ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್ ತ್ರಿಪುರಾಂಭ… ಇವರ ಸಿನಿಮಾದಾಚೆಗಿನ ಬದುಕು ಹೇಗಿತ್ತು?

ಕನ್ನಡ ಚಿತ್ರರಂಗ ನಡೆದು ಬಂದ ಹಾದಿ ರೋಚಕವಾಗಿದ್ದು, ಹಂತ ಹಂತವಾಗಿ ಬೆಳೆದು ಬಂದ ರೀತಿ, ಅವತ್ತಿನ ಕಲಾವಿದರು ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳಲೇ ಬೇಕಾಗುತ್ತದೆ. ಇವತ್ತು ತಂತ್ರಜ್ಞಾನ ಅಗಾಧವಾಗಿ ಬೆಳೆದಿದೆ. ಆದರೆ ಅವತ್ತು ಇರುವ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಿದ ಚಿತ್ರಗಳು ಇವತ್ತಿಗೂ ನಮ್ಮ ಮನಸೊರೆಗೊಳ್ಳುತ್ತವೆ. ಹಾಗೆಯೇ ಆ ಚಿತ್ರಗಳಲ್ಲಿ ನಟಿಸಿದ ಕಲಾವಿದರೂ ಕೂಡ… ಇವತ್ತು ನಾವು ನಟಿ ತ್ರಿಪುರಾಂಬ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ.. ಇದಕ್ಕೆ ಕಾರಣರಾಗುತ್ತಿರುವುದು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್…. ತ್ರಿಪುರಾಂಬ ಅವರ ಕುರಿತಂತೆ ಇಲ್ಲಿ ನೀವರಿಯದ ಮಾಹಿತಿಯನ್ನು ತೆರೆದಿಟ್ಟಿದ್ದಾರೆ….
ತ್ರಿಪುರಾಂಬ! ನಾಟಕ-ಸಿನಿಮಾ ಕ್ಷೇತ್ರಕ್ಕೆ ಮಡಿವಂತಿಕೆ ಮೈಗೂಡಿದ್ದಕಾಲ, ನಟಿಯರನ್ನ ಹುಡುಕುವ ಕಾರ್ಯವಂತು ತಪಸ್ಸುಮಾಡಿ ವರವನ್ನ ಪಡೆದಷ್ಟು, ಬರಡುಭೂಮೀಲಿ ಬಾವಿ ತೋಡಿದಷ್ಟು ಕಠಿಣ! ನಟಿಯರನ್ನು ಕಂಡಾಗ ಮೂಗುಮುರಿದು ಕೀಳುಭಾವನೆಯಿಂದ ಕಾಣುತ್ತಿದ್ದಂಥ ಬರಗಾಲದಲ್ಲಿ ದೊರಕಿದ ಮಹಿಳಾಮಾಣಿಕ್ಯ ತ್ರಿಪುರಾಂಬ… ಎಲ್ಲರೂ ಈಕೆಯನ್ನು ಓರ್ವ ನಟಿ ಎನ್ನುವುದಕ್ಕಿಂತ ಮಿಗಿಲಾಗಿ ದೇವರು ಕೊಟ್ಟ ಕಲಾವಿದೆ ಎಂದು ಬಹುಕಾಲ ಸ್ಮರಿಸುತಿದ್ದರು!
ಅಂದಿನ ಮೈಸೂರು ರಾಜ್ಯದ ಬೆಂಗಳೂರಲ್ಲಿ 17.7.1911ರಂದು ಕನಕಮ್ಮ ಶಂಕರಶಾಸ್ತ್ರಿ ದಂಪತಿಯ 5 ಹೆಣ್ಣು ಮಕ್ಕಳಲ್ಲಿ ಜೇಷ್ಠಳಾದ ತ್ರಿಪುರಾಂಬ ತನ್ನ ಸೋದರ ಸೋದರಿ ನೆಂಟರಿಷ್ಟರು ಬಂಧುಬಳಗ ಮೊದಲ್ಗೊಂಡು ಎಲ್ಲರ ಅಚ್ಚುಮೆಚ್ಚಿನ ಹುಡುಗಿಯಾಗಿ ಕಿರಿಯ ವಯಸ್ಸಿನಲ್ಲೆ ಪ್ರತಿಭಾನ್ವಿತೆ ಎನಿಸಿ, ಪುರಾಣ ಶಾಸ್ತ್ರ ಸಂಗೀತ ನೃತ್ಯ ವೇದ ಆಗಮ ಸಾಹಿತ್ಯ ಮುಂತಾದ ಕಲೆಗಳಲ್ಲಿ ಪಾಂಡಿತ್ಯ ಪಡೆದಿದ್ದ ತಂದೆಯ ಮಾರ್ಗದರ್ಶನ ಪ್ರೋತ್ಸಾಹದಿಂದ ಉತ್ತಮ ಕಲಾವತಿಯಾದರು.
ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
ತಂದೆಯಿಂದ ಕಲಿವುದರ ಜತೆಗೇ ಖ್ಯಾತ ವಿದ್ವಾನ್ ತಿಟ್ಟೆರಾಮಸ್ವಾಮಿ ಶಾಸ್ತ್ರಿಯವರಿಂದ ಸಂಗೀತ ವಿದ್ಯಾಭ್ಯಾಸ ಮಾಡಿದರು. ಬೇರೆಲ್ಲ ವಿಭಾಗಕ್ಕಿಂತ ಸಂಗೀತ ಕ್ಷೇತ್ರದಲ್ಲಿ ಹೆಚ್ಚುಆಸಕ್ತಿಯಿದ್ದ ತ್ರಿಪುರಾಂಭ ಅದರಲ್ಲಿಯೆ ಪರಿಣಿತರಾದರು. ಸಂಗೀತದ ಜತೆಗೆ ನೃತ್ಯ ವಿದ್ಯಾಭ್ಯಾಸವನ್ನೂ ಪಡೆದರು. ತ್ರಿಪುರಾಂಬ ಬಣ್ಣಿಸುವಂಥ ಸುಂದರಿಯೇನಲ್ಲ, ಅತ್ಯಂತ ಪ್ರತಿಭಾನ್ವಿತೆಯೂ ಆಗಿರಲಿಲ್ಲ. ಆದರೆ ಅದೃಷ್ಟವಂತೆ ಖಂಡಿತ! ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಬಹಳ ಅಪರೂಪಕ್ಕೆ ಸಂಗೀತ ಮತ್ತು ನೃತ್ಯ ತರಬೇತಿ ದೊರಕುತ್ತಿತ್ತು. ತಮ್ಮ ಕನಸಲ್ಲೂ ನಟನೆಯ ನೆರಳೂ ಸುಳಿದಿರಲಿಲ್ಲ. ಆದರೆ ದೈವಸಂಕಲ್ಪ ಎಂಬಂತೆ ನಟಿಸುವ ಭಾಗ್ಯ ದೊರಕಿದ್ದು ನೂರಕ್ಕೆ ನೂರು ಅನಿರೀಕ್ಷಿತ, ಅನಿವಾರ್ಯ ಆಕಸ್ಮಿಕ..!
1933ರಲ್ಲಿ ಗುಬ್ಬಿವೀರಣ್ಣನವರ ನಾಟಕ ಕಂಪನಿ ಸುವರ್ಣ ಮಹೋತ್ವವ ಆಚರಿಸುವುದರಲ್ಲಿತ್ತು. 50ನೇ ವರ್ಷ ಆಚರಣೆಗೆಂದು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಬರೆದಿದ್ದರು. ಪಾಂಚಾಲಿ/ದ್ರೌಪದಿ ಪಾತ್ರಕ್ಕೆ ಹೊಸಮುಖ ಹುಡುಕುವ ಹುನ್ನಾರದಲ್ಲಿದ್ದ ಗುಬ್ಬಿವೀರಣ್ಣ ಹೊಸಬರನ್ನ ತಲಾಸೆ ಮಾಡುವಂತೆ ಸಹೋದ್ಯೋಗಿ-ಮಿತ್ರರಿಗೆ ಸೂಚಿಸಿದ್ದರು. ಗುಬ್ಬಿಕಂಪನಿ ವ್ಯವಸ್ಥಾಪಕ ನರಸಿಂಹಮೂರ್ತಿಯು ತ್ರಿಪುರಾಂಬ ತಂದೆಗೆ ಆಪ್ತಮಿತ್ರ. ಆಗಾಗ್ಗೆ ಗೆಳೆಯನ ಮನೆಗೆ ಬಂದು ಹೋಗುತ್ತಿದ್ದಾಗ ಇವರ ಮಗಳು ತ್ರಿಪುರಾಂಬ ಎಲ್.ಎಸ್.ವಿದ್ಯಾರ್ಥಿನಿ ಕಣ್ಣಿಗೆಬಿದ್ದರು.
ಇದನ್ನೂ ಓದಿ: ವರ್ಷ ಕಳೆದರೂ ಜನಮನದಲ್ಲಿ ಮಾಸದ ನಗುಮುಖದ “ಅಪರ್ಣ”..
ಆ ಕ್ಷಣ ಗುಬ್ಬಿವೀರಣ್ಣನವರ ಕೋರಿಕೆ ಈಡೇರಬಹುದೆಂಬ ಆಸೆ ಚಿಗುರೊಡೆಯಿತು. ಆದರೆ ದ್ರೌಪದಿ ಪಾತ್ರಕ್ಕೆ ಬೇಕಾದ ಸೌಂದರ್ಯವತಿ ಅಲ್ಲವೆನಿಸಿ ಅವರ ಯೋಚ(ಜ)ನೆ ಢೋಲಾಯಮಾನ ಸ್ಥಿತಿಗೆಬಂದು ನಾಟಕದಲ್ಲಿ ಪಾತ್ರ ಮಾಡುವ ಬಗ್ಗೆ ಚರ್ಚಿಸಲು ಪುಟ್ಟಹುಡುಗಿ ಏನಂದುಕೊಳ್ಳುವಳೋ ಎಂಬ ಚಿಂತೆ ಕಾಡತೊಡಗಿತು. ಸತ್ಕಾರ್ಯಕ್ಕೆ ಅವಕಾಶ ಸಿಕ್ಕಿರುವಾಗ ತಡವೇಕೆಂದು ನಿರ್ಧರಿಸಿದ ಮೂರ್ತಿ ಧೈರ್ಯದಿಂದ ತ್ರಿಪುರಾಂಬಳನ್ನು ತಂದೆ ಎದುರೇ ಕೇಳಿದರು: “ಕುರುಕ್ಷೇತ್ರ ನಾಟಕದಲ್ಲಿ ಪಾಂಚಾಲಿ ಪಾತ್ರ ನಿರ್ವಹಿಸುತ್ತಿಯೇನಮ್ಮ” ಎಂದು! ಅವಾಕ್ಕಾದ ತಂದೆ-ಮಗಳು ಅಷ್ಟು ಸುಲಭವಾಗಿ ಒಪ್ಪಲಿಲ್ಲ. ಪ್ರಯತ್ನ ಬಿಡದ ಮೂರ್ತಿ ಸುಮಾರು ದಿನಗಳು ಈಕೆಯ ಮನೆಗೆ ಎಡತಾಕಿ ದುಂಬಾಲು ಬಿದ್ದು ಅಪ್ಪ ಮಗಳ ಒಪ್ಪಿಗೆ ಪಡೆವ ಮೂಲಕ ಗುಬ್ಬಿವೀರಣ್ಣನವರಿಗೂ ತಮಗೂ ಗೆಲುವು ತಂದುಕೊಂಡರು!
ರಂಗಭೂಮಿ-ಚಲನಚಿತ್ರರಂಗ ಎರಡ್ರಲ್ಲೂ ಅಭಿನಯಕಲೆ ಜತೆಗೆ ಸಂಗೀತ-ನೃತ್ಯ ಜ್ಞಾನವುಳ್ಳವರಿಗೆ ಮಹತ್ವ ಇರುತ್ತಿತ್ತು. ಪ್ರತಿಭೆಗೆ ತಕ್ಕ ಪುರಸ್ಕಾರ ಪ್ರೋತ್ಸಾಹ ದೊರಕುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತ್ರಿಪುರಾಂಬ ಅದಾಗಲೇ ಅವರಲ್ಲಿದ್ದ ಸಂಗೀತ ನೃತ್ಯ ಜ್ಞಾನ ಆಧಾರ, ಸಹಕಲಾವಿದರ ಸಹಾಯದಿಂದ ಇನ್ನಷ್ಟು ಕಲಿತರು. ತಂಡದ ಸ್ಫೂರ್ತಿಯಿಂದ ಅಭಿನಯಕಲೆ ಮೈಗೂಡಿಸಿಕೊಂಡು ಬಹುಬೇಗ ಎತ್ತರಕ್ಕೆ ಬೆಳೆದರು! ಇವರ ಜನಪ್ರಿಯತೆ ಎಷ್ಟಿತ್ತೆಂದರೆ, ದ್ರೌಪದಿ ಪಾತ್ರದಲ್ಲಿ ಮೈಮರೆತು ನಟಿಸುವಾಗ, ‘ಪಡುಗಡಲ ಎದೆಯೊಡೆದು’ ಎಂಬ ಗಾನಕ್ಕೆ ನರ್ತಿಸುವಾಗ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಿದ್ದರು.
ಇದನ್ನೂ ಓದಿ: ಕನ್ನಡ ಸಿನಿಲೋಕಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಕೊಡುಗೆಯೇನು?
ಪ್ರದರ್ಶನದ ನಂತರವೂ ಪಾಂಚಾಲಿಯ ದೃಶ್ಯವನ್ನು ನೆನಪಿಸಿಕೊಂಡು ಮನೆವರೆಗೂ ಮೆಲುಕುಹಾಕುತ್ತಿದ್ದರು! ದ್ರೌಪದಿ ಪಾತ್ರದಿಂದ ಜನಪ್ರಿಯತೆಯ ತುತ್ತತುದಿಯಲ್ಲಿ ಇದ್ದಾಗ ಮತ್ತೊಂದು ಮುಖ್ಯ ತಿರುವು ದೊರಕಿತು! ಆರ್.ನಾಗೇಂದ್ರರಾವ್-ವೈ.ವಿ.ರಾವ್ ಜತೆಸೇರಿ ಷಾ ಚಮನ್ಲಾತಲ್ ಡುಂಗಾಜಿಯನ್ನ ವಾಕ್ ಚಿತ್ರ ನಿರ್ಮಾಣ ಮಾಡಲು ಒಪ್ಪಿಸಿದರು! ವಾಲ್ಮೀಕಿ ರಾಮಾಯಣ ಆಧರಿಸಿ ಬೆಳ್ಳಾವೆ ನರಹರಿಶಾಸ್ತ್ರಿ ಬರೆದಿದ್ದ ಕಥೆಯನ್ನು ಕನ್ನಡದ ಮೊಟ್ಟಮೊದಲ ಟಾಕೀಫಿಲಂ ‘ಸತಿಸುಲೋಚನ’ ತಯಾರಿಸಲು ತೀರ್ಮಾನಿಸಲಾಯಿತು!
ಈ ಸಾಹಸಕ್ಕೆ ಕೈ ಜೋಡಿಸಿದವರು ನರಹರಿಶಾಸ್ತ್ರಿ, ಗುಬ್ಬಿವೀರಣ್ಣ, ಸುಬ್ಬಯ್ಯನಾಯ್ಡು. ಆರ್.ನಾಗೇಂದ್ರರಾವ್ ನಾಯಕನಾಗಿ, ಲಕ್ಷ್ಮೀಬಾಯಿ ನಾಯಕಿಯಾಗಿ, ಸುಬ್ಬಯ್ಯನಾಯ್ಡು ಉಪನಾಯಕನಾಗಿ ತ್ರಿಪುರಾಂಬ ಉಪನಾಯಕಿಯಾಗಿ ನಟಿಸುವುದೆಂದು ನಿರ್ಧರಿಸಲಾಯಿತು. ಮುಹೂರ್ತದಿನ ಗೊತ್ತುಪಡಿಸಬೇಕೆನ್ನುವಾಗ ಇದ್ದಕ್ಕಿದ್ದಂತೆ ನಿರ್ಮಾಪಕ ಚಮನ್ಲಾತಲ್ ಶಾಕ್ ನೀಡಿ ಹೀರೋಯಿನ್ ಆಗಿ ತ್ರಿಪುರಾಂಬ ಮತ್ತು ಹೀರೋ ಆಗಿ ಸುಬ್ಬಯ್ಯನಾಯ್ಡು ಹೆಸರನ್ನು ಬಲವಾಗಿ ಸೂಚಿಸಿ ಕಾರಣ ನೀಡಿದರು..
ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ
ಅನಿರೀಕ್ಷಿತವಾಗಿ ಕುರುಕ್ಷೇತ್ರ ನಾಟಕ ನೋಡಿದ ಡೂಂಗಾಜಿ, ತ್ರಿಪುರಾಂಬ-ಸುಬ್ಬಯ್ಯನಾಯ್ಡು ಅವರಿಬ್ಬರ ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದರಂತೆ?! ಹೀಗಾಗಿ ಸತಿ ಸುಲೋಚನ ಚಿತ್ರದ ನಾಯಕ-ನಾಯಕಿಆಗಿ ನಟಿಸುವಂತೆ ಅಂತಿಮ ತೀರ್ಮಾನ ತೆಗೆದುಕೊಂಡರು! ಎಲ್ಲೋ ಇದ್ದ ತ್ರಿಪುರಾಂಬ ಆಶ್ಚರ್ಯಕರವಾಗಿ ಅಂತಿಮ ಘಳಿಗೆಯಲ್ಲಿ ಸತಿಸುಲೋಚನ ಚಿತ್ರದ ಹೀರೋಯಿನ್ ಆಗಿದ್ದು ಆರ್.ನಾಗೇಂದ್ರ ರಾವ್ ಮೊದಲ್ಗೊಂಡು ಎಲ್ಲರೂ ಒಲ್ಲದ ಮನಸ್ಸಿಂದ ಒಪ್ಪಿಕೊಳ್ಳಬೇಕಾದ ಸಂದರ್ಭ ಒದಗಿತ್ತು. ವಿಪರ್ಯಾಸವೊ ವಿಧಿವಿಲಾಸವೊ ಬಲ್ಲವರಾರು? ಅಂತೂಇಂತು ತ್ರಿಪುರಾಂಭ ಅಭಿನೇತ್ರಿಯನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಗೌರವಕ್ಕೆ ಎಲ್ಲರೂ ಪಾತ್ರರಾದರು. ಅನಿವಾರ್ಯದ ಕ್ಲಿಷ್ಟಪರಿಸ್ಥಿತಿಯಲ್ಲಿ ಕನ್ನಡದ ಚೊಚ್ಚಲ ಹಿರೋಯಿನ್ ಆಗಿ ಇತಿಹಾಸ ಸೃಷ್ಟಿಸಿದ ಅದೃಷ್ಟವಂತೆ ತ್ರಿಪುರಾಂಬ
ಸತಿಸುಲೋಚನ” ಶೂಟಿಂಗ್ ವೇಳೆ ನಡೆದ ರೋಚಕ ಘಟನೆ…. ರಂಗಭೂಮಿಯಲ್ಲಿ ನಟಿಸುವುದಕ್ಕೂ ಸಿನಿಮಾದಲ್ಲಿ ನಟಿಸುವುದಕ್ಕೂ ಅಜಗಜಾಂತರ ವ್ಯತ್ಯಾಸ ಇರುತ್ತದೆ ಎಂಬ ಸರಳಜ್ಞಾನ ನಟ-ನಟಿಯರಿಗೆ ಗೊತ್ತಿಲ್ಲದ ಕಾಲವದು. ನಾಟಕರಂಗದಿಂದ ಚಿತ್ರರಂಗಕ್ಕೆ ಆಗಮಿಸುವ ಎಲ್ಲಪಾತ್ರಧಾರಿಗೂ ಶೂಟಿಂಗ್ ನ ಮುಖ್ಯಭಾಗ ಎನಿಸಿದ ಕ್ಲೋಸಪ್ ಶಾಟ್ಸ್ ವೇಳೆ ಮುಜುಗರದ, ಕ್ಲಿಷ್ಟಕರದ ಸನ್ನಿವೇಶ ಎದುರಿಸುವ ಸಂದರ್ಭವೆ ಹೆಚ್ಚು. ಇಂತಹ ಶಾಟ್ ತ್ರಾಸದಾಯಕ ಮುಕ್ತಾಯ ಕಾಣುತ್ತದೆ. ಇಂಥದ್ದೊಂದು ತುಮುಲದಿಂದ ಕೂಡಿದ್ದ ಜ್ವಲಂತ ನಿದರ್ಶನದ ಪ್ರಸಂಗ ಹೀಗಿತ್ತು:-
ಸತೀಸುಲೋಚನ ಪಾತ್ರಧಾರಿಯು ತನ್ನಪತಿ ಇಂದ್ರಜಿತ್ ಸಾವಿನ ಸಂದರ್ಭದಲ್ಲಿ ತೀವ್ರದುಃಖ ವ್ಯಕ್ತಪಡಿಸಿ ಕಣ್ಣೀರಿಡಬೇಕಾಗಿತ್ತು. ಸಿನಿಮಾ ನಿರ್ದೇಶಕರು ಏನೇ ಮಾಡಿದರು ತ್ರಿಪುರಾಂಭ ಕಣ್ಣಲ್ಲಿ ಒಂದುಹನಿ ಕಣ್ಣೀರು ಕಾಣಿಸಲೇ ಇಲ್ಲ. ಗ್ಲಿಸರಿನ್ ಉಪಯೋಗಿಸುವ ಪದ್ಧತಿ ಇ(ಗೊತ್ತಿ)ರಲಿಲ್ಲ ವಾದ್ದರಿಂದ ದಿಕ್ಕುತೋಚದೆ, ಶತಾಯಗತಾಯ ಕಣ್ಣೀರು ಬರಿಸಲೇಬೇಕೆಂದು ಈರುಳ್ಳಿ ಮತ್ತು ಒಣಮೆಣಸಿನಕಾಯಿ ಘಾಟಿನ ಪ್ರಯೋಗವೂ ನಡೆಯಿತು. ಆದರೆ ತ್ರಿಪುರಾಂಬಗೆ ಒಂತೊಟ್ಟು ಕಣ್ಣೀರು ಬರಲಿಲ್ಲ, ಇವರ ಮುಖ-ಕಣ್ಣುಗಳು ಮಾತ್ರ ಕೆಂಪಾದವು.
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು
ಕೊನೆಪ್ರಯತ್ನ ಮಾಡೋಣವೆಂದು ತ್ರಿಪುರಾಂಭ ಕಣ್ಣುಗಳಿಗೆ ಖಾರದಪುಡಿ ನೀರನ್ನು ಸಿಂಪಡಿಸಿ ನೂರಕ್ಕೆ 100ರಷ್ಟು ಕೃತಕ ಕಣ್ಣೀರನ್ನು ತರಿಸಿ ದೃಶ್ಯದ ಚಿತ್ರೀಕರಣವನ್ನ ಪ್ರಯಾಸದಿಂದ ಮುಗಿಸಲಾಯಿತು! ಕೊನೆಗೂ ಸತಿಸುಲೋಚನ ಚಿತ್ರ 3.3.1934 ರಂದು12ಪ್ರಿಂಟ್ ಗಳೊಡನೆ ಹಳೇ ಮೈಸೂರು ರಾಜ್ಯದಾದ್ಯಂತ 12 ಕೇಂದ್ರಗಳಲ್ಲಿ ಬಿಡುಗಡೆ ಗೊಂಡು 3 ಕೇಂದ್ರ ಶತದಿನೋತ್ಸವ 1 ಕೇಂದ್ರ ಸಿಲ್ವರ್ ಜ್ಯುಬಿಲಿ ಪ್ರದರ್ಶನ ಕಂಡು ಹೊಸ ಇತಿಹಾಸ ಬರೆಯಿತು. ಅಂದಿನಿಂದ ಮೊದಲ್ಗೊಂಡು ಶೂಟಿಂಗ್ ಸ್ಥಳ ತಲುಪುವ ಮುನ್ನ ತಮ್ಮ ಮನೆಯಲ್ಲಿ ಹಾಗೂ ಬಿಡುವುಸಿಕ್ಕ ಸ್ಥಳದಲ್ಲಿ ಆಯಾಯ ಪಾತ್ರದ ರಿಹರ್ಸಲ್ ಅಭ್ಯಾಸ ಬೆಳೆಸಿಕೊಂಡು ಪಾತ್ರಗಳ ಪರಕಾಯಪ್ರವೇಶ ಮಾಡುವ ಕಲಾವಿದರ ಸಾಲಿಗೆ ಸೇರಿದರು.
ನೂರಾರು ನಾಟಕ ಮತ್ತು ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದರು. ಕಾಲಕ್ರಮೇಣ ಎರಡೂ ಕ್ಷೇತ್ರಕ್ಕೆ ವಿದಾಯ ಹೇಳುವ ನಿರ್ಧಾರದಿಂದ 1938ರಲ್ಲಿ ಸೇಲಮ್ನರ ತಬಲ ವಿದ್ವಾನ್ ವೇಣುಗೋಪಾಲರನ್ನು ವಿವಾಹವಾದ ನಂತರ ತಮಿಳುನಾಡು, ಕರ್ನಾಟಕ ರಾಜ್ಯದಾದ್ಯಂತ ಪತಿಯ ಸಂಗೀತ ಕಛೇರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು 1979ರಲ್ಲಿ ತಮ್ಮ ಭೂಲೋಕದ ಬದುಕನ್ನು ಮುಗಿಸಿದರು!
ಇದನ್ನೂ ಓದಿ: ರಿಯಲ್ ಹೀರೋ ಮೈಸೂರಿನ ಕೆಂಪರಾಜ ಅರಸು…
ತ್ರಿಪುರಾಂಬ ನಟಿಸಿದ ಚಿತ್ರಗಳು: ಸತಿಸುಲೋಚನ, ಭಕ್ತಧ್ರುವ, ಸದಾರಮೆ, ಸಂಸಾರನೌಕ, ರಾಜಸೂಯಯಾಗ, ಚಿರಂಜೀವಿ, ಪುರಂದರದಾಸರು, ಕಣ್ಣ(ತ), ಚಕ್ರವರ್ತಿ ತಿರುಮಗಳ್(ತ), ದಾನಶೂರ ಕರ್ಣನ್(ತ) ಮೊದಲಾದವುಗಳಾಗಿವೆ….
ಉತ್ತಮ ಲೇಖನ, ಧನ್ಯವಾದ
ಅಪರ್ಣಾ ಮತ್ತು ತ್ರಿಪುರಾಂಬ ಇವರಿಬ್ಬರ ಬಗೆಗಿನ ಎರಡೂ ಲೇಖನ
ಓದಿದ ನಂತರ ನನಗೆ ಬಹಳ ಇಷ್ಟವಾಯಿತು, ಧನ್ಯವಾದ ಸರ್
. ಅತ್ಯುತ್ತಮ ಬರವಣಿಗೆಯ ಎರಡು ಲೇಖನಗಳು
1. ಅಪರ್ಣಾ ಮೇಡಂ ಬಗ್ಗೆ
ಮತ್ತು
2. ತ್ರಿಪುರಾಂಬ ಬಗ್ಗೆ ಹಾಗೂ ಚಂದನವನದ ಚೊಚ್ಚಲ ಹೀರೋಯಿನ್ ತ್ರಿಪುರಾಂಬ ನಟಿಸಿದ ಮತ್ತು ಕನ್ನಡ ಚಿತ್ರರಂಗದ ಮೊಟ್ಟಮೊದಲ ವಾಕ್ಚಿತ್ರ
ಸತಿಸುಲೋಚನ ಚಿತ್ರದ ಬಗೆಗಿನ ಬರವಣಿಗೆಯ ಮೂಲಕ ಎಂಥ ಅದ್ಭುತ (ಕಣ್ಣೀರು ಬರಲಿಲ್ಲ, ಬರಿಸುವ ಸಾಹಸ) ಎಲ್ಲವೂ ಸೂ..ಪ..ರ್…
Thanks sir 🙏
Excellent and extraordinary jobs pertaining to
APARNA MA’AM AND SATI SULOCHANA THE FIRST TALKIE MOVIE HEROINE’S THRIPURAMBA MA’AM
thanks a lllottt sir/madam
Very good article about actress TRIPURAMBA and
Nice information about ONE AND ONLY ANCHOR CUM ACTRESS APARNA MA’AM 😉 😜 😀
Excellent and extraordinary jobs pertaining to
APARNA MA’AM AND SATI SULOCHANA THE FIRST TALKIE MOVIE HEROINE’S THRIPURAMBA MA’AM
thanks a lllottt sir/madam
ಲವ sir
ನಿಮಗಾಗಿ, “ಅಪರ್ಣಾ” ರವರ ಲೇಖನವನ್ನೂ ಸಹ ನನ್ನ status ಮತ್ತು group ಎರಡೂ ಮಾಧ್ಯಮ ಮುಖಾಂತರ ಶೇರ್ ಮಾಡುವ ಮೂಲಕ promote ಮಾಡಿದ್ದೇನೆ ಸರ್