District

ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಗ್ರಹಣ ಸಮಾರಂಭ… ಸಂಘದ ಅಭಿವೃದ್ಧಿಗೆ ಪಣ

ಕುಶಾಲನಗರ ( ರಘು ಹೆಬ್ಬಾಲೆ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ 2025-28ನೇ ಸಾಲಿನ ನೂತನ ಆಡಳಿತ ಮಂಡಳಿ ಪದಗ್ರಹಣ ಸಮಾರಂಭ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.

ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾದ ಎಂ.ಎನ್.ಚಂದ್ರಮೋಹನ್ ಅಧ್ಯಕ್ಷತೆಯಲ್ಲಿ ನಡೆದ‌ ಕಾರ್ಯಕ್ರಮವನ್ನು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪತ್ರಿಕೋದ್ಯಮದಲ್ಲಿ ಪತ್ರಕರ್ತರಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ. ನಿಷ್ಠೂರ ವರದಿಗಳ‌ ಮೂಲಕ ಬೆಳಕು ಚೆಲ್ಲಬೇಕಾದರೆ ಹಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಆದರೂ ಎಲ್ಲ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳಿಗೆ ಪತ್ರಕರ್ತರ ಸೇವೆ ಅನಿವಾರ್ಯವಾಗಿ ಅಗತ್ಯವಿದೆ. ದಿಟ್ಟ ವರದಿಗಳ ಮೂಲಕ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪತ್ರಕರ್ತರ ಸೇವೆ ಅನನ್ಯವಾದುದು ಎಂದರು. ಸಂಘಕ್ಕೆ ಕಟ್ಟಡ ನಿರ್ಮಿಸಲು ಅಗತ್ಯ ಸಹಕಾರ ಒದಗಿಸುವ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕುಶಾಲನಗರ ತಾಲೂಕು ರಚನೆಯಾದ ಬಳಿಕ ತಾಲೂಕು ಸಂಘವಾಗಿ ಮೇಲ್ದರ್ಜೆಗೇರಿದ ಕುಶಾಲನಗರ ಸಂಘ ಪ್ರಥಮ ಪ್ರಯತ್ನದಲ್ಲಿಯೇ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಂಘದ ಸಾಮರ್ಥ್ಯ ರೂಪಿಸಿದ್ದಾರೆ. ಸಂಘದ ವಿಚಾರದಲ್ಲಿ ಸರ್ವ ಸದಸ್ಯರು ಒಂದು ಕುಟುಂಬದಂತೆ ಬಾಂಧ್ಯವ ಹೊಂದುವ ಅಗತ್ಯವಿದೆ. ಈ ಮೂಲಕ ಸಂಘದ ಶ್ರೇಯೋಭಿವೃದ್ದಿಗೆ ಒಗ್ಗಟ್ಟಿನಿಂದ ಶ್ರಮಿಸಬೇಕಿದೆ. ದೈನಂದಿನ ವರದಿಗಳಲ್ಲಿ ನೊಂದವರ, ಅನ್ಯಾಯಕ್ಕೊಳಗಾದವರ ದನಿಯಾಗಿ, ವಸ್ತುಸ್ಥಿತಿ ವರದಿ ನೀಡುವಲ್ಲಿ ಪತ್ರಕರ್ತರು ತಮ್ಮ ಕಾರ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.

ರಾಜ್ಯ ಸಮಿತಿ ಸದಸ್ಯರಾದ ಸವಿತಾ ರೈ ಮಾತನಾಡಿ, ಸಂಘದಲ್ಲಿ‌ ತಮಗೆ ದೊರೆತ ಹುದ್ದೆಯನ್ನು ಆಸಕ್ತಿಯೊಂದಿಗೆ ಬದ್ದತೆಯಿಂದ ನಿರ್ವಹಿಸಿದಲ್ಲಿ ಸಂಘವನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿದೆ. ಪ್ರತಿಯೊಬ್ಬರು ತಮ್ಮ ಕೊಡುಗೆ ಮೂಲಕ ಸಂಘವನ್ನು ಬಲಪಡಿಸಲು ಪ್ರಯತ್ನಿಸಬೇಕಿದೆ.

ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಅನು ಕಾರ್ಯಪ್ಪ ಮಾತನಾಡಿ, ಗುಣಮಟ್ಟದ, ವಿಭಿನ್ನ ಕಾರ್ಯಕ್ರಮಗಳ ಮೂಲಕ ಸಂಘ ಗುರುತಿಸಿಕೊಳ್ಳಬೇಕಿದೆ. ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಎಲ್ಲರೂ ಭಾಗಿಯಾಗುವುದು ಮುಖ್ಯ ಎಂದರು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಂದೀಶ್ ಅವರು ಮಾತನಾಡಿ, ಪತ್ರಕರ್ತರು ವಿರೋಧ ವಿಚಾರಗಳಿಗೆ ಅಂಜದೆ ಸಮಾಜಕ್ಕೆ ನೆರವಾಗುವ ನಿಟ್ಟಿನಲ್ಲಿ ಸದಾ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಕರೆ ನೀಡಿದರು.

ತಾಲೂಕು ಸಂಘದ ಅಧ್ಯಕ್ಷ ಎಂ.ಎನ್.ಚಂದ್ರ ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳೆದ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗೆ ರಾಜ್ಯಮಟ್ಟದ ಪ್ರಶಸ್ತಿ ಕುಶಾಲನಗರ ತಾಲೂಕು ಸಂಘಕ್ಕೆ ದೊರೆತಿರುವುದು ಮಹತ್ಕಾರ್ಯ. ಸಮಾಜಮುಖಿ ವರದಿಗಳ ಮೂಲಕ ತಾಲೂಕಿನ ಪತ್ರಕರ್ತರು ಸಮಾಜದ ಗಮನ ಸೆಳೆದು ಹಲವು ಪ್ರಶಸ್ತಿಗಳಿಗೆ ಭಾಜನಾಗಿರುವುದು ಅಭಿನಂದನೀಯ ಸಂಗತಿ. ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣ ನಮ್ಮ ಮುಂದಿನ ಗುರಿ ಎಂದರು.

ನೂತನ ಸಾಲಿನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪದಗ್ರಹಣ ನಂತರ ಅಧಿಕಾರ ಹಸ್ತಾಂತರ ಮಾಡಿದರು. ರಾಷ್ಟ್ರೀಯ ಸಮಿತಿ ಸದಸ್ಯ ಪಾರ್ಥ ಚಿಣ್ಣಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ನೂತನ ಆಡಳಿತ ಮಂಡಳಿಗೆ ಶುಭ ಕೋರಿದರು.

ಜಿಲ್ಲಾ ಸಂಘದ ನಿರ್ದೇಶಕರಾದ ಪ್ರಭುದೇವ್, ಕುಡೆಕಲ್ ಗಣೇಶ್, ಖಜಾಂಚಿ ಸುನಿಲ್ ಪೊನ್ನೇಟಿ ಉಪಾಧ್ಯಕ್ಷೆ ವನಿತಾ ಚಂದ್ರ ಮೋಹನ್, ನಿರ್ದೇಶಕರಾದ ರಘುಹೆಬ್ಬಾಲೆ, ವಿನೋದ್, ಕಾರ್ಯದರ್ಶಿ ಶಿವರಾಜ್, ಉಪಾಧ್ಯಕ್ಷ ಮಹಮ್ಮದ್, ಸಹ ಕಾರ್ಯದರ್ಶಿ ಕೆ.ಕೆ.ನಾಗರಾಜಶೆಟ್ಟಿ, ಜಯಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

admin
the authoradmin

Leave a Reply