2012ರಲ್ಲಿ ನಟ ಎಂ. ಎಸ್. ಉಮೇಶ್ ಸಂದರ್ಶನ ನಡೆಸಿದ್ದ ಸಾಹಿತಿ, ಪತ್ರಕರ್ತರೂ ಆಗಿರುವ . ಎಸ್. ಪ್ರಕಾಶ್ ಬಾಬು ಅವರು ಉಮೇಶ್ ಅವರ ಸ್ವಗತದಲ್ಲೇ ನಿರೂಪಣೆ ಮಾಡಿ ನಮ್ಮ ಮುಂದೆ ತೆರೆದಿಟ್ಟಿದ್ದಾರೆ.
ನಾನು ಭೂಮಿಗೆ ಬಂದು 67 ವರ್ಷ ಆಯ್ತು. ರಂಗಭೂಮಿಗೆ ಬಂದು 63 ವರ್ಷ ಆಯ್ತು. ಚಿತ್ರ ಭೂಮಿಕೆಗೆ ಬಂದು 52 ವರ್ಷ ಆಯ್ತು. ಜಗತ್ತು ಏನು ಅಂತ ಅರಿಯುವ ಮುನ್ನವೆ ಕಲಾವಿದನಾಗಿದ್ದೆ. ಬಣ್ಣದ ಪ್ರಪಂಚದಾಚೆಗೊಂದು ಪ್ರಪಂಚ ಇದೆ ಅಂತ ತಿಳಿವಿಲ್ಲದೆ ಬಾಲ್ಯ ಕಳೆದೆ. ಬಣ್ಣದಾಚೆಗಿನ ಪ್ರಪಂಚ ತಿಳಿಯುವಷ್ಟರಲ್ಲಿ ಯೌವನಾನೂ ಕಳೆದುಕೊಂಡೆ, ಮಧ್ಯ ವಯಸ್ಸು ದಾಟಿ ಇಳಿವಯಸ್ಸು ಆವರಿಸುತ್ತಿದ್ದರೂ ಬದುಕು ಹೇಗೆಂಬುದು ನನಗೀಗಲು ಗೊತ್ತಾಗುತ್ತಿಲ್ಲ. ಬಣ್ಣ ಹಚ್ಚೋದನ್ನ ಚೆನ್ನಾಗಿ ಕಲಿತೆ, ಆದರೆ ಪ್ರಪಂಚದಲ್ಲಿ ಬದುಕೋದು ಹೇಗೆಂಬುದನ್ನು ಕಲಿಯಲಿಲ್ಲ. ಇತ್ತ ಬಣ್ಣದ ಲೋಕವೂ ನನ್ನೊಳಗಿನ ಕಲಾವಿದನನ್ನು ಚೆನ್ನಾಗಿ ಬಳಸಿಕೊಳ್ಳಲಿಲ್ಲ. ಅತ್ತ ಬದುಕಿನ ಪ್ರಪಂಚದಲ್ಲೂ ನಾನು ನೆಮ್ಮದಿಯಾಗಿ ಬಾಳಲಾಗಲಿಲ್ಲ. ಹಾಗಂತ ಕಲಾಪ್ರಪಂಚದ ಮೇಲೆ ನನಗೇನೂ ಬೇಸರವಿಲ್ಲ. ಅನ್ನ ಕೊಟ್ಟು ನೆರಳು ನೀಡಿದ ಕಲಾದೇಗುಲಕ್ಕೆ ನಾನು ಎಂದೆಂದೂ ಚಿರಋಣಿ.

ನಾನು ಎಲ್ಲೆ ಹೋದರೂ ನನ್ನ ಗುರುತಿಸಿ ಮಾತನಾಡಿಸುವ ಜನರಿದ್ದಾರೆ. ಕೆಲವೊಮ್ಮೆ ನಾನೇ ಮುಜುಗರಪಟ್ಟುಕೊಳ್ಳುವಷ್ಟು ಜನ ಮುತ್ತಿಕೊಳ್ಳುತ್ತಾರೆ. ಇದೆಲ್ಲಾ ಕಲಾವಿದನಾಗಿ ಜನರಿಂದ ಸಿಕ್ಕ ಪ್ರೀತಿ. ಇದಕ್ಕೆ ಬೆಲೆ ಕಟ್ಟಲಾಗದು. ಇಂಥ ಜನ ಪ್ರೀತಿಯೊಂದೇ ಕಲಾವಿದನಾಗಿ ನನ್ನ ಮನಸ್ಸಿಗೆ ಸಂತೃಪ್ತಿ ಕೊಡುತ್ತಿರುವುದು. ಹಾಗೆಯೆ, ಚಿತ್ರರಂಗದವರು ನನ್ನ ಹಿರಿತನ ಗೌರವಿಸಿ ಪಾತ್ರ ಕೊಡುತ್ತಾರೆ. ಪ್ರೀತಿಯಿಂದ ಸಂಭಾವನೇನೂ ಕೊಡುತ್ತಾರೆ. ಅದರ ಜೊತೆಗೆ ನನ್ನೊಳಗಿನ ಕಲಾವಿದನನ್ನು ಚೆನ್ನಾಗಿ ದುಡಿಸಿಕೊಳ್ಳಿ. ಅದಕ್ಕಾಗಿ ವೈವಿಧ್ಯ ಪಾತ್ರ ನೀಡಿ. ನನ್ನೊಳಗಿನ ಕಲಾವಿದನಿಗೆ ಸವಾಲಾಗುವ ಪಾತ್ರ ನೀಡಿ. ನಾನು ಒಲ್ಲೆ ಎನ್ನದೆ ಮಾಡ್ತೇನೆ.
ನಾನು ಹಾಸ್ಯ ಪಾತ್ರವಲ್ಲದೆ ಎಲ್ಲಾ ತರಹದ ಪಾತ್ರ ಮಾಡಬಲ್ಲೆ. ಹಾಸ್ಯ ಪಾತ್ರದಲ್ಲೆ ಹಲವು ರೀತಿಯ ಮ್ಯಾನರಿಸಂನಲ್ಲಿ ಅಭಿನಯಿಸುವ ಕಲೆ ನನಗೆ ಗೊತ್ತಿದೆ. ಹಾಗೆಯೇ ಚಿತ್ರದ ಯಶಸ್ಸಿನಲ್ಲಿ ನನ್ನ ಪಾತ್ರದ ಒಂದಿಷ್ಟು ಪಾಲು ಇದ್ದರೂ, ಮರೆಯದೆ ತಕ್ಕ ಸಂಭಾವನೆ ಕೊಡಿ ಅಂತ ಕೇಳ್ಬೇಕು ಅನಿಸ್ತಿರುತ್ತೆ. “ಅಯ್ಯಯ್ಯೋ, ಅವರು ನನ್ ಬಗ್ಗೆ ಏನ್ ತಪ್ಪಾಗ್ ತಿಳ್ಕೊತಾರೊ ಏನೊ” ಅಂತ ನನ್ನೆಲ್ಲ ಕೋರಿಕೆಗಳನ್ನು ಹೃದಯದೊಳಗೆ ಅದುಮಿಕೊಂಡು, ಬಾಯಿ ತುಂಬಾ ನಗೆ ಅರಳಿಸಿಕೊಂಡು ಹೋಗ್ತಿರುತ್ತೇನೆ. ಏಕೆಂದರೆ ಅಭಿನಯ ಕಲೆ ಬಿಟ್ಟರೆ ಬೇರೆ ಕಲೆ ನನಗೆ ಗೊತ್ತಿಲ್ಲ.

ನಾನು ಹುಟ್ಟಿದ್ದು ಮೈಸೂರಿನಲ್ಲಿ 22-4-1945ರಂದು. ತಂದೆ ಶ್ರೀಕಂಠಯ್ಯ, ತಾಯಿ ನಂಜಮ್ಮ. ಇವರಿಗೆ ಒಂದ್ ಕ್ರಿಕೆಟ್ ಟೀಂಗೆ ಆಗುವಷ್ಟು 11 ಮಕ್ಕಳು. ಅವರಲ್ಲಿ 4 ಹೆಣ್ಣು, 7 ಗಂಡು. ನಾನು 8ನೇ ವಿಕೆಟ್. ನನ್ನ ತಂದೆ-ತಾಯಿ ಇಬ್ಬರೂ ರಂಗಕಲಾವಿದರು. ಹೀಗಾಗಿ, ಮೈಸೂರಿನ ಲಕ್ಷ್ಮಿ ಟಾಕೀಸ್ ಹಿಂಭಾಗದ ಸೊಪ್ಪಿನ ಕೊಳದ ಬೀದಿಯಲ್ಲಿದ್ದ ಅಜ್ಜಿ ರಾಮಕ್ಕಮ್ಮನ (ಮೈಸೂರು ಸಿಲ್ಕ್ ಫ್ಯಾಕ್ಟರಿ ಉದ್ಯೋಗಿ) ಮನೆಯಲ್ಲಿ ಹುಟ್ಟಿದ್ದು ಬಿಟ್ಟರೆ, ಬೆಳೆದಿದ್ದೆಲ್ಲ ರಂಗಭೂಮಿಯಲ್ಲಿ. ಮಾಸ್ಟರ್ ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯ ನಾಟಕ ಮಂಡಳಿ, ಗುಬ್ಬಿ ವೀರಣ್ಣ ನಾಟಕ ಕಂಪೆನಿ, ಮಹದೇವಸ್ವಾಮಿ ನಾಟಕ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ಆಗೆಲ್ಲಾ, ನಾಟಕ ಕಂಪೆನಿ ಟೆಂಟಿನೊಳಗೆ ಕಲಾವಿದರ ಸಂಸಾರ ನಡೆಯುತ್ತಿತ್ತು. ಅಲ್ಲಿದ್ದ ಕಲಾವಿದರ ಮಕ್ಕಳಿಗೆ ಕಲಾಭ್ಯಾಸದ ಜೊತೆಗೆ ಅಕ್ಷರಾಭ್ಯಾಸವೂ ನಡೆಯುತ್ತಿತ್ತು. ಒಂದು ರೀತಿ ಕಲಾ ದಾಸೋಹ, ಅನ್ನ ದಾಸೋಹ ಜೊತೆಗೆ ಅಕ್ಷರ ದಾಸೋಹ ಸಹ ಯಥೇಚ್ಛವಾಗಿ ನಡೆಯುತ್ತಿತ್ತು. ನನ್ನ ಕಾಲಕ್ಕೂ ಹಿಂದೆ ಕಲಾವಿದರ ಮಕ್ಕಳಿಗೆ ಅಕ್ಷರಾಭ್ಯಾಸಗಳಿರುತ್ತಿರಲಿಲ್ಲ. ಎಷ್ಟೊ ರಂಗ ಕಲಾವಿದರಿಗೆ ಓದೋದಕ್ಕೆ-ಬರೆಯೋದಕ್ಕೆ ಬರುತ್ತಿರಲಿಲ್ಲ. ನಾಟಕದ ಮೇಷ್ಟ್ರು ಹೇಳಿಕೊಟ್ಟದ್ದನ್ನ ಬಾಯಿ ಪಾಠ ಮಾಡಿಕೊಂಡು ಅದ್ಭುತ ಸಂಭಾಷಣೆ ಮಾಡುತ್ತಿದ್ದರು. ಅಂತಹ ಅನಕ್ಷರತೆ ಸಮಸ್ಯೆ ನಮ್ಮ ಮಕ್ಕಳಿಗೆ ಬರಬಾರದೆಂದು ಗುಬ್ಬಿ ವೀರಣ್ಣನವರು ಶಿಕ್ಷಕರೊಬ್ಬರನ್ನು ಗೊತ್ತು ಮಾಡಿ ನಮಗೆಲ್ಲ ರಂಗಚಪ್ಪರದಡಿ ಅಕ್ಷರ ಕಲಿಸಿದರು.
ಎಲ್ಲಾ ಮಕ್ಕಳಿಗೆ ಮನೆಯೆ ಮೊದಲ ಪಾಠಶಾಲೆ ಅನ್ತಾರೆ. ನಮ್ಮಂತಹ ಕಲಾವಿದರ ಮಕ್ಕಳಿಗೆ ರಂಗಭೂಮಿಯೆ ಮೊದಲ ಪಾಠ ಶಾಲೆ. ರಂಗ ಮಂಚವೆ ಹಾಸಿಗೆ, ಅದರ ಸೂರೆ ಹೊದಿಕೆ. ಆಟ-ಊಟ-ಓಟ ಎಲ್ಲಾ ರಂಗಭೂಮಿಯ ಟೆಂಟೇ (ತಾಣ) ಆಗರ‍್ತಿತ್ತು. ನನ್ನ ಕಾಲದಲ್ಲಿ ಶಾಲಾ ಪಾಠ ಸಹ ನಾಟಕದ ಸೂರಿನೆಡೆ ಬಂದಿದ್ದರಿಂದ ರಂಗಭೂಮಿ ಆಚೆಗಿನ ಪ್ರಪಂಚ ನಾನು ನೋಡಲೇ ಇಲ್ಲ. ಹೀಗಾಗಿ ಬಣ್ಣ ಹಚ್ಕೊಳ್ಳೋದು ಕಲಿತಷ್ಟು ಸರಾಗವಾಗಿ ಬದುಕಿನ ಪಾಠ ಕಲಿಯಲಿಲ್ಲ. ನಾನು ನಾಲ್ಕು ವರ್ಷ ಮಗುವಿರುವಾಗಲೆ ಬಾಲಕೃಷ್ಣನ ಪಾತ್ರಧಾರಿಯಾದೆ, ಆಗ ಮುಖಕ್ಕೆ ಬಣ್ಣ ಹಚ್ಚೋದು ಪ್ರಾರಂಭಿಸಿದ್ದು ಈವರೆಗೂ ನಿಂತಿಲ್ಲ. ಹಚ್ಚಿದ ಬಣ್ಣ ಮಾಸಿಲ್ಲ. ನನ್ನ ಉತ್ಸಾಹ ಇನ್ನೂ ಕುಂದಿಲ್ಲ. ಕಲಾವಿದನಾಗಿ ಇದೊಂದೆ ನನಗೆ ಹೆಮ್ಮೆ ಅನ್ನಿಸ್ತಿರೋದು.

ಹಾಸ್ಯ ಕಲಾವಿದನಾಗಿ ಚಿತ್ರರಂಗಕ್ಕೆ ಬರಬೇಕೆಂದುಕೊಂಡವನಲ್ಲ. ರಂಗಭೂಮಿಯಲ್ಲಿ ನಾಯಕ ನಟನಾಗಿಯೆ ಬೆಳೆದು ಬಂದಿದ್ದೆ. ಆಗಿನ ಜನಪ್ರಿಯ ರಂಗ ಕಲಾವಿದರಾಗಿದ್ದ ಶಾಂತಕುಮಾರ್, ಪಂಚಲಿಂಗಯ್ಯ, ನರಸಿಂಹರಾಜು, ಬಾಲಕೃಷ್ಣ, ಜಿ.ವಿ. ಅಯ್ಯರ್, ಡಾ|ರಾಜ್‌ಕುಮಾರ್‌ರೊಂದಿಗೆ ಬಾಲ ಕಲಾವಿದನಾಗಿ ಅಭಿನಯಿಸುತ್ತಾ ಬೆಳೆದಿದ್ದೆ. ಪ್ರಮುಖ ಬಾಲ ಕಲಾವಿದನ ಪಾತ್ರಕ್ಕೆ ನಾನೇ ಸರಿಯಾದ ಕಲಾವಿದ ಅಂತ ರಂಗಕ್ಷೇತ್ರದಲ್ಲಿ ಹೆಸರಾಗಿದ್ದೆ. ಒಮ್ಮೆ ಬಾಲಕಲಾವಿದನಾಗಿ ನಾನು ಅಭಿನಯಿಸಿದ ‘ಚಂದ್ರಹಾಸ’ ನಾಟಕ ನೋಡಿ ಮೆಚ್ಚಿದ ಅಂದು ಸಹಾಯಕ ನಿರ್ದೇಶಕರಾಗಿದ್ದ ಎಸ್.ಆರ್. ಪುಟ್ಟಣ್ಣ ಕಣಗಾಲ್ ತಮ್ಮ ಗುರುಗಳಾದ ಖ್ಯಾತ ನಿರ್ದೇಶಕ ಬಿ.ಆರ್. ಪಂತುಲು ಅವರಿಗೆ ನನ್ನ ಬಗ್ಗೆ ತಿಳಿಸಿದರು. ಪದ್ಮಿನಿ ಪಿಕ್ಚರ್ಸ್ ಲಾಂಛನದ ಅಡಿ ನಿರ್ಮಾಣವಾಗುತ್ತಿದ್ದ ‘ಮಕ್ಕಳರಾಜ್ಯ’ ಚಿತ್ರದಲ್ಲಿ ಬಾಲ ನಾಯಕ ನಟನ ಪಾತ್ರಕ್ಕೆ ನನ್ನನ್ನು ಪುಟ್ಟಣ್ಣ ಶಿಫಾರಸು ಮಾಡಿದರು.
1960ರ ಆಗಸ್ಟ್ 12ರಂದು ಬಿಡುಗಡೆಯಾದ ‘ಮಕ್ಕಳ ರಾಜ್ಯ’ದಲ್ಲಿ ನಾಯಕ ನಟನಾದೆ. ಬಾಲ ಕಲಾವಿದರೆ ನಟಿಸಿದ ಆ ಚಿತ್ರದಲ್ಲಿ ಬಾಲನಾಯಕಿಯಾಗಿ ಆರ್.ಸಿ. ಕಲಾ ಆಯ್ಕೆಯಾಗಿದ್ದಳು. ಆ ಚಿತ್ರ ಭಾರಿ ಹೆಸರು ಮಾಡಿತ್ತು. ಕೇವಲ 15ನೇ ವಯಸ್ಸಿಗೆ ಚಿತ್ರರಂಗಕ್ಕೆ ನಾಯಕ ನಟನಾಗಿ ಬಂದೆ. ಸಣ್ಣ ವಯಸಿನಲ್ಲೆ ದೊಡ್ಡ ಪಾತ್ರ ಮಾಡಿದೆ, ದೊಡ್ಡ ವಯಸ್ಸಿಗೆ ಬಂದಾಗ ಮಾತ್ರ ಸಣ್ಣ ಪಾತ್ರ ಮಾಡುವಂತಾಯಿತು. ಇದೆಲ್ಲಾ ನನ್ನ ಹಣೆ ಬರಹ ಅಂತ ಹತಾಶೆಯಿಂದ ವೃತ್ತಿ ಬದುಕಿನ ಬಂಡಿ ಇಲ್ಲಿವರೆಗೆ ಉರುಳಿಸಿಕೊಂಡು ಬರಲಿಲ್ಲ. ಕಲಾವಿದನಾದವನಿಗೆ ಎಂಥ ಪಾತ್ರವಾದರೇನು? ಪಾತ್ರ ಮಾಡುವುದು ಅವನ ಕರ್ತವ್ಯ ಅಂತ ಸಮಷ್ಟಿ ಪ್ರಜ್ಞೆಯಿಂದ ಕೆಲಸ ಮಾಡುತ್ತಾ ಬಂದಿದ್ದೇನೆ..
ಈಗಲೂ ನನ್ನ ಮನದೊಳಗೆ ಒಂದು ನೋವಿದೆ ಎಂದರೆ ಅದು, ನನ್ನೊಳಗಿನ ಕಲಾವಿದನಿಗೆ ಸವಾಲಾಗುವಂಥ ವೈವಿಧ್ಯಮಯ ಪಾತ್ರ ಸಿಗುತ್ತಿಲ್ಲ ಎಂಬ ಕೊರಗೇ ಹೊರತು, ನನ್ನ ಹಿರಿತನಕ್ಕೆ ಒಂದಿಷ್ಟು ಸರಿಯಾದ ಸಂಭಾವನೆ ಸಿಗುತ್ತಿಲ್ಲ ಎಂಬ ಕಾರಣಕ್ಕಲ್ಲ. ಹಾಗಂತ ಸಂಭಾವನೆ ಬಗ್ಗೆ ಹಿಮ್ಮುಖವಾಗೂ ನೋಡಿಲ್ಲ, ಮುಮ್ಮುಖವಾಗೆ ಅದರ ಬಗ್ಗೆ ಕಾಳಜಿ ವಹಿಸಿದ್ದೇನೆ.. ಕಲಾವಿದರ ವ್ಯಕ್ತಿತ್ವದ ಘನತೆಗೆ, ಹೊಟ್ಟೆಪಾಡಿನ ಗೌರವಕ್ಕೆ ಧಕ್ಕೆ ಬಾರದ ರೀತಿ ಸಂಭಾವನೆ ಕೊಡಿ ಅಂತ ಆಗಲೂ- ಈಗಲೂ ವಿನಮ್ರನಾಗೇ ಕೇಳ್ತಾ ಬಂದಿದ್ದೇನೆ. ವಿನಯತೆ-ವಿಧೇಯತೆ ಎಂಬ ಪದಗುಂಜಕ್ಕೆ ಚಿತ್ರರಂಗದಲ್ಲಿ ಕಿಮ್ಮತ್ತಿಲ್ಲ ಅನ್ನೋದೆ ನನಗೆ ನೋವಿನ ಸಂಗತಿ.

‘ಮಕ್ಕಳ ರಾಜ್ಯ’ ಯಶಸ್ವಿಯಾದರೂ ಮತ್ತೊಂದು ಚಿತ್ರ ಸಿಗಲಿಲ್ಲ. ಮತ್ತೊಂದು ಮಕ್ಕಳ ಚಿತ್ರ ತಯಾರಾಗದ ಕಾರಣ ಮತ್ತೆ ರಂಗಭೂಮಿಯಲ್ಲೆ ಹೊಟ್ಟೆಪಾಡು ನೋಡಬೇಕಾಯಿತು. ರಂಗಭೂಮಿಯಲ್ಲೂ ಬಾಲ ಕಲಾವಿದನ ಪಾತ್ರ ಸಿಗುವುದು ಕಡಿಮೆಯಾದ್ದರಿಂದ ಹಾರ್ಮೋನಿಯಂ ಕಲಿತು, ರಂಗ ಸಂಗೀತಕ್ಕೆ ಹಿನ್ನೆಲೆ ಒದಗಿಸುವ ಕಲಾವಿದನಾದೆ. ಹೀಗೆ ಬದುಕು ಒಂದೂವರೆ ದಶಕ ಕಳೆದು ಬಿಟ್ಟಿತು. ವೃತ್ತಿ ರಂಗಭೂಮಿಯಲ್ಲೆ ಕಲಾವಿದೆಯಾಗಿದ್ದ ಗೆಳತಿ ಸುಧಾ ಮಡದಿಯಾದಳು. ಎರಡು ಮಕ್ಕಳ ತಂದೆಯೂ ಆದೆ. ಇಂಥ ಸಂದರ್ಭದಲ್ಲೆ (1975) ಮತ್ತೆ ಪುಟ್ಟಣ್ಣ ಕಣಗಾಲರೆ ಚಿತ್ರರಂಗಕ್ಕೆ 2ನೇ ಬಾರಿ ಪ್ರವೇಶ ಕೊಡಿಸಿದರು. ‘ಕಥಾಸಂಗಮ’ ಚಿತ್ರದಲ್ಲಿ ಬರುವ ‘ಪುಟ್ತಾಯಿ’ ಕತೆಯಲ್ಲಿ ತಿಮ್ಮರಾಯಿ ಪಾತ್ರಕ್ಕೆ ಆಯ್ಕೆಯಾದೆ. ನನ್ನೊಂದಿಗೆ ಬಣ್ಣ ಹಚ್ಚಿದ ರಜನಿಕಾಂತ್ ದೊಡ್ಡ ಸ್ಟಾರ್ ನಟರಾಗಿ ಬೆಳೆದರು. ಆದರೆ ನನಗೆ ಮತ್ತದೇ ಅಜ್ಞಾತ ವಾಸ.
ಹಾಸ್ಯದ ಸೀತಾಪತಿ ನಟ ಉಮೇಶ್ ಇನ್ನೇನಿದ್ದರೂ ನೆನಪಷ್ಟೇ.. ಅವರ ಸಿನಿಮಾ ಬದುಕು ಹೇಗಿತ್ತು?
ರಂಗಭೂಮಿಯಿಂದಲೂ ನನ್ನ ಕುಟುಂಬದ ಸ್ನೇಹಿತರಾಗಿದ್ದ ಡಾ|ರಾಜ್ ಅವರ ಕೃಪೆ ಸಿಕ್ಕಿತು. ಅಂದಿನಿಂದ ನನ್ನ ಸಿನಿಮಾ ರಂಗದ ವೃತ್ತಿ ಪ್ರಾದೀಪ್ಯಮಾನದ ತಿರುವಿಗೆ ಬಂದಿತು. ಅವರೊಂದಿಗೆ ‘ಹಾವಿನ ಹೆಡೆ’ (1981)ಯಿಂದ ‘ಶಬ್ದವೇದಿ’(2000) ಚಿತ್ರದವರೆಗೂ ಅಭಿನಯಿಸಿ ಅವರ ಬ್ಯಾನರಿನ ಖಾಯಂ ಕಲಾವಿದನಾದೆ. ಇದೊಂದೇ ನನ್ನ ವೃತ್ತಿ ಜೀವನದ ಬಹುದೊಡ್ಡ ಗೌರವ ಅಂತ ಭಾವಿಸಿದ್ದೇನೆ. ಚಿತ್ರರಂಗಕ್ಕೆ ನಾನು ಬರಲು ನಿರ್ದೇಶಕ ದಿಗ್ಗಜ ಪುಟ್ಟಣ್ಣ ಕಣಗಾಲ್ ಕಾರಣರಾದರೆ, ಚಿತ್ರರಂಗದಲ್ಲಿ ಉಳಿದು ಬೆಳೆಯಲು ಕಲಾದಿಗ್ಗಜ ಡಾ|ರಾಜ್‌ಕುಮಾರ್ ಕಾರಣರಾದರು. ಹೂವಿನೊಂದಿಗೆ ನಾರು ಸ್ವರ್ಗ ಸೇರಿತೆಂಬಂತೆ ಅಂತಹ ಮಹಾನ್ ವ್ಯಕ್ತಿಗಳಿಂದ ನಾನೊಂದು ಕಲಾ ವ್ಯಕ್ತಿತ್ವ ರೂಪಿಸಿಕೊಂಡು ಚಿತ್ರರಂಗದಲ್ಲಿ ನನ್ನದೊಂದು ಅಸ್ತಿತ್ವ ಉಳಿಸಿಕೊಂಡೆ. ನಟಿ ಮಾಧವಿಗೆ ಮೊದಲ ಕನ್ನಡ ಚಿತ್ರವಾದ “ಅನುಪಮ”ಚಿತ್ರದಲ್ಲಿ ನಿರ್ದೇಶಕ ರೇಣುಕಾಶರ್ಮ ಕೊಟ್ಟ ಪಾತ್ರ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ಬೆಳೆಯುವಂತಾಯಿತು.

ಇಲ್ಲಿವರೆಗೆ ನಾನು ನಾನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ ಅದರಲ್ಲಿ ತೃಪ್ತಿ ಕೊಟ್ಟ ಪಾತ್ರ ‘ರಾಮಾಪುರದ ರಾವಣ’ ಚಿತ್ರದಲ್ಲಿ ಮಾಡಿದ ಹುಚ್ಚನ ಪಾತ್ರ. ಹಾಗೇ 1990ರಲ್ಲಿ ಬಿಡುಗಡೆ ಕಂಡ ‘ಗೋಲ್‌ಮಾಲ್ ರಾಧಾಕೃಷ್ಣ’ ಮತ್ತು ‘ರೋಲ್‌ಕಾಲ್ ರಾಮಕೃಷ್ಣ’ ಚಿತ್ರಗಳ ಸರಣಿಯ ‘ಸೀತಾಪತಿ’ ಪಾತ್ರ ಭಾರಿ ಜನಪ್ರಿಯತೆ ತಂದುಕೊಟ್ಟಿತು. ಇತ್ತೀಚಿನ ‘ವೆಂಕಟ ಇನ್ ಸಂಕಟ’ ಚಿತ್ರದ ಅಜ್ಜಿ ಪಾತ್ರ ಕಲಾವಿದನಿಗೆ ಸಾರ್ಥಕ್ಯ ಪಾತ್ರವಾಗಿತ್ತು. ಓರ್ವ ಪುರುಷ ಕಲಾವಿದ, ಚಿತ್ರದ ಪೂರ್ಣಾವಧಿವರೆಗೆ ನೈಜ ಸ್ತ್ರೀಪಾತ್ರ ನಿರ್ವಹಿಸಿದ ಚರಿತ್ರೆ ಬಹುಶಃ ಇಡೀ ಜಗತ್ತಿನ ಚಿತ್ರರಂಗದ ಇತಿಹಾಸದಲ್ಲೆ ಇಲ್ಲ. ಇಂಥ ಸಾಧನೆ ಮಾಡಿದ ನನ್ನನ್ನು ಕಲಾವಿದನಾಗಿ ಗುರುತಿಸಿ ಯಾರೊಬ್ಬರೂ ಆದರಿಸಲಿಲ್ಲವಲ್ಲ ಎಂಬ ನೋವು ನನಗೆ ಬಹಳವಿದೆ. ಹಾಸ್ಯ ಕಲಾವಿದನ ಹಾಸ್ಯದ ಹಿಂದೆ ನೂರೆಂಟು ನೋವುಗಳಿರುತ್ತೆ ಎಂಬುದು ಕೇವಲ ಸರ್ಕಸ್‌ನ ಜೋಕರ್ ಕಲಾವಿದರಿಗಷ್ಟೆ ಅನ್ವಯಿಸುವುದಿಲ್ಲ. ನಮ್ಮಂಥ ಚಿತ್ರರಂಗದ ಹಾಸ್ಯ ಕಲಾವಿದರಿಗೂ ಅನ್ವಯವಾಗುತ್ತೆ.

ಕನ್ನಡ ಚಿತ್ರರಂಗದ ಈಗಿನ ಹೊಸ ಪೀಳಿಗೆಯ ಹಾಸ್ಯ ಕಲಾವಿದರು ತಮ್ಮ ಸಂಭಾವನೆಯನ್ನು ತಾರಕಕ್ಕೇರಿಸಿಕೊಂಡಿದ್ದಾರೆ. ಇದು ಒಂದು ರೀತಿ ಕಲೆಗೆ ಬೆಲೆ ಕಟ್ಟುವ ರೀತಿಯಲ್ಲೆ ಕಲಾವಿದನಿಗೆ ಕೊಡುವ ಮೌಲ್ಯಯುತ ಗೌರವ ಎಂದು ಭಾವಿಸಿದ್ದೇನೆ. ಹೊಸ ಹಾಸ್ಯ ಕಲಾವಿದರು ಗತ್ತು ಗೈರತ್ತು ಹೊಂದುವುದು ತಪ್ಪಲ್ಲ. ಹಾಗೆಯೇ ಹಿರಿಯ ಹಾಸ್ಯ ಕಲಾವಿದರ ಕಡೆಗೂ ಅದೇ ಮೌಲ್ಯಭರಿತ ನಗೆ ನಿರ್ಮಾಪಕರು ಬೀರಲಿ ಎಂಬುದು ನನ್ನಾಸೆ. ನನ್ನ ದೇಹಕ್ಕೆ ವಯಸ್ಸಾಗಿರಬಹುದು, ಮನಸು ಮಾಗಿರಬಹುದು, ಆದರೆ ನನ್ನೊಳಗಿನ ಕಲಾವಿದ ಯಾವತ್ತೂ ಚಿರ ಯೌವನಿಗ. ನನ್ನ ಕೊನೆ ಉಸಿರಿರುವವರೆಗೂ ಆತನಿಗೆ ಮುಪ್ಪು ಬರುವುದಿಲ್ಲ. ಆದ್ದರಿಂದ ನನ್ನ ಶರೀರದ ವಯಸ್ಸು ನೋಡದೆ ನನ್ನೊಳಗಿನ ಕಲಾವಿದನ ಸತ್ವ ನೋಡಿ ವೈವಿಧ್ಯಮಯ ಪಾತ್ರ ಕೊಡಿ ಎಂದು ಚಿತ್ರೋದ್ಯಮಿಗಳನ್ನು ಕಳಕಳಿಯಿಂದ ಬೇಡಿಕೊಳ್ಳುತ್ತೇನೆ.
ನನಗಿದ್ದ ಒಬ್ಬ ಮಗ 20 ವರ್ಷದ ಹಿಂದೆಯೇ ಬೈಕ್ ಅಪಘಾತದಲ್ಲಿ ತೀರಿ ಹೋದ. ವಯಸ್ಸಿಗೆ ಬಂದ ಮಗ ಇಳಿ ವಯಸಿನಲ್ಲಿ ಹೆತ್ತವರನ್ನು ಸಲಹುತ್ತಾನೆಂಬ ಆಸೆ ಕಮರಿ ಹೋಯಿತು. ‘ಪುತ್ರ ಶೋಕಂ ನಿರಂತರಂ’ ಎಂಬಂತೆ ಅದು ನನಗೆಂದು ಭರಿಸಲಾರದ ದುಃಖ. ಹಾಗಂತ ಅದರ ಕೊರಗಿನಲ್ಲೆ ಜೀವ ಬಿಟ್ಟು ಮಲಗಲಿಕ್ಕಾಗಲಿಲ್ಲ. ಮಡದಿ, ಮಗಳ ಸಲಹುವ ಜವಾಬ್ದಾರಿ ಹೆಗಲ ಮೇಲಿತ್ತು. ಮಗಳು ಜಯಲಕ್ಷ್ಮಿ ಕಲಾವಿದೆಯಾಗಿ ಸಿನಿಮಾ-ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾಳೆ. ಆಕೆ ವೃತ್ತಿ ಪರ ಕಲಾವಿದೆಯಾಗಿ ಭವಿಷ್ಯದ ಬದುಕು ರೂಪಿಸಿಕೊಳ್ಳಲೆಂಬುದು ತಂದೆಯಾಗಿ ನನ್ನ ಕಡೆಯ ಆಸೆ. ನನ್ನ ಕೊನೆ ಬಯಕೆಗಳು ವೃತ್ತಿ ಬದುಕಿನ ಕೊನೆಯಲ್ಲಿ, ಯಾವ ತಿರುವು ತೆಗೆದುಕೊಳ್ಳುತ್ತವೆ ಎಂಬುದು ಕಾಲವೇ ನಿರ್ಧರಿಸಬೇಕು. ಏಕೆಂದರೆ ನಾನು ಪಾತ್ರಧಾರಿ- ಸೂತ್ರಧಾರಿ ಮೇಲಿದ್ದಾನೆ. ಅವನಿಚ್ಛೆ ಏನಿದೆಯೊ ನಡೆಯಲಿ ಅಂತ ಕಲಾ ಬದುಕು ಮುನ್ನಡೆಸುತ್ತಿದ್ದೇನೆ.
-ನಟ ಎಂ. ಎಸ್. ಉಮೇಶ್
ಇದನ್ನೂ ಓದಿ… ಹಾಸ್ಯದ ಸೀತಾಪತಿ ನಟ ಉಮೇಶ್ ಇನ್ನೇನಿದ್ದರೂ ನೆನಪಷ್ಟೇ.. ಅವರ ಸಿನಿಮಾ ಬದುಕು ಹೇಗಿತ್ತು?








