ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಪಟ್ಟ ಅಲಂಕರಿಸಿದ ಅಪ್ರತಿಮ ಸಾಧಕಿ ತಾರೆ ಜಯಮಾಲಾ

ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ದಾಖಲೆ ಬರೆದಿರುವ ಖ್ಯಾತ ಚಲನಚಿತ್ರ ಕಲಾವಿದೆ ಡಾ.ಜಯಮಾಲಾ ಅವರ ಸಿನಿಮಾ ಬದುಕು ಮತ್ತು ಅದರಾಚೆಗಿನ ಬದುಕಿನ ಕುರಿತಂತೆ ಸಾಹಿತಿ-ಪತ್ರಕರ್ತ ಬನ್ನೂರು ಕೆ ರಾಜು ಅವರು ಇಲ್ಲಿ ಬರೆದಿದ್ದಾರೆ…
ಸಾವಿರದ ಒಂಭೈನೂರ ನಲವತ್ತರ ದಶಕ, ಆಗಿನ್ನೂ ಕನ್ನಡ ಚಿತ್ರರಂಗ ಅಷ್ಟಾಗಿ ಬೆಳೆದಿರಲಿಲ್ಲ. ಆಗ ಕನ್ನಡ ಚಿತ್ರೋದ್ಯಮ ಪ್ರತಿಯೊಂದಕ್ಕೂ ಮದರಾಸಿನಲ್ಲಿದ್ದ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯನ್ನೇ ಅವಲಂಬಿಸ ಬೇಕಾಗಿತ್ತು. ಚಿತ್ರದ ಟೈಟಲ್, ಬ್ಯಾನರ್ ನೊಂದಾವಣೆಯಿಂದ ಹಿಡಿದು ಕನ್ನಡ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎಲ್ಲವೂ ಅಲ್ಲಿಂದಲೇ ಅಲ್ಲಿಯವರ ಅಣತಿಯಂತೆ ಆಗಬೇಕಿತ್ತು. ಇದನ್ನು ತಪ್ಪಿಸಲು ಕನ್ನಡ ಚಿತ್ರೋದ್ಯಮಿಗಳೆಲ್ಲಾ ಒಗ್ಗಟ್ಟಾಗಿ 1944ರಲ್ಲಿ ಮೈಸೂರು ಚಲನಚಿತ್ರ ವಾಣಿಜ್ಯ ಮಂಡಳಿ ಯನ್ನು ಅಸ್ಥಿತ್ವಕ್ಕೆ ತಂದರು.

ಕಾಲಕ್ರಮೇಣ ಮೈಸೂರು ರಾಜ್ಯ ಕರ್ನಾಟಕ ಎಂದಾದ ಮೇಲೆ ಇದೂ ಸಹ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಎಂದಾಯಿತು. ಈಗ ಇದಕ್ಕೆ 82 ರ, ಪ್ರಾಯ. ಇಷ್ಟು ವರ್ಷಗಳ ಸುದೀರ್ಘ ಅವಧಿಯಲ್ಲಿ ಈ ಮಂಡಳಿಯ ಅಧ್ಯಕ್ಷ ಪೀಠದಲ್ಲಿ ಎಸ್. ಅಬ್ದುಲ್ ವಾಜಿದ್ ಅವರಿಂದ ಅರಂಭಿಸಿ ಪ್ರಸ್ತುತ ಎಂ. ನರಸಿಂಹಲು ಅವರ ತನಕ 44 ಮಂದಿ ಕುಳಿತು ಕನ್ನಡ ಚಲನಚಿತ್ರ ಸಾಮ್ರಾಜ್ಯವನ್ನು ಆಳಿದ್ದಾರೆ. ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಇತಿಹಾಸ. ಆದರೆ ಸುಮಾರು ಎಂಟು ದಶಕಗಳಿಂದ ನಡೆದು ಬಂದಿರುವ ಇಂಥ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಮೊಟ್ಟ ಮೊದಲಿಗೆ ಕುಳಿತ ಏಕೈಕ ಮಹಿಳೆ ಎಂದರೆ ಅದು ಚಿತ್ರ ನಿರ್ಮಾಪಕಿಯೂ ಆದ ಖ್ಯಾತ ಅಭಿನೇತ್ರಿ ಡಾ. ಜಯಮಾಲಾ.
2008-09ನೇ ಸಾಲಿನಲ್ಲಿ ನಡೆದ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಆಯ್ಕೆಯಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಪೀಠದಲ್ಲಿ ಕುಳಿತುಕೊಳ್ಳುವುದರ ಮೂಲಕ ಡಾ. ಜಯಮಾಲಾ ಅವರು 35ನೇ ಅಧ್ಯಕ್ಷೆಯಾಗಿ ಐತಿಹಾಸಿಕ ದಾಖಲೆ ನಿರ್ಮಿಸಿದವರು ಅವರು. ಇದೀಗ ಅವರ ದಾಖಲೆಯನ್ನು ಅವರೇ ಮುರಿದಿದ್ದಾರೆ. ಬಹುಶಃ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಜಯಮಾಲಾರನ್ನು ಹೊರತುಪಡಿಸಿದರೆ ಚುನಾವಣೆ ಮೂಲಕ ಚನಲಚಿತ್ರ ವಾಣಿಜ್ಯ ಮಂಡಳಿಯೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮತ್ತೊಬ್ಬ ಮಹಿಳೆ ಇರಲಾರರೇನೋ. ಕನ್ನಡ ಚಿತ್ರರಂಗ 75 ವರ್ಷ ತುಂಬಿದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದ್ದ ಹೊತ್ತಿನಲ್ಲಿ ತಾರೆ ಜಯಮಾಲಾ ಮೊದಲ ಬಾರಿಗೆ ಕೆಎಫ್‌ಸಿಸಿಯ ಅಧ್ಯಕ್ಷ ಸ್ಥಾನಕ್ಕೇರಿದ್ದ ಅವರು ಇದೀಗ 2ನೇ ಬಾರಿಗೆ 45 ನೇ ಅಧ್ಯಕ್ಷರಾಗಿ ದಾಖಲೆ ಮೇಲೆ ದಾಖಲೆ ಬರೆದು ಕನ್ನಡ ಚಿತ್ರರಂಗಕ್ಕೆ ಹೊಸ ರಂಗು ತಂದಿದ್ದಾರೆ.

ಇಷ್ಟಕ್ಕೂ ಇಂಥ ಸ್ಥಾನ ಜಯಮಾಲಾ ಅವರಿಗೆ ಅನಾಯಾಸವಾಗಿ ಬಂದದ್ದೇನೂ ಅಲ್ಲ. ಈ ಹಿಂದೆ ವಾಣಿಜ್ಯ ಮಂಡಳಿಯ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪುರುಷ ಪ್ರಾಬಲ್ಯದ ಅಖಾಡದಲ್ಲಿ ಗುದ್ದಾಡಿ ಅನುಭವಗಳಿಸಿದ್ದ ಅವರು ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಯ ಸದಸ್ಯೆ, ಗೌರವ ಕಾರ್ಯದರ್ಶಿ, ಗೌರವ ಖಜಾಂಚಿ ಮತ್ತು ಉಪಾಧ್ಯಕ್ಷೆಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಜೊತೆಗೆ ಸದಾ ವಾಣಿಜ್ಯ ಮಂಡಳಿಯಲ್ಲಿ ಸಕ್ರಿಯವಾಗಿದ್ದುಕೊಂಡೇ ಕನ್ನಡ ಚಿತ್ರೋದ್ಯಮದ ಸರ್ವತೋಮುಖ ಪ್ರಗತಿಗಾಗಿ ದುಡಿಯುತ್ತಾ ಬಂದಿದ್ದ ಅವರು ಕನ್ನಡದ ಕೀರ್ತಿಪತಾಕೆಯನ್ನು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದವರು.

ಜಯಮಾಲಾ ಅವರು ಕಲಾವಿದೆಯಾಗಷ್ಟೇ ಉಳಿಯದೆ ಪ್ರಗತಿಪರ ಚಿಂತನೆಯ ಚಿತ್ರ ನಿರ್ಮಾಪಕಿಯಾಗಿ 1998 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದಲ್ಲಿ ‘ತಾಯಿ ಸಾಹೇಬ’ ಚಿತ್ರ ನಿರ್ಮಿಸಿ, ನಟಿಸಿ ‘ಸ್ವರ್ಣ ಕಮಲ ರಾಷ್ಟ್ರೀಯ ಪ್ರಶಸ್ತಿ’ ಯನ್ನು ಕನ್ನಡಕ್ಕೆ ತಂದುಕೊಟ್ಟಿದ್ದಾರೆ. ಇದೇ ‘ತಾಯಿ ಸಾಹೇಬ’ ಚಿತ್ರ ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 24ಪ್ರಶಸ್ತಿಗಳನ್ನು ಬಾಚಿಕೊಂಡು ಕನ್ನಡಕ್ಕೊಂದು ಮಹತ್ವದ ಕೋಡು ಮೂಡಿಸಿದೆ. ನಂತರ ಅವರು 2005ರಲ್ಲಿ ಪಿ. ಶೇಷಾದ್ರಿ ನಿರ್ದೇಶನದಲ್ಲಿ ‘ತುತ್ತೂರಿ’ ಮಕ್ಕಳ ಚಿತ್ರ ನಿರ್ಮಿಸಿ ಮತ್ತೊಮ್ಮೆ ಕನ್ನಡಕ್ಕೆ 2007 ನೇ ಸಾಲಿನ ಅತ್ಯುತ್ತಮ ಪರಿಸರ ಸಂರಕ್ಷಣೆ ಕಾಳಜಿಯ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿದ್ದಾರೆ.

ಈ ಚಿತ್ರ 2005-06 ನೇ ಸಾಲಿನ ಅತ್ಯುತ್ತಮ ಮಕ್ಕಳ ಚಿತ್ರವೆಂಬ ರಾಜ್ಯ ಪ್ರಶಸ್ತಿಯನ್ನು ಪಡೆಯುವುದರ ಜೊತೆಗೆ ಡಾಕಾ ಚಿತ್ರೋತ್ಸವದಲ್ಲಿ ಭಾಗವಹಿಸಿ ಬಾಂಗ್ಲಾದೇಶದ ಅತ್ಯುತ್ತಮ ಚಿತ್ರ ಪ್ರಶಸ್ತಿ ಮತ್ತು ಟೋಕಿಯೋದಲ್ಲಿ ನಡೆದ 15ನೇ ಅಂತರಾಷ್ಟ್ರೀಯ ಚಿತ್ರೋತ್ಸವದ ‘ಅರ್ತ್‌ವಿಷನ್’ ಪ್ರಶಸ್ತಿ ಪಡೆದು 2005ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಂತರಾಷ್ಟ್ರೀಯ ಮಕ್ಕಳ ಚಿತ್ರೋತ್ಸವದಲ್ಲಿ ‘ಗೋಲ್ಡನ್ ಎಲಿಫೆಂಟ್’ ಗಾಗಿ ಸ್ಪರ್ಧಾಕಣದಲ್ಲಿದ್ದು ಭಾರತವನ್ನು ಪ್ರತಿನಿಧಿಸಿ ಕನ್ನಡವನ್ನು ಮೆರೆಸಿತ್ತು. ಇದರ ಸಂಪೂರ್ಣ ಕ್ರೆಡಿಟ್ ಈ ಚಿತ್ರಗಳ ನಿರ್ಮಾಪಕಿ ತಾರೆ ಜಯಮಾಲಾ ಅವರಿಗೇ ಸಲ್ಲಬೇಕು. ಅಗ್ನಿಪರೀಕ್ಷೆ, ಮಹೇಂದ್ರವರ್ಮ, ಮಿಸ್ಟರ್ ಮಹೇಶ್‌ಕುಮಾರ್ ಇವು ತಮ್ಮ ಪತಿ ಟೈಗರ್ ಪ್ರಭಾಕರ್ ನಿರ್ದೇಶನದಲ್ಲಿ ಅವರು ನಿರ್ಮಿಸಿದ ಯಶಸ್ವೀ ಕಮರ್ಷಿಯಲ್ ಚಿತ್ರಗಳು.
ಓರ್ವ ಕಲಾವಿದೆಯಷ್ಟೇ ಅಲ್ಲದೆ ವಿಭಿನ್ನವಾಗಿ ಯೋಚಿಸುವ ನಾಡಿನ ಚಿಂತಕಿಯಾಗಿ, ಏನನ್ನಾದರೂ ಹೊಸದನ್ನು ಸಾಧಿಸುವ ಛಲಗಾತಿಯಾಗಿ, ದೂರದರ್ಶಿತ್ವ ಗುಣವುಳ್ಳ ಅಪ್ರತಿಮ ಸಾಧಕಿಯಾಗಿ ಕನ್ನಡ ನಾಡಿನಲ್ಲಿ ಬೆಳೆದು ನಿಂತಿರುವ ತಾರೆ ಜಯಮಾಲಾ ನಮ್ಮ ನಾಡಿನ ಹೆಣ್ಣು ಮಗಳೆಂಬುದೇ ಒಂದು ಹೆಮ್ಮೆ. ಮಣ್ಣಿನ ಮಕ್ಕಳ ಕುಟುಂಬದಿಂದ ಬಂದ ಅವರು ಜನಿಸಿದ್ದು 1959 ರ ಫೆಬ್ರವರಿ 28. ಊರು ದಕ್ಷಿಣ ಕನ್ನಡದ ಮಂಗಳೂರು ಸಮೀಪದ ಪಣಂಬೂರು. ತಂದೆ ಕೃಷಿಕ ಓಬಯ್ಯ, ತಾಯಿ ಕಮಲಮ್ಮ. ಅವರ ಹುಟ್ಟು ಹೆಸರು ಜಯಂತಿ. ಬಾಲ್ಯದಲ್ಲೇ ಸಂಗೀತ, ನಾಟಕ, ನೃತ್ಯ, ಕಲೆಗಳತ್ತ ಒಲವು ಹೊಂದಿದ್ದ ಅವರು ತಮ್ಮ ಹದಿಮೂರನೇ ವಯಸ್ಸಿಗೇ ‘ಕಾಸ್‌ದಾಯೆ ಕಂಡನಿ’ ಎಂಬ ತುಳು ಚಿತ್ರದಲ್ಲಿ ನಟಿಸಿ ಶ್ರೇಷ್ಠನಟಿ ಪ್ರಶಸ್ತಿ ಪಡೆದು ಅದೇ ಹಾದಿಯಲ್ಲಿ ನಾಲ್ಕಾರು ತುಳು ಚಿತ್ರಗಳಲ್ಲಿ ಅಭಿನಯಿಸಿ ‘ಸೈ’ ಎನಿಸಿಕೊಂಡಿದ್ದರು.

ಸೌಂದರ್ಯದ ಖನಿಯಂತಿದ್ದ ಅವರ ನಟನೆಯ ಮಿಂಚು ಕನ್ನಡ ಚಿತ್ರರಂಗದ ಕಣ್ಣಿಗೆ ಕಂಡದ್ದೇ ತಡ ತುಳುನಾಡ ಈ ಚೆಲುವೆಯನ್ನು ‘ಯಾರು ಹಿತವರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ತನ್ನೊಳಕ್ಕೆ ಸೆಳೆದುಕೊಂಡಿತು. ಅಂದಿನ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ‘ಭೂತಯ್ಯನ ಮಗ ಅಯ್ಯು’ ಚಿತ್ರದಲ್ಲೂ ಸಣ್ಣದಾಗಿ ಅವರಿಗೊಂದು ಅವಕಾಶ ದೊರೆತು ಮುಂದೆ ದೊಡ್ಡದಾಗಿ ಬೆಳೆಯಲು ಮಾರ್ಗಸೂಚಿಯಾಯಿತು. ಅದಾಗಲೇ ‘ಜಯಂತಿ’ ಹೆಸರಿನ ಸುಪ್ರಸಿದ್ಧ ತಾರೆ ಕನ್ನಡ ಚಿತ್ರರಂಗದಲ್ಲಿದ್ದುದರಿಂದ ಅವರ ಹೆಸರು ‘ಜಯಮಾಲಾ’ ಆಗಿ ಪರಿವರ್ತನೆಯಾಗಿ ಮುಂದೆ ಅದೇ ಹೆಸರು ಖ್ಯಾತಿಗೆ ಬಂದದ್ದು ಈಗ ಇತಿಹಾಸ.
ಕನ್ನಡ ಚಿತ್ರರಂಗಕ್ಕೆ ಪುಟ್ಟ ಪಾತ್ರದಿಂದ ಪ್ರವೇಶಿಸಿದರೂ ನಂತರದ ದಿನಗಳಲ್ಲಿ ಬಹುದೊಡ್ಡ ನಾಯಕಿಯಾಗಿ ಬೆಳ್ಳಿತೆರೆಗೆ ತೆರೆದುಕೊಂಡ ಅವರು ವರನಟ ಡಾ. ರಾಜ್ ಕುಮಾರ್, ರೆಬಲ್ ಸ್ಟಾರ್ ಅಂಬರೀಶ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಂಕರ್‌ನಾಗ್, ಅನಂತ್‌ನಾಗ್…. ಹೀಗೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಾಯಕನಟರ ಜೊತೆ ಅಭಿನಯಿಸಿ ಎಲ್ಲಾ ರೀತಿಯ ಪಾತ್ರಗಳಲ್ಲೂ ಮಿಂಚಿ ಕನ್ನಡಿಗರ ಮನಗೆದ್ದವರವರು. ಸುಮಾರು 75ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಅವರು 70-80 ರ ದಶಕದಲ್ಲಿ ಖ್ಯಾತಿಯ ಉತ್ತುಂಗ ಕಂಡವರು.

ತಮಿಳು, ತೆಲುಗು, ಮಲೆಯಾಳಿ ಚಿತ್ರಗಳಲ್ಲೂ ನಟಿಸಿ ತಮ್ಮ ಅಮೋಘ ಅಭಿನಯದಿಂದ ಬಹುಭಾಷಾ ತಾರೆಯಾಗಿಯೂ ಹೊಳೆದ ಅವರು ಖ್ಯಾತ ಮಲೆಯಾಳಿ ಚಿತ್ರ ನಿರ್ದೇಶಕ ಎಂ.ಟಿ. ವಾಸುದೇವ ನಾಯರ್ ನಿರ್ದೇಶನದಲ್ಲಿ ಇಂದಿನ ಮಲೆಯಾಳಿ ಚಿತ್ರರಂಗದ ಖ್ಯಾತನಟ ಮುಮ್ಮಟಿ ಅವರ ಮೊದಲ ಚಿತ್ರ ‘ದೇವಲೋಕಂ’ ನಲ್ಲಿ ನಟಿಸಿದ ಕೀರ್ತಿಗೂ ಭಾಜನರಾಗಿದ್ದಾರೆ. ಪ್ರೇಮದ ಕಾಣಿಕೆ, ಗಿರಿಕನ್ಯೆ, ಬಡವರ ಬಂಧು, ತ್ರಿಮೂರ್ತಿ, ಶಂಕರ್‌ಗುರು, ದಾರಿತಪ್ಪಿದ ಮಗ, ಬಬ್ರುವಾಹನ, ಅಂತ, ಸಂಗೀತಾ, ಖಂಡವಿದೆಕೊ ಮಾಂಸವಿದೆಕೊ, ಗಂಗವ್ವ ಗಂಗಾಮಾಯಿ, ಭರ್ಜರಿ ಬೇಟೆ, ಖದೀಮ ಕಳ್ಳರು, ಚಂಡಿ ಚಾಮುಂಡಿ, ಪ್ರೇಮ ಮತ್ಸರ ಇವು ತಾರೆ ಜಯಮಾಲಾ ಅಭಿನಯದ ಪ್ರಮುಖ ಚಿತ್ರಗಳು.
ಇಂದಿಗೂ ಸಹ ಅವರು ಅಭಿನಯ ವೃತ್ತಿಯನ್ನು ಅಗಾಧವಾಗಿ ಪ್ರೀತಿಸುತ್ತಾ ನಟಿಸುತ್ತಲೇ ಇದ್ದಾರೆ. ಅವರ ತಾಯಿ ಸಾಹೇಬ ಚಿತ್ರದ ನಟನೆಗಾಗಿ ರಾಜ್ಯ ಸರ್ಕಾರದ ‘ಅತ್ಯುತ್ತಮ ನಟಿ’ ಪ್ರಶಸ್ತಿ, ‘ಗಡಿಬಿಡಿ ಅಳಿಯ’ ಚಿತ್ರದ ಅಭಿನಯಕ್ಕಾಗಿ ‘ಆರ್ಯಭಟ ಪ್ರಶಸ್ತಿ’, ಒಟ್ಟಾರೆ ಜೀವಮಾನದ ಸಾಧನೆಗಾಗಿ ರಾಜ್ಯ ಸರ್ಕಾರದ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರ ಕೊರಳನ್ನು ಅಲಂಕರಿಸಿವೆ.

ಬಣ್ಣದ ಬದುಕಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಸಾರ್ವಜನಿಕ ಬದುಕಿಗೂ ತಮ್ಮನ್ನು ಸಮರ್ಪಿಸಿಕೊಂಡಿರುವ ಬಹು ಅಪರೂಪದ ಕಲಾವಿದೆ ಜಯಮಾಲಾ, ಅವರು ಮಹಿಳೆಯರ ಪುನರ್ವಸತಿಗಾಗಿ ಸ್ಥಾಪಿಸಲ್ಪಟ್ಟಿರುವ ಮೈಸೂರಿನ ಶಕ್ತಿಧಾಮ ಎಂಬ ಸ್ವಯಂಸೇವಾ ಸಂಸ್ಥೆಯ ವ್ಯವಸ್ಥಾಪಕ ಧರ್ಮದರ್ಶಿಯಾಗಿ ಶೋಷಿತ ಹಾಗೂ ಬೀದಿ ಮಹಿಳೆಯರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹಾಗೆಯೇ ಬೆಳ್ಳಿಲೋಕದ ಸಾಧನೆಯಷ್ಟೇ ಅಕ್ಷರಲೋಕದಲ್ಲೂ ಅದ್ಭುತ ಸಾಧನೆಗೈದಿದ್ದಾರೆ. ಸಾಂಪ್ರದಾಯಿಕವಾಗಿ ಅವರು ಓದಿದ್ದು ಕೇವಲ ಎಸ್.ಎಸ್.ಎಲ್.ಸಿ. ಅಷ್ಟೇ. ಆದರೂ ತಮ್ಮ ಸ್ವಶಕ್ತಿಯಿಂದಲೇ ದೂರ ಶಿಕ್ಷಣದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.

ಡಾ. ಎಂ.ಜಿ.ಕೃಷ್ಣನ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಬಗ್ಗೆ ಪಿಹೆಚ್‌ಡಿ ಮಾಡಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದವರೆಂದರೆ ಅದೂ ಐವತ್ತರ ಅಂಚಿನಲ್ಲಿದ್ದ ವಯಸ್ಸಿನಲ್ಲಿ, ಯಾರೇ ಆದರೂ ತಾರೆ ಜಯಮಾಲಾ ಅವರ ಇಂಥ ಮಹದದ್ಭುತ ಸಾಧನೆಗೆ ಶಹಭಾಷ್ ಎನ್ನಲೇಬೇಕು ! ಹಾಗೆಯೇ ಕನ್ನಡ ಚಿತ್ರರಂಗದ 75ನೇ ವರ್ಷದ ಅಮೃತ ಮಹೋತ್ಸವವನ್ನು ತಮ್ಮ ಸಾರಥ್ಯದಲ್ಲಿ ಅದ್ದೂರಿಯಾಗಿ ಸಾರ್ಥಕ ರೀತಿಯಲ್ಲಿ ಆಚರಿಸಿದ್ದು ಕೂಡ ಜಯಮಾಲಾರ ಮಹತ್ಸಾಧನೆಗಳಲ್ಲೊಂದಾಗಿದೆಇಂಥ ಅಪೂರ್ವ ಸಾಧನೆಯ ಅಭಿನೇತ್ರಿಗೆ ಫೆಬ್ರವರಿ 28ಕ್ಕೆ 67 ವಸಂತಗಳು ತುಂಬುತ್ತಿದ್ದು ಈಗಲೂ ಇಪ್ಪತ್ಮೂರರ ತರುಣಿಯಂತಿರುವ ಈ ‘ಚಿರಯೌವನ ತಾರೆ’ ಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು.








