ArticlesLatest

ಹೊಸವರ್ಷಾಚರಣೆಗೆ ಕೊಡಗಿನತ್ತ ಪ್ರವಾಸಿಗರ ದಂಡು.. ರಾಜಾಸೀಟಿನಲ್ಲಿ ಹಳೆಯ ವರ್ಷಕ್ಕೆ ವಿದಾಯ!

ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಕುಗ್ರಾಮದಲ್ಲಿಯೂ ಹೋಂಸ್ಟೇಗಳಾಗಿವೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ.

ಮಡಿಕೇರಿ: ಹೊಸವರ್ಷಾಚರಣೆಗೆ ಪ್ರವಾಸಿಗರು ಮಲೆನಾಡಿನತ್ತ ತೆರಳುವುದು ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗಿದ್ದು, ಅದರಲ್ಲೂ ಕೊಡಗಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮುಖ ಮಾಡುವುದರಿಂದ ಇಲ್ಲಿನ ರೆಸಾರ್ಟ್, ಹೋಂಸ್ಟೇ, ಲಾಡ್ಜ್ ಗಳು ಭರ್ತಿಯಾಗಿವೆ. ಎಲ್ಲೆಂದರಲ್ಲಿ ಪ್ರವಾಸಿಗರೇ ಕಾಣಿಸುತ್ತಿದ್ದಾರೆ. ಇದು ಪ್ರತಿ ವರ್ಷವೂ ನಡೆಯುತ್ತಿದೆ.

ಕೊಡಗಿನಲ್ಲಿ ತಣ್ಣಗಿನ ಚಳಿ, ಬೀಸುವ ಕುಳಿರ್ ಗಾಳಿ, ಹಕ್ಕಿಗಳ ಚಿಲಿಪಿಲಿ, ಹಸಿರು ಹಚ್ಚಡದ ಪರಿಸರ, ಕಾಫಿ ತೋಟಗಳು ಹೀಗೆ ಸುಂದರ ಪರಿಸರದಲ್ಲಿ ಹೊಸವರ್ಷವನ್ನು ಸ್ವಾಗತಿಸಲು ದೂರದ ಊರಿನಲ್ಲಿದ್ದವರಿಗೆ ಅದೇನೋ ಖುಷಿ ಹೀಗಾಗಿಯೇ ಬಹಳಷ್ಟು ಜನರು ಪ್ರತಿವರ್ಷವೂ ಇಲ್ಲಿಗೆ ಬಂದೇ ಬರುತ್ತಾರೆ. ಅದರಾಚೆಗೆ ದೇಶ ವಿದೇಶಿಗಳಿಂದಲೂ ಹೊಸವರ್ಷಾಚರಣೆಗೆ ಪ್ರವಾಸಿಗರು ಬರುವುದು ವಿಶೇಷ.

ಇದನ್ನೂ ಓದಿ: ನೆನಪಾಗಿ ಕಾಡುವ ಮಡಿಕೇರಿಯ ನೆಹರು ಮಂಟಪ… ಇದರ  ವೈಭವ ಹೇಗಿತ್ತು ಗೊತ್ತಾ?

ಹಾಗೆನೋಡಿದರೆ ಮೊದಲೆಲ್ಲ ಕೊಡಗಿನತ್ತ ಹೊಸವರ್ಷಾಚರಣೆಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಿರಲಿಲ್ಲ. ಆದರೆ ಒಂದೆರಡು ದಶಕಗಳೀಚೆಗೆ ಕೊಡಗಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಿದೆ. ಕುಗ್ರಾಮದಲ್ಲಿಯೂ ಹೋಂಸ್ಟೇಗಳಾಗಿವೆ. ಹೀಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದ್ದಾರೆ. ಇದರಿಂದ ವ್ಯಾಪಾರ ವಹಿವಾಟುಗಳು ಹೆಚ್ಚಾಗಿವೆ. ಹೋಟೆಲ್ ಉದ್ಯಮವೂ ಚೇತರಿಸಿದೆ. ಹೋಂಸ್ಟೇಗಳು ಹುಟ್ಟಿಕೊಂಡಿರುವುದರಿಂದ ಆರ್ಥಿಕ ಚೇತರಿಕೆ ಕಂಡು ಬಂದಿದೆ. ಬಹುತೇಕ ವ್ಯಾಪಾರ ವಹಿವಾಟುಗಳು ಪ್ರವಾಸಿಗರನ್ನು ನಂಬಿ ನಡೆಯುತ್ತಿದ್ದು, ಪ್ರವಾಸಿಗರೇ ಇವರಿಗೆ ಆಧಾರವಾಗಿದ್ದಾರೆ.

ಇದನ್ನೂ ಓದಿ: ನದಿಯಾಗಿ ಹರಿದ ಕಾವೇರಿ ಕೊಡಗಿನ ಗುಹ್ಯದಲ್ಲಿ ನಿಂತಿದ್ದೇಕೆ?

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುತ್ತಿವೆ. ಹಾಗೆಯೇ ಟ್ರಾವೆಲ್ಸ್ ಉದ್ಯಮ ಚೇತರಿಕೆ ಕಂಡಿದೆ. ಮೊದಲೆಲ್ಲ ಕೆಲವೇ ಕೆಲವು ಸಮಯಗಳಲ್ಲಿ ಮಾತ್ರ ಪ್ರವಾಸಿಗರು ಬರುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ವರ್ಷಪೂರ್ತಿ ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ಸಾಗರೋಪಾದಿಯಲ್ಲಿ ಆಗಮಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ವರ್ಷಾಂತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿಯೇ ಪ್ರವಾಸಿಗರು ಬರುತ್ತಾರೆ.

ಇದನ್ನೂ ಓದಿ:  ಇತಿಹಾಸದ ಕಥೆ ಹೇಳುವ ಕೊಡಗಿನ ಸಂತ ಅನ್ನಮ್ಮ ಚರ್ಚ್….

ಇದೀಗ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಮಂಜಿನ ನಡುವೆ ಸಣ್ಣಗೆ ನಡುಕ ಹುಟ್ಟಿಸುವ ಚಳಿಯಲ್ಲಿ ಮೈಕೊಟ್ಟು ಓಡಾಡುವುದು ಮಜಾ ಕೊಡುತ್ತಿದೆ. ಇಂತಹ ಸುಂದರ ಪರಿಸರದಲ್ಲಿ ಒಂದೆರಡು ದಿನಗಳ ಕಾಲ ಇದ್ದು ಹೋಗಲೆಂದು ಬರುವವರ ಸಂಖ್ಯೆ ಜಾಸ್ತಿಯಿದೆ. ಉಳಿದಂತೆ ನಿಸರ್ಗ ನಿರ್ಮಿತ ಹಲವು ಪ್ರವಾಸಿ ತಾಣಗಳೆಲ್ಲವನ್ನು ನೋಡಿಕೊಂಡು ಒಂದಷ್ಟು ಹೊತ್ತು ಅಲ್ಲಿಯೇ ಕಾಲ ಕಳೆದು ಹೋಗುವುದು ಪ್ರವಾಸಿಗರ ಇರಾದೆಯಾಗಿದೆ.

ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…

ಈ ಬಾರಿಯಂತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಕೊಡಗು ಮಾತ್ರವಲ್ಲದೆ, ಮಲೆನಾಡು ಕಡೆಗೆ ಮುಖ ಮಾಡಿರುವ ಪ್ರವಾಸಿಗರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಹೀಗಾಗಿ ಹೋಟೆಲ್, ರೆಸಾರ್ಟ್, ಹೋಂಸ್ಟೇ ಗಳು ಭರ್ತಿಯಾಗಿವೆ. ಆದುದರಿಂದ ಕೊನೆಗಳಿಗೆಯಲ್ಲಿ ಮಲೆನಾಡಿನ ಕಡೆಗೆ ಹೋಗಲು ಮನಸ್ಸು ಮಾಡಿದವರು ವಾಸ್ತವ್ಯದ ಬಗ್ಗೆ ಮೊದಲೇ ತಿಳಿದುಕೊಂಡು ತೆರಳುವುದು ತುಂಬಾ ಒಳ್ಳೆಯದು. ಈಗಾಗಲೇ  ಮಡಿಕೇರಿಗೆ ಆಗಮಿಸಿರುವ ಪ್ರವಾಸಿಗರು ಸಂಜೆ ವೇಳೆ ರಾಜಾಸೀಟಿನಲ್ಲಿ ನೆರೆದು ಸೂರ್ಯಾಸ್ತದೊಂದಿಗೆ ಹಳೆಯ ವರ್ಷಕ್ಕೆ ವಿದಾಯ ಹೇಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ

ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…

ಕೊಡಗಿಗೆ ಬಂದವರು ಭಾಗಮಂಡಲದ ತ್ರಿವೇಣಿಸಂಗಮದಲ್ಲಿ ಮಿಂದು ತಲಕಾವೇರಿಗೆ ತೆರಳಿ ಕಾವೇರಿಯ ದರ್ಶನ ಮಾಡಿಕೊಂಡು ಮಡಿಕೇರಿಯ ಕೋಟೆ ಕೊತ್ತಲಗಳನ್ನು ನೋಡಿ ಹಾಗೆಯೇ ಓಂಕಾರೇಶ್ವರನ ಪ್ರಾರ್ಥಿಸಿ, ರಾಜಾಸೀಟಿನಲ್ಲಿ ನಿಸರ್ಗದ ಚೆಲುವನ್ನು ಆಸ್ವಾದಿಸಿ, ಅಬ್ಬಿ ಜಲಪಾತದ ಭೋರ್ಗರೆತವನ್ನು ಕಣ್ಣಾರೆ ಕಂಡು, ಮಂದಾಲಪಟ್ಟಿಯಲ್ಲಿ ಮೈಚೆಲ್ಲಿ ನಿಸರ್ಗಧಾಮದಲ್ಲಿ ಅಡ್ಡಾಡಿ ಬಂದರೆ ಆ ಸುಂದರ ಕ್ಷಣಗಳು ವರ್ಷಪೂರ್ತಿ ಮನಪಟದಲ್ಲಿ ಹಾಗೆಯೇ ಉಳಿದು ಬಿಡುವುದರಲ್ಲಿ ಎರಡು ಮಾತಿಲ್ಲ.

 

 

ಬಿ.ಎಂ.ಲವಕುಮಾರ್

admin
the authoradmin

ನಿಮ್ಮದೊಂದು ಉತ್ತರ

Translate to any language you want