District

ಕಿಟಲ್ ಸಾಧನೆ ಅರಿಯಲು ವಿದ್ಯಾರ್ಥಿಗಳಿಗೆ ಹಾರ್ಡ್ವಿಕ್ ಶಾಲಾ ಮುಖ್ಯ ಶಿಕ್ಷಕಿ ಇಂದಿರಮ್ಮ ಸಲಹೆ

ಮೈಸೂರು: ಕನ್ನಡಕ್ಕೆ ಶಬ್ದಕೋಶ ಕೊಟ್ಟ ವಿದ್ವಾಂಸ ಡಾ.ರೆವರೆಂಡ್ ಫರ್ಡಿನಾಂಡ್ ಕಿಟಲ್ ಅವರ ಸಾಧನೆ, ಸಿದ್ಧಿ ಹಾಗೂ ಅವರು ನಾಡಿಗೆ ಕೊಟ್ಟ ಕೊಡುಗೆಯನ್ನು ವಿದ್ಯಾರ್ಥಿಗಳು ಅರಿಯಬೇಕಿದೆ ಎಂದು ಹಾರ್ಡ್ವಿಕ್ ಶಾಲೆಯ ಮುಖ್ಯ ಶಿಕ್ಷಕಿ ಇಂದಿರಮ್ಮ ತಿಳಿಸಿದರು.

ಹಾರ್ಡ್ವಿಕ್ ಶಾಲೆಯಲ್ಲಿ ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಮಹಿಳಾ ಬಳಗ ಏರ್ಪಡಿಸಿದ್ದ ಡಾ.ರೆವರೆಂಡ್ ಫರ್ಡಿನಾಂಡ್ ಕಿಟಲ್ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಗೀಳಿಗೆ ಒಳಗಾಗಿ ಸಾಹಿತ್ಯದ ಅಭಿರುಚಿಯನ್ನು ಮರೆಯುತ್ತಿದ್ದಾರೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಕನ್ನಡ ಸಾಹಿತ್ಯ ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

ಹಿರಿಯ ಪತ್ರಕರ್ತ ದೊಡ್ಡನಹುಂಡಿ ರಾಜಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮತ ಪ್ರಚಾರಕ್ಕಾಗಿ ಭಾರತಕ್ಕೆ ಬಂದ ಕಿಟಲ್, ಕನ್ನಡ ನಾಡು, ನುಡಿ ಸಂಸ್ಕೃತಿಗೆ ಮಾರುಹೋಗಿ ಕನ್ನಡ ಕಲಿತು ಸುಮಾರು 25ವರ್ಷ ನಾಡಿನಾದ್ಯಂತ ಸುತ್ತಾಡಿ 7000 ಕನ್ನಡ-ಇಂಗ್ಲಿಷ್ ಪದಕೋಶವನ್ನು ಕನ್ನಡ ನಾಡಿನ ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಕನ್ನಡಿಗರಾದ ನಾವು ಸದಾ ಅವರನ್ನು ಸ್ಮರಿಸಬೇಕಿದೆ ಎಂದರು.

ಕನ್ನಡ ಭಾಷಾ ಸಂಪನ್ಮೂಲ ವ್ಯಕ್ತಿ ಡಾ.ಬಿ.ಸಿ.ವಿಜಯಕುಮಾರ್, ಹಿರಣ್ಮಯಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಎ.ಸಂಗಪ್ಪ, ಕಲಾವಿದೆ ಹಾಗೂ ಲೇಖಕಿ ಜಮುನಾ ರಾಣಿ ಮಿರ್ಲೆ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾವೇರಿ ಮಹಿಳಾ ಬಳಗದ ಅಧ್ಯಕ್ಷೆ ಕಾವೇರಿಯಮ್ಮ, ವಿಜ್ಞಾನ ಲೇಖಕ ಸೀತಾರಾಮ್, ಸಾಹಿತಿ ನಾರಾಯಣ ರಾವ್, ನಟರಾಜ್ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಜರಿದ್ದರು.

admin
the authoradmin

Leave a Reply