ಮೈಸೂರು: ದಸರಾ ಅಂಗವಾಗಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಸೆ.22ರಿಂದ 30ರವರೆಗೆ ವಿವಿಧ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಜ್ಯ, ದೇಶದ ವಿವಿಧ ಕಲಾಪ್ರಕಾರಗಳ ರಸದೌತಣ ಕಲಾರಸಿಕರಿಗೆ ಸಿಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪಸಮಿತಿಯ ಉಪ ವಿಶೇಷಾಧಿಕಾರಿ ಎ.ದೇವರಾಜ್, ಈ ಬಾರಿಯ ದಸರಾ ಮಹೋತ್ಸವದಲ್ಲಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ವಿಭಿನ್ನ ಹಾಗೂ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ. ಹಲವು ಕಲಾ ಪ್ರಕಾರಗಳ ಕಲಾವಿದರ ನೈಪುಣ್ಯತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಸೆ.22ರಿಂದ 30ರವರೆಗೆ ವಿವಿಧ ಪ್ರದರ್ಶನಗಳನ್ನು ಸಿದ್ಧಾರ್ಥನಗರದ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮವು ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಸಹಕಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ತೊಗಲುಗೊಂಬೆ ಭಿತ್ತಿ ಚಿತ್ರಕಲಾ ಶಿಬಿರ ಮತ್ತು ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲಾ ಪ್ರದರ್ಶನವನ್ನು ಸೆ.22ರಂದು ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಸಂಜೆ 4 ಗಂಟೆಗೆ ಚಾಲನೆ ನೀಡಲಿದ್ದಾರೆ. ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲಾ, ಸಮಕಾಲೀನ ಚಿತ್ರಕಲಾ ಪ್ರದರ್ಶನ ಇರಲಿದೆ.
ರಾಜ್ಯದ ವಿವಿಧ ಭಾಗಗಳ ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರನ್ನು ಪ್ರೋತ್ಸಾಹಿಸಿ, ಸಾರ್ವಜನಿಕರಿಗೆ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯಮಟ್ಟದ ಕಲಾ ಪ್ರದರ್ಶನ ಆಯೋಜಿಸಲಾಗಿದೆ. ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಿದ್ದು, ಉತ್ತಮ ಕಲಾಕೃತಿಗಳನ್ನು ಆಯ್ಕೆ ಮಾಡಿ ಪ್ರದರ್ಶಿಸಲಾಗುವುದು. ಜತೆಗೆ ಬಹುಮಾನವನ್ನೂ ನೀಡಲಾಗುವುದು. ಸೆ.26ರಿಂದ 30ರವರೆಗೆ ಬೆಳಗ್ಗೆ 10.30ರಿಂದ ಸಂಜೆ 6.30ರವರೆಗೆ ಪ್ರದರ್ಶನವಿರಲಿದೆ. 26ರಂದು ಸಂಜೆ 4 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸುವರು. ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿದೆ.
ಭೋಪಾಲ್ನ ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ ಹಾಗೂ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ರಾಷ್ಟ್ರಮಟ್ಟದ ಕಲಾವಿದರು ರಚಿಸಿರುವ ಕರಕುಶಲ ಕಲಾಕೃತಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ಮಾರಾಟ ಮೇಳವನ್ನು ಸೆ.26ರಿಂದ 30ರವರೆಗೆ ಹಮ್ಮಿಕೊಳ್ಳಲಾಗಿದೆ. ಬುಟ್ಟಿ ನೇಯ್ಗೆ, ಲೆದರ್ ಕ್ರಾಫ್ಟ್, ವರ್ಲಿ ಚಿತ್ರಕಲೆ, ಸೆಣಬು ಕಲಾಕೃತಿಗಳು, ಢಾರಿ ಕಲೆ, ಚೆರಿಯಾಲ್ ಚಿತ್ರಕಲೆ, ಮುತ್ತಿನ ಕಲಾಕೃತಿಗಳು, ಡೋಕ್ರಾ ಕಲೆ, ಟೈ ಅಂಡ್ ಡೈ ಕಲೆ, ಟೆರಾಕೋಟ, ರೋಸ್ವುಡ್ ಇನ್ಲೇ, ಶ್ರೀಗಂಧದ ಕಲೆ, ಬಿದರಿಕಲೆ, ಚನ್ನಪಟ್ಟಣ ಆಟಿಕೆ, ಮೈಸೂರು ಸಾಂಪ್ರದಾಯಿಕ ಕಲಾಕೃತಿಗಳು, ಕಸೂತಿ ಕಲೆ, ಗಂಜಿಫಾ ಮೊದಲಾದ ಕಲಾಕೃತಿಗಳು ಇರಲಿವೆ.
ಕಲಾವಿದರು-ಕಲಾಸಕ್ತರ ನಡುವೆ ನೇರ ಸಂಪರ್ಕ ಕಲ್ಪಿಸಲು ಹಾಗೂ ಜನಸಾಮಾನ್ಯರು, ವಿದ್ಯಾರ್ಥಿಗಳು, ಅರಳುತ್ತಿರುವ ಕಲಾವಿದರ ಕಲಾಕೃತಿಗಳಿಗೆ ವೇದಿಕೆ ಒದಗಿಸಲು ಸೆ.28ರಂದು ಬೆಳಗ್ಗೆ 10ರಿಂದ ಸಂಜೆವರೆಗೆ ಕಲಾಜಾತ್ರೆ ಆಯೋಜಿಸಲಾಗಿದೆ. ಪ್ರದರ್ಶನದೊಂದಿಗೆ ಮಾರಾಟವೂ ನಡೆಯಲಿದೆ. ಒಟ್ಟು 80 ಮಳಿಗೆಗಳಿರಲಿದ್ದು, ಅರ್ಜಿ ಸಲ್ಲಿಸುವ ಕಲಾವಿದರಿಗೆ ಉಚಿತವಾಗಿ ಮಳಿಗೆ ನೀಡಲಾಗುವುದು. ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ.
ಶಾಲಾ ಮಕ್ಕಳಲ್ಲಿ ಅಡಗಿರುವ ಕಲಾ ಪ್ರತಿಭೆ ಉತ್ತೇಜಿಸಲು ಸೆ.26ರಂದು ಮಧ್ಯಾಹ್ನ 3ಕ್ಕೆ ಸ್ಥಳದಲ್ಲೇ ಚಿತ್ರ ಬಿಡಿಸುವ ಮತ್ತು ಮಣ್ಣಿನ ಕಲಾಕೃತಿ ರಚಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತ ಮಕ್ಕಳಿಗೆ ಸೆ.28ರಂದು ಬಹುಮಾನ ನೀಡಲಾಗುವುದು. ಮಕ್ಕಳಿಗೆ ವಿವಿಧ ಭಾಗಗಳ ಸಾಂಪ್ರದಾಯಿಕ ಕಸುಬುಗಳ ಪರಿಚಯ ಮಾಡಿಕೊಡಲು ಕುಂಬಾರಿಕೆ, ನೇಯ್ಗೆ ಮೊದಲಾದವುಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ವಿವಿಧ ಕಲಾಪ್ರಾಕಾರಗಳಲ್ಲಿ ಸಾಧನೆ ಮಾಡಿರುವ ಕಲಾವಿದರು, ವಿವಿಧ ಕ್ಷೇತ್ರಗಳ ವಿದ್ವಾಂಸರ ಕುರಿತು ಸಂಗ್ರಹಿಸಲಾದ ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನು ಸೆ.23ರಿಂದ 30ರವರೆಗೆ ನಿತ್ಯ ಮಧ್ಯಾಹ್ನ 2ರಿಂದ 4.30ರವರೆಗೆ ಹಮ್ಮಿಕೊಳ್ಳಲಾಗಿದೆ. ನಿತ್ಯ ಸಂಜೆ 4.30ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಸೆ.26ರಿಂದ 30ರವರೆಗೆ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕರಕುಶಲಕರ್ಮಿಗಳಿಂದ ಪ್ರಾತ್ಯಕ್ಷಿಕೆ ಇರಲಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಭಿತ್ತಿಶಿಲ್ಪ ಶಿಬಿರ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಸೆ.2ರಿಂದ 8ರವರೆಗೆ ನಡೆದಿದೆ. 2ನೇ ಹಂತದಲ್ಲಿ ಸೆ.22ರಿಂದ 28ರವರೆಗೆ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಹಿರಿಯ ಶಿಲ್ಪ ಕಲಾವಿದರನ್ನು ಅಕಾಡೆಮಿಯಿಂದ ಆಯ್ಕೆ ಮಾಡಿ ಕಳುಹಿಸಲಾಗಿದೆ.