ಕೊಡಗಿನಲ್ಲಿ ಮನೆಮಾಡಿದ ಹುತ್ತರಿ ಸಂಭ್ರಮ… ನೆರೆ ಕಟ್ಟುವುದು.. ಕದಿರು ತೆಗೆಯುವುದು.. ಯಾವ ವೇಳೆಗೆ?

ಕೊಡಗಿನ ಸಂಭ್ರಮದ ಸುಗ್ಗಿ ಹಬ್ಬ ಹುತ್ತರಿಗೆ ಇಡೀ ಕೊಡಗು ಸಿದ್ಧವಾಗಿದೆ. ಹಬ್ಬದ ಸಂಭ್ರಮವೂ ಕಾಣಿಸಲಾರಂಭಿಸಿದೆ. ಹೊರಗಿದ್ದವರು ತಮ್ಮ ಊರಿನತ್ತ ಮುಖ ಮಾಡಿದ್ದು ತಮ್ಮ ಕುಟುಂಬದವರೊಂದಿಗೆ ಕಲೆತು ಖುಷಿಪಡುವ ತವಕದಲ್ಲಿದ್ದಾರೆ. ಅಷ್ಟೇ ಅಲ್ಲದೆ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ತವಕ, ಪಟಾಕಿ ಸಿಡಿಸುವ ಕಾತರವೂ ಶುರುವಾಗಿದೆ.

ಈಗಾಗಲೇ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕಕ್ಕಬೆ – ಕುಂಜಿಲ ಗ್ರಾಮ ಪಂಚಾಯಿತಿಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು, ವ್ಯವಸ್ಥಾಪನಾ ಸಮಿತಿ ಪ್ರಮುಖರ ಹಾಗೂ ಭಕ್ತರ ಸಮ್ಮುಖದಲ್ಲಿ ಅಮ್ಮಂಗೆರಿ ಜ್ಯೋತಿಷಿ ಶಶಿಕುಮಾರ್ ಅವರು ಹತ್ತರಿ ಆಚರಣೆಯ ಸಮಯ ನಿಗದಿ ಮಾಡಿದ್ದು, ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ಡಿಸೆಂಬರ್ 4 ರಂದು ಗುರುವಾರ ರೋಹಿಣಿ ನಕ್ಷತ್ರದ ಹುಣ್ಣಿಮೆಯ ದಿನ ಹುತ್ತರಿ ಹಬ್ಬ ಆಚರಣೆ ನಡೆಯುತ್ತಿದೆ.

ರಾತ್ರಿ 8.10 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.10 ಗಂಟೆಗೆ ಕದಿರು ತೆಗೆಯುವುದು. ಅನ್ನಪ್ರಸಾದಕ್ಕೆ 10.10 ಗಂಟೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಅಲ್ಲದೆ ಸಾರ್ವಜನಿಕವಾಗಿ ರಾತ್ರಿ 8.40 ಗಂಟೆಗೆ ನೆರೆ ಕಟ್ಟುವುದು, ರಾತ್ರಿ 9.40 ಗಂಟೆಗೆ ಕದಿರು ತೆಗೆಯುವುದು, ಭೋಜನಕ್ಕೆ ರಾತ್ರಿ 10.40 ಗಂಟೆಗೆ ಮುಹೂರ್ತ ನಿಗದಿಪಡಿಸಲಾಗಿದೆ. ಡಿಸೆಂಬರ್ 4 ರಂದು ಗುರುವಾರವಾದ ಇಂದು ಹಗಲು ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.

ಹುತ್ತರಿ ಹಬ್ಬದ ಪ್ರಯುಕ್ತ ಪೂರ್ವಭಾವಿಯಾಗಿ ಇಗ್ಗುತ್ತಪ್ಪದ ಆದಿಸ್ಥಳ ಮಲ್ಮ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಈಗಾಗಲೇ ಕಟ್ಟು ಹಾಕಲಾಗಿದ್ದು, ಕಲಾಡ್ಚ ಹಬ್ಬ ಮುಗಿದ ಬಳಿಕ ದೇವರ ಕಟ್ಟನ್ನು ಸಡಿಲಿಸಲಾಗುತ್ತದೆ. ಇನ್ನು ದೇವಸ್ಥಾನದ ಪದ್ಧತಿಯಂತೆ ಹಬ್ಬದ ಒಂದು ದಿನದ ಮೊದಲು “ದೇವಪೊಳ್ದ್” ಮಾರನೆಯ ದಿನ ನಾಡಿನಲ್ಲಿ “ನಾಡುಪೊಳ್ದ್” ಎಂದು ಆಚರಿಸಲಾಗುತ್ತದೆ.

ಹುತ್ತರಿ ಹಬ್ಬದ ಮಾರನೆಯ ದಿನ ಹುತ್ತರಿ ಹಾಡನ್ನು ಮನೆಮನೆಗಳಲ್ಲಿ ಹಾಡುವ ಪದ್ಧತಿಯೂ ಇದೆ. ಅಲ್ಲದೆ, ನಾಡ್‌ಮಂದ್‌ನಲ್ಲಿ (ಊರಿನ ದೊಡ್ಡ ಮೈದಾನದಲ್ಲಿ) ಊರಿನವರೆಲ್ಲಾ ಸೇರಿ ಹುತ್ತರಿ ಕೋಲಾಟ ನಡೆಸುತ್ತಾರೆ. ಆ ನಂತರ ಹಬ್ಬದ ಕಡೆಯ ದಿನವಾಗಿ “ಊರೋರ್ಮೆ” ನಡೆಯುತ್ತದೆ. ಊರವರೆಲ್ಲಾ ಗ್ರಾಮದ ಅಂಬಲ(ಮೈದಾನ)ದಲ್ಲಿ ನೆರೆಯುತ್ತಾರೆ. ವಿವಿಧ ತಿಂಡಿ ತಿನಿಸು, ಅನ್ನ, ರೊಟ್ಟಿ ಹೀಗೆ ವಿವಿಧ ಪದಾರ್ಥಗಳನ್ನು ಮನೆಯಿಂದ ತಂದು ಅಲ್ಲಿ ಸೇವಿಸುತ್ತಾರೆ. ಅಲ್ಲಿಗೆ ಹುತ್ತರಿ ಹಬ್ಬದ ಸಂಭ್ರಮ ಮುಗಿಯುತ್ತದೆ. ಆದರೆ ಬಳಿಕವೂ ಸಂಘ ಸಂಸ್ಥೆಗಳು ತಮಗೆ ಅನುಕೂಲವಾದ ದಿನಗಳಲ್ಲಿ ಹುತ್ತರಿ ಸಂತೋಷಕೂಟಗಳನ್ನು ನಡೆಸುವ ಮೂಲಕ ಎಲ್ಲರೂ ಒಂದೆಡೆ ಸೇರಿ ಹುತ್ತರಿ ಹಬ್ಬದ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.
ಕೊಡಗಿನಲ್ಲಿ ಧಾನ್ಯ ಲಕ್ಷ್ಮಿಯನ್ನು ಮನೆಗೆ ಕೊಂಡೊಯ್ದು ಸಂಭ್ರಮಿಸುವ ಹುತ್ತರಿ ಹಬ್ಬ.. ಏನಿದರ ವಿಶೇಷ?
B M Lavakumar







