ಕೊಡಗಿನಲ್ಲಿ ಉತ್ತಮ ಮಳೆಯಾದ ಕಾರಣದಿಂದ ಅಳಿದುಳಿದ ಭತ್ತದ ಗದ್ದೆಗಳಲ್ಲಿ ಕೃಷಿ ಕಾರ್ಯ ಭರದಿಂದ ಸಾಗಿದ್ದು, ಇದುವರೆಗೆ ಉಳುಮೆ, ಬಿತ್ತನೆ ಮಾಡಿ ಮುಗಿಸಿದವರು ಇದೀಗ ಸಸಿಮಡಿಗಳಲ್ಲಿ ಪೈರು ಬೆಳೆದು ನಾಟಿಗೆ ಸಿದ್ಧವಾಗಿವೆ. ಹೀಗಾಗಿ ನಾಟಿ ಕಾರ್ಯ ಶುರುವಾಗಿದೆ.. ಕೊಡಗಿನ ಮಟ್ಟಿಗೆ ನಾಟಿ ಕೆಲಸವಿದೆಯಲ್ಲ ಅದೊಂಥರಾ ಖುಷಿ, ಖುಷಿಯಾಗಿ ನಡೆಯುವ ಕಾರ್ಯವಾಗಿದೆ. ಅಷ್ಟೇ ಅಲ್ಲದೆ ಆ ನಾಟಿಯ ಸಂಭ್ರಮ ಮತ್ತು ಅದರ ಸುತ್ತಲೂ ನಡೆಯುವ ಚಟುವಟಿಕೆಗಳನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ.
ಇದನ್ನೂ ಓದಿ: ಮಳೆಗಾಲದಲ್ಲಿ ಕೊಡಗಿನತ್ತ ಪ್ರವಾಸಿಗರ ದಂಡು… ಈಗ ಟ್ರೆಂಡ್ ಆಗುತ್ತಿದೆ ಮಾನ್ಸೂನ್ ಟ್ರಿಪ್ ..
ಒಂದೆಡೆ ಮಳೆ ಸುರಿಯುತ್ತಿದ್ದರೆ, ಇನ್ನೊಂದೆಡೆ ಭತ್ತದ ಬಯಲಿನಲ್ಲಿ ಖುಷಿ, ಖುಷಿಯಾಗಿ ಹರಟೆ ಹೊಡೆಯುತ್ತಾ ನಾಟಿ ನೆಡುವ ಗಂಡಸರು, ಹೆಂಗಸರು.. ತಮಾಷೆ, ಕೇಕೆ, ಅದರಾಚೆಗೆ ಪದ ಹೇಳುತ್ತಾ ಸಂಭ್ರಮಿಸುವವರು.. ನಾಟಿ ನೆಟ್ಟ ನಂತರ ಅದೇ ಗದ್ದೆಯಲ್ಲಿ ಓಡಿ ಪ್ರತಿಭೆ ಮೆರೆಯುವವರು, ಇನ್ನು ನಾಟಿ ನೆಡುವುದರಲ್ಲಿಯೂ ಪ್ರಾವಿಣ್ಯತೆ ಮೆರೆಯುವವರು… ಅದರಾಚೆಗೆ ನಾಟಿ ಕಾರ್ಯದಲ್ಲಿ ಬಾಡೂಟ ಮಾಡಿ ಹಬ್ಬದಂತೆ ಸಂಭ್ರಮಿಸುವವರು.. ಇದೆಲ್ಲವನ್ನು ಕೊಡಗಿನಲ್ಲಿ ಬಿಟ್ಟರೆ ಬೇರೆಲ್ಲೂ ನೋಡಲು ಸಾಧ್ಯವೇ ಇಲ್ಲ…
ಇವತ್ತು ಕೊಡಗಿನಲ್ಲಿ ಭತ್ತದ ಕೃಷಿ ಚಟುವಟಿಕೆ ಕಡಿಮೆ ಆಗಿರ ಬಹುದು ಆದರೆ ಇರುವ ಗದ್ದೆಯಲ್ಲಿನ ನಾಟಿಯ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಅದು ಮೊದಲಿಗೆ ಹೋಲಿಸಿದರೆ ತುಸು ಜಾಸ್ತಿಯೇ ಆಗಿದೆ ಎಂದರೆ ತಪ್ಪಾಗಲಾರದು. ಇದೀಗ ಕೊಡಗಿನಲ್ಲಿ ನಾಟಿ ಕಾರ್ಯ ಶುರುವಾಗಿದೆ ಎಂದರೆ ಸಂಭ್ರಮ ಮತ್ತು ಕ್ರೀಡಾ ಚಟುವಟಿಕೆ ಗರಿಗೆದರಿದೆ ಎಂದರ್ಥ.. ಮೊದಲೆಲ್ಲ ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತು. ದೊಡ್ಡ ನಾಟಿಯ ದಿನದಿಂದ ಕುಟುಂಬದ ಇತರೆ ಮನೆಗಳೆಲ್ಲರೂ ಸೇರಿ ಉಳುಮೆ ಮಾಡುತ್ತಿದ್ದರು.
ಇದನ್ನೂ ಓದಿ: ಮುಂಗಾರು ಮಳೆಗೆ ದರ್ಶನ ನೀಡುವ ಅಪರೂಪದ ಅತಿಥಿಗಳು…
ಬೆಳಿಗ್ಗೆ ಐದು ಗಂಟೆಗೆ ಗದ್ದೆಗೆ ತೆರಳಿ ಸುಮಾರು ಹನ್ನೊಂದು ಗಂಟೆ ತನಕ ಉಳುಮೆ ಮಾಡುತ್ತಿದ್ದರು. ಅಷ್ಟರಲ್ಲಿಯೇ ಸುತ್ತಮುತ್ತಲಿನ ಗಂಡಸರು ನಾಟಿ ನೆಡಲು ಬರುತ್ತಿದ್ದರು. ಹೀಗೆ ಒಂದೆಡೆ ಸೇರಿ ನಾಟಿ ನೆಡುವುದು ಒಂಥರಾ ಮಜಾ ಕೊಡುತ್ತಿತ್ತು. ಹೀಗೆ ನಾಟಿಗೆ ಬರುವವರಲ್ಲಿ ಕುಟುಂಬದ ಸ್ಥಳೀಯ ಸದಸ್ಯರಲ್ಲದೆ, ದೂರದಲ್ಲಿ ಉದ್ಯೋಗ ಮಾಡುವವರು, ಸೇನೆ, ಪೊಲೀಸ್ ಮುಂತಾದವುಗಳಲ್ಲಿ ಕರ್ತವ್ಯ ನಿರ್ವಹಿಸುವವರು ಇರುತ್ತಿದ್ದರು. ಇವರಿಗೆಲ್ಲ ಮಳೆಗಾಲದಲ್ಲಿ ರಜೆಯಲ್ಲಿ ಬಂದು ನಾಟಿಯಲ್ಲಿ ಭಾಗವಹಿಸುವುದು ಖುಷಿಯ ವಿಚಾರವಾಗಿತ್ತು. ಈ ಸಂದರ್ಭದಲ್ಲಿ ಇವರೆಲ್ಲರೂ ತಪ್ಪದೆ ಊರಿಗೆ ಬರುವ ಪ್ರಯತ್ನ ಮಾಡುತ್ತಿದ್ದರು.
ಕೆಲವು ಕಡೆಗಳಲ್ಲಿ ದೊಡ್ಡನಾಟಿಯಂದು ಬಾಡೂಟ ಮಾಡಿಸಿ ಮಧ್ಯಾಹ್ನದ ವೇಳೆಗೆ ಗದ್ದೆಯಲ್ಲಿ ಒಂದು ಗದ್ದೆಯಿಂದ ಮತ್ತೊಂದು ಗದ್ದೆಗೆ ನೀರು ಹರಿಯುವ ಸ್ಥಳ(ಕುಂಬೆಕಂಡಿ)ದಲ್ಲಿ ಎಡೆಯಿಟ್ಟು ಕಾಗೆಯನ್ನು ಕರೆಯುವ ಸಂಪ್ರದಾಯವಿದೆ. ಆ ನಂತರ ಗದ್ದೆಯ ಮಾಲೀಕರ ಮನೆಯಲ್ಲಿ ಬಾಡೂಟ ನಡೆಯುತ್ತದೆ. ಇನ್ನು ನಾಟಿ ವಿಚಾರದಲ್ಲಿಯೂ ಅಷ್ಟೇ ನಿಪುಣತೆ ಮೆರೆಯುವವರು ಇದ್ದರು. ಜತೆಗೆ ಕೊಡಿನಾಟಿ (ಗದ್ದೆಯ ಒಂದು ಮೂಲೆಯಿಂದ ಇನ್ನೊಂದು ಮೂಲೆ ವರೆಗೆ ನೇರವಾಗಿ ನಾಟಿ ಮಾಡುವುದು) ಮಾಡುವ ಪ್ರತಿಭಾವಂತರು ಇರುತ್ತಿದ್ದರು. ಇದೆಲ್ಲದರ ಮಧ್ಯೆ ಮಹಿಳೆಯರು ಹಿಂದಿನ ದಿನವೇ ಪೈರು ಕಿತ್ತು ನಾಟಿಗೆ ಬೇಕಾದಷ್ಟು ಪೈರನ್ನು ಸಂಗ್ರಹಿಸಿಡುತ್ತಿದ್ದರು. ಅವರಿಗೂ ಪ್ರತ್ಯೇಕವಾಗಿ ಬಾಡೂಟ ತಯಾರಿಸಲಾಗುತ್ತಿತ್ತು. ಒಮ್ಮೊಮ್ಮೆ ಎಲ್ಲರಿಗೂ ಜತೆಯಲ್ಲಿ ನಡೆಯುತ್ತಿತ್ತು.
ಇದನ್ನೂ ಓದಿ: ಬೆಳ್ಳಕ್ಕಿ…. ಕೊಡಗಿಗೆ ಮಳೆಗಾಲದಲ್ಲಿ ಬರುವ ಯೂರೋಪಿನ ಅತಿಥಿಗಳು… ಇವುಗಳ ವಿಶೇಷತೆ ಗೊತ್ತಾ?
ನಾಟಿ ಕಾರ್ಯ ಮುಗಿಯುವ ಹೊತ್ತಿಗೆ ಸಂಜೆಯಾಗುತ್ತಿತ್ತು. ಕೆಲವು ಊರುಗಳಲ್ಲಿ, ಕೆಲವು ಕುಟುಂಬದ ಗದ್ದೆ ಬಯಲಲ್ಲಿ ಕೆಲವು ಗದ್ದೆಯನ್ನು ಓಟು ಗದ್ದೆ ಎಂದೇ ಕರೆಯಲಾಗುತ್ತಿದೆ. ಈ ಗದ್ದೆಗಳಲ್ಲಿ ತಲೆಮಾರುಗಳಿಂದಲೂ ನಾಟಿ ಓಟ ನಡೆಯುತ್ತಾ ಬಂದಿದೆ. ಅಂಥ ಗದ್ದೆಗಳಲ್ಲಿ ನಾಟಿ ಮುಗಿಯುತ್ತಿದ್ದಂತೆಯೇ ಜನ ಓಟವನ್ನು ನೋಡಲು, ಯಾರು ಗೆಲ್ಲುತ್ತಾರೆ ಎಂದು ತಿಳಿಯಲು ಗದ್ದೆ ಸುತ್ತಲೂ ನೆರೆಯುತ್ತಿದ್ದರು. ಇನ್ನು ಕೆಲವರು ನಾಟಿ ಓಟದಲ್ಲಿ ಹೆಸರು ಮಾಡಿದವರು ಗೆಲ್ಲಲೇ ಬೇಕೆಂದು ಓಡಲು ಬರುತ್ತಿದ್ದರು. ಹೀಗಾಗಿ ಯಾರು ಓಡುತ್ತಾರೆಂದು ಬರುತ್ತಾರೋ ಅವರಿಗೆಲ್ಲರಿಗೂ ಅವಕಾಶ ಮಾಡಿಕೊಡಲಾಗುತ್ತಿತ್ತು.
ಕೊಡಗಿನಲ್ಲಿ ನಡೆಯುತ್ತಿದ್ದ ಮತ್ತು ಈಗಲೂ ಅಲ್ಲಲ್ಲಿ ನಡೆಯುತ್ತಿರುವ ನಾಟಿ ಓಟದ ಬಗ್ಗೆ ತಿಳಿಯುತ್ತಾ ಹೋದರೆ ಇದಕ್ಕೂ ಇತಿಹಾಸದ ನಂಟಿರುವುದು ಗೋಚರಿಸುತ್ತದೆ. ಇದು ರಾಜಮಹಾರಾಜರ ಕಾಲದಲ್ಲಿಯೇ ಪ್ರಚಲಿತದಲ್ಲಿತ್ತೆಂದೂ ಹೇಳಲಾಗುತ್ತಿದೆ. ಆಗ ಸೈನಿಕರು ಭತ್ತದ ಗದ್ದೆಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡರೆ, ರಾಜರು ಗದ್ದೆಯ ಏರಿಯಲ್ಲಿ ನಿಂತು ವೀಕ್ಷಿಸುತ್ತಿದ್ದರಂತೆ. ಅವತ್ತಿನ ಕಾಲದಲ್ಲಿ ಈಗಿನಂತೆ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ದೊರೆಯುತ್ತಿರಲಿಲ್ಲ. ಆದ್ದರಿಂದ ಆಯಾ ಗ್ರಾಮದ ಕೆಲವು ಕುಟುಂಬಗಳು ನಡೆಸುತ್ತಿದ್ದ ನಾಟಿ ಓಟದಲ್ಲಿ ಕೆಲವರು ಪಾಲ್ಗೊಂಡು ಓಡಿ ತಮ್ಮ ಪ್ರತಿಭೆ ಪ್ರದರ್ಶಿಸಿದರೆ ಮತ್ತೆ ಕೆಲವರು ಅದನ್ನು ನೋಡಿ ಮನೋರಂಜನೆ ಪಡೆಯುತ್ತಿದ್ದರು.
ಇದನ್ನೂ ಓದಿ: ಕಕ್ಕಡ.. ಕೊಡಗಿನವರನ್ನು ಎಚ್ಚರಿಸುವ ಕಾಲ… ಕಕ್ಕಡದ ಆ ದಿನಗಳು ಹೇಗಿದ್ದವು? ಈಗ ಏನಾಗಿದೆ?
ಅವತ್ತಿನ ಕಾಲಕ್ಕೆ ಕೊಡಗಿನ ಮಟ್ಟಿಗೆ ಭತ್ತದ ನಾಟಿ ಕೆಲಸ ಕೂಡ ಒಂದು ರೀತಿಯ ಸಂಭ್ರಮ ಹಾಗೂ ಕಠಿಣವಾದ ಕೆಲಸವಾಗಿತ್ತು. ಆಧುನಿಕ ಉಪಕರಣಗಳು ಇರಲಿಲ್ಲ ಎತ್ತುಗಳಿಂದಲೇ ಉಳುಮೆ ಮಾಡಿ ಸುರಿಯುವ ಮಳೆಯಲ್ಲೇ ನಾಟಿ ಮಾಡಬೇಕಿತ್ತು. ಈ ನಾಟಿ ಕೆಲಸ ಒಂದೆರಡು ದಿನಕ್ಕೆ ಮುಗಿಯುತ್ತಿರಲಿಲ್ಲ ತಿಂಗಳಾನುಗಟ್ಟಲೆ ನಡೆಯುತ್ತಿತ್ತು. ಹೆಚ್ಚಿನವರು ಚಿಕ್ಕಗದ್ದೆಗಳಲ್ಲಿ ನಾಟಿ ನೆಟ್ಟು ದೊಡ್ಡ ಗದ್ದೆಯೊಂದನ್ನು ಉಳಿಸಿಕೊಳ್ಳುತ್ತಿದ್ದರು. ಈ ಗದ್ದೆ ನಾಟಿಗೆ ಹೆಚ್ಚಿನ ಜನ ಸೇರುತ್ತಿದ್ದರು. ಜೊತೆಗೆ ನಾಟಿ ನೆಡಲು ಬರುವವರಿಗೆ ಮಧ್ಯಾಹ್ನ ಬಾಡೂಟವನ್ನು ಏರ್ಪಡಿಸಲಾಗುತ್ತಿತ್ತು(ಇವತ್ತಿಗೂ ಇದೆ). ಇದನ್ನು ’ಕಂಬಳ’ಅಥವಾ ದೊಡ್ಡ ನಾಟಿ ಎಂದು ಕರೆಯುತ್ತಾರೆ.
ನಾಟಿ ಮುಗಿದ ಮೇಲೆ ಸಂಜೆ ನಾಟಿ ನೆಟ್ಟ ಗದ್ದೆಯಲ್ಲಿ ಓಟ ಏರ್ಪಡಿಸಲಾಗುತ್ತಿತ್ತು. ನಾಟಿ ಓಟದಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ನಗದು, ಬಾಳೆಗೊನೆ, ತೆಂಗಿನಕಾಯಿ, ವೀಳ್ಯದೆಲೆ ನೀಡಲಾಗುತ್ತಿತ್ತು. ನಾಟಿ ಓಟದಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಇದೊಂದು ವೇದಿಕೆಯಾಗಿತ್ತಲ್ಲದೆ, ಮನೋರಂಜನೆಯೂ ಸಿಗುತ್ತಿತ್ತು. ಓಟದಲ್ಲಿ ಗೆದ್ದವನನ್ನು ಊರಿನಲ್ಲಿ ’ಓಟ್‌ಕಾರ’ ಎಂದೇ ಜನ ಗುರುತಿಸುತ್ತಿದ್ದರು. ಆತ ನಾಟಿ ಓಟ ನಡೆಯುವ ಗದ್ದೆಗಳಿಗೆ ತೆರಳಿ ಅಲ್ಲಿ ಓಟದಲ್ಲಿ ಪಾಲ್ಗೊಂಡು ಗಮನಸೆಳೆಯುತ್ತಿದ್ದರೆ, ಮತ್ತೊಂದೆಡೆ ಆತನನ್ನು ಸೋಲಿಸಿ ತಾನು ’ಓಟ್‌ಕಾರ’ನಾಗಬೇಕೆಂದು ಕೆಲವರು ಪ್ರಯತ್ನಪಡುತ್ತಿದ್ದರು.
ಇದನ್ನೂ ಓದಿ: ಕಾವೇರಿಗೆ ಶಾಂತಳಾಗುವಂತೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ…. ಏನಿದರ ವಿಶೇಷ?
ಸಂಪರ್ಕ ಸಾಧನವೇ ಇಲ್ಲದ ಕಾಲದಲ್ಲಿ ನಾಟಿ ಓಟವನ್ನು ವೀಕ್ಷಿಸಲು ಸುತ್ತಮುತ್ತಲಿನ ನೂರಾರು ಮಂದಿ ಸೇರುತ್ತಿದ್ದರು. ಅವರೆಲ್ಲರೂ ಗದ್ದೆ ಏರಿ ಮೇಲೆ ನಿಂತು ಓಡುವ ಕ್ರೀಡಾ ಸ್ಪರ್ಧಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಹೀಗೆ ನಡೆಯುತ್ತಿದ್ದ ನಾಟಿ ಓಟ ಕುಟುಂಬ, ಗ್ರಾಮಮಟ್ಟದಲ್ಲಿಯೇ ನಡೆದು ಹೋಗುತ್ತಿತ್ತು. ಅದಕ್ಕೆ ಸ್ಥಳೀಯರ ಪ್ರೋತ್ಸಾಹ ಬಿಟ್ಟರೆ ಮತ್ತೇನು ಇರಲಿಲ್ಲ. ಈಗ ಕಾಲ ಬದಲಾಗಿದೆ. ಸಂಪ್ರದಾಯವಾಗಿ ನಡೆದು ಬಂದಿರುವ ನಾಟಿ ಓಟದ ಜತೆಗೆ ಅದಕ್ಕೊಂದು ಮೆರಗು ನೀಡುವ ಕೆಲಸವಾಗಿದೆ. ಕಳೆದ ಮೂರು ದಶಕಗಳಿಂದ ಕೆಸರುಗದ್ದೆ ಕ್ರೀಡಾಕೂಟ ಕೊಡಗಿನಲ್ಲಿ ಮುನ್ನಲೆಗೆ ಬಂದಿದ್ದು ಜನಪ್ರಿಯವಾಗಿದೆ. ಜತೆಗೆ ಅದೊಂದು ರೀತಿಯ ಮಳೆಗಾಲದ ಕೆಸರುಗದ್ದೆ ಒಲಂಪಿಕ್ಸ್ ಆಗಿ ಎಲ್ಲರ ಆಕರ್ಷಿಸುತ್ತಿದೆ.
B M Lavakumar