ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಕಾರ್ಯಾಗಾರದಲ್ಲಿ ಪ್ರಾಂಶುಪಾಲ ಪ್ರೊ. ವಿ. ಷಣ್ಮುಗಂ ಹೇಳಿದ್ದೇನು?

ಮೈಸೂರು(ಹೆಚ್.ಪಿ.ನವೀನ್ ಕುಮಾರ್) : ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ರೂಸಾ 2.0 ಯೋಜನೆಯ ಅಡಿಯಲ್ಲಿ “ವೃತ್ತಿ ಅವಕಾಶಗಳು ಮತ್ತು ಉದ್ಯೋಗಾರ್ಹತಾ ಕೌಶಲ್ಯಗಳು” ವಿಷಯ ಕುರಿತು ಕಾಲೇಜಿನ ಜ್ಯೂನಿಯರ್ ಬಿ ಎ ಹಾಲ್ ನಲ್ಲಿ ಕಾರ್ಯಾಗಾರ ನಡೆಯಿತು.
ಮಹಾರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಷಣ್ಮುಗಂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭಾಷೆಯ ಮೇಲೆ ದೃಢವಾದ ಹಿಡಿತ ಮತ್ತು ಕೌಶಲ್ಯಾಭಿವೃದ್ಧಿ ವಿದ್ಯಾರ್ಥಿಗಳ ವೃತ್ತಿಜೀವನದಲ್ಲಿ ಯಶಸ್ಸಿನ ಪ್ರಮುಖ ಅಂಶಗಳಾಗಿವೆ. ಪತ್ರಿಕೋದ್ಯಮವು ಸಮಾಜದ ದಿಕ್ಕನ್ನು ರೂಪಿಸುವ ಶಕ್ತಿಯುತ ಮಾಧ್ಯಮವಾಗಿದ್ದು, ಉತ್ತಮ ಪತ್ರಿಕೆ ಜನಮನವನ್ನು ಸೆಳೆಯುವ ಮೂಲಕ ಸಮಾಜವನ್ನು ಸಕಾರಾತ್ಮಕವಾಗಿ ರೂಪಿಸುತ್ತದೆ. ಸುಳ್ಳು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ನೀಡುವ ಪತ್ರಿಕೆ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ಜವಾಬ್ದಾರಿಯುತ ಪತ್ರಿಕೋದ್ಯಮವು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಂವಹನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕ. ಅದು ವ್ಯಕ್ತಿತ್ವ ವಿಕಾಸಕ್ಕೂ ದಾರಿಯಾಗುತ್ತದೆ. ವೃತ್ತಿ ಕೌಶಲಗಳನ್ನು ಓದಿನ ಹಂತದಲ್ಲೇ ರಗತ ಮಾಡಿಕೊಳ್ಳಬೇಕು. ಪತ್ರಿಕೋದ್ಯಮ ಸಂವಿಧಾನದ ನಾಲ್ಕನೇ ಅಂಗವಾಗಿದ್ದು, ಜವಾಬ್ದಾರಿಯುತ ಪತ್ರಕರ್ತರಗಾಲು ವಿದ್ಯಾರ್ಥಿಗಳು ಮುಂದಡಿ ಇಡಬೇಕು ಎಂದು ಅವರು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯೂ ಆದ ವಿಶ್ವವಿದ್ಯಾಲಯದ ಐಕ್ಯೂಎಸಿ ಸಂಯೋಜಕ ಡಾ.ಜೆ.ಲೋಹಿತ್, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭಾಷಾ ಪ್ರಾವೀಣ್ಯತೆ ಮತ್ತು ಪರಿಣಾಮಕಾರಿ ಸಂವಹನ ಕೌಶಲ್ಯಗಳ ಅಗತ್ಯತೆಯನ್ನು ವಿವರಿಸಿದರು.
ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ.ಜಡಿಯಪ್ಪ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಲಭ್ಯವಿರುವ ವಿವಿಧ ಉದ್ಯೋಗಾವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ವೃತ್ತಿಜೀವನ ನಿರ್ಮಿಸಿಕೊಳ್ಳಲು ಸಾಧ್ಯವೆಂದು ಪ್ರೇರೇಪಿಸಿದರು.
ಕಾರ್ಯಾಗಾರದಲ್ಲಿ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಡಾ. ಗೋಪಾಲ, ಡಾ. ಶ್ವೇತಾ ಎಂ. ಹನ್ಸ್, ಕೇಶವಮೂರ್ತಿ, ಡಾ.ಎನ್ ನವೀನ್ ಇತರರು ಇದ್ದರು. ತತ್ವಶಾಸ್ತ್ರ ವಿಭಾಗದ ಅಧ್ಯಾಪಕ ಡಾ. ಕೆ.ಎನ್.ಬಸವರಾಜು, ಸಂವಿಧಾನ ಪೀಠಿಕೆ ಬೋಧಿಸಿದರು. ಯೋಗಶ್ರೀ ಮತ್ತು ಚಂದ್ರಕಲಾ ಪ್ರಾರ್ಥಿಸಿದರು, ಮಹದೇವ ಪ್ರಸಾದ್ ಸ್ವಾಗತಿಸಿದರು, ನಂದೀಶ ವಂದಿಸಿದರು ಹಾಗೂ ಕೀರ್ತನಾ ಎಂ ಕೆ ಮತ್ತು ದೀಕ್ಷಾ ಪಿ ನಿರೂಪಿಸಿದರು.







