ಕುಶಾಲನಗರ(ರಘುಹೆಬ್ಬಾಲೆ): ಸೋಮವಾರಪೇಟೆ ತಾಲ್ಲೂಕಿನ ಬೇಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಕ್ರೀಡೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ವಿದ್ಯಾರ್ಥಿಗಳು ಪೋಷಕರು ಸಂಭ್ರಮಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭರತನಾಟ್ಯ, ಜಾನಪದ ನೃತ್ಯ ಹಾಗೂ ಸಮೂಹ ನೃತ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ರಂಜಿಸಿದರು. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಮಕ್ಕಳಿಗೆ ಅತಿಥಿಗಳು ಬಹುಮಾನ ವಿತರಣೆ ಮಾಡಿದರು.ಪೋಷಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದರು.

ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಬೇಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಮ್ಮ ಮಾತನಾಡಿ, ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು. ಗ್ರಾಮಸ್ಥರು ಹಾಗೂ ದಾನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು.ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿದ ಎಲ್ಲಾರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸೋಮವಾರಪೇಟೆ ತಾಲ್ಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್ ಮಾತನಾಡಿ,ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳು ಹೊಣೆಗಾರಿಕೆ ಬಹುಮುಖ್ಯವಾದರೂ ಪೋಷಕರು ಜವಾಬ್ದಾರಿಯೂ ಸಮನಾಗಿದೆ.ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಮುಂದೆ ಬರಬೇಕು. ಸಾಧನೆ ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿ ಪ್ರೇರಣೆ ನೀಡಿಬೇಕು. ವಿದ್ಯೆ ಮನುಷ್ಯನನ್ನು ಬಾಳಿ ಬೆಳಸುತ್ತದೆ. ಎತ್ತರಕ್ಕೆ ಬೆಳದ ವ್ಯಕ್ತಿ ಸಮಾಜದ ಪ್ರಗತಿ, ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಚಿಕ್ಕ ಅಳುವಾರ ಸ್ನಾತಕೋತ್ತರ ಕೇಂದ್ರ ಪ್ರೊಫೆಸರ್ ಧರ್ಮಪ್ಪ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ತುಂಬ ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳ ಪ್ರೌಢಶಿಕ್ಷಣ ಮುಗಿದ ನಂತರ ಪಿಯುಸಿ ವ್ಯಾಸಂಗಕ್ಕೆ ಪಟ್ಟಣ ಹಾಗೂ ನಗರ ಪ್ರದೇಶದ ಉತ್ತಮ ಕಾಲೇಜು ಗಳಿಗೆ ಸೇರಿಸಿ ಅವರಿಗೆ ಉನ್ನತ ವ್ಯಾಸಂಗ ಕೊಡಿಸುವತ್ತ ಚಿಂತನೆ ಹರಿಸಬೇಕು.ಇತ್ತೀಚಿನ ವರ್ಷಗಳಲ್ಲಿ ಪದವಿ ವ್ಯಾಸಂಗ ಮಾಡುವವರ ಸಂಖ್ಯೆ ಶೇ.5 ಕ್ಕಿಂತ ಕಡಿಮೆಯಾಗಿದೆ. ಸ್ನಾತಕೋತ್ತರ ಪದವಿ ಪಡೆಯುವವರ ಸಂಖ್ಯೆ ಶೇ.2 ಕ್ಕಿಂತಲೂ ಕಡಿಮೆ ಇದೆ. ವರ್ಷ ದಿಂದ ವರ್ಷಕ್ಕೆ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಜಯಕುಮಾರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಹಾಗೂ ಹವ್ಯಾಸಗಳನ್ನು ಕಲಿಸುವತ್ತ ಗಮನ ಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರುಗಳಾಗಿದ್ದಾರೆ. ಶಾಲೆಯ ಜೊತೆಗೆ ಮನೆಯ ಪರಿಸರ ಉತ್ತಮವಾಗಿರಬೇಕು. ಮನೆಯಲ್ಲಿ ತಂದೆತಾಯಿಗಳು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ಮಾಡುವ ಮೂಲಕ ಅವರನ್ನು ಉತ್ತಮ ಸತ್ಪ್ರಜೆಯಾಗಿ ರೂಪಿಸಬೇಕು ಎಂದರು.

ಕಾಫಿ ಬೆಳೆಗಾರ ಯತೀಶ್ ಮಾತನಾಡಿ ಪೋಷಕರು ಮಕ್ಕಳಿಗೆ ಆಸ್ತಿ ಮಾಡುವುದು ಬೇಡ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸುವಂತೆ ಒತ್ತು ನೀಡಬೇಕು ಎಂದರು.
ಶಾಲೆಯ ಶಿಕ್ಷಕಿ ಎಚ್.ಪಿ.ತೇಜಾವತಿ ಶಾಲಾ ವಾರ್ಷಿಕ ವರದಿಯನ್ನು ವಾಚಿಸಿ ಶಾಲೆಯ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳನ್ನು ಹಂಚಿಕೊಂಡರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಮುಖ್ಯ ಶಿಕ್ಷಕ ಎಂ.ಸಿ.ಧರ್ಮರಾಜ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸೌಮ್ಯ, ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಘಟಕದ ನಿರ್ದೇಶಕ ಸುರೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಕವಿತಾ, ಕೊಡ್ಲಿಪೇಟೆ ಶಿಕ್ಷಕ ಕೆ.ಎನ್.ಕಿರಣ್ ಕುಮಾರ್, ಮುಳ್ಳುರು ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸತೀಶ್,ಸಹ ಶಿಕ್ಷಕ ಜಾನ್, ಸಿ. ಆರ್.ಪಿ.ಮುರುಳೀಧರ್, ದಾನಿಗಳಾದ ಎನ್.ಎನ್.ಧರ್ಮಪ್ಪ, ಮಹೇಶ್, ಸಿದ್ದಪ್ಪ, ತೋಪೇಗೌಡ, ಜವರಯ್ಯ, ಗೋಪಣ್ಣ, ಪುಟ್ಟರಾಜು,ಎಚ್.ಬಿ.ಧರ್ಮಪ್ಪ, ಸುವರ್ಣ, ಅಪ್ಪಾಜಿ , ಮಹೇಶಾಚಾರಿ, ರತ್ನಮ್ಮ ಸುರೇಶ್ ಪಾಲ್ಗೊಂಡಿದ್ದರು. ಮೊದಲಿಗೆ ಗ್ರಾಮಸ್ಥರಿಗೆ ನಡೆದ ಕಬಡ್ಡಿ ಕ್ರೀಡಾಕೂಟ ಕ್ರೀಡಾಭಿಮಾನಿಗಳ ಮನ ರಂಜಿಸಿತು.

ಕಾಫಿ ಬೆಳೆಗಾರ ಯತೀಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭ ದಾನಿಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರು ಹಾಗೂ ಅತಿಥಿಗಳನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.








