ಬೆಂಗಳೂರು: ತಾಲ್ಲೂಕಿನ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ `ಕನ್ನಡ ಸಾಹಿತ್ಯ ಮತ್ತು ಬೇಸಾಯದ ಬದುಕು’ ಕುರಿತು ಎರಡು ದಿನಗಳ ಅಧ್ಯಯನ ಶಿಬಿರವನ್ನು ಮಾರ್ಚ್ 12 ಮತ್ತು 13ರಂದು ಹಮ್ಮಿಕೊಳ್ಳಲಾಗಿದೆ.
ತಾಲ್ಲೂಕಿನ ಕೆರೆಮೇಗಳದೊಡ್ಡಿಯ ಮುದ್ದುಶ್ರೀ ದಿಬ್ಬದಲ್ಲಿ ನಡೆಯುವ ಶಿಬಿರವನ್ನು 12ರಂದು ಬೆಳಿಗ್ಗೆ 11.30ಕ್ಕೆ ರೈತ ಹೋರಾಟಗಾರ್ತಿ ಅನಸೂಯಮ್ಮ ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಮಂಜುನಾಥಸ್ವಾಮಿ ಬಿ.ಎಸ್ ಹಾಗೂ ಹಿರಿಯ ಸಾಹಿತಿ ಪ್ರೊ. ಶಿವರಾಮಯ್ಯ ಭಾಗವಹಿಸಲಿದ್ದಾರೆ.
ಅಕಾಡೆಮಿ ಸದಸ್ಯ ಸಂಚಾಲಕ ಡಾ. ರವಿಕುಮಾರ ಬಾಗಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಡಾ. ಚನ್ನಪ್ಪ ಅಂಗಡಿ ಶಿಬಿರದ ಕುರಿತು ಮಾತನಾಡಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಡಾ. ಎಂ.ಬೈರೇಗೌಡ ಮತ್ತು ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಉಪಸ್ಥಿತರಿರುತ್ತಾರೆ.
ಮಧ್ಯಾಹ್ನ ಗೋಷ್ಠಿಯಲ್ಲಿ ‘ಕನ್ನಡದ ಪ್ರಾಚೀನ ಸಾಹಿತ್ಯ ಕೃತಿಗಳಲ್ಲಿ ಕೃಷಿಯ ಸ್ವರೂಪ’ ಡಾ. ಚಂದ್ರಶೇಖರ ನಂಗಲಿ, `ಕನ್ನಡ ಜಾನಪದ ಸಾಹಿತ್ಯ ಮತ್ತು ಕೃಷಿ ಸಂಸ್ಕೃತಿ’ ಡಾ. ಟಿ. ಗೋವಿಂದರಾಜು, `ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಕೃಷಿ ಸಂಸ್ಕೃತಿ’ ಕುರಿತು ಡಾ. ಚನ್ನಪ್ಪ ಅಂಗಡಿ ವಿಷಯ ಮಂಡಿಸಲಿದ್ದಾರೆ. ಸಂಜೆಗೆ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

13ರಂದು ಬೆಳಿಗ್ಗೆ `ಆಧುನಿಕ ಸಾಹಿತ್ಯದಲ್ಲಿ ಕೃಷಿ ಬದುಕಿನ ಅನುಭವಗಳು’ ಮುರ್ತುಜಾ ಬೇಗಂ ಕೊಡಗಲಿ, `ಕನ್ನಡದಲ್ಲಿ ಕೃಷಿ ಬರವಣಿಗೆ’ ಕುರಿತು ಡಾ. ನೂರ್ ಸಮದ್ ಅಬ್ಬಲಗೆರೆ, `ಜಾಗತೀಕರಣ ಮತ್ತು ಕೃಷಿ ಬಿಕ್ಕಟ್ಟುಗಳು’ ಕುರಿತು ಡಾ. ರವಿಕುಮಾರ್ ಬಾಗಿ ವಿಷಯ ಮಂಡಿಸಲಿದ್ದಾರೆ.
ಸಾಹಿತ್ಯ ಮತ್ತು ಕೃಷಿ ಸಾಧಕರೊಂದಿಗೆ ನಡೆಯುವ ಸಂವಾದ ಕಾರ್ಯಕ್ರಮವನ್ನು ಲೇಖಕ ಮಂಜುನಾಥ್ ಅದ್ದೆ ನಡೆಸಿಕೊಡಲಿದ್ದಾರೆ. ಸಂವಾದದಲ್ಲಿ ಬಿಬಿಜಾನ್ ಮೌಲಾಸಾಬ ಹಳೆಮನಿ, ಡಾ. ಸ್ವಾಮಿ ಅನಂದ, ಶಾಂತಮ್ಮ, ಪ್ರಸನ್ನಾಭಟ್, ಸಹನಾ ಕಾಂತಬೈಲು, ಚಂಸು ಪಾಟೀಲ, ದೊ.ಚಿ. ಗೌಡ ಭಾಗವಹಿಸುವರು.
ಸಂಜೆ 4 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈತ ಹೋರಾಗಾರ್ತಿ ಚುಕ್ಕಿ ನಂಜು0ಡಸ್ವಾಮಿ ಭಾಗವಹಿಸಲಿದ್ದಾರೆ. ಟ್ರಸ್ಟ್ ಅಧ್ಯಕ್ಷ ಬೈರೇಗೌಡ ಅಧ್ಯಕ್ಷತೆ ವಹಿಸುವರು. ಡಾ. ನೂರ್ ಸಮದ್ ಅಬ್ಬಲಗೆರೆ, ಡಾ. ಎಲ್.ಎನ್. ಮುಕುಂದರಾಜ್, ಡಾ. ರವಿಕುಮಾರ್ ಬಾಗಿ ಉಪಸ್ಥಿತರಿರುತ್ತಾರೆ








