ಕುಶಾಲನಗರ (ರಘುಹೆಬ್ಬಾಲೆ): ಗಾಂಧೀಜಿ ಎಂಕ್ಷಣ ನೆನಪಾಗುವುದು ಸ್ವತಂತ್ರ ಹೋರಾಟಗಾರ. ಆದರೆ ಅವರು ಚಿಂತಕರು, ಪತ್ರಕರ್ತರು, ಶಾಂತಿಧೂತ ಮತ್ತು ಜಗತ್ತಿಗೆ ಅಹಿಂಸಾ ಮಾರ್ಗ ರೂಪಿಸಿಕೊಟ್ಟ ಮಹಾನ್ ಚೇತನ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ ಹೇಳಿದರು.
ಕೊಡಗು ವಿಶ್ವವಿದ್ಯಾಲಯ,ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಗಾಂಧೀಜಿಯವರ ಆತ್ಮಕಥೆ ನೂರರ ಸಂಭ್ರಮ ಹಾಗೂ ಭೂದಾನ ಚಳವಳಿಯ 75ನೇ ವಾರ್ಷಿಕೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಹಾಗೂ ಪುಸ್ತಕ ದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವತಂತ್ರ, ಸತ್ಯಾಗ್ರಹ, ಸ್ವರಾಜ್ಯ, ಸತ್ಯ, ನೈತಿಕತೆ, ಶಾಂತಿ, ಅಹಿಂಸೆ ಅವರ ತತ್ವಗಳು ಸಮಾಜದಲ್ಲಿ ಹಿಂಸಾಚಾರಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಮಂಜಸ. ಇಂದು ಜಗತ್ತು ಒಂದು ಜಾಗತಿಕ ಹಳ್ಳಿಯಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳು ಕೂಡ ಮುಖ್ಯ. ಸಮಾಜದಲ್ಲಿ ದ್ವೇಷ ಭಾಷಣಗಳು, ಕೋಮುಗಲಭೆಗಳು ಹೆಚ್ಚುತ್ತಿವೆ. ಸತ್ಯ, ನೈತಿಕತೆ ಮತ್ತು ಪ್ರಾಮಾಣಿಕತೆಯನ್ನು ಕಾಣುವುದು ಅಪರೂಪ ಎಂಬಂತಾಗಿದೆ. ಹೀಗಿರುವಾಗ ಹಿಂಸೆ ಕ್ಷಣಿಕ, ಅಹಿಂಸೆ ಮತ್ತು ಶಾಂತಿ ಶಾಶ್ವತ ಎಂಬ ಗಾಂಧೀಜಿಯವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂಬುದನ್ನು ನಾವೆಲ್ಲರೂ ಮರೆಯಬಾರದು ಎಂದು ಹೇಳಿದರು.

ಆಡಂಬರದ ಜೀವನದಲ್ಲಿ ಮುಳುಗಿ ಹೋಗಿರುವ ಯುವಜನತೆಗೆ ಅತ್ಯಂತ ಸರಳ ಸುಂದರ ಜೀವನ ನಡೆಸಿದ ಗಾಂಧೀಜಿಯವರು ಆದರ್ಶಪ್ರಾಯರಾಗಿದ್ದಾರೆ. ವಿದ್ಯಾರ್ಥಿಗಳು ಗಾಂಧೀಜಿಯವರು ಹಾಕಿ ಕೊಟ್ಟ ಮೌಲ್ಯಗಳನ್ನು ನಿಮ್ಮ ಬದುಕಿನ ಬುನಾದಿಯಾಗಿ ಮಾಡಿಕೊಂಡರೆ ಯಶಸ್ವಿ ಜೀವನದ ಜೊತೆಗೆ ಸುಸ್ಥಿರ ಸಮಾಜವನ್ನು ನಾವು ಕಾಣಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಹೆಚ್ ಜಂಗಮಶೆಟ್ಟಿ ಪುಸ್ತಕ ದಾಸೋಹ ಉದ್ಘಾಟನೆ ನೆರವೇರಿಸಿ ಮಾತನಾಡಿ, ಓದುವ ದಾಹ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಪುಸ್ತಕದ ಜ್ಞಾನ ಮಸ್ತಕಕ್ಕೆ ಅವಶ್ಯ ಎಂಬ ದೃಷ್ಟಿಯಿಂದ ಕೊಡಗು ವಿಶ್ವವಿದ್ಯಾಲಯ ಇಂದು ಪುಸ್ತಕ ದಾಸೋಹ ಆರಂಭಿಸಿರುವುದು ಅತ್ಯಂತ ಶ್ಲಾಘನೀಯ. ವಿದ್ಯಾರ್ಥಿಗಳೆಲ್ಲ ಈ ಪುಸ್ತಕ ದಾಸೋಹದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ನಮ್ಮ ಭಾರತ ದೇಶದಲ್ಲಿ ಆಯಾ ಕಾಲಘಟ್ಟದಲ್ಲಿ ತಮ್ಮ ಸುತ್ತಲಿನ ಯಾವುದಾದರೂ ಒಂದು ಅನಿಷ್ಟ ಪದ್ಧತಿಯ ವಿರುದ್ಧ ತಮ್ಮದೇ ವಿಚಾರಧಾರೆಗಳು ಮಾರ್ಗದಲ್ಲಿ ಜನರಲ್ಲಿ ಅರಿವು ಮೂಡಿಸಲೆಂದೇ ಮಹಾತ್ಮರು ಬಂದು ಹೋಗಿದ್ದಾರೆ. ಇಂದಿನ ಮಕ್ಕಳು ಆ ಮಹಾತ್ಮರ ಕುರಿತ ಪುಸ್ತಕಗಳನ್ನು ಓದಬೇಕು. ಅಷ್ಟೇ ಅಲ್ಲದೆ ಮಹಾತ್ಮರನ್ನು ಮತ್ತು ಅವರ ವಿಚಾರಧಾರೆಗಳನ್ನು ತಮ್ಮೊಳಗೆ ಹುಡುಕಬೇಕು.
ವಿದ್ಯಾರ್ಥಿಗಳು ಜಗತ್ತಿಗೆ ಅನ್ನ ನೀಡುವ ಅನ್ನದಾತರಾದ ರೈತ, ನಮ್ಮ ಸುರಕ್ಷತೆಗಾಗಿ ದೇಶದ ಗಡಿಯಲ್ಲಿ ಕಾಯುತ್ತಿರುವ ಸೈನಿಕ, ನಮಗೆ ಜನ್ಮ ನೀಡಿದ ತಂದೆ ತಾಯಿ ಮತ್ತು ಶಿಕ್ಷಣ ನೀಡುವ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಕೊಡಗು ವಿಶ್ವವಿದ್ಯಾನಿಲಯದ ಕುಲಸಚಿವ(ಮೌಲ್ಯಮಾಪನ ) ಪ್ರೊ. ಸುರೇಶ, ಡಾ. ಆಬಿದ ಬೇಗಮ್ ಅವರು ಗಾಂಧೀಜಿ ವಿಚಾರಧಾರೆಗಳ ಹಾಗೂ ಶಿಕ್ಷಣದ ಮೌಲ್ಯವನ್ನು ಕುರಿತು ಮಾತನಾಡಿದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ತಮ್ಮದೇ ಆದ ತತ್ವಸಿದ್ದಾಂತಗಳ ಮೂಲಕ ವಿಶ್ವಖ್ಯಾತಿ ಹೊಂದಿದ ಮಹಾತ್ಮ ಗಾಂಧೀಜಿ ಅವರ ಚಿಂತನೆಗಳನ್ನು ಸರ್ವ ಕಾಲಕ್ಕೂ ಸ್ಮರಿಸುವ ಉದ್ದೇಶದಿಂದ ಕೊಡಗು ವಿಶ್ವವಿದ್ಯಾಲಯವು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಗಾಂಧೀಜಿಯ ಕನಸುಗಳು ಹಾಗೂ ಆಲೋಚನೆಗಳನ್ನು ಬಿತ್ತಲು ಇಂತಹ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ.
ಗಾಂಧೀಜಿ ತಮ್ಮ ಹೋರಾಟದಲ್ಲಿ ಕೋಪದ ಬದಲು ಸಹನೆಯನ್ನು, ದ್ವೇಷದ ಬದಲು ಪ್ರೀತಿಯನ್ನು ಹಿಂಸೆಯ ಬದಲು ಶಾಂತಿಯನ್ನು ಅಳವಡಿಸಿಕೊಂಡಿದ್ದರ ಹಿನ್ನೆಲೆಯಲ್ಲಿ ಜಗತ್ತಿಗೆ ಮಾರ್ಗದರ್ಶಕರಾದರು. ಜಗತ್ತು ಬದಲಾದರೂ ಕೂಡ ಗಾಂಧಿಯಂತಹ ಮಹಾತ್ಮರು ಸಾರಿದ ತತ್ವಗಳು ಬದಲಾಗದ ಕಾರಣ ಇಂದಿನ ಮಕ್ಕಳಲ್ಲಿ ಗಾಂಧಿಯವ ಕನಸುಗಳನ್ನು ಬಿತ್ತಬೇಕಿದೆ ಎಂದರು.
ಈ ಸಂದರ್ಭ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುದರ್ಶನ ಕುಮಾರ್ , ಕನ್ನಡ ಅಧ್ಯಯನ ವಿಭಾಗ ಉಪನ್ಯಾಸಕ ಡಾ. ಜಮೀರ್ ಅಹಮದ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕಿ ಡಾ. ಸುವರ್ಣ ಕಂಬಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.








