ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಂಗಳ ಮುದ್ದುಮಾದಪ್ಪರವರಿಗೆ ‘ಸಾಹಿತ್ಯರತ್ನ’ ಪ್ರಶಸ್ತಿ ಪ್ರದಾನ
ಬೆಂಗಳೂರು ಜನ್ಮಭೂಮಿ ಸಾಂಸ್ಕೃತಿಕ ನಾಗರೀಕ ವೇದಿಕೆ ಆಯೋಜಿಸಿದ್ದ ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನವನ್ನು ಪ್ರತಿಪಾದಿಸುವ ಅಭಿನಂದನಾ ಕನ್ನಡ ಹಬ್ಬ ಕಾರ್ಯಕ್ರಮ

ಬೆಂಗಳೂರು: ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಗೌರವಾಧ್ಯಕ್ಷರು ಹಾಗೂ ಮೈಸೂರು ಮರಿಮಲ್ಲಪ್ಪ ಪದವಿಪೂರ್ವ ಕಾಲೇಜಿನ ಶೈಕ್ಷಣಿಕ ಅಧಿಕಾರಿಗಳಾಗಿರುವ ಶ್ರೀಮತಿ ಮಂಗಳ ಮುದ್ದುಮಾದಪ್ಪ ಅವರ ಶಿಕ್ಷಣ, ಸಾಹಿತ್ಯ ಮತ್ತು ಸಮಾಜಸೇವೆಯ ಬಹುಮುಖ ಸಾಧನೆಯನ್ನು ಗುರುತಿಸಿ ‘ಸಾಹಿತ್ಯ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬೆಂಗಳೂರು ಜನ್ಮಭೂಮಿ ಸಾಂಸ್ಕೃತಿಕ ನಾಗರೀಕ ವೇದಿಕೆ ಆಯೋಜಿಸಿದ್ದ ಕನ್ನಡಿಗರ ಕೆಚ್ಚೆದೆಯ ಸ್ವಾಭಿಮಾನವನ್ನು ಪ್ರತಿಪಾದಿಸುವ ಅಭಿನಂದನಾ ಕನ್ನಡ ಹಬ್ಬ ಕಾರ್ಯಕ್ರಮವು ಮಲ್ಲೇಶ್ವರಂನ ಶ್ರೀ ಕೃಷ್ಣದೇವರಾಯ ಕಲಾಮಂದಿರದಲ್ಲಿ ವಿಜೃಂಭಣೆಯಿಂದ ನಡೆಯಿತು. ಈ ಸಂದರ್ಭದಲ್ಲಿ ಜನ್ಮಭೂಮಿ ಸಾಂಸ್ಕೃತಿಕ ನಾಗರೀಕ ವೇದಿಕೆ ಸಂಸ್ಥಾಪಕರಾದ ಎಚ್.ಸಿ. ಕೃಷ್ಣಪ್ಪ ಹಾಗೂ ಇತರ ಗಣ್ಯರು ಮಂಗಳ ಮುದ್ದುಮಾದಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು, ಮೌಲ್ಯ ಮತ್ತು ಸಂಸ್ಕಾರಗಳನ್ನು ನೆಲೆಯೂರಿಸುವ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ನೀಡಿದ ಕೊಡುಗೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ಪೋಷಿಸುತ್ತಿರುವ ಅವರ ಸಾಧನೆಯನ್ನು ಈ ಪ್ರಶಸ್ತಿ ಸಮರ್ಥವಾಗಿ ಪ್ರತಿಬಿಂಬಿಸುತ್ತದೆ ಎಂದು ಸಂಸ್ಥೆ ಸಂಸ್ಥಾಪಕ ಎಚ್.ಸಿ ಕೃಷ್ಣಪ್ಪ ಅಭಿಪ್ರಾಯಪಟ್ಟರು.

ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಮಂಗಳ ಮುದ್ದುಮಾದಪ್ಪ ಅವರಿಗೆ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಹಾಗೂ ರೂಪ ಕುಮಾರಸ್ವಾಮಿ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಅವರ ಮುಂದಿನ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಮಾಜಿಕ ಸೇವೆಗಳು ಇನ್ನಷ್ಟು ವಿಸ್ತಾರಗೊಳ್ಳಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಳೆ ತಂದರು.







