ArticlesLatest

ಫೆ.25ರಿಂದ 28 ರವರೆಗೆ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ – ಶ್ರೀ ಮಹದೇಶ್ವರಸ್ವಾಮಿ ಜಾತ್ರೆ

ಸರಗೂರು(ಸರಗೂರು ದಾಸೇಗೌಡ): ಹುಣಸೂರು ತಾಲ್ಲೂಕಿನ ಗದ್ದಿಗೆ ಕರಿಮುದ್ದನಹಳ್ಳಿ ಅಂಚೆಯ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ ಹಾಗೂ ಶ್ರೀ ಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿ 2026 ನೇ ಸಾಲಿನ ಜಾತ್ರಾ ಮಹೋತ್ಸವವು ಫೆಬ್ರವರಿ 25 ರಿಂದ 28ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ಉತ್ಸವದಲ್ಲಿ ಏನೆಲ್ಲ ಕಾರ್ಯಕ್ರಮಗಳಿವೆ ಎನ್ನುವುದನ್ನು ನೋಡುವುದಾದರೆ ಜಾತ್ರೆಯ ಆರಂಭದ ದಿನವಾದ ಫೆ.25ರ ಬುಧವಾರ ಬೆಳಗ್ಗೆ 6ಕ್ಕೆ ಮಹಾರುದ್ರಾಭಿಷೇಕ, 9ಕ್ಕೆ ಶುಭ ಮುಹೂರ್ತದಲ್ಲಿ ಷಟ್ ಸ್ಥಳ ಧ್ವಜಾರೋಹಣ, ಮಹಾಗಣಪತಿ ಪೂಜೆ, ಪುಣ್ಯನಾಂದಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ಸಂಜೆ 4 ಕ್ಕೆ ಅಕ್ಕಪಕ್ಕದ ಗ್ರಾಮಗಳ ಹಾಲು ಉತ್ಪಾದಕರಿಂದ ಹಾಲು ಕರೆಯುವ ಸ್ಪರ್ಧೆ (ಬಹುಮಾನ ಸಹಿತ).

ಫೆ.26 ಗುರುವಾರ ಬೆಳಗ್ಗೆ 6ಕ್ಕೆ ಮಹಾಭಿಷೇಕ, 8ಕ್ಕೆ ಮಹಾಗಣಪತಿ ಹೋಮ, ರಥದ ಕಳಸ ಶುದ್ಧೀಕರಣ ಹಾಗೂ ಪಂಚಕಳಸ ಪ್ರತಿಷ್ಠಾಪನೆ. ಬೆಳಗ್ಗೆ 10.30ಕ್ಕೆ ರಂಗೋಲಿ ಸ್ಪರ್ಧೆ (ಕಚೇರಿಯಲ್ಲಿ ಹೆಸರು ನೋಂದಣಿ ಕಡ್ಡಾಯ). ಫೆ.27 ಶುಕ್ರವಾರ ಬೆಳಗ್ಗೆ 6 ಕ್ಕೆ ಅಭಿಷೇಕ, 6.30ಕ್ಕೆ ರಥಕ್ಕೆ ಕಳಸ ಸಂಜೆ 6 ಕ್ಕೆ ಕೊಂಡಕ್ಕೆ ಸೌದೆ ಸೇವಾರ್ಥ ಕರಿಮುದ್ದನಹಳ್ಳಿ ಬಸವೇಶ್ವರಸ್ವಾಮಿ, ಬಸವನಹಳ್ಳಿ ಬಸವೇಶ್ವರಸ್ವಾಮಿ, ಕುಟ್ಟವಾಡಿ ಸೋಮೇಶ್ವರಸ್ವಾಮಿ ಹಾಗೂ ಕೆಂಡಗಣ್ಣಪುರ ಮಹದೇಶ್ವರಸ್ವಾಮಿಗಳಿಗೆ ಎಣ್ಣೆ ಮಜನ ಸೇವೆ ಹಾಗೂ ವಿಶೇಷ ಪೂಜೆ. ರಾತ್ರಿ 10ಕ್ಕೆ ಶ್ರೀ ಕೆಂಡಗಣ್ಣೇಶ್ವರಸ್ವಾಮಿ ಹಾಗೂ ಶ್ರೀ ಮಹದೇಶ್ವರಸ್ವಾಮಿಗಳಿಗೆ ಹಾಲರವಿ ಸೇವೆ.

ಫೆ.28 ಶನಿವಾರ (ಮುಖ್ಯ ದಿನ) ಬೆಳಗ್ಗೆ 7.30 ಕ್ಕೆ ಕೊಂಡೋತ್ಸವ, ಬೆಳಗ್ಗೆ 11.30 ಕ್ಕೆ ಮಹಾರಥೋತ್ಸವ. ಮಧ್ಯಾಹ್ನ 2 ಗಂಟೆಗೆ ಭಕ್ತಿಗೀತೆಗಳ ಕಾರ್ಯಕ್ರಮ, ಸಂಜೆ 7 ಗಂಟೆಗೆ ರಾಜ ಬೀದಿಯಲ್ಲಿ ಬೆಳ್ಳಿಪಲ್ಲಕ್ಕಿ ಉತ್ಸವ, ಚಂಡಿಮೇಳ, ವೀರಗಾಸೆ ನೃತ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ ನಡೆಯಲಿವೆ. ಬೆಳಿಗ್ಗೆ 8 ಗಂಟೆಯಿಂದ ಪ್ರಸಾದ ವಿನಿಯೋಗ, ಈ ಸಂಬಂಧ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಹೂವಿನ ಸೇವಾರ್ಥದಾರರಾಗಿ  ಬಸವಾಪಟ್ಟಣ ತೊಟ್ಟಿಮನೆಯ ಬಿ.ಸಿ ಸಿದ್ದಬಸಪ್ಪಶೆಟ್ಟರು ಮತ್ತು ವಿಶಾಲಾಕ್ಷಮ್ಮ ಇವರ ಮಕ್ಕಳು ಬಸವಾಪಟ್ಟಣ.

ದಿನ ಪೂರ್ತಿ ಪ್ರಸಾದ ವಿನಿಯೋಗದ ಸೇವಾರ್ಥದಾರರಾಗಿ ಅಂಬಿಕಾ ಸತೀಶ್ ಮತ್ತು ಸತೀಶ್, ಚೆನ್ನಾಜಮ್ಮನವರ ಕುಟುಂಬ ಅಕ್ಷಯ ವೆಂಚರ್ಸ್, ಚೆನ್ನಜ್ಜಿ ಪಾರಂ, ಕರಿಮುದ್ದನಹಳ್ಳಿ ಕರಿಮುದ್ದನಹಳ್ಳಿ, ಕುಟ್ಟವಾಡಿ, ಬಸವನಹಳ್ಳಿ, ಕೆಂಡಗಣ್ಣಪುರ, ಗೆಜ್ಜೆಯ್ಯನ ವಡ್ಡರಗುಡಿ, ದೇವಗಳ್ಳಿ, ಕಾಡುವಡ್ಡರಗುಡಿ, ಶಿವಪುರ, ಉಹಿಗೊಂಡನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇನ್ನು ವಿಶೇಷ ಸೇವೆಗಳಿದ್ದು, ಕ್ಷೇತ್ರದಲ್ಲಿ ಪ್ರತಿನಿತ್ಯ ಅನ್ನದಾಸೋಹ ನಡೆಯುತ್ತಿದ್ದು, ಒಂದು ದಿನದ ಸೇವಾರ್ಥಕ್ಕೆ ರೂ.15,000 ನಿಗದಿಯಾಗಿದೆ. ಶತರುದ್ರಾಭಿಷೇಕ ಸೇವೆಗೆ ರೂ.14,000, ಬೆಳ್ಳಿ ರಥ ಸೇವೆಗೆ ರೂ.1,501 ನಿಗದಿ ಮಾಡಲಾಗಿದೆ. ಪ್ರತಿ ಅಮಾವಾಸ್ಯೆಗೆ ವಿಶೇಷ ರುದ್ರಾಭಿಷೇಕ, ಶ್ರಾವಣ ಮಾಸದಲ್ಲಿ ಸಹಸ್ರ ಕಮಲಪೂಜೆ–ಬಿಲ್ವಾರ್ಚನೆ ಹಾಗೂ ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ ಸೇವೆಗಳು ನಡೆಯುತ್ತವೆ.

ಭಕ್ತಾಧಿಗಳು ಈ ಪುಣ್ಯ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ ಹಾಗೂ ಶ್ರೀ ಮಹದೇಶ್ವರಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮಂಡಳಿ ಮನವಿ ಮಾಡಿದೆ. ದವಸ ಧಾನ್ಯ ನೀಡುವವರು ಕಚೇರಿಯಲ್ಲಿ ಅಧಿಕೃತ ರಶೀದಿ ಪಡೆಯಬೇಕೆಂದು ತಿಳಿಸಲಾಗಿದೆ.

ಇನ್ನು ಕ್ಷೇತ್ರದ ಬಗ್ಗೆ ಹೇಳುವುದಾದರೆ ಈ ಕ್ಷೇತ್ರಕ್ಕೆ ತನ್ನದೇ ಆದ ಪೌರಾಣಿಕ ಇತಿಹಾಸವಿದ್ದು, ಶ್ರೀ ಗುರು ಕೆಂಡಗಣೇಶ್ವರಸ್ವಾಮಿಯವರು 18 ನೇ ಶತಮಾನದಲ್ಲಿ ತಾಲೂಕಿನ ರಾಜವಂಶೀಯ ದಂಪತಿಗಳಾದ ಶ್ರೀಶೈಲ ರಾಜೇಂದ್ರ ಹಾಗೂ ಕಾಶಮ್ಮ ದಂಪತಿಗಳಿಗೆ ಈಶ್ವರ ಅವತಾರವಾಗಿ ಜನಿಸಿದರು. ತಮ್ಮ16ನೇ ವಯಸ್ಸಿನಲ್ಲಿ ರಾಜಮನೆತನ ತೊರೆದು ವೈರಾಗ್ಯ ಜೀವನ ಆರಂಭಿಸಿ, ವಿವಿಧ ಕ್ಷೇತ್ರಗಳಲ್ಲಿ ಸಂಚರಿಸುತ್ತಾ ಕೊನೆಗೆ ಹುಣಸೂರು–ಹೆಗ್ಗಡದೇವನಕೋಟೆ ಗಡಿಭಾಗದ ಕುಟ್ಟವಾಡಿ ತೊರೆಯ ಬಲದಂಡೆಯಲ್ಲಿ ತಪಸ್ಸು ಮಾಡಿ ನಿರ್ವಿಕಲ್ಪ ಗದ್ದಿಗೆಯಲ್ಲಿ ಲೀನರಾದರು.

ಕಾಲಾತೀತರಾದ ಶ್ರೀ ಮಹದೇಶ್ವರಸ್ವಾಮಿಯವರ ಸಾನ್ನಿಧ್ಯದಲ್ಲಿಯೇ ಇವರ ಗದ್ದಿಗೆ ಇರುವುದರಿಂದ ಈ ಕ್ಷೇತ್ರ “ಶ್ರೀ ಕೆಂಡಗಣ್ಣೇಶ್ವರ ಸ್ವಾಮಿ ಗದ್ದಿಗೆ” ಎಂದು ಪ್ರಸಿದ್ಧಿಯಾಗಿದೆ. ಪಾಲ್ಗುಣ ಶುದ್ಧ ಸಪ್ತಮಿಯಂದು ಪ್ರತಿವರ್ಷ ಮಹಾರಥೋತ್ಸವ ಆಚರಿಸಲಾಗುತ್ತಿದ್ದು, ಈ ವರ್ಷವೂ ಸಹ ಈ ಕೆಳಕಂಡ ಗ್ರಾಮದವರು ಪ್ರತಿಯೊಂದು ಮನೆಗಳಿಂದ ಎತ್ತುಗಳಿಗೆ ನೊಗಕಟ್ಟಿ ನೊಗದ ಮುಖಾಂತರ ಸೌದೆಗಳನ್ನು ಎಳಸಿಕೊಂಡು ಬಂದು ಕೊಂಡದ ಗುಳಿಗೆ ತಂದು ಸೌದೆಗಳನ್ನು ಹಾಕುತ್ತಾರೆ.

ಗದ್ದಿಗೆ, ಕರಿಮುದ್ದನಹಳ್ಳಿ, ಕುಟ್ಟವಾಡಿ, ಬಸವನಹಳ್ಳಿ, ಕೆಂಡಗಣ್ಣಪುರ, ಗೆಜ್ಜಯ್ಯನ ವಡ್ಡರಗುಡಿ, ದೇವಗಳ್ಳಿ, ಕಾಡುವಡ್ಡರಗುಡಿ, ಶಿವಪುರ, ಉಹಿಗೊಂಡನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದೊಂದಿಗೆ ಜಾತ್ರಾ ಮಹೋತ್ಸವ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ: 9972971795, ಕಚೇರಿ – 7338642026ನ್ನು ಸಂಪರ್ಕಿಸಬಹುದಾಗಿದೆ.

admin
the authoradmin

Leave a Reply

Translate to any language you want