ಕುಶಾಲನಗರ (ರಘುಹೆಬ್ಬಾಲೆ): ಕೊಡಗು ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ರೈಲ್ವೆ ಯೋಜನೆ ತುಂಬ ಅಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಆರ್.ನಾಗೇಂದ್ರಪ್ರಸಾದ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕೊಡಗು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಸಣ್ಣ ಕೈಗಾರಿಕಾ ಸಂಘದ ಸಹಯೋಗದೊಂದಿಗೆ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ ಯೋಜನೆಯಡಿ ಝಡ್.ಇ.ಡಿ. ಮತ್ತು ಲೀನ್ ಯೋಜನೆ ಕುರಿತು ಇಲ್ಲಿನ ಕನ್ನಿಕಾ ಸಭಾಂಗಣದಲ್ಲಿ ಆಯೋಜಿಸಿದ್ದ ಕೈಗಾರಿಕೋದ್ಯಮಿಗಳಿಗೆ ಒಂದು ದಿನದ ಅರಿವು ಮೂಡಿಸುವಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊಡಗಿನ ಪ್ರಮುಖ ಬೆಳೆ ಕಾಫಿಯಾಗಿದ್ದು,ಕಾಫಿ ಉದ್ಯಮಗಳಿಂದ ಲಕ್ಷಾಂತರ ಟನ್ ಕಾಫಿ ಮಂಗಳೂರಿನಿಂದ ರಫ್ತು ಆಗುತ್ತಿದೆ. ಈಗ ಲಾರಿಗಳ ಮೂಲಕ ಕಾಫಿ ಸರಬರಾಜು ಮಾಡಲಾಗುತ್ತಿದೆ.ಮಳೆಗಾಲದಲ್ಲಿ ಎರಡು ಮೂರು ತಿಂಗಳು ರಸ್ತೆ ಬಂದ್ ಆಗುತ್ತದೆ.ಈ ವ್ಯವಸ್ಥೆ ಇನ್ನೂ ಸುಲಭ ಮಾಡುವ ನಿಟ್ಟಿನಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ಸರಕುಗಳ ಸಾಗಣೆಗಾಗಿ ಕೊಡಗಿಗೆ ರೈಲ್ವೆ ಸಂಪರ್ಕ ಕಲ್ಪಿಸಿದರೆ ಉದ್ಯಮಿಗಳಿಗೆ ತುಂಬ ಅನುಕೂಲವಾಗುತ್ತದೆ ಎಂದರು.
ಕಾಸಿಯಾ ದವರು ರೈಲ್ವೆ ಯೋಜನೆಗೆ ಒತ್ತು ಕೊಟ್ಟು ಕೇಂದ್ರ ಸರ್ಕಾರದ ಮೇಲೆ ಕಾಸಿಯಾ ದವರು ಒತ್ತಡ ತರಬೇಕು.ರೈಲ್ವೆ ಯೋಜನೆ ಜಾರಿಗೆ ಬಂದರೆ ರಫ್ತುದಾರರಿಗೆ ಸಾರಿಗೆ ವೆಚ್ಚ ಕೂಡ ಕಡಿಮೆ ಆಗುತ್ತದೆ. ಜೊತೆಗೆ ಹೆಚ್ಚಿನ ವ್ಯವಹಾರ ಮಾಡಲು ಅನುಕೂಲವಾಗುವಂತೆ ಎಂದರು.
ಕೊಡಗಿಗೆ ಇಎಸ್ಎ ಆಸ್ಪತ್ರೆ ಬೇಕಾಗಿದೆ.ಇಲ್ಲಿ ಹೆಚ್ಚು ಪ್ಲಾಂಟೇಷನ್ ಇರುವುದರಿಂದ ಇಲ್ಲಿ ಕೆಲಸ ಮಾಡುವ ಕಾರ್ಮಿಕ ಅನುಕೂಲವಾಗುತ್ತದೆ.ಕೊಡಗಿನಲ್ಲಿ ಹೈಟೆಕ್ ಆಸ್ಪತ್ರೆ ಇಲ್ಲದೆ ಇರುವುದರಿಂದ ಕಾರ್ಮಿಕ ವರ್ಗ ಮೈಸೂರು ಅಥವಾ ಮಂಗಳೂರು ಆಸ್ಪತ್ರೆಯನ್ನು ಅವಲಂಬಿಸಿಕೊಂಡಿದ್ದಾರೆ. ಆದ್ದರಿಂದ ಕಾಸಿಯಾ ಸರ್ಕಾರದ ಮೇಲೆ ಒತ್ತಡ ತಂದು ಕೊಡಗಿನಲ್ಲಿ ಇಎಸ್ಐ ಆಸ್ಪತ್ರೆ ಸ್ಥಾಪಿಸಿಕೊಡಬೇಕು ಎಂದು ಮನವಿ ಮಾಡಿದರು.

ಜೊತೆಗೆ ಯುವಜನರಿಗೆ ಉದ್ಯೋಗ ಅವಕಾಶದೊಂದಿಗೆ ಇಲ್ಲಿನ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಗಳನ್ನು ಕಲ್ಪಿಸುವ ಮೂಲಕ ಕೈಗಾರಿಕೋದ್ಯಮ ಬೆಳೆವಣಿಗೆಗೆ ಒತ್ತು ನೀಡಬೇಕು ಎಂದು ಹೇಳಿದರು.ಕೈಗಾರಿಕೆ ಉದ್ಯಮದ ಬಗ್ಗೆ ಆಸಕ್ತಿ ಇರುವ ಯುವಕರಿಗೆ ಇಂತಹ ಕಾರ್ಯಗಾರಗಳಿಂದ ಉದ್ಯಮ ಆರಂಭಿಸಲು ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ಉತ್ಪನ್ನಗಳನ್ನು ರಫ್ತು ಮಾಡುವ ಕುರಿತು ಬೇಕಾದ ಅಗತ್ಯ ಮಾಹಿತಿಗಳು ಲಭಿಸುತ್ತವೆ ಎಂದರು.
ಕೊಡಗು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಿ.ಕೆ.ಸುದೀಪ್ ಕುಮಾರ್ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಭಾರತ ಆರ್ಥಿಕತೆಯಲ್ಲಿ ವಿಶ್ವಗುರುವಾಗಬೇಕೆನ್ನುವ ಉದ್ದೇಶದಿಂದ ಇಂತಹ ಕಾರ್ಯಗಾರಗಳು, ಕಾರ್ಯಕ್ರಮಗಳನ್ನು ಪ್ರತಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಆಯೋಜಿಸಲಾಗುತ್ತಿದೆ. ಉದ್ದಿಮೆಗಳ ಸ್ಥಾಪನೆಗೆ ಸರ್ಕಾರದಿಂದ ದೊರೆಯುವ ಅನುದಾನ, ಸಹಾಯಧನ, ಸಹಕಾರದ ಬಗ್ಗೆ ಅರಿತುಕೊಳ್ಳಬೇಕಿದೆ. ಅದೇ ರೀತಿ ಉದ್ಯಮಿಗಳು ಬ್ಯಾಂಕುಗಳೊಂದಿಗೆ ಉತ್ತಮ ಸಂಬಂಧ ಹೊಂದುವುದರೊಂದಿಗೆ ತಮ್ಮ ವ್ಯವಹಾರ ವಹಿವಾಟನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಅಗತ್ಯವಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಹನುಮಂತರಾಯ ಮಾತನಾಡಿ, ಝಡ್.ಇ.ಡಿ ಮತ್ತು ಲೀನ್ ಎಂದರೇನು, ಅದರ ಉದ್ದೇಶವೇನು ಎಂದು ವಿವರಿಸಿದರು.

ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್.ಬಿರಾದರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಮೂಲಕ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ. ಇತರರಿಗೂ ಕಾರ್ಯಕ್ರಮ ಮತ್ತು ಯೋಜನೆ ಉದ್ದೇಶದ ಬಗ್ಗೆ ಮಾಹಿತಿ ಹೊಂದಿದವರು ಅರಿವು ಮೂಡಿಸಬೇಕಿದೆ ಎಂದರು.ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್ ಅವರು ಝಡ್.ಇ.ಡಿ ಮತ್ತು ಲೀನ್ ಉಪನ್ಯಾಸ ನೀಡಿದರು.
ಈ ಸಂದರ್ಭ ಕಾಸಿಯಾ ಜಂಟಿ ಕಾರ್ಯದರ್ಶಿ ದಿನೇಶ್ ಕುಮಾರ್ ವಿ, ಕಾಸಿಯಾ ದ ಕೊಡಗು ಜಿಲ್ಲಾ ಅಭಿವೃದ್ಧಿ ಸಮಿತಿ ಪ್ಯಾನೆಲ್ ಅಧ್ಯಕ್ಷ ದೇವೇಂಧಿರನ್, ಕಾಸಿಯಾ ಕಾರ್ಯನಿರ್ವಾಣಾಧಿಕಾರಿ ಕೆ.ಎಸ್.ಶ್ರೀಧರ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧೆಡೆಗಳಿಂದ ನೂರು ಹೆಚ್ಚಿನ ಉದ್ಯಮಿಗಳಿಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅತಿಥಿಗಳನ್ನು ಕಾಸಿಯಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಎಲ್ಲರಿಗೂ ರುಚಿಕರ ಭೋಜನ ವ್ಯವಸ್ಥೆ ಮಾಡಲಾಗಿತ್ತು.








