ಕೊಡಗಿನಲ್ಲಿ ‘ಮೀಡಿಯಾ- ಪ್ರೆಸ್’ ಫಲಕ ದುರ್ಬಳಕೆ… ಪತ್ರಕರ್ತರ ಸಂಘದಿಂದ ಎಸ್ಪಿಗೆ ದೂರು… ಕ್ರಮದ ಭರವಸೆ

ಮಡಿಕೇರಿ: ಪತ್ರಕರ್ತರಲ್ಲದ ಕೆಲವರು ತಮ್ಮ ವಾಹನಗಳಲ್ಲಿ ‘ಮೀಡಿಯಾ-ಪ್ರೆಸ್’ ಫಲಕ ಅಳವಡಿಸಿಕೊಂಡು ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರಿಗೆ ಲಿಖಿತ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ನೇತೃತ್ವದ ನಿಯೋಗ ಎಸ್.ಪಿ.ಯನ್ನು ಭೇಟಿಯಾಗಿ, ಕೊಡಗು ಜಿಲ್ಲೆಯಲ್ಲಿ ಮಾಧ್ಯಮಗಳಲ್ಲಿ ವೃತ್ತಿ ಮಾಡದಿರುವವರು ಕೂಡ ಪ್ರೆಸ್ ಹಾಗೂ ಮೀಡಿಯಾ ಸ್ಟಿಕ್ಕರ್ ಗಳನ್ನು ವಾಹನದಲ್ಲಿ ಅಂಟಿಸಿಕೊಂಡು ಪತ್ರಕರ್ತರೆಂದು ಬಿಂಬಿಸಿಕೊಳ್ಳುತ್ತಿರುವ ಉದಾಹರಣೆಗಳು ಕಂಡುಬರುತ್ತಿವೆ. ಇದರಿಂದ ನೈಜ ಪತ್ರಕರ್ತರು ಹಾಗೂ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಪತ್ರಿಕೆ ಹಾಗೂ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ಗುರುತಿನ ಚೀಟಿ ಅಥವಾ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗುರುತಿನ ಚೀಟಿ ಹೊಂದಿರುವವರನ್ನು ಹೊರತುಪಡಿಸಿ ವಾಹನಗಳಲ್ಲಿ ‘ಪ್ರೆಸ್-ಮೀಡಿಯಾ’ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು ಮಾಧ್ಯಮ ಕ್ಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದೆ.

ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ವಾಹನ ತಪಾಸಣೆ ಸಂದರ್ಭ ಮೀಡಿಯಾ ಸ್ಟಿಕ್ಕರ್ ಅಳವಡಿಸಿಕೊಂಡ ವ್ಯಕ್ತಿಯ ವೃತ್ತಿ ಸಂಬಂಧಿತ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು. ಪತ್ರಿಕಾ ವಿತರಕರು ತಮ್ಮ ಕಾರ್ಯಾವಧಿಯಲ್ಲಿ ತಾತ್ಕಾಲಿಕ ಬೋರ್ಡ್ ಅಳವಡಿಸಿಕೊಂಡು ಬಳಿಕ ಅದನ್ನು ತೆರವುಗೊಳಿಸಬೇಕು. ಪೊಲೀಸ್ ಇಲಾಖೆ ಈ ಕುರಿತು ತಕ್ಷಣ ಕ್ರಮ ಕೈಗೊಂಡು ಪತ್ರಕರ್ತರಲ್ಲದೆ ಮಾಧ್ಯಮದ ಹೆಸರನ್ನು ದುರ್ಬಳಕೆ ಮಾಡುತ್ತಿರುವವರನ್ನು ಪತ್ತೆಹಚ್ಚಿ ಕಾನೂನಾತ್ಮಕ ಕ್ರಮ ಕೈಗೊಂಡು ಸಹಕರಿಸಬೇಕು ಎಂದು ನಿಯೋಗ ಮನವಿ ಮಾಡಿತು.
ಎಸ್ಪಿ ಭೇಟಿ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಜೆ. ರಾಕೇಶ್, ಖಜಾಂಚಿ ಸುನಿಲ್ ಪೊನ್ನೇಟಿ, ಉಪಾಧ್ಯಕ್ಷ ನವೀನ್ ಸುವರ್ಣ, ಕಾರ್ಯದರ್ಶಿ ಮಲ್ಲಿಕಾರ್ಜುನ್, ನಿರ್ದೇಶಕರಾದ ಗೋಪಾಲ್ ಸೋಮಯ್ಯ, ಚಿತನ್ ಕುಮಾರ್, ಶಿವಕುಮಾರ್, ಅಬ್ದುಲ್ಲಾ, ಸದಸ್ಯರಾದ ಮಂಜು ಸುವರ್ಣ, ಲೋಹಿತ್ ಮಾಗಲುಮನೆ ಹಾಜರಿದ್ದರು.
ಕ್ರಮದ ಭರವಸೆ ನೀಡಿದ ಎಸ್ಪಿ ಕೆ. ರಾಮರಾಜನ್
ಸಂಘದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾದ್ಯಂತ ಈ ಸಂಬಂಧ ವಾಹನ ತಪಾಸಣೆ ನಡೆಸಲು ಕ್ರಮವಹಿಸಲಾಗುವುದು. ಆದರೆ, ಈ ಸಂದರ್ಭ ನೈಜ ಪತ್ರಕರ್ತರು ಇಲಾಖೆಯೊಂದಿಗೆ ಕೈ ಜೋಡಿಸಬೇಕು. ವಾಹನಗಳ ಪರಿಶೀಲನೆ ಸಂದರ್ಭ ವಾಗ್ವಾದ ಮಾಡದೆ ಗುರುತಿನ ಚೀಟಿ ನೀಡಿ ಸಹಕರಿಸಬೇಕು. ಪತ್ರಕರ್ತರಲ್ಲದವರು ಮೀಡಿಯಾ-ಪ್ರೆಸ್ ಸ್ಟಿಕ್ಕರ್ ಅಂಟಿಸಿಕೊಂಡಿದ್ದಲ್ಲಿ ದಂಡ ವಿಧಿಸಿ ಕ್ರಮಕೈಗೊಳ್ಳಲಾಗುವುದು. ಪತ್ರಕರ್ತರು ಸಂಚಾರಿ ನಿಯಮವನ್ನು ಚಾಚು ತಪ್ಪದೆ ಪಾಲಿಸಬೇಕು ಡಿ. 13 ರಿಂದಲೇ ಜಿಲ್ಲಾದ್ಯಂತ ತಪಾಸಣೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.







