CinemaLatest

ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… ಇವರ ಸಿನಿ ಬದುಕು ಹೇಗಿತ್ತು?

ಮಡಿವಂತಿಕೆಯ ಕಾಲದಲ್ಲಿ ಹೆಣ್ಮಕ್ಕಳು ನಾಟಕದತ್ತ ಮುಖಮಾಡದ ಸಂದರ್ಭದಲ್ಲಿ ಗಂಡು ಮಕ್ಕಳೇ ಸ್ತ್ರೀಪಾತ್ರವನ್ನು ಮಾಡಬೇಕಾದ ಪರಿಸ್ಥಿತಿಯಿತ್ತು. ಇಂತಹ ಸಂದರ್ಭದಲ್ಲಿ ಧೈರ್ಯಮಾಡಿ ರಂಗಭೂಮಿ, ನಂತರ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟು ಪ್ರೇಕ್ಷಕರನ್ನು ರಂಜಿಸಿ ಜನಮಾನಸದಲ್ಲಿ ಚಿರವಾಗಿ ಉಳಿದ ಒಂದಷ್ಟು ನಟಿಯರಲ್ಲಿ ಲಕ್ಷ್ಮೀಬಾಯಿ ಒಬ್ಬರಾಗಿದ್ದಾರೆ.

ಹಳೆಯ ಸಿನಿಮಾಗಳನ್ನು ನೋಡಿದ್ದೇ ಆದರೆ ಅವತ್ತಿನ ನಟಿಯರು ಮತ್ತು ಸಿನಿಮಾಗಳನ್ನು ನೋಡಿದ್ದೇ ಆದರೆ ಇವತ್ತು ಸಿನಿಮಾರಂಗ ಇಷ್ಟೊಂದು ಮುಂದುವರಿಯಲು ಅವತ್ತು ಅವರು ಹಾಕಿಕೊಟ್ಟ ಬುನಾದಿ ಕಾರಣ ಎಂದರೆ ತಪ್ಪಾಗಲಾರದು. ಮೂಕಿಟಾಕಿ ಯುಗದಿಂದ ಇಲ್ಲಿವರೆಗೆ ಬೆಳೆದು ಬಂದ ರೀತಿ ಮಾತ್ರ ಅಮೋಘವಾಗಿದೆ. ಈ ವೇಳೆ ಹಿರಿಯ ನಟಿ ಲಕ್ಷ್ಮೀಬಾಯಿ ಅವರ ನಟನಾ ಬದುಕನ್ನು ನಾವೊಮ್ಮೆ ನೆನಪಿಸಿಕೊಳ್ಳಲೇ ಬೇಕಾಗುತ್ತದೆ.

ಮೂಕೀ-ಟಾಕೀ ಯುಗದ ಖ್ಯಾತ ಅಭಿನೇತ್ರಿ ಲಕ್ಷ್ಮೀಬಾಯಿ 1918ರಲ್ಲಿ ಬೆಂಗಳೂರಿನ ಹೊಸೂರು-ಮತ್ತಿಕೆರೆ ಸಮೀಪ ಮಧ್ಯಮವರ್ಗದ ಪೌರೋಹಿತ್ಯ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆ ಕಲಿಯುವಾಗಲೆ ಸಂಗೀತ, ನೃತ್ಯಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. 1930ರಲ್ಲಿ ಆರಂಭವಾದ ಕನ್ನಡದ ಮೂಕಿ ಚಿತ್ರ ನಿರ್ಮಾಣ ಕಾಲದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಹೀರೋಯಿನ್ ಇದ್ದರು! ಸ್ತ್ರೀಪಾತ್ರಕ್ಕೆ ಮಹಿಳೆಯರು ದೊರಕುತ್ತಲೇ ಇರಲಿಲ್ಲ.

ಇದನ್ನೂ ಓದಿ:  ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?

ಆಗ ಮುಂಚೂಣಿಯಲ್ಲಿದ್ದ ಕಲಾವಿದೆಯರಲ್ಲಿ ಇವರದು ಅಗ್ರಸ್ತಾನ. 10 ಮೂಕಿಚಿತ್ರ ಮತ್ತು ಹಲವಾರು ನಾಟಕದ ಮೂಲಕ ಜನಪ್ರಿಯ ನಟಿಯಾಗಿದ್ದರು. ಯಾವುದೆ ಕ್ಯಾರೆಕ್ಟರ್ ‌ಇರಲಿ ಅಸಡ್ಡೆ ತೋರದೆ, ಅಸಹಕಾರ ನೀಡದೇ, ಪಾಲಿಗೆ ಬಂದದ್ದು ಪಂಚಾಮೃತ ಎಂದು ಕರ್ತವ್ಯ ನಿರ್ವಹಿಸಿದರೆ ಉತ್ತಮಫಲ ದೊರಕುವುದೆಂಬ ನಂಬಿಕೆಯನ್ನೆ ಸಿದ್ಧಾಂತವನ್ನಾಗಿಸಿಕೊಂಡ ಮೇರುಕಲಾವಿದೆ.

ಕನ್ನಡದ ಪ್ರಪ್ರಥಮ ಟಾಕೀ ಫಿಲಂ ಸತಿಸುಲೋಚನ ಚಿತ್ರದ ಹೀರೋಯಿನ್ ಆಗುವ ಸಂದರ್ಭದಲ್ಲಿ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿ ಸುವರ್ಣಾವಕಾಶ ಕಳೆದುಕೊಂಡ ನತದೃಷ್ಟ ನಾಯಕಿ ಎನಿಸಿದರು. ಅಭಿನಯ ಕ್ಷೇತ್ರದಲ್ಲಿ ನಟಿಯರಿಗೆ ಅಭಾವವಿದ್ದ ಕ್ಷಾಮದ ಕಾಲ. ಶೇ.95ರಷ್ಟು ನಾಟಕಗಳಲ್ಲಿ ಸ್ತ್ರೀ ಪಾತ್ರವನ್ನು ಪುರುಷರೇ ನಿರ್ವಹಿಸುತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ಜರುಗಿದ ಒಂದು ಉತ್ತಮ ಉದಾಹರಣೆ.

ಇದನ್ನೂ ಓದಿಚಂದನವನದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಎಂ.ವಿ.ರಾಜಮ್ಮಇವರು ದೇಶದ ಮೊಟ್ಟ ಮೊದಲ ನಿರ್ಮಾಪಕಿ!

ನಟ ಸುಬ್ಬಯ್ಯನಾಯ್ಡು ಸುದೇಷ್ಣೆ ಪಾತ್ರದಲ್ಲಿ ನಟಿಸುವಾಗ ಆ ಊರಿನ ಶ್ರೀಮಂತ, ಗಣ್ಯನು ಸುದೇಷ್ಣೆ ಮೇಲೆ ಮೋಹಗೊಂಡು ಗಾಂಧರ್ವ ವಿವಾಹ ಮಾಡಿಕೊಳ್ಳಲು ಹಪಹಪಿಸಿದ್ದು! ಆ ನಂತರ ಶ್ರೀಮಂತನಿಗೆ  ತಿಳಿಯಿತು, ತಾನು ವರಿಸಲು ಇಷ್ಟಪಟ್ಟಿದ್ದು ಅವಳಲ್ಲ-ಅವನು. ಈ ಸತ್ಯ ತಿಳಿದಾಕ್ಷಣ ಎದ್ನೋ ಬಿದ್ನೋ ಎಂದು ಓಟಕಿತ್ತ ಘಟನೆ ಇವತ್ತಿಗೂ ಮರೆಯಲಾರದ ಹಾಸ್ಯ ಪ್ರಹಸನ.

ನಿರ್ಮಾಪಕ- ನಿರ್ದೇಶಕ ಮೊದಲ್ಗೊಂಡು ಇಡೀ ಚಿತ್ರತಂಡಕ್ಕೂ ಹಣಕೊಟ್ಟು ಬಯಾಸ್ಕೋಪ್ ನೋಡುತ್ತಿದ್ದ ಪ್ರೇಕ್ಷಕರಿಗೂ ನ್ಯಾಯ ದೊರಕುವಂತೆ ನಟಿಸುತ್ತಿದ್ದ ದಿಟ್ಟ ಕಲಾವಿದೆ. ಎಂಥದೇ ಸಂದರ್ಭದ ಯಾವುದೇ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ಸೈ- ಎನಿಸಿಕೊಳ್ಳುತ್ತಿದ್ದ ದಿಟ್ಟನಟಿ. ಕನ್ನಡ- ತೆಲುಗು ಸಿನಿಮಾಗಳಲ್ಲಿ ಜನಪ್ರಿಯತೆ ಶಿಖರವೇರಿದ ಲಕ್ಷ್ಮಿಬಾಯಿ, ಕಾಲಕ್ರಮೇಣ ಕನ್ನಡದ ಮೊಟ್ಟಮೊದಲ ವಾಕ್ಚಿತ್ರದ ಹೀರೋ ಸುಬ್ಬಯ್ಯನಾಯ್ಡುರನ್ನು ವಿವಾಹವಾಗಿ ನಾಟಕ-ಸಿನಿಮಾರಂಗದಲ್ಲಿ ಹೊಸಇತಿಹಾಸ ಬರೆದರು.

ಇದನ್ನೂ ಓದಿ:  ಕನ್ನಡದ ಪ್ರಪ್ರಥಮ ವಾಕ್ ಚಿತ್ರದ ಹೀರೋಯಿನ್  ತ್ರಿಪುರಾಂಭ… ಇವರ ಸಿನಿಮಾದಾಚೆಗಿನ ಬದುಕು ಹೇಗಿತ್ತು?

ಲಕ್ಷ್ಮೀಬಾಯಿ ನಟಿಸಿದ ಮೂಕಿ-ಟಾಕೀ ಚಿತ್ರಗಳು ಯಾವುವು ಎಂದರೆ, ಮೂಕೀ(ಸೈಲೆಂಟ್)ಫಿಲಂಸ್: ಡೊಮಿಂಗೊ, ಹಿಸ್‌ಲವ್‌ಅಫೇರ್, ಭೂತರಾಜ್ಯ, ರಾಜಾಸತ್ಯವ್ರತ, ನಳದಮಯಂತಿ, ಝಾನ್ಸಿರಾಣಿಲಕ್ಷ್ಮೀಬಾಯಿ, ದೇವದಾಸಿ, ಲವಕುಶ, ಸುಭದ್ರಕಲ್ಯಾಣ, ಮುಂತಾದವು.

ಟಾಕೀ(ವಾಕ್)ಚಿತ್ರಗಳು:ಹರಿಮಾಯ,ಸತಿಸುಲೋಚನ, ಸದಾರಮೆ, ವಸಂತಸೇನ, ಭಕ್ತಪ್ರಹ್ಲಾದ, ಜೀವನನಾಟಕ, ಸತ್ಯಹರಿಶ್ಚಂದ್ರ, ಹೇಮರೆಡ್ಡಿಮಲ್ಲಮ್ಮ, ಮಹಾತ್ಮ, ಕಬೀರ್, ಭಕ್ತರಾಮದಾಸ, ಗೋರಾಕುಂಬಾರ, ಶ್ರೀಕೃಷ್ಣಸುಧಾಮ, ಮುಟ್ಟಿದ್ದೆಲ್ಲಾಚಿನ್ನ, ಸಂಗೊಳ್ಳಿರಾಯಣ್ಣ, ಸರ್ವಮಂಗಳ, ಪಾಪಪುಣ್ಯ, ಮಾಡಿಮಡಿದವರು, ಚೋಮನದುಡಿ, ಮಾಯಾ ಬಜಾರ್[ತೆ], ಬರ್ತೃಹರಿ[ತ], ಲವಂಗಿ[ತ], ಸ್ವರ್ಗಸೀಮಾ[ತೆ], ತ್ಯಾಗಯ್ಯ[ತೆ], ಬ್ರಹ್ಮರಥಂ[ತೆ], ಗುಲೇಬಾಕಾವಲಿ (ತೆಲುಗು, ತಮಿಳು, ಮರಾಠಿ, ಹಿಂದಿ) ಇವರ ಅಭಿನಯದ ಸಿನಿಮಾಗಳು ಅಮೋಘ ಪ್ರದರ್ಶನ ಕಂಡವು.

ಇದನ್ನೂ ಓದಿಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ

ಮೂಕೀಟಾಕೀ ಯುಗದ ಹಿರಿಯನಟಿ ಲಕ್ಷ್ಮೀಬಾಯಿ ತಮ್ಮ ಇಳಿವಯಸ್ಸಲ್ಲೂ ನಟಿಸಿ ಶ್ರೇಷ್ಠಜೇಷ್ಠ ಅಭಿನೇತ್ರಿಯಾಗಿ 1981ರಲ್ಲಿ ವಿಧಿವಶರಾದರು.  ಇಂಥ ಮಹಾನ್ ಕಲಾವಿದೆಯ ಕಟ್ಟಕಡೆಯ ಫಿಲಂ ಚೋಮನದುಡಿ ರಾಷ್ಟ್ರಪ್ರಶಸ್ತಿ ಪಡೆಯಿತು.

 

admin
the authoradmin

Leave a Reply