ArticlesLatest

ಶಿವಾರಾಧನೆಯ ಮಹಾಶಿವರಾತ್ರಿ… ಪುರಾಣ ಕಥೆಗಳು ತೆರೆದಿಡುವ ಸಂಗತಿಗಳೇನು? ಶಿವಕ್ಷೇತ್ರದ ಮಹಿಮೆಗಳೇನು?

ಮಹಾಶಿವರಾತ್ರಿಗೆ ಶಿವಭಕ್ತರು ಅಣಿಯಾಗುತ್ತಿದ್ದಾರೆ.. ಶಿವದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ, ಜಾಗರಣೆ ಪ್ರಾರ್ಥನೆ ಹೀಗೆ ವಿವಿಧ ಕಾರ್ಯಕ್ರಮಗಳು  ನಡೆಯಲಿದೆ.. ಮಹಾಶಿವರಾತ್ರಿ ಕುರಿತಂತೆ ಶಿವನ ಬಗ್ಗೆ ನಮಗೆ ಗೊತ್ತಿಲ್ಲದ ಅದೆಷ್ಟೋ ಸಂಗತಿಗಳಿವೆ.. ಅದನ್ನು ನಮ್ಮ ಮುಂದೆ ತೆರೆದಿಡುವ ಪ್ರಯತ್ನವನ್ನು ಹಿರಿಯ ಸಾಹಿತಿ ಮತ್ತು ಪತ್ರಕರ್ತರೂ ಆಗಿರುವ ಬನ್ನೂರು ಕೆ. ರಾಜು ಅವರು ಮಾಡಿದ್ದಾರೆ… ತಪ್ಪದೆ ಓದಿ ಅಭಿಪ್ರಾಯ ತಿಳಿಸಿ..

ಅವರು ಹಿಂದುಗಳೇ ಆಗಿರಲಿ, ಮುಸಲ್ಮಾನರೇ ಆಗಿರಲಿ, ಕ್ರಿಶ್ಚಿಯನ್ನರೇ ಆಗಿರಲಿ, ಜೈನರೇ ಆಗಿರಲಿ, ಒಟ್ಟಿನಲ್ಲಿ ಯಾರೇ ಆಗಿರಲಿ ನಮ್ಮ ಭಾರತೀಯರಿಗೆ ಹಬ್ಬಗಳೆಂದರೆ ಅಬ್ಬಬ್ಬಾ ಎನ್ನುವಷ್ಟು ಖುಷಿ.  ಅದಕ್ಕೆ ತಕ್ಕ ಹಾಗೆ ನಮ್ಮಲ್ಲಿ ಸಾಲು ಸಾಲು ಹಬ್ಬಗಳುಂಟು.  ಅದರಲ್ಲೂ ಹಿಂದು ಧರ್ಮೀಯರಿಗೆ ಹಬ್ಬಗಳು ತುಸು ಹೆಚ್ಚೇ ಎನ್ನಬಹುದು.  ಅವುಗಳಲ್ಲಿ ಶಾಲಿವಾಹನಶಕೆ ಮಾಘ ಮಾಸ ಅಥವಾ ವಿಕ್ರಮ ಸಂವತ್ಸರದ ಫಾಲ್ಗುಣ ಮಾಸದ ಕೃಷ್ಣಪಕ್ಷ ಚತುರ್ದಶಿ ದಿನದಂದು ಬರುವ ಶಿವನ ಆರಾಧನೆಯ ಮಹಾಶಿವರಾತ್ರಿ ಅತ್ಯಂತ ವಿಶೇಷವಾದ ಹಬ್ಬವಾಗಿದೆ.  ಅಂದು ಶಿವಭಕ್ತರ ಸಂಭ್ರಮಕ್ಕೆಣೆಯೇ ಇಲ್ಲ.

ಮಾಘ ಕೃಷ್ಣ ಚತುರ್ದಶ್ಯಾಂ ಆದಿದೇವೋ ಮಹಾನಿಶಿ|

ಶಿವಲಿಂಗತಯೋದ್ಭೂತಃ ಕೋಟಿಸೂರ್ಯ ಸಮಪ್ರಭಃ||

ತತ್ಕಾಲ ವ್ಯಾಪಿನೀಗ್ರಾಹ್ಯಾ ಶಿವರಾತ್ರಿವ್ರತೇತಿಥೀಃ|

ಶಿವ ಶಿವ ಎಂದರೆ ಭಯವಿಲ್ಲ ಶಿವನಾಮಕೆ ಸಾಟಿ ಬೇರಿಲ್ಲ ಎಂದು ಹಾಡುತ್ತಾ ಶಿವನೆ ನಿನ್ನ ನೆನೆಯಲೆನ್ನ ಜನ್ಮ ಪಾವನ ಎನ್ನುತ್ತಾ ಜಗದೊಳು ಎಲ್ಲಾ ಶಿವಮಯವು ಎಂದು ಹೇಳುತ್ತಾ ಶರಣು ಶಂಕರ ಶಂಭೋ, ಓಂಕಾರನಾದರೂಪ ಮೊರೆಯ ಕೇಳಿ ಪೊರೆಯೋ ಪರಮೇಶ್ವರ ಎಂದು ಪ್ರಾರ್ಥಿಸುತ್ತಾ ಶಿವಪೂಜೆ ಮಾಡುವ ಮಂದಿ ಶಿವಧ್ಯಾನಾಮೃತದಲ್ಲಿ ಮುಳುಗಿ ಹೋಗುವುದು ಮಹಾಶಿವರಾತ್ರಿಯ ವೈಶಿಷ್ಟ್ಯ.  ಜಗತ್ತಿನ ಎಲ್ಲಾ ಶಿವಾಲಯಗಳೂ ಅಂದು ಜಗಮಗಿಸುತ್ತವೆ.

ಮಹಾಶಿವರಾತ್ರಿಗೆ ಸಂಬಂಧಿಸಿದಂತೆ ಬಹಳಷ್ಟು ಪುರಾಣ ಕಥೆಗಳುಂಟು.  ಒಂದು ಕಥೆಯ ಪ್ರಕಾರ ಶಿವ-ಪಾರ್ವತಿಯರು ವಿವಾಹವಾದ ಶುಭದಿನವೇ ಮಹಾಶಿವರಾತ್ರಿ.  ಮತ್ತೊಂದು ಕಥೆಯ ಪ್ರಕಾರ ಶಿವನು ತಾಂಡವನೃತ್ಯ ಮಾಡಿದ ದಿನವೇ ಮಹಾಶಿವರಾತ್ರಿ.  ಇನ್ನೊಂದು ಕಥೆಯ ಪ್ರಕಾರ ಪ್ರಳಯದಿಂದ ಇಡೀ ಪ್ರಪಂಚವೇ ನಾಶವಾಗುತ್ತಿದ್ದಾಗ ಪಾರ್ವತಿಯು ಅಂತರಿಕ್ಷದಲ್ಲಿ ಜೀವಕಣಗಳನ್ನು ಉಳಿಸುವುದಕ್ಕಾಗಿ ಶಿವನಲ್ಲಿ ಮೊರೆ ಹೊಕ್ಕು ಅಹೋರಾತ್ರಿ ಪ್ರಾರ್ಥಿಸಿದಳಂತೆ, ಹೀಗೆ ಪಾರ್ವತಿಯು ಶಿವನಲ್ಲಿ ಪ್ರಾರ್ಥಿಸಿದ ಆ ರಾತ್ರಿಯೇ ಮಹಾಶಿವರಾತ್ರಿ.

ಇದು ಶಿವನಿಗೆ ಅತ್ಯಂತ ಪ್ರೀತಿ ಪಾತ್ರವಾದ ದಿನವಂತೆ.  ಮಗದೊಂದು ಕಥೆಯ ಪ್ರಕಾರ ಶಿವನು ತ್ರಿಲೋಕ ಸಂಚಾರಿ ಮತ್ತು ಬ್ರಹ್ಮಸ್ವರೂಪಿ ಎಂದು ಜಗತ್ತಿಗೆ ತೋರಿಸಲು ಪ್ರಪ್ರಥಮವಾಗಿ ಭೂಮಿಯಿಂದ ಆಕಾಶದೆತ್ತರಕೆ ಲಿಂಗರೂಪದಲ್ಲಿ ಜ್ಯೋತಿಯಾಗಿ ನಿಂತಂತಹ ಮಹಾದಿನವೇ ಮಹಾಶಿವರಾತ್ರಿ.  ಹೀಗೆ ಮಹಾಶಿವರಾತ್ರಿ ಕುರಿತು ಅನೇಕ ಕಥೆಗಳಿದ್ದರೂ ಆಚರಣೆ ಮಾತ್ರ ಒಂದೇ.  ಮಹಾಶಿವರಾತ್ರಿಯದು ಐದು ವಿಧ.  ಒಂದು ನಿತ್ಯ ಶಿವರಾತ್ರಿ, ಎರಡು ಪಕ್ಷ ಶಿವರಾತ್ರಿ, ಮೂರು ಮಾಸಶಿವರಾತ್ರಿ, ನಾಲ್ಕು ಯೋಗ ಶಿವರಾತ್ರಿ, ಐದು ಮಹಾಶಿವರಾತ್ರಿ.

ಇಡೀ ದಿನ ಉಪವಾಸವಿದ್ದು ಇಡೀ ರಾತ್ರಿ ಜಾಗರಣೆ ಮಾಡಿ ಶಿವಪೂಜೆ ಮಾಡುವ ಮಹಾಶಿವರಾತ್ರಿ ಹಬ್ಬದ ಪರಿಯೇ ಒಂದು ಅದ್ಭುತ.  ವಾಸ್ತವವಾಗಿ ಶಿವನ ಪರಿಕಲ್ಪನೆಯೇ ಒಂದು ಮಹಾ ವಿಸ್ಮಯ! ಮಹಾಶಿವರಾತ್ರಿ ಪೂಜೆಗೆ ಮಂಟಪ ನಿರ್ಮಿಸಬೇಕಿಲ್ಲ.  ಅದ್ದೂರಿ ಮೆರವಣಿಗೆಯೂ ಆಗಬೇಕಿಲ್ಲ.  ಒಂದು ತಂಬಿಗೆ ಶುದ್ಧವಾದ ನೀರು, ಒಂದಷ್ಟು ಬಿಲ್ವಪತ್ರೆ ಸಾಕು ಶಿವಪೂಜೆಗೆ.  ಉಪವಾಸ ಮತ್ತು ಜಾಗರಣೆ ಇದ್ದರಾಯಿತು ಶಿವಸಂತೃಪ್ತ.  ಇಲ್ಲಿ ಮೂರ್ತಿ ರೂಪದ ಶಿವನಿಗಿಂತ ಲಿಂಗರೂಪಿ ಶಿವನಿಗೇ ಹೆಚ್ಚು ಪ್ರಾಶಸ್ತ್ಯ. ಶಿವಲಿಂಗ ಎಂಬುದು ಅವ್ಯಕ್ತ ತತ್ವಗಳ ಸಂಕೇತ.  ಸಾಕಾರದಿಂದ ನಿರಾಕಾರದತ್ತ ಸಾಗಲು ಸಾಧನವೇ ಈ ಶಿವಲಿಂಗ.

ವಿಶ್ವವೆಲ್ಲವೂ ಒಂದೇ ಎಂದು ಜಗದಗಲ ಸಾರುವುದೇ ಲಿಂಗಮಾರ್ಗ.  ‘ಸರ್ವಂ ಶಿವಲಿಂಗಮಯಂ’ ಇದನ್ನೇ ನಾವು ಬ್ರಹ್ಮಾಂಡವೆನ್ನುವುದು.  ಶಿವಲಿಂಗದಲ್ಲಿ ಎರಡು ವಿಧ.   ಒಂದು ಸ್ವಯಂ ಭೂಲಿಂಗ.  ಮತ್ತೊಂದು ಮಾನವನಿರ್ಮಿತಲಿಂಗ.  ಸ್ವಯಂ ಭೂಲಿಂಗ ಪ್ರಕೃತಿಯಲ್ಲಿ ಸಹಜವಾಗಿ ಕಾಣಿಸಿಕೊಳ್ಳುತ್ತದೆ.  ಉದಾಹರಣೆ ಅಮರನಾಥ ಗುಹೆಯಲ್ಲಿರುವ ಹಿಮಲಿಂಗ.  ಇನ್ನು ಮಾನವನಿರ್ಮಿತ ಬಗೆ ಬಗೆಯಶಿವಲಿಂಗಗಳು ಎಲ್ಲರಿಗೂ ತಿಳಿದದ್ದೇ.  ತಮಿಳುನಾಡಿನ ಚಿದಂಬರದಲ್ಲಿ ಗಾಳಿಯ ರೂಪದಲ್ಲೂ ಶಿವಲಿಂಗವನ್ನು ಕಾಣಲಾಗುತ್ತದೆ.  ಶಿವಲಿಂಗವನ್ನು ಪೂಜಿಸುವುದೆಂದರೆ ಸೃಷ್ಟಿಯನ್ನೇ ಪೂಜಿಸಿದಂತೆ! ಪ್ರಕೃತಿಯೇ ಪರಮೇಶ್ವರನಾಗಿರುವ ಇಂಥ ಅದಮ್ಯ ಚೇತನ ಶಿವನನ್ನು ಬಸವಣ್ಣನವರು ಇಷ್ಟಲಿಂಗ ರೂಪದಲ್ಲಿ ಕಾಣುವ ಬಗೆಯಿದು-

ಜಗದಗಲ, ಮುಗಿಲಗಲ, ಮಿಗೆಯಗಲ ನಿಮ್ಮಗಲ

ಪಾತಾಳದಿಂದಿತ್ತಣ ನಿಮ್ಮ ಸಿರಿಚರಣ

ಬ್ರಹ್ಮಾಂಡದಿಂದತ್ತಣ ನಿಮ್ಮ ಸಿರಿಮುಕುಟ

ಅಗಮ್ಯ, ಅಗೋಚರ, ಅಪ್ರಮಾಣ ಲಿಂಗವೇ

ನೀವೆನ್ನ ಕರಸ್ಥಲಕ್ಕೆ ಬಂದು ನೆಲಸಿಕುಲಕಾಡಿರಯ್ಯಾ –ಕೂಡಲಸಂಗಮ

ಶಿವ ಮತ್ತು ಶಿವರಾತ್ರಿಯ ಸುತ್ತ ಬೇಕಾದಷ್ಟು ದಂತಕಥೆಗಳು, ಪುರಾಣ ಕಥೆಗಳು, ಜನಪದ ಕಥಾನಕಗಳಿದ್ದರೂ ಕೂಡ ಮೌಢ್ಯತೆಯನ್ನು ದೂರವಿರಿಸಿ, ಪುರಾಣದ ಹೊದಿಕೆಯನ್ನು ಬದಿಗೆ ಸರಿಸಿ, ದೈವತ್ವದ ಕಲ್ಪನೆಯಲ್ಲಷ್ಟೇ ಉಳಿದುಕೊಳ್ಳದೆ ಅದರಾಚೆಗೆ ಬಂದು ವೈಚಾರಿಕ ಪ್ರಜ್ಞೆಯಿಂದ ಮಹಾಶಿವನನ್ನು ಮತ್ತು ಮಹಾಶಿವರಾತ್ರಿಯನ್ನು ನೋಡಿದಲ್ಲಿ ಭಕ್ತಿಯ ಪರಾಕಾಷ್ಟೆಯ ಪರದೆಯೊಳಗೇ ಉಳಿದು ಬಿಟ್ಟಿರುವ ಮಹಾಶಿವನ ಮಹಾವೈಚಾರಿಕ ಪ್ರಭೆಯ ವಾಸ್ತವಗಳ ಮಹಾದರ್ಶನವಾಗುತ್ತದೆ.

ಮಹಾಶಿವರಾತ್ರಿ ಮಹಾಯೋಗಿಗಳ ದಿನ.  ಶಿವನೆಂದರೆ ಬ್ರಹ್ಮಾಂಡ ನಾಯಕ.  ಪ್ರಕೃತಿಯ ಪ್ರತಿರೂಪಕ.  ವಶೀಆದವನು ಯಾರೋ ಅವನೇ ಶಿವ.  ವಶೀ ಅಂದರೆ ತನ್ನೆಲ್ಲ ಇಂದ್ರಿಯಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವವನು.  ಪ್ರತಿಯೊಬ್ಬರೊಳಗೂ ಶಿವನುಂಟು.  ಶಿವಚೇತನವುಂಟು.  ಇದೊಂದು ಅಗಾಧ ಚೇತನಶಕ್ತಿ.  ಮನುಷ್ಯರೊಳಗೆ ಸುಪ್ತವಾಗಿ ಅಡಗಿರುವ ಇಂಥ ಮಹಾಚೇತನವನ್ನು ವರುಷಕ್ಕೊಮ್ಮೆ ಜಾಗೃತಿಗೊಳಿಸುವುದಕ್ಕಾಗಿ ತನ್ನೊಳಗಿರುವ ಪ್ರೌಢಪ್ರಜ್ಞೆಯನ್ನು ವರುಷಕ್ಕೊಮ್ಮೆಯಾದರೂ ಅನುಭವಿಸಬೇಕೆಂಬುದು ಮಹಾಶಿವರಾತ್ರಿಯ ಮಹದಾಶಯ.  ಇಲ್ಲಿ ಶಿವಶಕ್ತಿ ಜಾಗೃತಿಯ ಜಾಗಟೆಯಾಗಿರುತ್ತದೆ. ಶಿವನೆಂಬುದು ನಮ್ಮೊಳಗಿನ ಅದಮ್ಯ ಚೇತನ. ಅನನ್ಯ ಚೈತನ್ಯ.  ಅದಕ್ಕೇನೆ ಶಿವನಿಲ್ಲದ ಸೌಂದರ್ಯವೇ ಶವಮುಖದ ಕಣ್ಣೋ……. ಎಂದರು ನಮ್ಮ ಮಹಾಕವಿ ಕುವೆಂಪು.

ಜಗತ್ತಿನಲ್ಲಿ ಹುಟ್ಟಿದವರೆಲ್ಲರೂ ಸಾಯಲೇಬೇಕು.  ಉತ್ಪತ್ತಿಯಾದುದೆಲ್ಲವೂ ನಾಶವಾಗಲೇ ಬೇಕು.  ಇದು ಪ್ರಕೃತಿ ನಿಯಮ.  ಇದನ್ನುಂಟು ಮಾಡುವ ಕ್ರಿಯೆಯೇ ಲಯ.  ಈ ಲಯಕಾರನೆ ಶಿವ.  ತ್ರಿಮೂರ್ತಿಗಳಲ್ಲೊಬ್ಬನಾದ ಶಿವನ ಕೆಲಸ ವಿನಾಶ.  ಇದನ್ನು ಧನಾತ್ಮಕವಾಗಿ ಯೋಚಿಸಿ ನೋಡಿದರೆ ಶಿವ ನಾಶ ಮಾಡುವುದು ನಾನು ಎಂಬ ‘ಅಹಂ’ ಮತ್ತು ನಮ್ಮವರೆಂಬ ಕ್ಷಣಿಕ ‘ವ್ಯಾಮೋಹ’ ಗಳನ್ನು ಎಂಬ ಸತ್ಯ ಗೋಚರಿಸುತ್ತದೆ.  ‘ಅಹಂ’ ಎಂಬುದು ಅಜ್ಞಾನ ಜನ್ಯವಾದುದು.

ನಟರಾಜನಾಗಿ ಶಿವ ತನ್ನ ತಾಂಡವ ನೃತ್ಯದಲ್ಲಿ ತುಳಿಯುವುದು ಇದೇ ಅಜ್ಞಾನವೆಂಬ ಅಸುರನನ್ನು ವಿನಾಶವೆಂದರೆ ಒಂದರ ಅಂತ್ಯದೊಡನೆ ಮತ್ತೊಂದರ ಜನನವೆಂಬುದನ್ನು ನಾವು ಮರೆಯಬಾರದು.  ಪ್ರತಿಯೊಂದಕ್ಕೂ ಅಂತ್ಯವೆಂಬುದಿದೆ.  ಅದಾದಾಗಲೇ ಹೊಸ ಸೃಷ್ಟಿ ಸಾಧ್ಯವಾಗುವುದು.  ಶಿವ ಪ್ರಕೃತಿಯ ಸಹಜ ಕ್ರಿಯೆ ಇದು.  ಇದನ್ನರಿತೇ ಇರಬಹುದು ನಮ್ಮ ವರಕವಿ ಬೇಂದ್ರೆ ಅವರು ತಮ್ಮ ಶ್ರಾವಣದ ರುದ್ರರೂಪದಲ್ಲಿ ಕುಣಿದಾವ ಗಾಳಿ ಭೈರವನ ರೂಪ ತಾಳಿ ……. ಎಂದು ಹಾಡಿರುವುದು.  ಹಾಗೆಯೇ ಕವಿ ಸೇರಿಯಾಪು ಕೃಷ್ಠಭಟ್ಟ ಅವರು ಶಿವನಿರುವ ಬಗೆಯನ್ನು ಹೇಳುವ ಪರಿಯಿದು-

ಈಶ್ವರನಿರುವನೋ? ಗೊತ್ತಿಲ್ಲ!

ನಶ್ವರ ಜಗವಿದು ಗೊತ್ತಲ್ಲ?

ಈಶ್ವರ ನಿಷ್ಟೆಯೆ ಭಯಹರವೆಂಬುದು;

ದಿನದಿನಕನುಭವವಹುದಲ್ಲಾ?

ಹಾಗಾದರೆ ಶಿವನಿರುವನಿರುವನಿದ;

ನಂಬುನಂಬು ಸಂಶಯ ಸಲ್ಲ …….

ಶಿವನಿಗೆ ಹತ್ತು ಸಾವಿರ ಹೆಸರುಗಳಿವೆ ಎಂಬುದು ವ್ಯಾಸೋಕ್ತಿ.  ಆಶ್ಚರ್ಯಪಡುವಷ್ಟರ ಮಟ್ಟಿಗೆ ಈ ಎಲ್ಲಾ ಹೆಸರುಗಳೂ ಶಿವನಿಗೆ ಅನ್ವರ್ಥವಾಗಿದ್ದು ಒಂದೊಂದು ಹೆಸರನ್ನೂ ಪೌರಾಣಿಕದ ಪೊರೆ ಕಳಚಿ, ದೈವತ್ವದ ಕಲ್ಪನೆಗಳನ್ನು ಒತ್ತಟ್ಟಿಗಿಟ್ಟು ವೈಚಾರಿಕ ದೃಷ್ಟಿಯಿಂದ ಮಾತ್ರ ನೋಡಿದಾಗ ಶಿವನ ತಾಂತ್ರಿಕ, ಜೈವಿಕ, ವೈಜ್ಞಾನಿಕ, ವೈಚಾರಿಕ, ಶೈಕ್ಷಣಿಕ, ವೈದ್ಯಕೀಯದ ಅದ್ಭುತ ಲೋಕವೇ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ.

ಶಿವನೊಬ್ಬ ವಿಜ್ಞಾನಿ, ಶಿವನೊಬ್ಬ ಸಂಶೋಧಕ, ಶಿವನೊಬ್ಬ ಇಂಜಿನಿಯರ್, ಶಿವನೊಬ್ಬ ವೈದ್ಯ, ಶಿವನೊಬ್ಬ ಕಲಾವಿದ, ಕೈಲಾಸ ಪರ್ವತದಲ್ಲಿ ವಾಸಿಸುವ ಶಿವನೊಬ್ಬ ನುರಿತ ಚಾರಣಿಗ, ಶಿವನೊಬ್ಬ ದಾರ್ಶನಿಕ, ಶಿವನೊಬ್ಬ ಶ್ರೇಷ್ಠ ಸಮಾಜ ಸುಧಾರಕ, ಶಿವನೊಬ್ಬ ತತ್ವಜ್ಞಾನಿ, ಶಿವನೊಬ್ಬ ಕಾಲಜ್ಞಾನಿ, ಶಿವನೊಬ್ಬ ಸಂಗೀತಗಾರ, ಶಿವನೊಬ್ಬ ಸಮಾನ ಸಮಾಜದ ಹರಿಕಾರ ……. ಹೀಗೆ ಶಿವ ಎಲ್ಲವೂ ಹೌದು, ಶಿವನನ್ನು ಮತ್ತು ಶಿವನ ಸುತ್ತಲಿನ ಕಥೆಗಳನ್ನು ನಾವು ಪೌರಾಣಿಕವಾಗಿ, ದೈವಿಕವಾಗಿ ನೋಡದೆ ವೈಚಾರಿಕ ದೃಷ್ಟಿಯಿಂದ ನೋಡಿದಾಗ ಮಾತ್ರ ಶಿವನಲ್ಲಿ ಇವೆಲ್ಲವನ್ನೂ ನಾವು ಕಾಣಬಹುದು.

ಇಷ್ಟೇ ಅಲ್ಲ ಅರ್ಧಾಂಗಿಗಾಗಿ ತನ್ನ ದೇಹದ ಅರ್ಧ ಭಾಗವನ್ನು ತ್ಯಾಗ ಮಾಡಿ ಅರ್ಧನಾರೀಶ್ವರನಾದ ಶಿವ ನಿಜವಾದ ಸ್ತ್ರೀ ಸಮಾನತೆಯ ಪ್ರತಿಪಾದಕ.  ಇದು ಸೃಷ್ಟಿ-ಲಯಗಳೆರಡರ ಮಹಾಸಂಗಮ.  ಶಿವ ಲಯದ ಪ್ರತೀಕವಾದರೆ ಪಾರ್ವತಿ ಸೃಷ್ಟಿಯ ಪ್ರತೀಕ.  ಶಿವತಾಂಡವ ಮತ್ತು ಪಾರ್ವತಿಯ ಲಾಸ್ಯಗಳ ಮಿಶ್ರಣವೇ ಸೃಷ್ಟಿ-ಲಯಗಳು.

ಶಿವನೊಬ್ಬ ಪರಿಣಿತ ನೃತ್ಯಪಟು.  ಅಷ್ಟೇ ಅಲ್ಲ ಸಕಲ ಕಲಾ ನಾಟ್ಯ ಪ್ರವೀಣ.  ಶಿವನ ನಟರಾಜ ರೂಪವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.  ಶಿವನ ನಟರಾಜ ರೂಪವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.  ಶಿವನ ನಟರಾಜ ರೂಪದ ನಾಟ್ಯ, ಜಾಗೃತಿ ಮತ್ತು ಕ್ರಿಯಾಶೀಲತೆ ಹಾಗೂ ಕಲಾಭಿವ್ಯಕ್ತಿಯ ಪ್ರತೀಕ.

ನೃತ್ಯವೋ ಬಹ್ಮ ನಟರಾಜನದು ಜಗವೆಲ್ಲ

ಪ್ರತ್ಯೇಕ ಜೀವದೆಶೆಯ ವನಂಗ ಭಂಗಿ

ಸತ್ಯ ಸತ್ತ್ವಜ್ವಾಲೆ, ವಿಶ್ವಮಾಯಾಲೀಲೆ

ಪ್ರತ್ಯಗಾತ್ಮನು ನೀನು ಮಂಕುತಿಮ್ಮ

ಶಿವ ನಟರಾಜನ ನಾಟ್ಯದ ಬಗ್ಗೆ ಹೀಗೆ ಹೇಳಿರುವ ದಾರ್ಶನಿಕ ಕವಿ ಡಿವಿಜಿಯವರ ನಾಲ್ಕು ಸಾಲಿನ ಈ ಮುಕ್ತಕದಲ್ಲೇ ಕಾಣಬಹುದು.  ಶಿವಶಕ್ತಿಯ ಅದಮ್ಯ ಚೇತನವನ್ನು ನಮ್ಮೊಳಗಿರುವ ಅದ್ಭುತ ಚೇತನವೇ ಮಹಾಪ್ರಭೆಯೇ, ದಿವ್ಯ ಶಕ್ತಿಯೇ ಶಿವ. ವ್ಯಕ್ತಿತ್ವ ವಿಕಸನಗೊಳಿಸುವ ಶಿವ ಸ್ವರೂಪದಲ್ಲಿರುವ ಈ ಎಲ್ಲಾ ದಿವ್ಯ ಶಕ್ತಿಗಳೂ ಸದ್ವಿನಿಯೋಗವಾದಲ್ಲಿ ಅದೇ ನಿಜವಾದ ಶಿವಪೂಜೆ. ಅಷ್ಟೇ ಅಲ್ಲ ನಾವು ಆಚರಿಸಬಹುದಾದ ಮಹಾಶಿವರಾತ್ರಿ.

ಶಿವನ ಆರಾಧನಾ ಸ್ಥಳಗಳಲ್ಲಿ ಅತ್ಯಂತ ಪ್ರಸಿದ್ಧವಾದ ವಿಶ್ವವಿಖ್ಯಾತ ಶಿವಲಿಂಗ ಸ್ಥಳಗಳೆಂದರೆ ಮಹಿಮಾನ್ವಿತ ದ್ವಾದಶ ಜ್ಯೋತಿರ್ಲಿಂಗಗಳು, ಅವುಗಳೆಂದರೆ (1) ಸೌರಾಷ್ಟ್ರದ (ಗುಜರಾತ್) ಸೋಮನಾಥೇಶ್ವರ (2) ಶ್ರೀಶೈಲದ (ಆಂಧ್ರಪ್ರದೇಶ) ಮಲ್ಲಿಕಾರ್ಜುನ (3) ಉಜ್ಜಯಿನಿಯ (ಮಧ್ಯಪ್ರದೇಶ) ಮಹಾಕಾಲೇಶ್ವರ (4) ಓಂಕಾರದ (ಮಧ್ಯಪ್ರದೇಶ) ಮಮಲೇಶ್ವರ (5) ಪರಳಿಯ (ಬಿಹಾರ) ವೈದ್ಯನಾಥೇಶ್ವರ (6) ಡಾಕಿಣ್ಯದ (ರಾಜಮಹೇಂದ್ರಿ) ಭೀಮೇಶ್ವರ (7) ರಾಮೇಶ್ವರದ (ತಮಿಳುನಾಡು) ರಾಮೇಶ್ವರ (8) ಧರುತವನದ (ಗುಜರಾತ್) ನಾಗೇಶ್ವರ (9) ವಾರಣಾಸಿಯ (ಕಾಶಿ) ವಿಶ್ವನಾಥ (10) ಗೌತಮಿ ತಟದ (ನಾಸಿಕ್) ತ್ರ್ಯಂಬಕೇಶ್ವರ (11) ಹಿಮಾಲಯದ ಕೇದಾರನಾಥ (12) ಔರಂಗಾಬಾದ್ ಬಳಿಯ ಗ್ರೀಷ್ಣೇಶ್ವರ.  ಮಹಾಶಿವರಾತ್ರಿಯಂದು ಈ ಮಹಿಮಾನ್ವಿತ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದನ್ನಾದರೂ ಸಂದರ್ಶಿಸಬೇಕೆಂಬುದು ಹಲವರ ನಂಬಿಕೆ.

ನಂಜನಗೂಡಿನ ನಂಜುಂಡೇಶ್ವರ, ಧರ್ಮಸ್ಥಳದ ಮಂಜುನಾಥೇಶ್ವರ, ಯಡಿಯೂರಿನ ಸಿದ್ದಲಿಂಗೇಶ್ವರ, ಕೋಲಾರದ ಕೋಟಿಲಿಂಗೇಶ್ವರ, ಶಿವಗಂಗೆಯ ಗವಿಗಂಗಾಧರೇಶ್ವರ, ಗೋಕರ್ಣದ ಮರುಡೇಶ್ವರ, ಮಲೆ ಮಹದೇಶ್ವರ ಬೆಟ್ಟದ ಮಹದೇಶ್ವರ, ಚುಂಚನಗಿರಿಯ ಕಾಲಭೈರವೇಶ್ವರ ಮುಂತಾದವು ಕರ್ನಾಟಕದ ಪ್ರಮುಖ ಶಿವಕ್ಷೇತ್ರಗಳು.  ಶಿವರಾತ್ರಿ ಹಬ್ಬಕ್ಕೆ ಜಾಗರಣೆಯೇ ಹೆಗ್ಗುರುತು.  ರಾತ್ರಿಯಿಡೀ ಶಿವನನ್ನು ಪೂಜಿಸುವ ಭಕ್ತರು ಭಜನೆ, ಭಕ್ತಿಗೀತೆ, ಕೀರ್ತನೆಗಳನ್ನು ಹಾಡಿ ಶಿವಭಕ್ತಿ ಮೆರೆಯುವುದು, ಭಾವಪರವಶರಾಗಿ ಭಕ್ತಿಯಲ್ಲಿ ತಲ್ಲೀನರಾಗುವುದು ಶಿವರಾತ್ರಿ ಆಚರಣೆಯ ವಿಶೇಷ.

admin
the authoradmin

Leave a Reply

Translate to any language you want