ಕುಶಾಲನಗರ(ಹೆಬ್ಬಾಲೆರಘು) : ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾಗಿರುವ ಪುತ್ತರಿ ನಮ್ಮೆಯನ್ನು ಗುರುವಾರ ರಾತ್ರಿ ಇಲ್ಲಿನ ಕೊಡವ ಸಮಾಜದ ವತಿಯಿಂದ ಅದ್ದೂರಿಯಾಗಿ ಆಚರಿಸಲಾಯಿತು.
ಪಟ್ಟಣದಲ್ಲಿ ನೆಲೆಸಿರುವ ಕೊಡವ ಬಾಂಧವರು ತಮ್ಮ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಸಮಾಜದಲ್ಲಿ ರಾತ್ರಿ ಸೇರಿ ಫಲಹಾರ ಸೇವಿಸಿದರು.ಮೊದಲಿಗೆ ಸಮಾಜದ ಸಭಾಂಗಣದಲ್ಲಿ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರು ಮತ್ತು ದೇವರಿಗೆ ಭಕ್ತಿ ಪೂರ್ವಕ ಪೂಜೆ ಸಲ್ಲಿಸಲಾಯಿತು. ನಂತರ ಅರಳಿ, ಮಾವು, ಹಲಸು, ಕುಂಬಳಿ ಹಾಗೂ ಗೇರು ಮರಗಳ ಎಲೆಗಳಿಂದ ನೆರೆಕಟ್ಟುವ ಮೂಲಕ ವಿಧಿವಿಧಾನ ನೆರವೇರಿಸಿದರು. ನಂತರ ಸಿದ್ಧಪಡಿಸಿದ ಕುತ್ತಿಯನ್ನು ತೋಕ್ ಕತ್ತಿ, ದುಡಿಕೊಟ್ಟ್ ಪಾಟ್ ತಳಿಯತಕ್ಕಿ ಹಾಗೂ ಒಡ್ಡೋಲದೊಂದಿಗೆ ಗದ್ದೆಗೆ ಮೆರವಣಿಗೆ ಮೂಲಕ ತೆರಳಲಾಯಿತು. ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ಸಮಾಜದ ಗದ್ದೆಯಲ್ಲಿ ಪೂಜೆ ಸಲ್ಲಿಸಿ ಕದಿರು ತೆಗೆಯುವ ಮೂಲಕ ಸಾರ್ವತ್ರಿಕವಾಗಿ ಪುತ್ತರಿ ನಮ್ಮೆ ಆಚರಿಸಲಾಯಿತು.

ಎಲ್ಲರೂ ಪೊಲಿ ಪೊಲಿ ದೇವ ಪೊಲಿಯೋ ಬಾ ಎಂದು ಘೋಷಣೆಯನ್ನು ಜೋರಾಗಿ ಕೂಗಿ ಹರ್ಷೋದ್ಗಾರ ಮಾಡಿದರು. ಈ ಸಂದರ್ಭ ಪಟಾಕಿ ಹಾಗೂ ಬಾಣ ಬಿರುಸುಗಳನ್ನು ಸಿಡಿಸಲಾಯಿತು. ನಂತರ ಧಾನ್ಯಲಕ್ಷ್ಮಿಯನ್ನುಮೆರವಣಿಗೆ ಮೂಲಕ ತಂದು ಕದಿರನ್ನು ಸಮಾಜದಲ್ಲಿಟ್ಟು ಪೂಜೆ ಸಲ್ಲಿಸಿದರು ಗದ್ದೆಯಲ್ಲಿನ ಕದಿರು ತೆಗೆದು ಎಲ್ಲರಿಗೂ ವ್ಯವಸ್ಥಿತವಾಗಿ ವಿತರಣೆ ಮಾಡಿ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋದರು.
ಈ ಸಂದರ್ಭ ಸಮಾಜದ ಅಧ್ಯಕ್ಷ ಮನುನಂಜುಂಡ, ಉಪಾಧ್ಯಕ್ಷ ಪುಲಿಯಂಡ ಚಂಗಪ್ಪ, ಕಾರ್ಯದರ್ಶಿ ಐಲಪಂಡ ಸಂಜು ಬೆಳ್ಳಿಯಪ್ಪ, ಸಹ ಕಾರ್ಯದರ್ಶಿ ಮೈಂದಪಂಡ ಜಗದೀಶ್, ಖಜಾಂಚಿ ಬೊಳ್ಳಚಂಡ ಮುತ್ತಣ್ಣ , ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು








