Mysore

ಜಾನಪದ ಸಾಹಿತ್ಯದ ಕ್ಷೇತ್ರ ಕಾರ್ಯ, ಸಂಗ್ರಹ, ಸಂಪಾದನೆ, ಸಂಶೋಧನೆಯ ಕಾರ್ಯ ಕ್ಷೀಣ: ಸಾಹಿತಿ ಟಿ. ಸತೀಶ್ ಜವರೇಗೌಡ

ಜಾನಪದ ಮತ್ತು ಕನ್ನಡ ಪ್ರಾಧ್ಯಾಪಕರಿಗೂ ಜನಪದ ಸಾಹಿತ್ಯದ ಕಡೆಗೆ ಆಸಕ್ತಿ ಇಲ್ಲವಾಗಿದೆ.

ಮಳವಳ್ಳಿ: ಇತ್ತೀಚಿನ ವರ್ಷಗಳಲ್ಲಿ ಜಾನಪದ ಸಾಹಿತ್ಯದ ಕ್ಷೇತ್ರ ಕಾರ್ಯ, ಸಂಗ್ರಹ, ಸಂಪಾದನೆ, ಸಂಶೋಧನೆಯ ಕಾರ್ಯ ಕ್ಷೀಣಿಸುತ್ತಿದೆ. ಜಾನಪದ ಅಧ್ಯಯನ ಮಾಡುವ ಆಸಕ್ತರು ವಿರಳವಾಗುತ್ತಿದ್ದಾರೆ ಎಂದು ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಳವಳ್ಳಿ ಸುಂದ್ರಮ್ಮ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಜನಪದ ಚೇತನ ಮಹದೇವಮ್ಮನವರ ಸ್ಮರಣಾರ್ಥ ನಡೆದ ಲಾದಸ್ವರ ಕಲಿಕಾ ಕೇಂದ್ರ ಉದ್ಘಾಟನೆ ಹಾಗೂ ಮಳವಳ್ಳಿ ಪಿ. ನಾಗರತ್ನಮ್ಮ ಸಂಪಾದಿತ ‘ಗಣಪತರಾಜನ ಜನಪದ ಕಾವ್ಯ’ ಲೋಕಾರ್ಪಣೆ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯ ಜಾನಪದ ವಿಭಾಗಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುತ್ತಿವೆ. ಜಾನಪದ ಮತ್ತು ಕನ್ನಡ ಪ್ರಾಧ್ಯಾಪಕರಿಗೂ ಜನಪದ ಸಾಹಿತ್ಯದ ಕಡೆಗೆ ಆಸಕ್ತಿ ಇಲ್ಲವಾಗಿದೆ. ಸಂಗ್ರಹ ಮತ್ತು ಸಂಶೋಧನಾ ಕಾರ್ಯ ಸ್ಥಗಿತವಾಗುತ್ತಿದೆ. ಆದ್ದರಿಂದ, ಹೊಸ ತಲೆಮಾರಿನ ವಿದ್ಯಾರ್ಥಿಗಳು ಜಾನಪದ ಸಾಹಿತ್ಯದ ಅಧ್ಯಯನ ಮತ್ತು ಸಂಗ್ರಹದೆಡೆಗೆ ಅಭಿರುಚಿ ಬೆಳೆದುಕೊಳ್ಳಬೇಕು. ಜನಪದ ಕಲೆಗಳ ಕಲಿತು ಪ್ರದರ್ಶನ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನ ಸಾಧನಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮೊಬೈಲ್, ಟಿವಿ, ಸಿನಿಮಾದ ವ್ಯಸನಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಅವರ ಓದುವ ಮತ್ತು ಜ್ಞಾನ ಸಂಪಾದಿಸುವ ಸಮಯ ವ್ಯರ್ಥವಾಗುತ್ತಿದೆ. ಆದ್ದರಿಂದ, ವಿದ್ಯಾರ್ಥೊಗಳು ತಂತ್ರಜ್ಞಾನ ಸಾಧನಗಳ ಬಳಕೆಗೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕನ್ನಡ ಸಹ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಜೆ. ರಾಜು ಗುಂಡಾಪುರ ಮಾತನಾಡಿ, ಜನಪದವಿಲ್ಲದೆ ನಮ್ಮ ಬದುಕಿಲ್ಲ. ಆದ್ದರಿಂದ, ಜಾನಪದ ಸಾಹಿತ್ಯಕ್ಕೆ ಎಂದೂ ಸಾವಿಲ್ಲ. ಅದನ್ನು ಯಾವ ತಂತ್ರಜ್ಞಾನವೂ ಅಳಿಸಲು ಸಾಧ್ಯವಿಲ್ಲ. ಹೊಸ ಹೊಸ ರೂಪದಲ್ಲಿ ಅದು ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ ಎಂದು ವಿಶ್ಲೇಷಿಸಿದರು.

ಕನ್ನಡದಲ್ಲಿ 55 ಗೀತಪದಗಳಿವೆ. 5 ಮಹಾಕಾವ್ಯಗಳಿವೆ. 85 ಖಂಡಕಾವ್ಯಗಳಿವೆ. ಇವುಗಳಲ್ಲಿ ಮಲೆಯ ಮಹದೇಶ್ವರ ಮತ್ತು ಮಂಟೇಸ್ವಾಮಿ ಮಹಾಕಾವ್ಯಗಳು ಜನಪದ ಧರ್ಮವನ್ನು ಕಟ್ಟಿವೆ. ಸಮಾಜದಲ್ಲಿನ ಶೂದ್ರ ವರ್ಗದವರು ಕಟ್ಟಿ ಬೆಳೆಸಿದ ಜನಪದಕ್ಕೆ ಅದೆಷ್ಟೇ ಶತಮಾನವಾದರೂ, ಅದಕ್ಕೆ ಅಳಿವಿಲ್ಲ ಎಂದು ಹೇಳಿದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಟಿ. ನನರಸೀಪುರದ ರಾಮರೂಢ ಮಠದ ವೇದವತಿ ಮಾತಾಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘಟಕ ಪೊತೇರ ಮಹದೇವ ವಹಿಸಿದ್ದರು. ಹೈಕೋರ್ಟ್ ವಕೀಲ ಕಾಳಯ್ಯ ಉದ್ಘಾಟಿಸಿದರು. ಮಳವಳ್ಳಿ ಸುಂದ್ರಮ್ಮ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ  ಮಳವಳ್ಳಿ ಪಿ. ನಾಗರತ್ನಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ‘ಗಣಪತರಾಜನ ಜನಪದ ಕಾವ್ಯ’ ಕುರಿತು ಆಕಾಶವಾಣಿ ಉದ್ಘೋಷಕ ಡಾ. ಮೈಸೂರು ಉಮೇಶ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅಸ್ಪೃಶ್ಯರಿಗೆ ಮೊದಲು ಅಕ್ಷರ ಜ್ಞಾನ ಕೊಟ್ಟ ತಲಕಾಡು ರಂಗೇಗೌಡರ ಮೊಮ್ಮಗ ಎನ್. ಹರ್ಷ, ಸಾಹಿತಿ ಟಿ. ಸತೀಶ್ ಜವರೇಗೌಡ, ಸಂಘಟಕ ಪೊತೇರ ಮಹದೇವ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಪೌರ ಕಾರ್ಮಿಕರಾದ ನಿತಿನ್ ಕುಮಾರ್, ಬಿ. ವೆಂಕಟೇಶ್, ಎಂ.ಜಿ. ರವಿಚಂದ್ರ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ವೇದಿಕೆಯಲ್ಲಿ  ನಿವೃತ್ತ ಉಪ ನಿರ್ದೇಶಕ ಜಯಪ್ರಕಾಶ್, ರಂಗಕರ್ಮಿ ಕಿರಣ್ ಗಿರ್ಗಿ, ಖ್ಯಾತ ಜನಪದ ಗಾಯಕರಾದ ಡಾ. ಮಳವಳ್ಳಿ ಮಹದೇವಸ್ವಾಮಿ, ಮೈಸೂರು ಗುರುರಾಜ್, ತಾಲ್ಲೂಕು ಕಸಾಪ ಅಧ್ಯಕ್ಷ ಎಲ್. ಚೇತನ್ ಕುಮಾರ್ ಉಪಸ್ಥಿತರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಜನಪದ ಗಾಯಕರು ಗೀತಗಾಯನ ನಡೆಸಿಕೊಟ್ಟರು.

admin
the authoradmin

ನಿಮ್ಮದೊಂದು ಉತ್ತರ

Translate to any language you want