ಕೆ.ಎಸ್.ಆರ್.ಟಿ.ಸಿ ಯಿಂದ ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್.. ಪ್ರವಾಸಿಗರಿಗೆ ಗುಡ್ ನ್ಯೂಸ್

ಬೆಂಗಳೂರು: ಸಾರ್ವಜನಿಕ ಪ್ರಯಾಣಿಕರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬೆಂಗಳೂರು ಕೇಂದ್ರೀಯ ವಿಭಾಗವು ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ಹಾಗೂ ರಜಾ ದಿನಗಳಲ್ಲಿ ಬೆಂಗಳೂರಿನಿಂದ ವಿವಿಧ ಐತಿಹಾಸಿಕ ಮತ್ತು ಪ್ರವಾಸಿ ತಾಣಗಳಿಗೆ ವಿಶೇಷ ಪ್ಯಾಕೇಜ್ ಪ್ರವಾಸಗಳನ್ನು ಆಯೋಜಿಸಿದೆ. ಈ ಪ್ರವಾಸಗಳಿಗಾಗಿ ಅತ್ಯಾಧುನಿಕ ಮತ್ತು ಆರಾಮದಾಯಕ “ಐರಾವತ ಕ್ಲಬ್ ಕ್ಲಾಸ್” (ಮಲ್ಟಿ ಆಕ್ಸಲ್) ಬಸ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರವಾಸಿಗರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲಾಗುವುದು.
ಕೆ.ಎಸ್.ಆರ್.ಟಿ.ಸಿ. (KSRTC)ಯಿಂದ ಬೆಂಗಳೂರಿನಿಂದ ಆರಂಭವಾಗುವ 4 ಪ್ರಮುಖ ಪ್ರವಾಸಿ ಪ್ಯಾಕೇಜ್‍ಗಳು ಹೀಗಿವೆ…
ಬೆಂಗಳೂರು – ಗಗನಚುಕ್ಕಿ (ಐರಾವತ ಬಸ್ ಪ್ರವಾಸ): ಪ್ರವಾಸಿಗರು ಬೆಂಗಳೂರಿನಿಂದ ಹೊರಟು ಶಿವನಸಮುದ್ರದ ಗಗನಚುಕ್ಕಿ ಜಲಪಾತ, ತಲಕಾಡು, ಸೋಮನಾಥಪುರ ಮತ್ತು ಮುಡುಕುತೊರೆ ತಾಣಗಳನ್ನು ವೀಕ್ಷಿಸಬಹುದು. ಈ 340 ಕಿ.ಮೀ ಪ್ರಯಾಣದ ಪ್ಯಾಕೇಜ್‍ಗೆ ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಈ ಪ್ರವಾಸವು ಜುಲೈ 05, 2025 ರಿಂದ ಲಭ್ಯವಿರಲಿದೆ.

ಬೆಂಗಳೂರು – ಗಗನಚುಕ್ಕಿ (ಐರಾವತ ಕ್ಲಬ್ ಕ್ಲಾಸ್): ಇದೇ ಪ್ರವಾಸಿ ತಾಣಗಳಿಗೆ ಅಂದರೆ ಗಗನಚುಕ್ಕಿ, ತಲಕಾಡು ಮತ್ತು ಸೋಮನಾಥಪುರಕ್ಕೆ ಐರಾವತ ಕ್ಲಬ್ ಕ್ಲಾಸ್ ಬಸ್ ಮೂಲಕವೂ ಪ್ರಯಾಣಿಸಬಹುದು. ಜುಲೈ 20, 2024 ರಿಂದ ಈ ಸೇವೆ ಲಭ್ಯವಿದ್ದು, ಇದರ ದರ ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ಆಗಿರುತ್ತದೆ.
ಬೆಂಗಳೂರು – ಚಿತ್ರದುರ್ಗ ಪ್ರವಾಸ: ಐತಿಹಾಸಿಕ ತಾಣಗಳ ವೀಕ್ಷಣೆಗಾಗಿ ಬೆಂಗಳೂರಿನಿಂದ ಹೊರಟು ವಾಣಿವಿಲಾಸ ಸಾಗರ, ಹಿರಿಯೂರು ಮತ್ತು ಚಿತ್ರದುರ್ಗದ ಕೋಟೆಯನ್ನು ವೀಕ್ಷಿಸುವ ಅವಕಾಶವಿದೆ. 270 ಕಿ.ಮೀ ದೂರದ ಈ ಪ್ರವಾಸವು ಜೂನ್ 28, 2025 ರಿಂದ ಪ್ರಾರಂಭವಾಗಲಿದ್ದು, ಐರಾವತ ಕ್ಲಬ್ ಕ್ಲಾಸ್ ಬಸ್‍ನಲ್ಲಿ ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ಪ್ರಯಾಣ ದರವಿರುತ್ತದೆ.
ಬೆಂಗಳೂರು – ಬೇಲೂರು/ಹಳೇಬೀಡು ಪ್ರವಾಸ: ಶಿಲ್ಪಕಲೆಗಳ ವೀಕ್ಷಣೆಗಾಗಿ ಶ್ರವಣಬೆಳಗೊಳ, ಬೇಲೂರು ಮತ್ತು ಹಳೇಬೀಡು ತಾಣಗಳ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. 350 ಕಿ.ಮೀ ವ್ಯಾಪ್ತಿಯ ಈ ಪ್ರವಾಸವು ಮೇ 31, 2025 ರಿಂದ ಲಭ್ಯವಿದ್ದು, ಐರಾವತ ಕ್ಲಬ್ ಕ್ಲಾಸ್ ಬಸ್ ಪ್ರಯಾಣಕ್ಕೆ ವಯಸ್ಕರಿಗೆ 670 ರೂ. ಮತ್ತು ಮಕ್ಕಳಿಗೆ 500 ರೂ. ದರ ನಿಗದಿಪಡಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬೆಂಗಳೂರು ಕೇಂದ್ರೀಯ ವಿಭಾಗವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಾರಾಂತ್ಯದ ದಿನಗಳಲ್ಲಿ (ಶನಿವಾರ ಮತ್ತು ಭಾನುವಾರ) ವಿವಿಧ ಪ್ರವಾಸಿ ತಾಣಗಳಿಗೆ ವಿಶೇಷ ‘ಪ್ಯಾಕೇಜ್ ಟೂರ್’ ಬಸ್ ಸೇವೆಗಳನ್ನು ಆರಂಭಿಸಿದೆ. ಈ ಪ್ರವಾಸಗಳಿಗೆ ರಾಜಹಂಸ ಮತ್ತು ಅಶ್ವಮೇಧ ಕ್ಲಾಸಿಕ್ ಬಸ್‍ಗಳನ್ನು ಬಳಸಲಾಗುತ್ತಿದ್ದು, ಪ್ರವೇಶ ಶುಲ್ಕ, ಉಪಹಾರ ಮತ್ತು ಊಟದ ವೆಚ್ಚವನ್ನು ಹೊರತುಪಡಿಸಿ ಕೇವಲ ಪ್ರಯಾಣ ದರವನ್ನು ಮಾತ್ರ ನಿಗದಿಪಡಿಸಲಾಗಿದೆ.
ಬೆಂಗಳೂರು – ಗಗನಚುಕ್ಕಿ ಪ್ರವಾಸ (ರಾಜಹಂಸ ಬಸ್): ಈ ಪ್ರವಾಸವು ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ ಮತ್ತು ಗಗನಚುಕ್ಕಿ ತಾಣಗಳನ್ನು ಒಳಗೊಂಡಿದೆ. ಒಟ್ಟು 340 ಕಿ.ಮೀ ದೂರದ ಈ ಪ್ರಯಾಣಕ್ಕೆ ರಾಜಹಂಸ ಬಸ್ಸಿನ ವ್ಯವಸ್ಥೆಯಿದ್ದು, ವಯಸ್ಕರಿಗೆ 750 ರೂ. ಹಾಗೂ ಮಕ್ಕಳಿಗೆ 600 ರೂ. ದರ ನಿಗದಿಪಡಿಸಲಾಗಿದೆ. ಈ ಸೇವೆಯು 05-07-2025 ರಿಂದ ಜಾರಿಯಲ್ಲಿದೆ.
ಬೆಂಗಳೂರು – ಗಗನಚುಕ್ಕಿ ಪ್ರವಾಸ (ಅಶ್ವಮೇಧ ಕ್ಲಾಸಿಕ್): ಪ್ರವಾಸಿ ತಾಣಗಳಾದ ಸೋಮನಾಥಪುರ, ತಲಕಾಡು, ಮಧ್ಯರಂಗ ಮತ್ತು ಅವಳಿ ಜಲಪಾತಗಳ ವೀಕ್ಷಣೆಗೆ ಅಶ್ವಮೇಧ ಕ್ಲಾಸಿಕ್ ಬಸ್ಸಿನ ಆಯ್ಕೆಯೂ ಇದೆ. ಇದರ ಒಟ್ಟು ದೂರ 340 ಕಿ.ಮೀ ಆಗಿದ್ದು, ವಯಸ್ಕರಿಗೆ 600 ರೂ. ಮತ್ತು ಮಕ್ಕಳಿಗೆ 450 ರೂ. ದರವಿದೆ. ಈ ಸೇವೆಯು 20-07-2024 ರಿಂದಲೇ ಆರಂಭವಾಗಿದೆ.

ಬೆಂಗಳೂರು – ಚಿಕ್ಕತಿರುಪತಿ ಮತ್ತು ಕೋಲಾರ ಪ್ರವಾಸ: ಧಾರ್ಮಿಕ ಆಸಕ್ತಿಯುಳ್ಳವರಿಗಾಗಿ ಈ ವಿಶೇಷ ಪ್ಯಾಕೇಜ್ ರೂಪಿಸಲಾಗಿದ್ದು, ಇದರಲ್ಲಿ ಚಿಕ್ಕತಿರುಪತಿ, ಕೋಟೆಲಿಂಗೇಶ್ವರ, ಬಂಗಾರು ತಿರುಪತಿ, ಆವಣಿ, ಮುಳಬಾಗಿಲು, ಕುರುಡುಮಲೆ ಮತ್ತು ಕೋಲಾರ ಕ್ಷೇತ್ರಗಳ ದರ್ಶನ ಪಡೆಯಬಹುದು. 270 ಕಿ.ಮೀ ದೂರದ ಈ ಪ್ರವಾಸಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ ಲಭ್ಯವಿದ್ದು, ವಯಸ್ಕರಿಗೆ 600 ರೂ. ಹಾಗೂ ಮಕ್ಕಳಿಗೆ 450 ರೂ. ದರ ನಿಗದಿ ಮಾಡಲಾಗಿದೆ. ಇದು 28-06-2025 ರಿಂದ ಲಭ್ಯವಿದೆ.
ಬೆಂಗಳೂರು – ಮೇಲುಕೋಟೆ ಪ್ರವಾಸ: ಐತಿಹಾಸಿಕ ತಾಣಗಳಾದ ಶ್ರೀರಂಗಪಟ್ಟಣ, ಕಲ್ಪಳ್ಳಿ ಮತ್ತು ಮೇಲುಕೋಟೆ ವೀಕ್ಷಣೆಗೆ ಈ ಪ್ಯಾಕೇಜ್ ಪೂರಕವಾಗಿದೆ. 350 ಕಿ.ಮೀ ದೂರದ ಈ ಪ್ರಯಾಣಕ್ಕೆ ಅಶ್ವಮೇಧ ಕ್ಲಾಸಿಕ್ ಬಸ್ ಬಳಸಲಾಗುತ್ತಿದ್ದು, ವಯಸ್ಕರಿಗೆ 670 ರೂ. ಮತ್ತು ಮಕ್ಕಳಿಗೆ 500 ರೂ. ಪ್ರಯಾಣ ದರವಿದೆ. ಈ ಸೇವೆಯು 31-05-2025 ರಿಂದ ಜಾರಿಗೆ ಬಂದಿದೆ.
ಪ್ರಮುಖ ಸೂಚನೆ: ಈ ಮೇಲಿನ ಎಲ್ಲಾ ಪ್ಯಾಕೇಜ್‍ಗಳಲ್ಲಿ ಪ್ರವೇಶ ಶುಲ್ಕ, ಉಪಹಾರ ಮತ್ತು ಮಧ್ಯಾಹ್ನ ಅಥವಾ ರಾತ್ರಿಯ ಊಟದ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ. ಈ ಪ್ಯಾಕೇಜ್ ಟೂರ್ ಗಳ ಪ್ರಯೋಜನ ಪಡೆಯಲು ಇಚ್ಛಿಸುವ ಸಾರ್ವಜನಿಕರು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‍ಸೈಟ್‍ಗಳಾದ www.ksrtc.in ಅಥವಾ www.ksrtc.karnataka.gov.in ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ದೂರವಾಣಿ ಸಂಖ್ಯೆ 080-26252625, ಮೊಬೈಲ್ ಸಂಖ್ಯೆ7760990100 / 7760990560 / 7760990287 ಗಳನ್ನು ಸಂಪರ್ಕಿಸಬಹುದು.
ಕೆಎಸ್ ಆರ್ ಟಿಸಿಯಲ್ಲಿ ಪ್ರಯಾಣಕ್ಕೆ ಮುಂಗಡ ಬುಕಿಂಗ್ ವ್ಯವಸ್ಥೆ… ಯಾವ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು?







