LatestNews

ವಿದ್ಯಾರ್ಥಿಗಳು ಉತ್ತಮ ಪುಸ್ತಕ, ದಿನಪತ್ರಿಕೆ  ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು: ಕೇಶವ ಕಾಮತ್

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ

ಕುಶಾಲನಗರ (ರಘುಹೆಬ್ಬಾಲೆ): ವಿದ್ಯಾರ್ಥಿಗಳು ಉತ್ತಮ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ  ಎಂ.ಪಿ. ಕೇಶವ ಕಾಮತ್ ಸಲಹೆ ನೀಡಿದರು.

ತಾಲ್ಲೂಕಿನ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೆಬ್ಬಾಲೆ ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಹೆಬ್ಬಾಲೆ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ದಿ| ಶಾಂತ ಮಲ್ಲಸ್ವಾಮಿಗಳ ದತ್ತಿ ಹಾಗೂ ದಿ| ಪುಟ್ಟಮ್ಮ ಮತ್ತು ದಿ।ಹೆಬ್ಬಾಲೆ ನಂಜಾಚಾ‌ರ್ ದತ್ತಿಯಡಿ ಕೊಡಗಿನ ವೀರಶೈವ ಅರಸರ ಅಳ್ವಿಕೆ ಹಾಗೂ ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಳ್ಳುವಂತೆ ತಿಳಿಸಿದರು.

ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಅಶಯ ನುಡಿಗಳ್ನಾಡಿ ವಿದ್ಯಾರ್ಥಿಗಳು ಅಳವಾದ ಅಧ್ಯಯನ ಮಾಡುವ ಮೂಲಕ ಇತಿಹಾಸದ ಅರಿವು ಹೊಂದಬೇಕು. ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.ಶಿವಾಜಿ ಮಹಾರಾಜ್ ಮತ್ತು ಅಕ್ಬರ್ ಸೇರಿದಂತೆ ಇತರೆ ರಾಜರ ಆಡಳಿತ ವ್ಯವಸ್ಥೆ ತಿಳಿದಿದ್ದೀರಿ. ಆದರೆ ಈ ರಾಜರ ಅಂತ್ಯ ಹೇಗೆಯಾಯಿತು ಎಂಬ ಐತಿಹಾಸಿಕ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಶಿವಾಜಿ ಅವರ ಪತ್ನಿಯಿಂದ ಹಾಗೂ ಅಕ್ಬರ್ ಅವರ ಮಗನಿಂದ ಅಂತ್ಯ ಕಾಣುತ್ತಾರೆ. ಈಗ್ಗೆ ರಾಜಮಹಾರಾಜರು ತಮ್ಮ ಸಂಬಂಧಿಕರಿಂದ ಹಾಗೂ ನಿಕಟವರ್ತಿಗಳಿಂದಲೇ ಅಂತ್ಯಕಂಡಿರುವ ಐತಿಹಾಸಿಕ ಸತ್ಯ ತಿಳಿಯಬಹುದು. ಮೊನ್ನೆ ಇಸ್ರೇಲ್​ ಹಾಗೂ ಅಮೆರಿಕದ ಜಂಟಿ ದಾಳಿಯಲ್ಲಿ ಹತ್ಯೆಯಾದ ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹೊರತಾಗಿಲ್ಲ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ಮೆ.ನಾ.ವೆಂಕಟನಾಯ್ಕ ಅವರು ಕೊಡಗಿನ ವೀರಶೈವ ಅರಸರ ಅಳ್ವಿಕೆ ಕುರಿತು ಉಪನ್ಯಾಸ ಕುರಿತು ಮಾತನಾಡಿ,ಕೊಡಗಿನಲ್ಲಿ 16ನೇ ಶತಮಾನದಿಂದ 1834ರವರೆಗೆ ಹಾಲೇರಿ ರಾಜವಂಶದ ಲಿಂಗಾಯತ ರಾಜರು ಆಡಳಿತ ನಡೆಸಿದರು. ಇಕ್ಕೇರಿ ನಾಯಕರ ಸಂಬಂಧಿಗಳಾದ ಇವರು, ಕೊಡವ ನಾಯಕರನ್ನು ಒಂದುಗೂಡಿಸಿ ಬಲವಾದ ಆಡಳಿತ ಸ್ಥಾಪಿಸಿದರು. ಮುದ್ದರಾಜ, ಲಿಂಗರಾಜ ಮತ್ತು ವೀರರಾಜೇಂದ್ರ ಪ್ರಮುಖ ರಾಜರು. ಇವರ ಕಾಲದಲ್ಲಿ ಕೃಷಿ, ಮಡಿಕೇರಿ ಕೋಟೆ ಸೇರಿದಂತೆ ಕೊಡಗಿನ ಪ್ರಗತಿ ಕಂಡಿತು. ಲಿಂಗಾಯತ ರಾಜರ ಅವಧಿಯಲ್ಲಿ ಕೊಡಗು ಸಾಂಸ್ಕೃತಿಕವಾಗಿ ಮತ್ತು ಆಡಳಿತಾತ್ಮಕವಾಗಿ ಪ್ರಬಲವಾಗಿ ಬೆಳೆಯಿತು. 1834ರಲ್ಲಿ ಚಿಕ್ಕವೀರರಾಜೇಂದ್ರ ಬ್ರಿಟಿಷರೊಂದಿಗೆ ಸಂಘರ್ಷದ ನಂತರ ಪದಚ್ಯುತಿಗೊಂಡು, ಕೊಡಗು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತು ಎಂದರು.

ಕುಶಾಲನಗರ ಅನುಗ್ರಹ ಪದವಿ ಪೂರ್ವ ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಅವರು ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತು ಮಾತನಾಡಿ,ವಿಶ್ವಕರ್ಮ ಸಮಾಜದ ಪ್ರತಿಯೊಬ್ಬರೂ ತಮ್ಮ ಮೂಲ ಕಸಬು ಶಿಲ್ಪಕಲೆಯನ್ನು ಕಲಿಸುವುದರ ಜೊತೆಗೆ ಬಡಿಗೆತನ ಮೂರ್ತಿಶಿಲ್ಪ ಮುಂತಾದ ಕೌಶಲ್ಯಭರಿತ ಕಾರ್ಯದಿಂದ ಸಮುದಾಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.

ದಿವ್ಯಸಾನಿದ್ಯ ವಹಿಸಿದ್ದ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಗಣ್ಯ ಮಾನ್ಯರು ತಿಳಿಸಿದ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.12ನೇ ಶತಮಾನದಲ್ಲಿ ಶಿವಶರಣರು ಈಜಗತ್ತಿಗೆ ಮಾನವಕುಲಕ್ಕೆ ಸಪ್ತಸೂತ್ರಗಳನ್ನು ನೀಡಿದ್ದಾರೆ, ಕಳಬೇಡ, ಕೊಲಬೇಡ,ಹುಸಿಯ ನುಡಿಯಲು ಬೇಡ,ಮುನಿಯಬೇಡ,ಅನ್ಯರಿಗೆ ಅಸಹ್ಯಪಡಬೇಡ,ತನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ  ಎಂದು ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ಕಂಡುಕೊಳ್ಳಬೇಕು ಎಂದರು.  ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ. ಎನ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ವಿ.ಶಿವಪ್ಪ,ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ನಾಗೇಶ್, ಕಾರ್ಯದರ್ಶಿ ಕೆ.ವಿ.ಉಮೇಶ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ಜಗದೀಶ್, ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ,ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಘಟಕದ ಕಾರ್ಯದರ್ಶಿ ಹೆಚ್.ಎನ್. ಸುಬ್ರಹ್ಮಣ್ಯ, ನಿಕಟಪೂರ್ವ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಮಶೆಟ್ಟರು, ಮುಖಂಡರಾದ ಎಚ್.ಬಿ.ಕಾಂತಮಣಿ, ರೇಣುಕಾ, ಶ್ರೀನಿವಾಸ್, ಸೋಮಶೇಖರ್, ಕಾಳಪ್ಪ, ಅಪ್ಪಣ, ಸದಾನಂದ ಶಕುಂತಲಾ ಮತ್ತಿತರರು ಪಾಲ್ಗೊಂಡಿದ್ದರು. ಶಿಕ್ಷಕಿ ಕವಿತಾ ನಿರೂಪಿಸಿದರು. ಸುಬ್ರಮಣ್ಯ ಸ್ವಾಗತಿಸಿದರು.

admin
the authoradmin

Leave a Reply

Translate to any language you want