CinemaLatest

ಕನ್ನಡದ ಹಿರಿಯ ನಟ ರಮೇಶ್… ದೋಣಿ ಸಾಗಲಿ.  ಮುಂದೆ ಹೋಗಲಿ..

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ… ಮಿಸ್ ಲೀಲಾವತಿ ಚಿತ್ರದ ಈ ಹಾಡು ಕೇಳುವಾಗ ಅಥವಾ ಹಾಡಿನ ದೃಶ್ಯ ನೋಡುವಾಗಲೆಲ್ಲ ಮನಸ್ಸು ಆರ್ದ್ರ ಗೊಳ್ಳುತ್ತದೆ.. ಮತ್ತೊಮ್ಮೆ ಕೇಳಬೇಕೆನಿಸುತ್ತದೆ… ಈ ಹಾಡಿನಲ್ಲಿ ನಟಿ ಜಯಂತಿ ಜತೆ ಕಾಣಿಸಿಕೊಂಡಿರುವ  ಸ್ಪುರದ್ರೂಪಿ ನಟ ಗಮನಸೆಳೆದಿರುತ್ತಾನೆ.. ಈ ನಟನ ಬಗ್ಗೆ ಇವತ್ತಿನ ತಲೆಮಾರಿಗೆ ಗೊತ್ತಿರಲಿಕ್ಕಿಲ್ಲ.. ಈ ನಟನೇ ರಮೇಶ್… ಇವತ್ತು ಗೂಗಲ್ ನಲ್ಲಿ ತಡಕಾಡಿದರೆ ಅಂದಿನ ರಮೇಶ್ ಬಗ್ಗೆ ಮಾಹಿತಿ, ಚಿತ್ರಗಳು ಲಭ್ಯವಾಗದು..  ಹೀಗಾಗಿ ಅವರ ಬಗ್ಗೆ  ಇಂದಿನವರಿಗೆ ತಿಳಿಸುವ ಪ್ರಯತ್ನವೇ ಈ ಲೇಖನವಾಗಿದೆ.. ಕನ್ನಡ ಚಿತ್ರರಂಗದ ಆಳಗಲದ ಬಗ್ಗೆ ಅರಿತಿರುವ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಜನಮನಕನ್ನಡದ ಓದುಗರ ಮುಂದೆ ರಮೇಶ್ ಅವರ ಬದುಕು ಮತ್ತು ಸಿನಿಮಾದ ಬಗ್ಗೆ ಬರೆದಿದ್ದಾರೆ… ಓದಿ ಅಭಿಪ್ರಾಯ ತಿಳಿಸಿ…

ರಮೇಶ್(ರಂಗಭೂಮಿ) ರವರ ಸರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದಾದ “ಮಿಸ್ ಲೀಲಾವತಿ” ಚಿತ್ರದಲ್ಲಿ ಅಭಿನಯ ಶಾರದೆ ಜಯಂತಿ ಅವರೊಡನೆ “ದೋಣಿ ಸಾಗಲಿ..ಮುಂದೆ ಹೋಗಲಿ… ದೂರ ತೀರವ ಸೇರಲಿ” ಎಂಬ ಜನಪ್ರಿಯ ಗೀತೆ ಇರುವ ಈ ಚಿತ್ರದಲ್ಲಿ ರಮೇಶ ರವರ ಮನೋಜ್ಞ ಅಭಿನಯವನ್ನು ಚಿತ್ರಪ್ರೇಕ್ಷಕರು ಆದಿಯಾಗಿ ಇಡೀ ಕನ್ನಡ ಕುಲಕೋಟಿ ಇಂದಿಗೂ ನೆನೆನೆನೆದು ಹೊಗಳುತ್ತಾರೆ.

1964ರಲ್ಲಿ “ಕವಲೆರೆಡು ಕುಲವೊಂದು” ಚಿತ್ರದ ಮೂಲಕ ಚಂದನವನಕ್ಕೆ ಕಾಲಿರಿಸಿದರು. ಈ ಸಿನಿಮಾವನ್ನು ಟಿ.ವಿ.ಸಿಂಗ್ ಠಾಕೂರ್ ನಿರ್ದೇಶಿಸಿ ಮತ್ತು ಎ.ಸಿ.ನರಸಿಂಹಮೂರ್ತಿ ನಿರ್ಮಿಸಿದ್ದರು. ಉದಯಕುಮಾರ್- ಜಯಂತಿ ಹೀರೋ-ಹೀರೋಯಿನ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ಕಾಲಕ್ರಮೇಣ ರಮೇಶ್ ಸಾವಧಾನವಾಗಿ ಮೇಲೇರಲು ಪ್ರಯತ್ನ ಪಟ್ಟರೂ ಅದೇಕೋ ಶೇ.100ರಷ್ಟು ಗುರಿ ತಲುಪಲು ಸಾಧ್ಯವಾಗಲೇ ಇಲ್ಲ. ಇಷ್ಟಾದರೂ ಡಾ.ರಾಜ್‍ಕುಮಾರ್ ಜತೆ ಅಭಿನಯಿಸಿದ ಮಂತ್ರಾಲಯ ಮಹಾತ್ಮೆ, ನ್ಯಾಯವೇ ದೇವರು, ನಂದಗೋಕುಲ, ಮೂರೂವರೆ ವಜ್ರಗಳು, ಬಂಗಾರದ ಪಂಜರ, ಭಕ್ತಕುಂಬಾರ, ಮುಂತಾದ ಚಿತ್ರಗಳಲ್ಲಿ ರಮೇಶ್ ರವರ ಅಮೋಘ ಅಭಿನಯವನ್ನು ಎಂದಿಗೂ ಮರೆಯುವಂತಿಲ್ಲ.

ಪಂಚಭಾಷಾ ತಾರೆ ಪದ್ಮಭೂಷಣ ಪದ್ಮಶ್ರೀ ಡಾ.ಬಿ.ಸರೋಜದೇವಿ ನಾಯಕನಟಿ ಆಗಿದ್ದು ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳೂ ಆದ “ಚಿನ್ನಾರಿಪುಟ್ಟಣ್ಣ” ಮತ್ತು “ಲಕ್ಷ್ಮಿಸರಸ್ವತಿ” ಎಂಬ ಅತ್ತ್ಯುತ್ತಮ ಚಿತ್ರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಇವರು ಎಲ್ಲರ ಗಮನ ಸೆಳೆದರು. ಮಿನುಗು ತಾರೆ ಕಲ್ಪನ ನಾಯಕಿಯಾಗಿದ್ದ ಸೀತಾ ಚಿತ್ರದ ಅತ್ಯಂತ ಜನಪ್ರಿಯ ಗೀತೆ “ಮದುವೆಯ ಈ ಬಂಧ… .ಅನುರಾಗದ ಅನುಬಂಧ… ಏಳೇಳು ಜನುಮದಲು ತೀರದ ಸಂಬಂಧ…..” ಎಂಬ ಹಾಡು ಇವತ್ತಿನ ಬಹುತೇಕ ಮದುವೆ ಸಮಾರಂಭದ ಆರತಕ್ಷತೆ ಆರ್ಕೆಷ್ಟ್ರಾ ಅಥವಾ ವಿವಾಹದ ವಧು-ವರ ಜೋಡಿಯ ವೀಡಿಯೋಗಳಲ್ಲಿ ಈಗಲೂ ವಿಜೃಂಭಿಸುತ್ತಿದೆ.

ಹಳ್ಳಿಯಿಂದ ದಿಲ್ಲಿಯವರೆಗೆ ಇವತ್ತಿಗೂ ಸಹ ಜರುಗುವ ಪ್ರತಿಯೊಂದು ಶುಭ ವಿವಾಹ ಸಂದರ್ಭದಲ್ಲಿ ಕಡ್ಡಾಯ ಎನಿಸುವಷ್ಟರ ಮಟ್ಟಿಗೆ ಜನಪ್ರಿಯವಾಗಿದೆ. ಈ ಗೀತೆಗೆ ರಮೇಶ್ ಅಂದು ನೀಡಿದ ಮನೋಜ್ಞ ಅಭಿನಯವನ್ನು ಮರೆಯಲು ಸಾಧ್ಯವೇ ಇಲ್ಲ!?.. ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಪ್ರಸಾದ್ ಪ್ರೊಡಕ್ಷನ್ಸ್ 1964 ರಲ್ಲಿ ತಯಾರಿಸಿದ ಖ್ಯಾತನಟ ಸುನಿಲ್ ದತ್ ಪದ್ಮಶ್ರೀ ಬಿ.ಸರೋಜಾದೇವಿ ನಟಿಸಿದ್ದ “ಬೇಟಿ-ಬೇಟೆ” ಹಿಂದಿ ಸಿನಿಮಾದ ರೀಮೇಕ್ “ತಂದೆಮಕ್ಕಳು” ಕನ್ನಡ ಚಿತ್ರದಲ್ಲಿ ಖ್ಯಾತ ನಟಿ ಬಿ.ಸರೋಜಾದೇವಿ ಜತೆ ಸುನಿಲ್ ದತ್ತನಷ್ಟೆ ಅದ್ಭುತವಾಗಿ ನಟಿಸಿದ ರಮೇಶ್ ಕಡೆಗೂ ದಿಗ್ಗಜರಾದ ಸುನಿಲ್ ದತ್  ಸರೋಜಾದೇವಿ ಇಬ್ಬರೂ ಹೊಗಳುವಂತೆ ಅಭಿನಯಿಸಿದ್ದರು.

ಈ ಚಿತ್ರವು ರಾಷ್ಟ್ರ ಪ್ರಶಸ್ತಿಯನ್ನೂ ಗಳಿಸಿತು. ಇದರಲ್ಲಿನ “ಸಂಜೆ ಕೆಂಪು ಮೂಡಿತು… ಇರುಳು ಸೆರಗು ಹಾಸಿತು… ದೂರತಾರೆ ಮಿನುಗಿತು….” ಮತ್ತು “ರಾಧಿಕೆ ನಿನ್ನ ಸರಸ ಇದೇನೇ…., ಮುರಳಿಯ ಮರೆಸಿ…” ಎಂಬ ಸುಮಧುರ ಹಾಡುಗಳು ಇವತ್ತಿಗೂ ಎಲ್ಲರ ಮೆಚ್ಚಿನ ಚಿತ್ರಗೀತೆ ಆಗಿದ್ದು ಗುನುಗುನಿಸುವಂತೆ ಇವೆ. ಹಲವು ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ ಪಡೆದ ರಮೇಶ್ ಮದ್ರಾಸ್ ಬಾಂಬೆ ಹೈದ್ರಾಬಾದ್ ಬೆಂಗಳೂರು ಮೈಸೂರು ಮುಂತಾದ ನಗರದ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಅನೇಕ ಬಿರುದು ಬಹುಮಾನ ಸನ್ಮಾನ ಪಡೆದಿದ್ದಾರೆ.

ಟ್ರ್ಯಾಜಿಡಿ ಮತ್ತು ಕಾಮಿಡಿ ಸೇರಿದಂತೆ ಯಾವುದೇ ಬಗೆಯ ಪಾತ್ರವನ್ನೇ ಆಗಲಿ ಮನಸಾರೆ ಮೆಚ್ಚಿ ಸ್ವಯಂ ಅನುಭವಿಸಿ ನಂತರ ಅಭಿನಯಿಸುತ್ತಿದ್ದ ಸಹಜ ಕಲಾವಿದ, ನಡೆ-ನುಡಿಯಿಂದ ಸಹೃದಯವಂತ ಕೂಡ ಹೌದು. ತಮ್ಮ 35 ವರ್ಷದ ಕಲಾಜೀವನದಲ್ಲಿ 50 ಸಿನಿಮಾಗಳ ಗಡಿಯನ್ನೂ ದಾಟಲಿಲ್ಲ ಎಂಬ ಚಿಂತೆ ಮತ್ತು  ನಿರಾಶೆ ರಮೇಶ್ ರವರನ್ನು ಅವರ ಅಂತಿಮ ದಿನಗಳವರೆಗೂ ಕಾಡುತ್ತಲೇ ಇತ್ತು?!

ರಮೇಶ್ ನಟಿಸಿದ ಚಿತ್ರಗಳು ಯಾವುದು ಎಂಬುದನ್ನು ನೋಡುತ್ತಾ ಹೋದರೆ.. ಕವಲೆರಡು ಕುಲವೊಂದು,  ಹೂಬಿಸಿಲು, ಮಿಸ್‍ಲೀಲಾವತಿ, ಭಲೇಅದೃಷ್ಟವೊಅದೃಷ್ಟ, ಎಂದೂನಿನ್ನವನೇ,  ತಂದೆ ಮಕ್ಕಳು,  ಮಂತ್ರಾಲಯ ಮಹಾತ್ಮೆ, ನ್ಯಾಯವೇ ದೇವರು, ದುಡ್ಡೇದೊಡ್ಡಪ್ಪ,  ಸುಭದ್ರಾ ಕಲ್ಯಾಣ, ಬದುಕುವ ದಾರಿ,   ಉತ್ತರ ದಕ್ಷಿಣ, ಲವ್ ಇನ್ ಬೆಂಗಳೂರು,   ಭಲೇರಾಣಿ, ಚಿನ್ನಾರಿಪುಟ್ಟಣ್ಣ, ನಾ ಮೆಚ್ಚಿದ ಹುಡುಗ, ಅದೇ ಹೃದಯ ಅದೇ ಮಮತೆ, ನಂದಗೋಕುಲ, ಗೃಹಲಕ್ಷ್ಮಿ, ಕಾಣದಕೈ, ಮನಶ್ಯಾಂತಿ, ಮೂರೂವರೆವಜ್ರಗಳು, ಲಕ್ಷ್ಮೀ ಸರಸ್ವತಿ, ಬಂಗಾರದ ಪಂಜರ, ಆರುಮೂರುಒಂಭತ್ತು,  ಭಕ್ತಕುಂಬಾರ, ಸೀತಾ, ಕರ್ತವ್ಯದ ಕರೆ, ಅಳಿಯ ಗೆಳೆಯ,  ನಿರೀಕ್ಷೆ, ಪ್ರೇಮಕ್ಕೂ ಪರ್ಮಿಟ್ಟೇ,  ಸುಮಂಗಲಿ ಮೊದಲಾದವುಗಳಾಗಿವೆ.

admin
the authoradmin

6 Comments

  • A.1 lekana. Namma kalada andare hale kalada senior Ramesh nijavagaloo olleya nata hero. Sri nataraj avarige dhanyavada. 83 years old Narayanswamy, rtd. Supervisor, SHARADA MOVIES, GANDHI NAĢARA BENGALURU

  • A.1 lekana. Namma kalada andare hale kalada senior Ramesh nijavagaloo olleya nata hero. Sri nataraj avarige dhanyavada. 83 years old Narayanswamy, rtd. Supervisor, SHARADA MOVIES, film distributors, GANDHI NAĢARA BENGALURU

  • Ramesh ravara bagge First class article by NATRAJ sir
    KEMPAIAH, rtd. Karnataka Film chamber of commerce Bengaluru

  • Ramesh ravara bagge First class article by NATRAJ sir
    KEMPAIAH, rtd. Karnataka Film chamber of commerce Bengaluru 560009

    • ಕುಮಾರಕವಿಯವರಿಂದ ಮತ್ತೊಂದು ಉತ್ತಮ ಲೇಖನ, 1960ರ ಮತ್ತು 1970ರ ದಶಕದ ಹೀರೋ-ಕಂ-ಪೋಷಕನಟ ರಮೇಶ್ ರವರ ಕುರಿತು ಬರೆದಿರೋದು ಈಗಿನವರಿಗೆ ಉಪಯುಕ್ತ ಮಾಹಿತಿ.
      Sathyanarayana, rtd.supdt. Mysore University.

    • ಕುಮಾರಕವಿಯವರಿಂದ ಮತ್ತೊಂದು ಉತ್ತಮ ಲೇಖನ, 1960ರ ಮತ್ತು 1970ರ ದಶಕದ ಹೀರೋ-ಕಂ-ಪೋಷಕನಟ ರಮೇಶ್ ರವರ ಕುರಿತು ಬರೆದಿರೋದು ಈಗಿನವರಿಗೆ ಉಪಯುಕ್ತ ಮಾಹಿತಿ.
      Sathyanarayana,Rtd.supdt. Mysore University. Mysore

Leave a Reply

Translate to any language you want