District

ಹನುಮೋತ್ಸವಕ್ಕೆ  ಹೊಸ ಉಡುಗೆ ತೊಟ್ಟು ಶೃಂಗಾರಗೊಳ್ಳುತ್ತಿರುವ (ಸುಂದರ ) ಹೆದ್ದಾರಿ ಸುಂದರಿ……

ಕುಶಾಲನಗರ: ಡಿಸೆಂಬರ್ 2 ರಂದು ಕುಶಾಲನಗರದಲ್ಲಿ ನಡೆಯುವ ವೈಭವದ ಹನುಮೋತ್ಸವ ಶೋಭಾಯಾತ್ರೆಗೆ ಈ ಬಾರಿ ಹಾಸನ ಕುಶಾಲನಗರ ರಾಜ್ಯ ಹೆದ್ದಾರಿ ಕುಶಾಲನಗರದಿಂದ ಕೂಡಿಗೆಯವರೆಗೆ ಹೊಸ ಉಡುಗೆ ತೊಟ್ಟು ನಳ ನಳಿಸುತ್ತಿದೆ. ಕುಶಾಲನಗರದ ಬಿಜಿಎಸ್ ವೃತ್ತ ದಲ್ಲಿ ಕಳೆದ ವರ್ಷ ಅಳವಡಿತ ಹನುಮೋತ್ಸವ ಮಹಾ ದ್ವಾರ ಒಂದಿಷ್ಟು  ಹೊಳಪು ಕಳೆದುಕೊಂಡರೂ ಕೂಡ ಈ ಬಾರಿಯ ಶೋಭಾಯಾತ್ರೆಯನ್ನು ಸ್ವಾಗತಿಸಲು ಕಾತರದಿ ಕಾದಿದೆ.

ಹನುಮನ  ಆಲಯ ಆಂಜನೇಯನ ಮಂದಿರದಿಂದ ಎದುರುಗೊಂಡು ಮುಳ್ಳುಸೋಗೆಯ ವರೆಗಿನ ಹೆದ್ದಾರಿ ಕಪ್ಪು ಸುಂದರಿಯಂತೆ ಎದ್ದು ಕಾಣುತ್ತಿದೆ. ಜಾತ್ರೋತ್ಸವಕ್ಕೆ ಅಳವಡಿಸಿರುವ ವಿದ್ಯುತ್ ಅಲಂಕೃತ ಬೆಳಕಿನ ದೀಪಗಳು ಮೇಲಾಕಾಶದಿ ಹೊಳೆದರೆ, ಈಗಷ್ಟೆ ಹಳೆಯದರ  ಮೇಲೆ ಹೊಸ ಉಡುಗೆ ತೊಟ್ಟ ಹೆದ್ದಾರಿ ರಾತ್ರಿ ವೇಳೆ ನೋಡುಗರ ಮನಸೂರೆ ಗೊಳ್ಳುತ್ತಿದೆ. ಕಳೆದ ಆರು ತಿಂಗಳಿಂದಲೂ ಎಡಬಿಡದೇ ಸುರಿದ ಮಳೆಯಿಂದಾಗಿ ಬಹುತೇಕ ಗುಂಡಿ ಬಿದ್ದ ಈ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಕುಂಟ ಬಿಲ್ಲೆ ಆಟವಾಡುತ್ತಾ ಸಾಗುತ್ತಿದ್ದವು.

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಈ ಹಿಂದೆ  ದ್ವಿಚಕ್ರ ಹಾಗೂ ಆಟೋಗಳಲ್ಲಿ ಸಂಚರಿಸುತ್ತಿದ್ದ  ಮಂದಿ ಸೊಂಟ ನೋವಿಗೆ ತುತ್ತಾಗಿ ಈ ಕಡೆಯಿಂದ ಹೋಗುವವರು ಕೂಡಿಗೆ ಆಸ್ಪತ್ರೆಗೂ, ಆ ಕಡೆಯಿಂದ ಬರುವವರು  ನೇರವಾಗಿ ಕುಶಾಲನಗರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಂತಹ ವಾತಾವರಣ ನಿರ್ಮಾಣವಾಗಿತ್ತು. ಇವೆಲ್ಲವನ್ನು ಗಮನಿಸಿದ ಕ್ಷೇತ್ರದ ಡಾಕ್ಟರ್ ಶಾಸಕರು ವಿಧಾನ ಸೌಧದಲ್ಲಿ ಕುಳಿತು ಪಟ್ಟುಬಿಡದೇ ಬಹುಕೋಟಿ ಅನುದಾನ ತಂದದ್ದರ ಫಲವಾಗಿ ಈ ಭಾಗದ ಮಂದಿ ನಿಟ್ಟುಸಿರು ಬಿಡುವಂತಾಗಿದೆ.

ಒಟ್ಟಾರೆ,  ಖುಷಿ ನಗರ ಕುಶಾಲನಗರ  ಕಳೆದ ಹಲವು ದಿನಗಳಿಂದ ರಾತ್ರಿ ಹಗಲು ಮಿಣ ಮಿಣ ಮಿಂಚುತ್ತಾ ಗಣೇಶನ ಉತ್ಸವ, ಜಾತ್ರೋತ್ಸವ, ಷಷ್ಠಿ ಉತ್ಸವ, ಹನುಮೋತ್ಸವ ಹೀಗೆ ಹಲವು ಉತ್ಸವಗಳಿಗೆ ಬಹು ಉತ್ಸಾಹದಿಂದ ತೆರೆದುಕೊಂಡಿದ್ದು ಅಪರಿಮಿತ  ಮಂದಿಯ ಮನವನ್ನು ಸೂರೆಗೊಂಡಿದೆ….ಗೊಳ್ಳುತ್ತಲೇ ಇದೆ…..

ಕೆ.ಎಸ್.ಮೂರ್ತಿ, ಕುಶಾಲನಗರ

admin
the authoradmin

Leave a Reply