ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗಾಗಿ ಆಗ್ರಹಿಸಿ ಅಹೋರಾತ್ರಿ ಪ್ರತಿಭಟನೆ
ಇಸ್ತ್ರಿಪೆಟ್ಟಿಗೆ, ಬಟ್ಟೆ ಶುಚಿಗೊಳಿಸುವ ಪರಿಕರಗಳ ಪ್ರದರ್ಶನ

ಬೆಂಗಳೂರು: ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಸೇರ್ಪಡೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ, ಉತ್ತರ ಕರ್ನಾಟಕ ಮಡಿವಾಳರ ಸಂಘದಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಲಾಗಿದೆ.
ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಸಮುದಾಯದ ಕುಲಕಸುಬು ಇಸ್ತ್ರಿ ಪೆಟ್ಟಿಗೆ, ಬೆಟ್ಟೆ ಶುಚಿಗೊಳಿಸುವ ಪರಿಕರಗಳೊಂದಿಗೆ ಬೃಹತ್ ಪ್ರತಿಭಟನೆ ನಡೆಸಿದರು. ಮಾಚಿದೇವ ಯೋಗಾನಂದಪುರಿ ಮಹಾ ಸ್ವಾಮೀಜಿ ಆಶೀರ್ವಾದದೊಂದಿಗೆ ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿವೆ.

ಎಂ.ಕೆ.ಹನುಮಂತಪ್ಪ ಮಾತನಾಡಿ, ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಕೂಗು ಹಲವಾರು ದಶಕಗಳಿಂದ ಇದೆ. ನಮಗೆ ಸಿಗಬೇಕಾದ ಸ್ಥಾನಮಾನ, ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಮಾಡಿಲ್ಲ. ಪರಿಶಿಷ್ಟರ ಹಕ್ಕಿನಿಂದ ನಾವು ವಂಚಿತರಾಗಿದ್ದು, ಬಲಿಷ್ಠ ಜಾತಿಗಳು ನಮ್ಮ ಸ್ಥಾನವನ್ನು ಆಕ್ರಮಿಸಿಕೊಂಡು ನಮ್ಮ ಸಮಾಜವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನಮ್ಮ ಸಮುದಾಯದಿಂದ ಶಾಸಕರು, ಸಂಸದರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಸಮಾಜದವರು ಮಾಡದ ಮಲಿನ, ಮಲಮೂತ್ರ, ಮುಟ್ಟಿನಿಂದ ರಕ್ತಸ್ರಾವ ಮತ್ತು ಕೀವು ಮುಂತಾದ ಬಟ್ಟೆಯನ್ನು ಶುದ್ಧ ಮಾಡಲು ನಮ್ಮ ಜನಾಂಗವನ್ನು ಬಳಿಸಿಕೊಳ್ಳಲಾಗುತ್ತದೆ. ರೋಗಿಗಳ ಬಟ್ಟೆಗಳನ್ನು, ಮರಣದ ಮನೆಗಳ ಶುದ್ದಿ ಕಾರ್ಯಗಳಲ್ಲಿ ನಮ್ಮ ಜನಾಂಗ ತೊಡಗಿಕೊಂಡಿದೆ. ನಮ್ಮ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಮೀನಾಮೇಷ ಮಾಡುತ್ತಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಆರೋಪಿಸಿದರು.

ಈಗಾಗಲೇ ದೇಶದ 18 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಮ್ಮ ಜನಾಂಗವನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಲಾಗಿದೆ. ಈ ರಾಜ್ಯಗಳಲ್ಲಿ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ನಮ್ಮ ಜನಾಂಗ ಮುಂದುವರೆದಿದೆ. ಆದರೆ ಕರ್ನಾಟಕದಲ್ಲಿ ನಮ್ಮನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ನಮ್ಮ ರಾಜ್ಯದಲ್ಲಿ ನಮಗೆ ಯಾವುದೇ ರೀತಿಯ ಮಾನ್ಯತೆಯನ್ನು ನೀಡಿಲ್ಲ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಮ್ಮ ಒತ್ತಡಕ್ಕೆ ಮಣಿದು ಕುಲಶಾಸ್ತ್ರ ಅಧ್ಯಯನ ಮತ್ತು ಸಂಶೋಧನೆ ಮಾಡಿ ವರದಿ ನೀಡಲು ಮೈಸೂರು ವಿ.ವಿ ಪ್ರೊ. ಡಾ. ಅನ್ನಪೂರ್ಣ ಅವರನ್ನು ನೇಮಿಸಿದ್ದರು. ಆದರೆ ಈ ವರದಿಯನ್ನು ಇಲ್ಲಿಯವರೆಗೆ ಬಂದಿರುವ ಸರ್ಕಾರಗಳು ಪರಿಗಣಿಸಿಲ್ಲ. 2022ರಲ್ಲಿ ಸಚಿವರಾಗಿದ್ದ ಕೋಟಾ ಶ್ರೀನಿವಾಸ ಪೂಜರಿ ಅವರು ಈ ವರದಿಯನ್ನು ವಿಧಾನ ಸಭೆಯಲ್ಲಿ ಮಂಡಿಸಬೇಕು ಎನ್ನುವಷ್ಟರಲ್ಲಿ ಚುನಾವಣೆ ಘೋಷಣೆಯಾಯಿತು. ಕುಲಶಾಸ್ತ್ರ ಅಧ್ಯಯನ ವರದಿ ಕಡತವು ಸಮಾಜ ಕಲ್ಯಾಣ ಇಲಾಖೆಯಲ್ಲಿಯೇ ಇಂದಿಗೂ ಕೊಳೆಯುತ್ತಿದೆ ಎಂದರು.

ಸಂಘದ ಅಧ್ಯಕ್ಷ ಎಂ.ಕೆ.ಹನುಮಂತಪ್ಪ, ಮಡಿವಾಳ ಸಮಾಜದ ಮುಖಂಡರಾದ ದೀಪಕ್ ವಿ, ದುರ್ಗೇಶ್ ಜಿ.ಮಡಿವಾಳ್, ಎಂ.ಚಂದ್ರಕಾಂತ್, ಕೆ.ಮಲ್ಲಯ್ಯ, ರಾಜು ತಲ್ಲೂರು, ಡಾ.ರವಿಕುಮಾರ್, ಹೆಚ್.ಎಸ್.ವೆಂಕಟೇಶ್, ಪಿ.ರಂಗಸಾಮಯ್ಯ, ಸಂಗಮೇಶ್ ಸೇರಿ ಸಹಸ್ರಾರು ಮಡಿವಾಳ ಸಮಾಜದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







