ಕೊಡಗಿನಾದ್ಯಂತ ಸುರಿಯುವ ಮಳೆಯ ನಡುವೆಯೂ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರ ಮನೆಯಲ್ಲಿಯೂ ಪಂದಿಕರಿ ಕಡಂಬಿಟ್ಟು ಘಮಘಮಿಸುತ್ತಿದೆ.. ಜತೆಗೆ ಬಗೆಬಗೆಯ ಮದ್ಯಗಳು ಹಬ್ಬದ ಮತ್ತೇರಿಸಿವೆ.
ನಿಜ ಹೇಳಬೇಕೆಂದರೆ ಕೊಡಗಿನಲ್ಲಿ ಆಚರಿಸಲ್ಪಡುವ ಕೈಲ್ ಮುಹೂರ್ತ ವಿಭಿನ್ನ ಮತ್ತು ವಿಶಿಷ್ಟವಾಗಿದೆ. ಇನ್ನು ಈ “ಕೈಲ್‌ಮುಹೂರ್ತ” ಹಬ್ಬವನ್ನು ಕೊಡವ ಭಾಷೆಯಲ್ಲಿ “ಕೈಲ್‌ಪೊಳ್ದ್” ಎಂದು ಕರೆಯಲಾಗುತ್ತದೆ. “ಕೈಲ್” ಎಂದರೆ ಆಯುಧ “ಪೊಳ್ದ್” ಎಂದರೆ ಹಬ್ಬ ಹಾಗಾಗಿ ಕೊಡಗಿನವರಿಗೊಂದು ಆಯುಧಪೂಜೆಯೇ… “ಕೈಲ್‌ಮುಹೂರ್ತ” ಹಬ್ಬವು ಕೊಡಗಿನವರ ಲೆಕ್ಕದ ಪ್ರಕಾರ ಚಿನ್ಯಾರ್ ತಿಂಗಳ ಹದಿನೆಂಟನೇ ತಾರೀಖಿನಂದು ಬರುತ್ತದೆ. ಅಂದರೆ ಪ್ರತಿವರ್ಷ ಸೆಪ್ಟಂಬರ್ 3ರಂದು ಆಚರಣೆ ನಡೆಯುತ್ತದೆ.
ಈ ಹಬ್ಬದ ಆಚರಣೆ ನಡೆದು ಬಂದ ರೀತಿಯನ್ನು ಗಮನಿಸಿದ್ದೇ ಆದರೆ ಇದರ ಹಿಂದೆಯೂ ರೋಚಕ ಇತಿಹಾಸವಿರುವುದು ಕಾಣಿಸುತ್ತದೆ. ಹಿಂದಿನ ಕಾಲದಲ್ಲಿ ಸಂಚಾರ ವ್ಯವಸ್ಥೆಯೂ ಇಲ್ಲದ ಜನವಿರಳ ಪ್ರದೇಶಗಳಲ್ಲಿ ಕಾಡಿನ ನಡುವೆ ಮನೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಅವತ್ತಿನ ಕಾಲದಲ್ಲಿ ಕೋಳಿ ಕೂಗಿನಿಂದ, ನಾಯಿಗಳು ಬೊಗಳುವ ಸದ್ದಿನಿಂದಷ್ಟೆ ದೂರದಲ್ಲೆಲ್ಲೋ ಮನೆಗಳಿವೆ ಎಂದು ಅಂದಾಜಿಸಿಕೊಳ್ಳುತ್ತಿದ್ದರು. ಕೃಷಿ ಮಾಡುತ್ತಾ ಬೇಟೆಯಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದರು. ವರ್ಷದ ಆರು ತಿಂಗಳು ಮಳೆ ಸುರಿಯುತ್ತಿತ್ತು. ನೀರಿನಾಶ್ರಯವಿರುವ ಪ್ರದೇಶಗಳಲ್ಲಿ ಗದ್ದೆಗಳನ್ನು ನಿರ್ಮಿಸಿ ಭತ್ತ ಬೆಳೆಯುತ್ತಿದ್ದರು. ಭತ್ತ ಬೆಳೆಯುವುದೇ ಬದುಕಿಗೆ ಆಸರೆಯಾಗಿತ್ತು.
ಇದನ್ನೂ ಓದಿ: ಕೊಡಗಿನಲ್ಲಿ ಮಳೆಗಾಲದಲ್ಲಿ ಆಚರಿಸಲ್ಪಡುವ ಕಕ್ಕಡ ಪದ್ನಟ್ ಬಗ್ಗೆ ನಿಮಗೆ ಗೊತ್ತಾ? ಏನಿದರ ವಿಶೇಷ?
ಗುಡ್ಡಕಾಡುಗಳಿಂದ ಕೂಡಿದ ಕೊಡಗಿನಲ್ಲಿ ಹಿಂದೆ ಭತ್ತದ ಕೃಷಿ ಹೊರತುಪಡಿಸಿದರೆ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯಿರಲಿಲ್ಲ. ಹೀಗಾಗಿ ಕೃಷಿಕರಿಗೆ ನಿರ್ಧಿಷ್ಟ ಕೃಷಿ ಭೂಮಿಗಳಿರಲಿಲ್ಲ. ಅವರವರ ಶಕ್ತಿ, ಸಾಮರ್ಥ್ಯಕ್ಕನುಗುಣವಾಗಿ ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದರು. ಈ ಸಂದರ್ಭ ಬೆಳೆಗಳನ್ನು ನಾಶ ಮಾಡಲು ಬರುವ ವನ್ಯ ಮೃಗಗಳೊಂದಿಗೆ ಹೋರಾಡಿ ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಆದ್ದರಿಂದ ಆಯುಧಗಳ ಅಗತ್ಯವಿತ್ತು. ಅಲ್ಲದೆ ಅದನ್ನು ಬಳಸಲು ಮಕ್ಕಳಿಗೆ ಚಿಕ್ಕಂದಿನಿಂದಲೇ ಹೇಳಿಕೊಡಲಾಗುತ್ತಿತ್ತು.
ಮಳೆಗಾಲಕ್ಕೆ ಮುನ್ನ ಬೇಟೆ ಇನ್ನಿತರೆ ಕಾರ್ಯಗಳಲ್ಲಿ ತೊಡಗಿರುತ್ತಿದ್ದ ಕೊಡಗಿನ ಜನ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ಆಯುಧಗಳನ್ನು ಕೆಳಗಿಟ್ಟು ನೇಗಿಲು, ಗುದ್ದಲಿಗಳನ್ನು ಹಿಡಿದು ಗದ್ದೆಗಿಳಿದುಬಿಡುತ್ತಿದ್ದರು. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಗದ್ದೆ ಕೆಲಸ ಆರಂಭವಾದರೆ ಅದು ಆಗಸ್ಟ್ ತಿಂಗಳಲ್ಲಿ ಮುಕ್ತಾಯವಾಗುತ್ತಿತ್ತು.
ಇದನ್ನೂ ಓದಿ: ಕೊಡಗಿನ ಭತ್ತದ ನಾಟಿ ಮತ್ತು ಅದರ ಸುತ್ತ ಹೆಣೆದುಕೊಂಡಿರುವ ಭಾವನಾತ್ಮಕ ಸಂಬಂಧಗಳು ಏನೇನು ಗೊತ್ತಾ?
ಸುರಿಯುವ ಮಳೆಯಲ್ಲಿ ಗದ್ದೆ ಕೆಲಸ ಮಾಡುವುದೆಂದರೆ ಸುಲಭದ ಕೆಲಸವಾಗಿರಲಿಲ್ಲ. ಜೊತೆಗೆ ನಿರ್ಧಿಷ್ಟ ಸಮಯದಲ್ಲಿ ಮಾಡಿ ಮುಗಿಸಲೇ ಬೇಕಾಗಿದ್ದುದರಿಂದ ಬಿಡುವಿಲ್ಲದ ದುಡಿಮೆ ಅನಿವಾರ್ಯವಾಗಿತ್ತು. ಈ ದಿನಗಳಲ್ಲಿ ಕೋವಿಯನ್ನು ನೆಲ್ಲಕ್ಕಿ ಬಾಡೆ(ದೇವರಕೋಣೆ)ಯಲ್ಲಿಡಲಾಗುತ್ತಿತ್ತು. ಅಲ್ಲದೆ ಕಕ್ಕಡ ಮಾಸ (ಜುಲೈ 17ರಿಂದ ಆಗಸ್ಟ್ 16ರವರೆಗಿನ ಒಂದು ತಿಂಗಳ ಅವಧಿ)ದಲ್ಲಿ ಶುಭಕಾರ್ಯ, ಬೇಟೆ ಮುಂತಾದ ಯಾವುದೇ ಕಾರ್ಯವನ್ನು ಮಾಡುತ್ತಿರಲಿಲ್ಲ. ಕೃಷಿ ಚಟುವಟಿಕೆಯಷ್ಟೆ ಪ್ರಮುಖವಾಗಿರುತ್ತಿತ್ತು.
ಹೀಗೆ ದುಡಿಮೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಮೇಲೇಳುತ್ತಿದ್ದದ್ದು ಕೈಲ್‌ಮುಹೂರ್ತಕ್ಕೆ. ಹಬ್ಬದ ದಿನದಂದು ತಮ್ಮೊಂದಿಗೆ ಹೆಗಲು ಕೊಟ್ಟು ದುಡಿದ ಎತ್ತುಗಳನ್ನು ಶುಭ್ರವಾಗಿ ಸ್ನಾನ ಮಾಡಿಸಿ ಬಳಿಕ ನೇಗಿಲು ನೊಗಗಳನ್ನು ಚೆನ್ನಾಗಿ ತೊಳೆದು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಬಳಿಕ ಸ್ನಾನ ಮಾಡಿಸಿದ ಎತ್ತುಗಳಿಗೆ ಎಣ್ಣೆ ಅರಿಶಿನವನ್ನು ಹಚ್ಚಿ ಕುತ್ತಿಗೆಗೆ ನೊಗವನ್ನಿಟ್ಟು ಪ್ರಾರ್ಥಿಸಿ ತೆಗೆಯಲಾಗುತ್ತದೆ. (ನಂತರ ಎತ್ತುಗಳನ್ನು ಉಳುಮೆಗೆ ಉಪಯೋಗಿಸುವುದು ಮುಂದಿನ ವರುಷದ ಮುಂಗಾರಿನಲ್ಲಿ ಮಾತ್ರ.) ಈ ಸಂದರ್ಭ ಅಕ್ಕಿಯಿಂದ ಮಾಡಿದ ವಿಶೇಷ ತಿಂಡಿಯನ್ನು ಸೇವಿಸಲಾಗುತ್ತಿತ್ತು.
ಇದನ್ನೂ ಓದಿ: ಕಕ್ಕಡ.. ಕೊಡಗಿನವರನ್ನು ಎಚ್ಚರಿಸುವ ಕಾಲ… ಕಕ್ಕಡದ ಆ ದಿನಗಳು ಹೇಗಿದ್ದವು? ಈಗ ಏನಾಗಿದೆ?
ಹಬ್ಬದ ದಿನ ಮುಂಜಾನೆ ಮನೆಯ ಯಜಮಾನ ಸ್ನಾನ ಮಾಡಿ ಕುತ್ತರ್ಚಿ ಎಂಬ ಮರದ ಕೊಂಬೆಯನ್ನು ತಂದು ನೇರಳೆ ಮರದ ರೆಂಬೆಯೊಂದಿಗೆ ಜೋಡಿಸಿ ಬಿಲ್ಲು ಬಾಣವನ್ನು ತಯಾರಿಸಿ. ನಂತರ ಹಾಲು ಬರುವ ಮರಕ್ಕೆ ಚುಚ್ಚಿ ಬರುತ್ತಿದ್ದರು (ಇದನ್ನು ಕೊಡವ ಭಾಷೆಯಲ್ಲಿ ಆಪ್‌ಪತರ್ ಎಂದು ಕರೆಯಲಾಗುತ್ತದೆ) ನಂತರ ಕೋವಿಯನ್ನು ದೇವರಕೋಣೆಯಲ್ಲಿಟ್ಟು ಇದಕ್ಕೆ ಕಾಡಿನಲ್ಲಿ ಸಿಗುವ ವಿಶೇಷ ಹೂವಾದ ಕೋವಿ ಹೂವನ್ನಿಟ್ಟು ತಳಿಯತಕ್ಕಿ ಬೊಳಕ್ (ಅಕ್ಕಿ ತುಂಬಿದ ತಟ್ಟೆಯಲ್ಲಿಟ್ಟ ದೀಪ)ನ್ನು ಉರಿಸಿ ಇದರ ಸುತ್ತ ಕುಟುಂಬದ ಸದಸ್ಯರು ಸೇರುತ್ತಿದ್ದರು.
ಸಾಂಪ್ರದಾಯಿಕ ಉಡುಪಾದ ಕುಪ್ಪಚೇಲೆಯನ್ನು ಧರಿಸಿ ಹಿರಿಯರನ್ನು ಸೇರಿಸಿ ಅಕ್ಕಿ ಹಾಕಿ ಕುಟುಂಬವನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಹಾಗೂ ಮದ್ಯವನ್ನು ಗುರುಕಾರಣರಿಗೆ ಇಟ್ಟು ಪ್ರಾರ್ಥನೆ ಸಲ್ಲಿಸಿ, ದೇವರ ಕೋಣೆಯಲ್ಲಿ ಕಿರಿಯರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದರು.
ಇದನ್ನೂ ಓದಿ: ಕಾವೇರಿಗೆ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ…. ಏನಿದರ ವಿಶೇಷ?
ಹಿಂದಿನ ಕಾಲದಲ್ಲಿ ಹಬ್ಬದ ದಿನ ದೇವರ ಕೋಣೆಯಲ್ಲಿಟ್ಟ ಕೋವಿಯನ್ನು ಪೂಜೆಯ ಬಳಿಕ ಹೆಗಲಿಗೇರಿಸಿಕೊಂಡು ಕಾಡಿಗೆ ತೆರಳಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಮಾಂಸದೊಂದಿಗೆ ಮನೆಗೆ ಬರುತ್ತಿದ್ದರು. ಆದುದರಿಂದಲೇ ಇಂದಿಗೂ ಈ ಹಬ್ಬದಲ್ಲಿ ಮಾಂಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಇಂದು ಎಲ್ಲವೂ ಬದಲಾಗಿದೆ ಆದರೆ ಸಾಂಪ್ರದಾಯ ಉಳಿದುಕೊಂಡಿದ್ದರೂ ಬೇಟೆಯನ್ನು ನಿಷೇಧಿಸಿರುವುದರಿಂದ ಕೈಲ್‌ಮುಹೂರ್ತ ಹಬ್ಬದ ದಿನದಂದು ಊರ ಮೈದಾನಗಳಲ್ಲಿ ಗ್ರಾಮೀಣ ಕ್ರೀಡಾಕೂಟಗಳನ್ನು ಏರ್ಪಡಿಸಿ ಅಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪುರುಷರು, ಮಹಿಳೆಯರು ಪಾಲ್ಗೊಂಡು ತಮ್ಮ ಶೌರ್ಯ ಪ್ರದರ್ಶಿಸುತ್ತಾರೆ.
ಇದನ್ನೂ ಓದಿ: ಕೊಡಗಿನಲ್ಲಿ ಭತ್ತದ ಕೃಷಿ ಮರೆಯಾಗುತ್ತಿದೆ.. ಅದರೊಂದಿಗಿನ ಒಡನಾಟ.. ಭಾವನಾತ್ಮಕ ಸಂಬಂಧ ದೂರವಾಗಿಲ್ಲ…!
ಸಾಮಾನ್ಯವಾಗಿ ಕೈಲ್ ಮುಹೂರ್ತ ಹಬ್ಬದಲ್ಲಿ ಹಂದಿ ಮಾಂಸ ಸಾರು(ಪಂದಿಕರಿ) ಹಾಗೂ ಕಡುಬು(ಕಡಂಬಿಟ್ಟು) ಪ್ರಧಾನ ಭಕ್ಷ್ಯವಾಗಿರುವುದರಿಂದ ಎಲ್ಲಿಲ್ಲದ ಬೇಡಿಕೆಯಿರುವುದನ್ನು ಕಾಣಬಹುದು. ಕೈಲ್ ಮುಹೂರ್ತ ಹಬ್ಬಕ್ಕೆ ಕೊಡಗಿನ ಮಂದಿ ದೂರದ ಯಾವುದೇ ಊರಿನಲ್ಲಿದ್ದರೂ ತಪ್ಪದೆ ಬರುತ್ತಾರೆ. ಅದರಲ್ಲೂ ಸೈನ್ಯದಲ್ಲಿದ್ದವರು ಹಬ್ಬಕ್ಕೆ ಬಂದು ಕುಟುಂಬದ ಹಾಗೂ ಊರ ಜನರೊಂದಿಗೆ ಬೆರೆತು ಹಬ್ಬದ ಸಂತಸವನ್ನು ಹಂಚಿಕೊಳ್ಳಬೇಕೆಂದು ಬಯಸುತ್ತಾರೆ. ಅದು ಏನೇ ಇರಲಿ ಕೈಲ್ ಮುಹೂರ್ತ ಪ್ರತಿ ಕುಟುಂಬ ಹಾಗೂ ಊರಿನಲ್ಲಿ ಆತ್ಮೀಯ ಸಂಬಂಧ ಬೆಸೆಯುವ ಹಾಗೂ ಎಲ್ಲರೂ ಸಂಭ್ರಮ ಪಡುವ ಹಬ್ಬವಾಗಿರುವುದಂತು ನಿಜ.
B M Lavakumar