ಕೊಡಗು ಗೌಡ ಸಮಾಜದಿಂದ ಸಿಎಂ, ಕಂದಾಯ ಸಚಿವರಿಗೆ ಕೊಡಗಿನ ಸಂಪ್ರದಾಯದಂತೆ ಒಡಿಕತ್ತಿ ನೀಡಿ ಸನ್ಮಾನ

ಮಡಿಕೇರಿ: ಕೊಡಗಿನಲ್ಲಿ ಜಟಿಲವಾಗಿದ್ದ ಜಮ್ಮಾಬಾಣೆ ಸಮಸ್ಯೆ ಸೇರಿದಂತೆ ಅರೆಭಾಷೆ ಗೌಡ ಸಮುದಾಯಕ್ಕೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನೇತೃತ್ವದಲ್ಲಿ, ಮಡಿಕೇರಿ ಕೊಡಗು ಗೌಡ ಸಮಾಜದ ವತಿಯಿಂದ ಕೊಡಗಿನ ಸಂಪ್ರದಾಯದಂತೆ ಒಡಿಕತ್ತಿ ನೀಡಿ ಗೌರವ ಸಮರ್ಪಿಸಲಾಯಿತು.
ಇತ್ತೀಚಿಗೆ ಬೆಂಗಳೂರಿನಲ್ಲಿ ಜರುಗಿದ ಅರೆಭಾಷೆ ಗೌಡ ಸಮುದಾಯದ ಸಮಾರಂಭದಲ್ಲಿ ನೀಡಿದ ಆಶ್ವಾಸನೆಯಂತೆ, ಮುಖ್ಯಮಂತ್ರಿಗಳು, ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆ ಉದ್ದೇಶಕ್ಕಾಗಿ, ಮಡಿಕೇರಿ ತಾಲೂಕು ಮದೆ ಗ್ರಾಮದ ಕಾಟಕೇರಿ ಬಳಿ, 6 ಎಕರೆ ಜಾಗ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.

ಇಷ್ಟೇ ಅಲ್ಲದೆ ದಶಕಗಳಿಂದ ಕೊಡಗಿನ ಜನತೆಯನ್ನು ಕಾಡುತ್ತಿದ್ದ, ಅತ್ಯಂತ ಜಟಿಲವಾದ ಜಮ್ಮ ಬಾಣೆ ಸಮಸ್ಯೆಯ ಪರಿಹಾರಕ್ಕಾಗಿ, ಕರ್ನಾಟಕ ರಾಜ್ಯ ಕಂದಾಯ ಮಸೂದೆ 2025 ರ ತಿದ್ದುಪಡಿ ವಿದೇಯಕಕ್ಕೆ ಅನುಮೋದನೆ ನೀಡಿರುವುದಕ್ಕಾಗಿ ಮುಖ್ಯಮಂತ್ರಿಗಳನ್ನು ಅವರ ಕಾವೇರಿ ನಿವಾಸದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಂದಾಯ ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಗೌರವಾರ್ಪಣೆ ಸಲ್ಲಿಸಲಾಯಿತು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪರವರ ಉಪಸ್ಥಿತಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅರೆಭಾಷೆ ಗೌಡ ಸಮುದಾಯದ ಪ್ರಮುಖರಾದ ಕೊಲ್ಯದ ಗಿರೀಶ್, ಸೂರ್ತಲೆ ಸೋಮಣ್ಣ, ಪುಳಕಂಡ ಸಂದೀಪ್, ಕಾಳೇರಮ್ಮನ ನಂದ, ಪೊನ್ನಚ್ಚನ ಮಧು, ಕೊಂಬನ ಪ್ರವೀಣ್, ನಂಗಾರು ನಾಣಯ್ಯ, ಪಾಣ್ತಲೆ ಪಳಂಗಪ್ಪ, ಕೈಕೇರ ಮನೋಹರ್, ಆಮೆ ಸೀತಾರಾಮ್, ಪೇರಿಯನ ಘನಶ್ಯಾಮ್, ಮೂಲೆಮಜಲು ಅಮಿತ, ಚೊಕ್ಕಾಡಿ ಪ್ರೇಮ ರಾಘವಯ್ಯ, ಪ್ರಮುಖರು ಉಪಸ್ಥಿತರಿದ್ದರು







