ಕುಶಾಲನಗರ(ರಘುಹೆಬ್ಬಾಲೆ): ಉಪನ್ಯಾಸಕರಿಗೆ ವಿಷಯವಾರು ಕಾರ್ಯಾಗಾರದಿಂದ ವಿದ್ಯಾರ್ಥಿಗಳಿಗೆ ಉತ್ತಮ ಭೋದನೆ ಮಾಡಲು ಹಾಗೂ ಫಲಿತಾಂಶ ಉತ್ತಮ ಪಡಿಸಲು ಸಹಕಾರಿಯಾಗಿವೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕ ಎಂ.ಎಲ್. ಚಿದಾನಂದ ಕುಮಾರ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ ) ಇತಿಹಾಸ ವೇದಿಕೆ ಕೊಡಗು ಜಿಲ್ಲೆ ಹಾಗೂ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪನ್ಯಾಸಕರಿಗೆ ಇತಿಹಾಸ ಕಾರ್ಯಾಗಾರ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಕೊಡಗು ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಅದನ್ನು ಮೊದಲನೇ ಸ್ಥಾನಕ್ಕೆ ಕೊಂಡೊಯ್ಯಲು ಇಂತಹ ಕಾರ್ಯಗಾರಗಳ ಅವಶ್ಯಕತೆ ಇದೆ ಎಂದರು
ರಾಜ್ಯದಲ್ಲಿ ಕಲಾ ವಿಭಾಗದಲ್ಲಿ ಕಡಿಮೆ ಪಲಿತಾಂಶ ಬರುತ್ತಿದ್ದು,ಅದನ್ನು ಹೆಚ್ಚಳ ಮಾಡಲು ಪರೀಕ್ಷಾ ಸುಧಾರಣಾ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿದೆ. ಪ್ರಶ್ನೆ ಪತ್ರಿಕೆಯ ನೀಲ ನಕ್ಷೆಯ ಬಗ್ಗೆ ಉಪನ್ಯಾಸಕರಿಗೆ ಮಾಹಿತಿ ನೀಡಿ ಅದರ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್ ಮಾತನಾಡಿ, ಇತಿಹಾಸ ಕಾರ್ಯಾಗಾರದ ಮಹತ್ವವನ್ನು ಕುರಿತು ಇಲಾಖೆ ಪರೀಕ್ಷಾ ಸುಧಾರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವದರ ಔಚಿತ್ಯವನ್ನು ಕುರಿತು ಮಾಹಿತಿ ನೀಡಿದರು.

ಇತಿಹಾಸ ವೇದಿಕೆಯ ಅಧ್ಯಕ್ಷ ನಾಗೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರಿನ ಸಂಪನ್ಮೂಲ ವ್ಯಕ್ತಿಗಳಾದ ಹೆಚ್.ಬಿ.ವಾಸು ಹಾಗೂ ಗಣೇಶ್ ಅವರು ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಮತ್ತು ನೀಲನಕ್ಷೆಯ ಬಗ್ಗೆ ಸಂಪೂರ್ಣವಾದ ವಿವರವನ್ನು ನೀಡಿದರು. ಇತಿಹಾಸ ವಿಷಯದಲ್ಲಿ ಶೇ ನೂರು ಅಂಕ ಪಡೆದ 11 ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸನ್ಮಾನಿಸಿ ಗೌರವ ಧನ ನೀಡಲಾಯಿತು.
ಪ್ರಸಕ್ತ ಸಾಲಿನಲ್ಲಿ ನಿವೃತ್ತರಾಗುತ್ತಿರುವ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಸತೀಶ್, ಮರಗೂಡು ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಕೆ.ಎಸ್ ಕೃಷ್ಣ ಹಾಗೂ ಉಪನ್ಯಾಸಕ ಪದವಿಯಿಂದ ಪ್ರಾಂಶುಪಾಲರಾಗಿ ಬಡ್ತಿ ಪಡೆದ ಹಂಡ್ರಂಗಿ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲೆ ಬಿ.ಜಿ.ಶಾಂತಿ,ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಫಿಲಿಪ್ ವಾಸ್,ಉಪನ್ಯಾಸಕರಾದ ಪ್ರತಿಭಾ ಉತ್ತಪ್ಪ,ಕೆ.ಎಸ್, ಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.








