LatestState

ತಲೆ ಮೇಲೆ ಹೊತ್ತು ‘ಹೂ’ ಮಾರುವವರಿಗೆ ದಿನಕ್ಕೆ 25 ರೂಪಾಯಿ ಟ್ಯಾಕ್ಸ್! ಏನಿದು?

ಕುಶಾಲನಗರ: ಒಂದೆಡೆ ಗ್ಯಾರಂಟಿ ಯೋಜನೆಗಳ ಮೂಲಕ ನುಡಿದಂತೆ ನಡೆದಿದ್ದೇವೆ.. ಬಡವರ ಏಳ್ಗೆಗೆ ದಾರಿದೀಪವಾಗಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಸರ್ಕಾರ  ಮತ್ತೊಂದೆಡೆ ಗ್ಯಾರಂಟಿ ಯೋಜನೆಗಳಿಗಾಗಿ ಹಣ ಹೊಂದಿಸಲು ಯಾವ ರೀತಿಯಲೆಲ್ಲಾ ಟ್ಯಾಕ್ಸ್ ಹಾಕುತ್ತಿದೆ ಎನ್ನುವುದು ಗೊತ್ತಿಲ್ಲದ ವಿಚಾರವೇನಲ್ಲ…

ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸಿಕೊಂಡು ಬರುತ್ತಿರುವ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣಹೊಂದಿಸಲು ಯಾವ ರೀತಿಯಲೆಲ್ಲ ಸರ್ಕಸ್ ಮಾಡುತ್ತಿದೆ ಎನ್ನುವುದನ್ನು ಜನ ನೋಡಿದ್ದಾರೆ. ಅಷ್ಟೇ ಅಲ್ಲದೆ ಎಲ್ಲೆಲ್ಲ ಹಣವನ್ನು ವಸೂಲಿ ಮಾಡಬಹುದೋ ಅಲ್ಲೆಲ್ಲ ಮಾಡುತ್ತಲೇ ಬರುತ್ತಿದೆ. ಹೀಗಾಗಿ ಬೆಲೆ ಏರಿಕೆ  ಬಿಸಿ ಜನ ಸಾಮಾನ್ಯರನ್ನು ಇನ್ನಿಲ್ಲದಂತೆ ಸುಡಲಾರಂಭಿಸಿದೆ.

ಮತ್ತೊಂದೆಡೆ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಆದರೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹೊಡೆತ ಬಿದ್ದಿಲ್ಲ ಎಂಬಂತೆ ನಾಯಕರು ಮಾತನಾಡುತ್ತಿದ್ದಾರೆ. ಆದರೆ ತಳಮಟ್ಟದಿಂದಲೇ ತೆರಿಗೆ ವಸೂಲಿ ಮಾಡಿ ಸರ್ಕಾರದ ಖಜಾನೆಯನ್ನು ತುಂಬಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನಗಳು ಬಡವರಿಗೆ ಸಂಕಷ್ಟ ತಂದಿರುವುದಂತು ನಿಜ.

ಇನ್ನು ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಅನುದಾನ ದೊರೆಯದ ಕಾರಣದಿಂದಾಗಿ  ಅವುಗಳು ಕೂಡ ಸಿಕ್ಕ, ಸಿಕ್ಕ ತೆರಿಗೆಗಳನ್ನು ಹಾಕಿ ಬಡಜನರಿಂದ ಹಣ ವಸೂಲಿಗೆ ಇಳಿದಿವೆಯಾ ಎಂಬ ಸಂಶಯ ಮೂಡುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಕುಶಾಲನಗರ ಪುರಸಭೆ ಕರೆದಿರುವ ಟೆಂಡರ್ ಪ್ರಕಟಣೆ  ಕಾಣಿಸುತ್ತಿದೆ. ಇದರಲ್ಲಿ ನಮೂದಿಸಿರುವ ತೆರಿಗೆಯನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.

ಟೆಂಡರ್ ನಲ್ಲಿ  ನಮೂದಿಸಿರುವಂತೆ ಪ್ರತಿದಿನವೂ ಪಾನಿಪೂರಿ ಗೋಬಿ ಮಾರುವ ಬೀದಿ ವ್ಯಾಪಾರಿಗಳು 75 ರೂಪಾಯಿ, ಟೇಬಲ್ ಮೇಲೆ ಹೂ ಮಾರುವವರು 50 ರೂಪಾಯಿ, ತಲೆ ಮೇಲೆ ಹೂವನ್ನು ಹೊತ್ತು ತಿರುಗುವವರು 25 ರೂಪಾಯಿ, ತಳ್ಳುಗಾಡಿಯಲ್ಲಿ ಬಿಸಿಲು ಮಳೆ ಲೆಕ್ಕಿಸದೆ ಸುತ್ತಿ ವ್ಯಾಪಾರ ಮಾಡುವವರು 25 ರೂಪಾಯಿ, ವಾಹನದಲ್ಲಿ ಸುತ್ತಿ ಮಾರಿದರೆ 100 ರೂಪಾಯಿ ನೀಡಲೇ ಬೇಕಂತೆ… ಈ ರೀತಿಯ ತೆರಿಗೆಯನ್ನು ಗಮನಿಸಿದರೆ ಇದು ಬಡವರ ಸರ್ಕಾರನಾ? ಪ್ರಶ್ನೆ ಮೂಡದಿರದು.. ಮಾತೆತ್ತಿದರೆ ಬಡವರ ಸರ್ಕಾರ ಎನ್ನುವ ನಾಯಕರು ಇದನ್ನೊಮ್ಮೆ ನೋಡಿ ಅರ್ಥವಾಗಿ ಬಿಡುತ್ತದೆ..

admin
the authoradmin

Leave a Reply

Translate to any language you want