್ಲ ಒಂದು ರೀತಿಯಲ್ಲಿ ಮತ್ತಷ್ಟು ಅನುಭವ ಸಿಗುತ್ತಿದೆ. ಜೊತೆಗೆ ಮಕ್ಕಳಿಗೆ ಕತೆ ಹೇಳುವುದರಿಂದ ಮಕ್ಕಳಲ್ಲಿ ಆಸಕ್ತಿ ಜೊತೆಗೆ ಅವರ ಕಲ್ಪನಾ ಲಹರಿ ವಿಸ್ತಾರವಾಗುತ್ತಿದೆ. ಅವರ ವ್ಯಕ್ತಿತ್ವ ವಿಕಸನವಾಗುತ್ತಿದೆ. ವಿಜಯಾ ಸಿಂಧುವಳ್ಳಿ ಅವರ ನಿರಂತರ ಪ್ರೋತ್ಸಾಹದಿಂದ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಹೋಗುತ್ತಿದ್ದೇವೆ.  ಅದರಲ್ಲೂ “ಪದಕೋಶ”ದಲ್ಲಿ ಪ್ರತಿವಾರವೂ ಕೂಡ ಮಕ್ಕಳ ಭಾಷಾ ಶುದ್ಧತೆಗೆ ಹೆಚ್ಚು ಹೊತ್ತು ನೀಡುತ್ತಿದ್ದೇವೆ ಎನ್ನುತ್ತಾರೆ.

ನಾಗರಾಜುರವರು ಮಾತನಾಡುತ್ತಾ……. ನಾವೂ ಪ್ರತಿವಾರವೂ ಕೂಡ ಒಬ್ಬೊಬ್ಬ ಕಥೆಗಾರರನ್ನ ಮೊದಲೇ ನಿಗದಿಪಡಿಸಿ, ಅದನ್ನ ಪತ್ರಿಕೆಗೆ ಕಳುಹಿಸಿ ಪ್ರಚಾರ ಮಾಡಿ ಅಲ್ಲಿ ಓದಿದ ಅನೇಕರು ಕಾರ್ಯಕ್ರಮಕ್ಕೆ ಬರಲು ನೆರವಾಗುತ್ತಿದೆ. ಇಂದು ಕಲಾಸುರುಚಿಯಲ್ಲಿ ಮಕ್ಕಳಿಗೆ ಪತ್ರ ಬರೆಯುವ ಬಗೆಯು ಕೂಡ ತಿಳಿಸುತ್ತಿದ್ದು, ಪತ್ರ ಸಂಸ್ಕೃತಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇದು ಕೂಡ ಹೊಸ ಯೋಜನೆಯಾಗಿದ್ದು, ಇಲ್ಲಿಗೆ ಕಥೆ ಕೇಳಲು ಬರುವ ಎಲ್ಲಾ ಮಕ್ಕಳಿಗೂ ಕೂಡ ಸುರುಚಿ ರಂಗಮನೆಯಿಂದಲೇ ಪೋಸ್ಟ್ ಕಾರ್ಡ್ ನೀಡುವ ವ್ಯವಸ್ಥೆಯನ್ನು ಕೂಡ ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದಿದ್ದಾರೆ.

ಈ ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ಪ್ರತಿ ಶನಿವಾರ ಸಂಜೆ 4:30 ರಿಂದ 5:30ರ ವರೆಗೆ ನಿರಂತರವಾಗಿ ನಡೆಯುತ್ತಾ ಬರುತ್ತಿದ್ದು, ಈ ಒಂದು ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿಗಳು, ವಿಜ್ಞಾನಿಗಳು, ರಂಗಕರ್ಮಿಗಳು, ಶಿಕ್ಷಕರು, ವಿವಿಧ ಬಗೆಯ ಲೇಖಕರು, ಅಲ್ಲದೆ ಸಾಮಾನ್ಯ ಓದುಗರು ಕೂಡ ಭಾಗವಹಿಸುತ್ತಿರುವುದು ವಿಶೇಷ. ಒಬ್ಬೊಬ್ಬರೂ ಕಥೆಗಳನ್ನು ಒಂದೊಂದು ರೀತಿಯಲ್ಲಿ ಹೇಳುವುದರಿಂದ ಮಕ್ಕಳಲ್ಲಿ ಕಥೆ ಕೇಳುವ ಆಸಕ್ತಿಯು ವಾರದಿಂದ ವಾರಕ್ಕೆ ಹೆಚ್ಚುತ್ತಿದೆ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ನಂತರ 10 ನಿಮಿಷ ಪದಕೋಶ ಕಾರ್ಯಕ್ರಮವು ಇದೆ.

ಚಂದನವನದ ತಾರೆಯರ ಕುರಿತಂತೆ ವಿವಿಧ ಬರಹಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಈ ವಿಭಿನ್ನ ಶೈಲಿಯ ಕಾರ್ಯಕ್ರಮ ಜುಲೈ- 2023 ರಿಂದ ಪ್ರಾರಂಭವಾಯಿತು. ಪ್ರಾರಂಭವಾದಾಗಿನಿಂದ ಒಂದು ತಿಂಗಳು ಮಾತ್ರ ಅನಿವಾರ್ಯ ಕಾರಣಗಳಿಂದ ನಡೆದಿಲ್ಲ. ಅದನ್ನು ಹೊರತುಪಡಿಸಿ ಇವತ್ತಿನವರೆಗೆ 39 ಸಂಚಿಕೆಗಳಾಗಿವೆ. ಈ ಕಾರ್ಯಕ್ರಮ ತಿಂಗಳಿಗೆ ಒಂದು ಬಾರಿ ನಡೆಯುತ್ತಿದ್ದು, ಎರಡನೇ ಶನಿವಾರ ಸಂಜೆ  6:30 ರಿಂದ 7:30ರ ವರೆಗೆ ಇರುತ್ತದೆ.          ಕಲಾಸುರುಚಿಯ ಸಂಚಾಲಕರಾದ ನಾಗರಾಜ  ರವರು ಹೇಳಿರುವ ಪ್ರಕಾರ ಕಳೆದ ಏಳೆಂಟು ವರ್ಷಗಳ ಹಿಂದೆ ವಿಜ್ಞಾನ ನಾಟಕೋತ್ಸವವನ್ನು ನಾವು ಸುರುಚಿ ರಂಗ ಮನೆಯಲ್ಲಿ ಆಯೋಜಿಸಿದ್ದಾಗ ಈ ಒಂದು ಕಾರ್ಯಕ್ರಮದಲ್ಲಿ “ಅರಿವು” ಮತ್ತು “ಪರಿವರ್ತನಾ” ಸಂಸ್ಥೆಗಳು ಸೇರಿ ಯಶಸ್ವಿ ಕಾರ್ಯಕ್ರಮವನ್ನು ಮಾಡಿದೆವು. ಇದೊಂದು ಕೂಡ ಈ ಒಂದು “ಸೈನ್ಸ್ ಸಂಜೆ” ಕಾರ್ಯಕ್ರಮಕ್ಕೆ ಸ್ಪೂರ್ತಿಯಾಯಿತು.

ನಂತರದಲ್ಲಿ ಕೊಳ್ಳೇಗಾಲ ಶರ್ಮ ರವರ “ಕುತೂಹಲಿ ಸಂಸ್ಥೆ” ಮತ್ತು “ಕಲಾಸುರುಚಿ” ಸಂಸ್ಥೆಗಳು ಸೇರಿಕೊಂಡು ಸೈನ್ಸ್ ಸಂಜೆ ಮೂಲಕ ಸಾರ್ವಜನಿಕರಿಗೆ ಉಚಿತವಾಗಿ ವಿಜ್ಞಾನದ ವಿಷಯಗಳನ್ನು ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಯಿತು. ಅದು ಕನ್ನಡ ಮತ್ತು ಇಂಗ್ಲಿಷ್ ನಲ್ಲಿಯೂ ಕೂಡ ಕಾರ್ಯಕ್ರಮ ಇದ್ದುದರಿಂದ ಇದರಲ್ಲಿ ತಿಂಗಳಿನಿಂದ ತಿಂಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಬರಲು ಶುರು ಮಾಡಿದರು. ಇದರಲ್ಲಿ ವಿದ್ಯಾರ್ಥಿಗಳು ಕೂಡ ಹೆಚ್ಚು ಹೆಚ್ಚು ಬರುತ್ತಿದ್ದರು. ಜೊತೆಗೆ ವಿಜ್ಞಾನದ ಬಗ್ಗೆ ಆಸಕ್ತಿ ಇರುವ ಅನೇಕರು ಜೊತೆಗೆ ಹಿರಿಯ ನಾಗರಿಕರು ಸಾಮಾನ್ಯ ಓದುಗರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷ. ಇದು ಈಗಲೂ ಕೂಡ ತನ್ನ ಒಂದು ವೀಕ್ಷಕರ ಬಳಗವನ್ನ ಇಟ್ಟುಕೊಂಡಿದೆ ಎನ್ನುತ್ತಾರೆ.

ಸಾಹಿತ್ಯ ಚಾವಡಿ ಕಾರ್ಯಕ್ರಮ ಪ್ರತಿ ತಿಂಗಳ ನಾಲ್ಕನೆಯ ಭಾನುವಾರ ಬೆಳಿಗ್ಗೆ 10.30 ರಿಂದ 1 ರವರೆಗೆ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಅನೇಕ ಸಾಹಿತಿಗಳು, ಸಾಮಾನ್ಯ ಓದುಗರು, ಕಥೆಗಾರರು, ಲೇಖಕರು, ಭಾಗಿಯಾಗಿದ್ದಾರೆ. ಶ್ರೀಮತಿ ಭಾರ್ಗವಿ ನಾರಾಯಣ್‌ ಅವರಿಂದ ಉದ್ಘಾಟನೆ ಗೊಂಡು ಇದುವರೆಗೆ ಸತತವಾಗಿ ‘ಕಥೆ ಕೇಳೋಣ ಬನ್ನಿ’ ಸಾಪ್ತಾಹಿಕ ನಡೆದುಕೊಂಡು ಬಂದಿದೆ. ಈ ಹಿಂದೆಯೇ ಲಿಮ್ಕಾ ದಾಖಲೆಯನ್ನು ತನ್ನ ಮಡಿಲಿಗೆ ಈ ಕಾರ್ಯಕ್ರಮ ಸೇರಿಸಿಕೊಂಡಿದೆ. ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮದಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಮಕ್ಕಳ ಮನದಾಳದಲ್ಲಿ ಮೂಡಬೇಕು ಹಾಗೂ ಆಲಿಸುವ ಮತ್ತು ಮಾತನಾಡುವ ಕೌಶಲಗಳು ಮಕ್ಕಳಲ್ಲಿ ಬೆಳೆಯಬೇಕು ಎಂದು ಆಲೋಚಿಸಲಾಗುತ್ತದೆ.

ಇಲ್ಲಿ ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ, ಸಾಮಾಜಿಕ, ಶೌರ್ಯ-ಸಾಹಸ, ಹಾಸ್ಯ ಪ್ರಧಾನ, ಕಥೆಗಳನ್ನು ಶಿಕ್ಷಕರು, ಸಾಹಿತಿಗಳು, ವಿಜ್ಞಾನಿಗಳು, ಸಮಾಜ ಸೇವಾಕರ್ತರು, ಪೋಲಿಸ್ ಅಧಿಕಾರಿಗಳು, ಗೃಹಿಣಿಯರು, ಕಲಾವಿದರು, ಅಭಿಯಂತರರು, ಶಿಕ್ಷಕರು, ವೈದ್ಯರು, ವಕೀಲರು – ಹೀಗೆ ಸಮಾಜದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಅನುಭವಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಕಥೆಗಳ ಮೂಲಕ ಮಕ್ಕಳ ಜ್ಞಾನವನ್ನು ವೃದ್ಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುತ್ತಿದೆ.

admin
the authoradmin

Leave a Reply