ಮಡಿಕೇರಿ ದಸರಾ ಆರಂಭವಾಗುವುದು ಹೇಗೆ? ಇಲ್ಲಿನ ನಾಲ್ಕು ಶಕ್ತಿದೇವತೆಗಳೇ ದಸರಾದ ಸೂತ್ರಧಾರಿಗಳು!

ದಸರಾ ಆಚರಣೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಭಿನ್ನವಾಗಿದೆ. ಮೈಸೂರಿನಲ್ಲಿ ನಡೆಯುವ ಆಚರಣೆ ಒಂದು ರೀತಿಯದ್ದಾಗಿದ್ದರೆ, ಕೊಡಗಿನ ಮಡಿಕೇರಿಯಲ್ಲಿ ನಡೆಯುವ ಆಚರಣೆ ಮತ್ತೊಂದು ರೀತಿಯದ್ದಾಗಿದೆ. ತನ್ನದೇ ಆದ ಇತಿಹಾಸ ಹೊಂದಿರುವ ಮಡಿಕೇರಿ ದಸರಾದ ಸೂತ್ರಧಾರಿಗಳು ಕರಗ ಆಗಿರುವುದರಿಂದ ಕರಗ ಹೊರಡುವ ಮೂಲಕ ಮಡಿಕೇರಿ ದಸರಾಕ್ಕೆ ವಿಧ್ಯುಕ್ತ ಚಾಲನೆ ದೊರೆಯುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.
ಮಹಾಲಯ ಅಮಾವಾಸ್ಯೆ ಮಾರನೆಯ ದಿನದಿಂದ ನವರಾತ್ರಿ ಆರಂಭವಾಗುತ್ತಿದ್ದು, ಮೊದಲ ದಿನ (ಸೆ.22)ದಂದು ಮಡಿಕೇರಿ ನಗರದ ಸೋಮವಾರಪೇಟೆ ರಸ್ತೆಯಲ್ಲಿರುವ ಪಂಪಿನಕೆರೆಯಲ್ಲಿ ಸಂಜೆ ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ. ಶ್ರೀ ಕಂಚಿ ಕಾಮಾಕ್ಷಿಯಮ್ಮ. ಶ್ರೀ ದಂಡಿನ ಮಾರಿಯಮ್ಮ. ಶ್ರೀ ಕೋಟೆ ಮಾರಿಯಮ್ಮ ದೇವತೆಗಳ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ.
ಆ ನಂತರ ಹತ್ತು ದಿನಗಳ ಕಾಲ ಕರಗಳು ಮಡಿಕೇರಿ ನಗರ ಪ್ರದಕ್ಷಿಣೆ ಮಾಡಲಿದ್ದು ವಿಜಯದಶಮಿಯಂದು ಬನ್ನಿ ಕಡಿಯುವ ಮೂಲಕ ದಸರಾಕ್ಕೆ ತೆರೆಬೀಳಲಿದೆ. ಕರಗ ಹೊರಡುವ ಮೂಲಕ ಮಡಿಕೇರಿ ದಸರಾಕ್ಕೆ ಆರಂಭ ಸಿಗಲಿದ್ದು ಪ್ರತಿದಿನವೂ ನಗರದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮಡಿಕೇರಿಯಲ್ಲಿ ದಸರಾ ದಿನದಂದು ಜಗಮಗಿಸುವ ವಿದ್ಯುದ್ದೀಪಗಳ ನಡುವೆ ದಶಮಂಟಪಗಳ ಶೋಭಾಯಾತ್ರೆ ಪ್ರಮುಖವಾಗಿದ್ದರೆ, ಅದನ್ನು ಮುನ್ನಡೆಸುವುದು ನಾಲ್ಕು ಶಕ್ತಿ ದೇವತೆಗಳ ಕರಗಗಳಾಗಿವೆ. ಮಡಿಕೇರಿ ದಸರಾ ಆರಂಭಕ್ಕೂ ಈ ಕರಗಗಳೇ ಕಾರಣವಾಗಿವೆ.
ಮಡಿಕೇರಿ ನಗರದಲ್ಲಿ ಕರಗ ಆಚರಣೆ ಜಾರಿಗೆ ಬರಲು ಕೂಡ ಕಾರಣವಿದೆ. ಸುಮಾರು 196 ವರ್ಷಗಳ ಹಿಂದೆ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತಂತೆ. ಆ ಸಂದರ್ಭ ರೋಗ ಹರಡಲು ಕಾರಣ ಹುಡುಕಿಕೊಂಡು ಧಾರ್ಮಿಕ ಮುಖಂಡರು ದೇವರ ಮೊರೆ ಹೋದರು. ಆಗ ಮಹಾಮಾರಿ ರೋಗಕ್ಕೆ ದುಷ್ಟ ಶಕ್ತಿಗಳು ಕಾರಣವಾಗಿದೆ. ಇದರಿಂದ ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಿದರೆ ನಗರದಲ್ಲಿ ತಲೆದೋರಿರುವ ಸಾಂಕ್ರಾಮಿಕ ರೋಗ ನಿವಾರಣೆಯಾವುದಾಗಿ ತಿಳಿದು ಬಂತಂತೆ. ಅದರಂತೆ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಹೊರಡಿಸಿ ಪೂಜೆ ಸಲ್ಲಿಸುವ ಕಾರ್ಯ ಆರಂಭಿಸಲಾಯಿತು ಎನ್ನಲಾಗಿದೆ.
ಈ ಕರಗ ಹೊರಡಿಸುವ ಸಂದರ್ಭ ಪೌರಾಣಿಕ ಹಿನ್ನಲೆಯಲ್ಲಿ ಧಾರ್ಮಿಕ ಸಂಪ್ರದಾಯವನ್ನು ಕೂಡ ಆಚರಣೆಗೆ ತರಲಾಯಿತು. ಅದೇನೆಂದರೆ ಹಿಂದೆ ಪಾರ್ವತಿಯು ದುಷ್ಟ ರಾಕ್ಷಸರ ಸಂಹಾರಕ್ಕೆ ಹೊರಡುವ ಮುನ್ನ ಅಣ್ಣ ಮಹಾವಿಷ್ಣುವಿನ ಬಳಿಗೆ ತೆರಳಿದಳಂತೆ ಆಗ ವಿಷ್ಣು ತನ್ನ ಅಸ್ತ್ರಗಳಾದ ಶಂಖ, ಚಕ್ರ, ಗಧೆ, ಪದ್ಮ ಸೇರಿದಂತೆ ಆಯುಧಗಳನ್ನು ಆಕೆಗೆ ದಯಪಾಲಿಸಿದನಂತೆ.
ಆ ನಂತರ ಪಾರ್ವತಿ ವಿವಿಧ ದೇವಿಯರ ಅವತಾರಗಳಲ್ಲಿ ತೆರಳಿ ದುಷ್ಟ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿಯೇ ಪಾರ್ವತಿ ಅವತಾರದ ನಾಲ್ಕು ಶಕ್ತಿದೇವತೆಗಳು ಊರೊಳಗೆ ಅಂದರೆ ಮಹಾವಿಷ್ಣುವಿನ ಸ್ಥಾನಕ್ಕೆ ಬರುವ ಸಂಪ್ರದಾಯ ಜಾರಿಗೆ ತರಲಾಯಿತು. ಆದರೆ ಆ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣುವಿನ ದೇವಾಲಯ ಇಲ್ಲದೆ ಇದ್ದುದರಿಂದಾಗಿ ನಗರದ ದೊಡ್ಡಪೇಟೆಯಲ್ಲಿ ಪೂಜಾ ಮಂದಿರವನ್ನು ನಿರ್ಮಿಸಿ ಅಲ್ಲಿ ರಾಮನ ಚಿತ್ರಪಟವನ್ನಿರಿಸಿ ಪೂಜಿಸಲಾಯಿತು.
ನವರಾತ್ರಿ ಮೊದಲ ದಿನ ಮಡಿಕೇರಿಯ ಪಂಪಿನಕೆರೆ ಬಳಿ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊರಟ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ಕರಗಗಳು ದೊಡ್ಡಪೇಟೆಯ ಶ್ರೀರಾಮಮಂದಿರಕ್ಕೆ ತೆರಳಿ ಅಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ನಂತರ ನಗರ ಪ್ರದಕ್ಷಿಣೆ ಹೊರಡುವ ಧಾರ್ಮಿಕ ಸಂಪ್ರದಾಯವನ್ನು ರೂಢಿಗೆ ತರಲಾಯಿತು.
ಅಂದಿನಿಂದ ಇಂದಿನವರೆಗೂ ಅದೇ ಸಂಪ್ರದಾಯ ನಡೆದುಕೊಂಡು ಬರುತ್ತಿದೆ. ನವರಾತ್ರಿಯ ಮೊದಲ ದಿನ ಕರಗಪೂಜೆ ನಡೆಯುತ್ತದೆ. ಆ ನಂತರ ಕರಗ ವಿದ್ಯುಕ್ತವಾಗಿ ಹೊರಡುತ್ತದೆ. ಇದು ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆಯೂ ಹೌದು. ಆ ನಂತರ ಒಂಬತ್ತು ದಿನಗಳ ಕಾಲ ಕರಗವು ನಗರ ಪ್ರದಕ್ಷಿಣೆ ಹಾಕಿ ಹರಸುತ್ತದೆ.
ಈ ಸಂದರ್ಭ ನಗರದ ಎಲ್ಲಾ ಜನರು ಜಾತಿ ಬೇಧ ಮರೆತು ಕರಗ ಬರುವ ದಾರಿಯನ್ನು ಗುಡಿಸಿ, ಸಾರಿಸಿ ರಂಗೋಲಿಯಿಟ್ಟು ಬರಮಾಡಿಕೊಳ್ಳುತ್ತಾರೆ. ಅಲ್ಲದೆ ಮಂಗಳಾರತಿ ಎತ್ತಿ ಪೂಜೆ ಸಲ್ಲಿಸುತ್ತಾರೆ. ದಸರಾ ದಿನದಂದು ಧಾರ್ಮಿಕ ಕೈಂಕರ್ಯಗಳೊಂದಿಗೆ ದಶಮಂಟಪಗಳಿಗಿಂ ಮುಂದೆ ಮೆರವಣಿಗೆಯಲ್ಲಿ ಸಾಗಿ ಮಡಿಕೇರಿ ನಗರದ ಗದ್ದಿಗೆ ಬಳಿಯಿ ಬನ್ನಿಕಡಿಯುವುದರೊಂದಿಗೆ ದಸರಾ ಸಂಭ್ರಮಕ್ಕೆ ತೆರೆ ಬೀಳುತ್ತದೆ.
ಇಲ್ಲಿನ ಕರಗೋತ್ಸವದ ವಿಶೇಷವೆಂದರೆ 2ನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟೀಷ್ ಸರ್ಕಾರ ಎಲ್ಲ್ಲ ಉತ್ಸವಗಳನ್ನು ಬಹಿಷ್ಕರಿಸಿದಾಗಲೂ ಮಡಿಕೇರಿ ದಸರಾ ಪಲ್ಲಕ್ಕಿಗಳು ಮತ್ತು ಕರಗೋತ್ಸವ ಮಾತ್ರ ನಿಲ್ಲಲಿಲ್ಲ. 1967ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲೂ ಕರಗಗಳನ್ನು ಹೊರಡಿಸುವುದನ್ನು ಸ್ಥಗಿತಗೊಳಿಸಲಿಲ್ಲ. ಅಂದಿನಿಂದ ಇಂದಿನವರೆಗೂ ಕರಗೋತ್ಸವ ನಿರಂತರವಾಗಿ ನಡೆಯುತ್ತದೆ.
ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ
B M Lavakumar