ವ್ಯಾಜ್ಯ ಇತ್ಯರ್ಥದ ಕಪ್ಪಡಿ ಕ್ಷೇತ್ರ… ಇಲ್ಲಿ ಶಿವರಾತ್ರಿಯಿಂದ ಯುಗಾದಿವರೆಗೆ ಜಾತ್ರೆ… ನೀವೂ ತಪ್ಪದೆ ಬನ್ನಿ…

ಈಗ ಜಾತ್ರೆಗಳು, ರಥೋತ್ಸವಗಳು ಎಲ್ಲೆಡೆಯೂ ನಡೆಯುತ್ತಿದೆ. ಒಂದೊಂದು ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಯೂ ಒಂದೊಂದು ರೀತಿಯಲ್ಲಿದ್ದು, ಗಮನಸೆಳೆಯುತ್ತವೆ. ಇಂತಹ ಜಾತ್ರೆಗಳ ನಡುವೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕು ವ್ಯಾಪ್ತಿಯ ಕಪ್ಪಡಿ ಕ್ಷೇತ್ರದಲ್ಲಿ ನಡೆಯುವ ಜಾತ್ರೆ ಗಮನಸೆಳೆಯುತ್ತದೆ. ಅಷ್ಟೇ ಅಲ್ಲದೆ ಅಚ್ಚರಿಯನ್ನುಂಟು ಮಾಡುತ್ತದೆ. ಏಕೆಂದರೆ ಇಲ್ಲಿ ಶಿವರಾತ್ರಿಯಿಂದ ಆರಂಭವಾಗಿ ಯುಗಾದಿವರೆಗೆ ಬರೋಬ್ಬರಿ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ಪ್ರತಿ ದಿನವೂ ಒಂದೊಂದು ರೀತಿಯ ವಿಶೇಷತೆಗಳಿರುತ್ತವೆ.
ಕಪ್ಪಡಿ(kappadi) ಕ್ಷೇತ್ರವು ಮೈಸೂರು(Mysore) ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೆಬ್ಬಾಳಿನಿಂದ ಎಂಟು ಕಿ.ಮೀ.ದೂರದಲ್ಲಿ ಕಾವೇರಿ ನದಿ ತೀರದಲ್ಲಿದೆ. ದೂರದಿಂದ ಬರುವವರು ಕೆ.ಆರ್.ನಗರಕ್ಕೆ ಬಂದು ಅಲ್ಲಿಂದ ಮುಂದಕ್ಕೆ ತೆರಳಲು ವಾಹನಗಳ ವ್ಯವಸ್ಥೆಯೂ ಇದೆ. ಸಾಮಾನ್ಯವಾಗಿ ವರ್ಷದ ಎಲ್ಲ ದಿನಗಳಲ್ಲಿಯೂ ಭಕ್ತರು ಆಗಮಿಸುತ್ತಾರೆಯಾದರೂ ಜಾತ್ರಾ ಸಮಯದಲ್ಲಿ ಭಕ್ತರ ದಂಡೇ ಸಮಾಗಮಗೊಳ್ಳುತ್ತದೆ.

ಕಪ್ಪಡಿ(kappadi) ಕ್ಷೇತ್ರವು ಮೊದಲಿನಿಂದಲೂ ಸತ್ಯಾಸತ್ಯತೆಗೆ ಹೆಸರುವಾಸಿಯಾಗಿದ್ದು, ಬೇಡಿದ ವರವನು ಈಡೇರಿಸುವ ಪವಿತ್ರ ಸ್ಥಳವಾಗಿದೆ. ಜಾತ್ರೆ ದಿನಗಳು ಮಾತ್ರವಲ್ಲದೆ, ಇತರೆ ದಿನಗಳಲ್ಲಿಯೂ ಭಕ್ತರು ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸಿ ಹರಕೆಗಳನ್ನು ತೀರಿಸುತ್ತಾರೆ. ಇಲ್ಲಿ ಇತರೆ ಕ್ಷೇತ್ರಗಳಂತೆ ಯಾವುದೇ ವಿಗ್ರಹಗಳಿಲ್ಲ. ಬದಲಿಗೆ ಉರಿಗಣ್ಣ ರಾಚಪ್ಪಾಜಿಯವರ ಗದ್ದಿಗೆ ಮತ್ತು ಚೆನ್ನಮ್ಮಾಜಿಯವರ ಗದ್ದುಗೆಯಿದ್ದು, ಇದರ ದರ್ಶನ ಮಾಡಿ ಪೂಜೆ ಸಲ್ಲಿಸಿ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಭಕ್ತರು ಬೇಡಿಕೊಳ್ಳುತ್ತಾರೆ. ಇಲ್ಲಿನ ದೇವರ ಮಹಿಮೆ ಮತ್ತು ಪವಾಡಗಳ ಬಗ್ಗೆ ನೂರಾರು ನಿದರ್ಶನಗಳಿವೆ.
ತಾಲೂಕು ಹಾಗೂ ಸುತ್ತಮುತ್ತಲಿನ ಪ್ರಾಂತ್ಯದಲ್ಲಿ ಆಸ್ತಿ, ಪಾಸ್ತಿ, ಯಾವುದೇ ವ್ಯವಹಾರದಲ್ಲಿ ಲೋಪ, ತಕರಾರು, ಪ್ರಕರಣಗಳು, ಕುಟುಂಬದಲ್ಲಿ ಭಿನ್ನಾಭಿಪ್ರಾಯ, ಘರ್ಷಣೆ, ಒಡಕು, ಉದ್ಬವವಾದಾಗ ರಾಚಪ್ಪಾಜಿಯವರ ಮೇಲೆ ಆಣೆ ಪ್ರಮಾಣ ಮಾಡುತ್ತಾರೆ. ಇವತ್ತಿಗೂ ಕೋರ್ಟ್, ಕಚೇರಿ, ಪಂಚಾಯಿತಿಗಳಲ್ಲಿ ಇತ್ಯರ್ಥವಾಗದ ಹಲವಾರು ಪ್ರಕರಣಗಳನ್ನು ಜನರು ಸನ್ನಿಧಿಗೆ ಬಂದು ಆಣೆ ಪ್ರಮಾಣ ಮಾಡಿ ಬಗೆಹರಿಸಿಕೊಳ್ಳುವುದು ಮತ್ತೊಂದು ವಿಶೇಷವಾಗಿದೆ.

ಕಪ್ಪಡಿ(kappadi)ಯಲ್ಲಿ ನೆಲೆನಿಂತ ರಾಚಪ್ಪಾಜಿ ಮತ್ತು ಚೆನ್ನಮ್ಮಾಜಿಯ ಯಾರು? ಈ ಕ್ಷೇತ್ರದ ಮಹಿಮೆ ಏನು? ಎಂಬುದರ ಬಗ್ಗೆ ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಅವರ ಕಾವ್ಯದಲ್ಲಿ ಅಡಕವಾಗಿರುವುದನ್ನು ನಾವು ಕಾಣಬಹುದಾಗಿದೆ. ಆ ಬಗ್ಗೆ ಹೇಳುವುದಾದರೆ… ಧರೆಗೆ ದೊಡ್ಡವರೆಂದೇ ಹೆಸರಾದ ರಾಚಪ್ಪಾಜಿ ಚೆನ್ನಮ್ಮಾಜಿ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರಾಗಿದ್ದಾರೆ. ಇವರು ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು, ಮಾರ್ಗವಾಗಿ ಬಂದು ಕಾವೇರಿ ನದಿ ತಟದ ದಟ್ಟ ಕಾಡಿನಿಂದ ಆವೃತವಾಗಿದ್ದ ಕಪ್ಪಡಿಯಲ್ಲಿ ನೆಲೆಸಿದರೆಂಬ ಪುರಾಣ ಐಹಿತ್ಯವಿದೆ.
ಇನ್ನೊಂದೆಡೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿ ತಮಗೆ ಶಿವಯೋಗ ಮಂದಿರವನ್ನು ನಿರ್ಮಿಸುವಂತೆ ಕೇಳಿಕೊಂಡರಂತೆ ಅದರಂತೆ ಗುರುವಿನೆಡೆಗೆ ಬಂದ ಉಪ್ಪಲಗಶೆಟ್ಟಿ ಬಾವಿಯನ್ನು ತೋಡಿ ನಂದಾದೀವಿಗೆ ಗೂಡನ್ನು ಕೊರೆದು ವರವೊಂದನ್ನು ಬೇಡಿದನಂತೆ. ಅದಕ್ಕೆ ಗುರು ಒಪ್ಪಿದಾಗ ಉಪ್ಪಲಗಶೆಟ್ಟಿಯು ತಮ್ಮ ನಂತರದ ದಿನ ಉರಿಗದ್ದುಗೆಯ ಮೇಲಿರುವ ರುಮಾಲು ಪಡೆಯಬೇಕೆಂದು ಅಣತಿ ಮಾಡುತ್ತಾನೆ.

ಆಗ ಈ ಮನುಷ್ಯನ ಹಂಗು ತಮಗಿನ್ನು ಬೇಡವೆಂದು ರಾಚಪ್ಪಾಜಿ ತಂಗಿ ಚೆನ್ನಮ್ಮಾಜಿಯವರೊಡನೆ ಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದರು ಎಂಬ ಕಥೆಗಳು ಇವೆ. ಅಷ್ಟೇ ಅಲ್ಲದೆ, ಅಂದಿನಿಂದ ಕಪ್ಪಡಿಯಲ್ಲಿ ಪೂಜಾ ಕಾರ್ಯಗಳು ಆರಂಭಗೊಂಡವೆಂದೂ, ಕಾಲಾಂತರದಲ್ಲಿ ಮೈಸೂರು ಅರಸರು ಪೂಜಾ ಕೈಂಕರ್ಯಗಳನ್ನು ನಡೆದುಕೊಂಡು ಬಂದರೆಂದು ಹೇಳಲಾಗುತ್ತಿದೆ.
ಇನ್ನು ಕಪ್ಪಡಿ ಜಾತ್ರೆಗೆ ಕೇವಲ ಮೈಸೂರು ವ್ಯಾಪ್ತಿಯಲ್ಲದೆ, ರಾಜ್ಯದ ವಿವಿಧ ಕಡೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುವುದನ್ನು ಕಾಣಬಹುದಾಗಿದೆ. ಜಾತ್ರಾ ಸಮಯದಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸುವ ಜವಬ್ದಾರಿ ಪಾರಂಪರಿಕವಾಗಿ ಮಳವಳ್ಳಿ ಮತ್ತು ಬೊಪ್ಪೆಗೌಡನಪುರದ ಅರಸು ಗುರು ಮನೆತನದವರಿಗೆ ಬಂದಿದ್ದು, ಪ್ರತಿವರ್ಷವೂ ಒಬ್ಬರು ಜಾತ್ರಾ ಸಮಯದಲ್ಲಿ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿದ್ದಾರೆ.

ಶಿವರಾತ್ರಿಯಿಂದ ಯುಗಾದಿವರೆಗೆ ಸುಮಾರು ಒಂದು ತಿಂಗಳ ಕಾಲ ನಡೆಯುವ ಜನ ಜಾತ್ರೆಯಲ್ಲಿ ಒಂದೊಂದು ದಿನವೂ ಒಂದೊಂದು ಗ್ರಾಮದ ಜನತೆ ದೇವರಿಗೆ ಹರಕೆ ಒಪ್ಪಿಸಿ ಪೂಜೆ ಸಲ್ಲಿಸುವುದು ವಾಡಿಕೆ, ಇದೇ ವೇಳೆ ಭಕ್ತರು ಕೋಳಿ, ಕುರಿ, ಮೇಕೆಯನ್ನು ಬಲಿಕೊಟ್ಟು ಹರಕೆ ತೀರಿಸುತ್ತಾರೆ. ದೇವರಿಗೆ ಹರಕೆಯಾಗಿ ಪ್ರಾಣಿ ಬಲಿ ನೀಡುವುದು ಇಲ್ಲಿನ ಸಂಪ್ರದಾಯವಾಗಿದೆ. ಅದು ಏನೇ ಇರಲಿ ತನ್ನದೇ ಮಹಿಮೆ ಮತ್ತು ಮಹತ್ವವನ್ನು ಹೊಂದಿರುವ ಕಪ್ಪಡಿ ಕ್ಷೇತ್ರಕ್ಕೆ ಇದುವರೆಗೆ ಆಗಮಿಸದಿದ್ದಲ್ಲಿ ಮತ್ತು ಜಾತ್ರೆಯಲ್ಲಿ ಪಾಲ್ಗೊಳ್ಳದೆ ಇದ್ದಲ್ಲಿ ಖಂಡಿತಾ ಈ ಬಾರಿ ಬನ್ನಿ… ರಾಚಪ್ಪಾಜಿ ಮತ್ತು ಚೆನ್ನಮ್ಮಾಜಿಯ ಕೃಪಾಶೀರ್ವಾದ ನಿಮ್ಮ ಮೇಲಿರಲಿ…
B M Lavakumar







