ಸದಾ ಒತ್ತಡದಲ್ಲಿ ವಾರಪೂರ್ತಿ ಕೆಲಸ ಮಾಡಿದವರು ವಾರಾಂತ್ಯದ ದಿನಗಳನ್ನು ಪ್ರಕೃತಿ ಮಡಿಲಲ್ಲಿ ಕಳೆಯಲು ಇಷ್ಟಪಡುವುದು ಇತ್ತೀಚೆಗಿನ ಬೆಳವಣಿಗೆಯಾಗಿದೆ. ಹೀಗಾಗಿಯೇ ವೀಕೆಂಡ್ ದಿನಗಳಲ್ಲಿ ಪ್ರವಾಸಿ ತಾಣಗಳು ಕಿಕ್ಕಿರಿದು ತುಂಬಿರುತ್ತವೆ. ಅಷ್ಟೇ ಅಲ್ಲದೆ ರೆಸಾರ್ಟ್, ಹೋಂಸ್ಟೇಗಳಲ್ಲೂ ಪ್ರವಾಸಿಗರು ಬೀಡು ಬಿಟ್ಟು, ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಅಲ್ಲಲ್ಲಿ ಕಾಣಸಿಗುತ್ತದೆ.
ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…
ಇತ್ತೀಚೆಗೆ ನಿಸರ್ಗದ ಮಡಿಲಲ್ಲಿರುವ ತಾಣಗಳಲ್ಲಿ ಸಾಹಸ ಕ್ರೀಡೆಗಳಿಗೆ ಅವಕಾಶ ಮಾಡಿಕೊಡಲಾಗಿದ್ದು ಅಂತಹ ತಾಣಗಳಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮರಡಿಗುಡ್ಡ ವೃಕ್ಷ ವನ ಗಮನಾರ್ಹವಾಗಿದೆ. ಏಕೆಂದರೆ ಪ್ರಕೃತಿ ಮತ್ತು ಅದರ ನಡುವಿನ ಎರಡು ಬೆಟ್ಟದ ನಡುವಲ್ಲಿ ತಂತಿಯಲ್ಲಿ ಸಾಗುವ ಸಾಹಸಮಯ ಕ್ರೀಡೆಯಾದ ಜಿಪ್ ಲೈನ್ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಚಾಮರಾಜನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಇದಕ್ಕೆ ಕಾರಣ ಇಲ್ಲಿರುವ ಪ್ರವಾಸಿ ತಾಣಗಳು ಒಂದೆಡೆಯಾದರೆ ಮತ್ತೊಂದೆಡೆ ಜಿಲ್ಲೆಯು ಕೇರಳ ಮತ್ತು ತಮಿಳುನಾಡು ರಾಜ್ಯಗಳು ಹತ್ತಿರವಿದೆ. ಹೀಗಾಗಿ ಆ ರಾಜ್ಯಗಳಿಗೆ ತೆರಳುವ ಮತ್ತು ಅಲ್ಲಿಂದ ಕರ್ನಾಟಕದತ್ತ ಮುಖ ಮಾಡುವ ಪ್ರವಾಸಿಗರು ಚಾಮರಾಜನಗರದ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿಕೊಡಲು ಮರೆಯುವುದಿಲ್ಲ.
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಮಲೆಮಹದೇಶ್ವರಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲ ಸ್ವಾಮಿ ಬೆಟ್ಟಗಳು ಸೇರಿದಂತೆ ಹಲವು ಪ್ರೇಕ್ಷಣೀಯ ತಾಣಗಳಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಇಂತಹ ಪ್ರವಾಸಿಗರಿಗೆ ಅನುಕೂಲವಾಗುವಂತೆ ಜಿಪ್ ಲೈನ್ ಸಾಹಸ ಕ್ರೀಡೆಯನ್ನು ಕೊಳ್ಳೇಗಾಲದ ಮರಡಿಗುಡ್ಡ ವೃಕ್ಷ ವನದಲ್ಲಿ ಕೆಲವು ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ
ಮರಡಿಗುಡ್ಡಕ್ಕೆ ತೆರಳಿದರೆ ಪ್ರವಾಸಿಗರು ಅದರಲ್ಲೂ ನಿಸರ್ಗ ಪ್ರೇಮಿಗಳಾಗಿದ್ದರಂತು ತುಂಬಾ ಖುಷಿಪಡುತ್ತಾರೆ ಏಕೆಂದರೆ ಈ ವೃಕ್ಷ ವನವು ಬೆಟ್ಟಗುಡ್ಡಗಳನ್ನೊಳಗೊಂಡ ಹಸಿರು ಹಚ್ಚಡದಿಂದ ಕೂಡಿದ್ದು ನಿಸರ್ಗ ಪ್ರಿಯರಿಗೆ ಮುದನೀಡುತ್ತದೆ. ಇಂತಹ ಸುಂದರ ಪರಿಸರದಲ್ಲಿ ಒಂದೆಡೆಯಿಂದ ಮತ್ತೊಂದೆಡೆ ತಂತಿಯಲ್ಲಿ ಸಾಗುವ ಮೈನವಿರೇಳಿಸುವ, ಸಾಹಸಮಯ ಕ್ರೀಡೆಯಾದ ಜಿಪ್ ಲೈನ್ ಖುಷಿಯನ್ನು ಇಮ್ಮಡಿ ಮಾಡುವುದರೊಂದಿಗೆ ನೆನಪಿನಲ್ಲಿ ಉಳಿಯುವ ಸುಂದರ ಕ್ಷಣಗಳನ್ನು ಕಟ್ಟಿಕೊಡುತ್ತದೆ.
ಇದನ್ನೂ ಓದಿ: ಶಿವನಸಮುದ್ರದಲ್ಲಿ ಕಾವೇರಿಯ ಜಲನರ್ತನ ನೋಡುವುದೇ ಕಣ್ಣಿಗೊಂದು ಹಬ್ಬ…
ಮರಡಿಗುಡ್ಡ ವೃಕ್ಷ ವನದ ಬೆಟ್ಟ-ಗುಡ್ಡದ ನಡುವೆ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ತಂತಿಯನ್ನು ಅಳವಡಿಸಲಾಗಿದ್ದು, ಈ ತಂತಿ ಮೇಲೆ ಕೈಯಲ್ಲಿ ಸೆಲ್ಫಿ ಸ್ಟಿಕ್ ಹಿಡಿದು ಕೊಂಡು ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾ ಮುಂದೆ ಸಾಗುವುದು ಹೊಸ ಅನುಭವವಾಗುತ್ತದೆ. ಇನ್ನು ಇಲ್ಲಿ ನುರಿತ ತರಬೇತಿದಾರರಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿರುವುದರಿಂದ ಸಾಹಸಪ್ರಿಯರು ಯಾವುದೇ ಭಯವಿಲ್ಲದೆ ಧೈರ್ಯವಾಗಿ ಮುನ್ನಡೆಯಬಹುದಾಗಿದೆ.
ಇಲ್ಲಿಗೆ ಬಂದು ಜಿಪ್ ಲೈನ್ ಸಾಹಸಕ್ಕಿಳಿಯುವ ಸಾಹಸಿಗರಿಗೆ ಅತ್ಯಾಧುನಿಕ ಗೋಪ್ರೋ ಕ್ಯಾಮರಾ ಸೆಲ್ಫಿ ಸ್ಟಿಕ್ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ಪ್ರವಾಸಿಗರು ತಂತಿ ಮೂಲಕ ತೇಲುತ್ತಾ ಸಾಗುವ ಕ್ಷಣವನ್ನು ಸಾಕ್ಷಿಯಾಗಿಸಿ ಕೊಳ್ಳಬಹುದಾಗಿದೆ. ಈಗಾಗಲೇ ಹಲವು ಪ್ರವಾಸಿಗರು ಇಲ್ಲಿಗೆ ಆಗಮಿಸಿ ಜಿಪ್ ಲೈನ್ ಸಾಹಸದ ಅನುಭವ ಪಡೆದಿದ್ದಾರೆ.
ಇದನ್ನೂ ಓದಿ: ಬಂಡೀಪುರ ಅರಣ್ಯದಲ್ಲಿನ ಶತಮಾನ ಪೂರೈಸಿದ ಬ್ರಿಟೀಷರ ಕಾಲದ ಅತಿಥಿಗೃಹದ ವಿಶೇಷತೆ ಗೊತ್ತಾ?
ಈ ಜಿಪ್ ಲೈನ್ ಸಾಹಸಕ್ರೀಡೆಯನ್ನು ಅರಣ್ಯ ಇಲಾಖೆಯು ಸುಮಾರು ಇಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಆರಂಭಿಸಿದೆ. ಸದ್ಯ ಜಿಪ್ ಲೈನ್ ಕ್ರೀಡೆಯತ್ತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗಿದ್ದು, ಇದರ ಮಜಾ ಸವಿಯಲೆಂದೇ ಬರುತ್ತಿದ್ದಾರೆ. ಒಂದಷ್ಟು ಮಂದಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಮತ್ತೊಂದಷ್ಟು ಮಂದಿ ಬೆಟ್ಟದ ತಪ್ಪಲಿನಲ್ಲಿ ಹಾಗೂ ದೂರದ ದೊಡ್ಡ ಮನೆ ಮಹಡಿಗಳ ಮೇಲೆ ನಿಂತು ನೋಡಿ ಖುಷಿಪಡುತ್ತಿದ್ದಾರೆ.
ಜಿಲ್ಲೆಯಲ್ಲಿಯೇ ಪ್ರಥಮ ಪ್ರಯೋಗವಾಗಿರುವ ಜಿಪ್ ಲೈನ್ ಸಾಹಸ ಕ್ರೀಡೆ ಪ್ರಕೃತಿ ನಡುವೆ ನಿರ್ಮಿತವಾಗಿರುವುದರಿಂದ ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸಿ ಮಜಾ ಉಡಾಯಿಸಲು ಯುವಕರು ಮತ್ತು ಯುವತಿಯರು ಇತ್ತ ಧಾವಿಸುತ್ತಾರೆ. ನೆನಪಿರಲಿ ಇಲ್ಲಿ ಬೆಳಗ್ಗೆ 10 ರಿಂದ ಸಂಜೆ 5ಗಂಟೆವರೆಗೆ ಮಾತ್ರ ಅವಕಾಶವಿದೆ.
B M Lavakumar