ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ನಡೆದ ಘಟನೆಯೊಂದು ಬೆಚ್ಚಿ ಬೀಳಿಸಿದೆ. ಹುಲಿದಾಳಿಯಿಂದ ಮೃತಪಟ್ಟರೆ ಸರ್ಕಾರದಿಂದ 15ಲಕ್ಷ ರೂ ಪರಿಹಾರ ಸಿಗುತ್ತದೆ ಎಂಬ ಹಣದಾಸೆಗಾಗಿ ಮಹಿಳೆಯೊಬ್ಬಳು ತನ್ನ ಗಂಡನನ್ನು ವಿಷಹಾಕಿ ಸಾಯಿಸಿ ಶವವನ್ನು ತಿಪ್ಪೆಗುಂಡಿಯಲ್ಲಿ ಮುಚ್ಚಿಟ್ಟು ಹುಲಿ ಹೊತ್ತೊಯ್ದಿದೆ ಎಂದು ಕಥೆ ಕಟ್ಟಿ ಅರಣ್ಯ ಇಲಾಖೆ ಮತ್ತು ಪೊಲೀಸರನ್ನು ಊರು ತುಂಬಾ ಅಲೆದಾಡಿಸಿದ್ದಾಳೆ. ಸಂಶಯಗೊಂಡ ಪೊಲೀಸರು ತನಿಖೆ ನಡೆಸಿದಾಗ ಹಂತಕಿಯ ನೈಜ ಬಣ್ಣ ಬಯಲಾಗಿದೆ.
ಎಲ್ಲದಕ್ಕೂ ಹಣವೇ ಮುಖ್ಯವಾಗಿರುವುದರಿಂದ ಹಣವನ್ನು ಹೇಗಾದರೂ ಮಾಡಿ ಪಡೆಯುವ ಸಲುವಾಗಿ ಜನ ವಂಚನೆ, ಮೋಸ, ದರೋಡೆ, ಕೊಲೆ ಹೀಗೆ ಹತ್ತು ಹಲವು ಅಪರಾಧ ಮಾಡಲು ಮುಂದಾಗುತ್ತಾರೆ. ಆದರೆ ಇದೆಲ್ಲದರ ನಡುವೆ ಸರ್ಕಾರದಿಂದ ಪರಿಹಾರದ ಹಣ ಪಡೆದು ಸುಖವಾಗಿ ಇರಬಹುದು ಎಂಬ ಕೆಟ್ಟ ಆಲೋಚನೆ ಮಾಡಿದ ಮಹಿಳೆ ಅದಕ್ಕಾಗಿ ತನ್ನ ಗಂಡನನ್ನೇ ಬಲಿ ಕೊಟ್ಟ ಪ್ರಕರಣ ಬಹುಶಃ ಇದೇ ಮೊದಲೇನೋ?
ಬೇರೆ, ಬೇರೆ ಕಾರಣಗಳಿಗೆ ಗಂಡನನ್ನು ಹೆಂಡತಿಯೇ ಕೊಲೆ ಮಾಡಿದ ಪ್ರಕರಣಗಳು ಬೇಕಾದಷ್ಟು ನಡೆದಿವೆ. ಆದರೆ ಗಂಡನನ್ನು ಕೊಂದು ಹುಲಿ ದಾಳಿ ಮಾಡಿ ಸಾಯಿಸಿದೆ ಎಂದು ಕಥೆ ಕಟ್ಟಿದರೆ 15 ಲಕ್ಷ ಸಿಗುತ್ತದೆ. ಅದರಿಂದ ಎಂಜಾಯ್ ಮಾಡಿಕೊಂಡಿರಬಹುದು ಎಂಬ ದುರಾಲೋಚನೆಯಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಂಕುಬೂದಿ ಎರಚಲು ಮುಂದಾದ ಇಂತಹ ಘಟನೆ ಬೇರೆಲ್ಲೂ ನಡೆದಿಲ್ಲವೇನೋ?
ಇಷ್ಟಕ್ಕೂ ಗಂಡನಕೊಂದು ಹುಲಿ ಹೊತ್ತೊಯ್ದ ಕಥೆ ಕಟ್ಟಿದ ಹಂತಕಿ ಯಾರಪ್ಪಾ? ಎಂಬ ಕುತೂಹಲ ಕಾಡದಿರದು. ಹೀಗಾಗಿ ಆಕೆಯ ಪರಿಚಯ ಮಾಡಿ ಆ ನಂತರ ಘಟನೆ ಬಗ್ಗೆ ವಿವರಿಸಿದರೆ ಓದುಗರಿಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಈಕೆಯ ಹೆಸರು ಸಲ್ಲಾಪುರಿ ವಯಸ್ಸು ನಲುವತ್ತು. ಗಂಡನ ಹೆಸರು ವೆಂಕಟಸ್ವಾಮಿ ವಯಸ್ಸು ನಲ್ವತೈದು. ಮೂಲತಃ ಇವರು ಮಂಡ್ಯ ಜಿಲ್ಲೆಯ ಹಲಗೂರು ಹೋಬಳಿಯ ಕಂದಪುರ ಗ್ರಾಮದವರು. ಅಲ್ಲಿಂದ ಕಳೆದ ಹನ್ನೊಂದು ತಿಂಗಳ ಹಿಂದೆ ಹೊಟ್ಟೆಪಾಡಿಗಾಗಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಚಿಕ್ಕ ಹೆಜ್ಜೂರು ಗ್ರಾಮಕ್ಕೆ ಬಂದಿದ್ದರು.
ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ರವಿಕುಮಾರ್ ಮತ್ತು ಅರುಣ್ ಕುಮಾರ್ ಎಂಬುವರಿಗೆ ಚಿಕ್ಕಹೆಜ್ಜೂರಿನಲ್ಲಿ 4.10 ಎಕರೆ ಅಡಿಕೆ ತೋಟವಿದ್ದು, ಅದರ ನಿರ್ವಹಣೆ ಕೆಲಸವನ್ನು ಈ ಮೊದಲು ಬಿಡದಿಯಲ್ಲಿ ಕೆಲಸ ಮಾಡಿಕೊಂಡಿದ್ದ ವೆಂಕಟಸ್ವಾಮಿ ಮತ್ತು ಸಲ್ಲಾಪುರಿ ದಂಪತಿಗೆ ವಹಿಸಿದ್ದರು. ಅವರಿಗೆ ಮಾಸಿಕ 18ಸಾವಿರ ವೇತನವನ್ನು ನಿಗದಿ ಪಡಿಸಿದ್ದರು. ತೋಟದಲ್ಲಿ ಎರಡು ಮನೆಗಳಿದ್ದವು. ಈ ಪೈಕಿ ಒಂದನ್ನು ಮಾಲೀಕರು ತಮ್ಮ ಬಳಕೆಗೆ ಇಟ್ಟುಕೊಂಡಿದ್ದರೆ ಮತ್ತೊಂದು ಮನೆಯನ್ನು ವೆಂಟಸ್ವಾಮಿ, ಸಲ್ಲಾಪುರಿ ದಂಪತಿಗೆ ಬಿಟ್ಟುಕೊಟ್ಟಿದ್ದರು. ಈ ಮನೆಯಲ್ಲಿದ್ದುಕೊಂಡು ತೋಟದ ಕೆಲಸ ಮಾಡುತ್ತಿದ್ದರು.
ಕೆಲವು ವರ್ಷಗಳ ಹಿಂದೆಯೇ ಮದುವೆಯಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದು ಅವರಿಗೆ ಶಿಕ್ಷಣ ಕೊಡಿಸುವ ಸಲುವಾಗಿ ಬಿಡದಿಯಲ್ಲಿ ಸಂಬಂಧಿಕರ ಮನೆಯಲ್ಲಿ ಬಿಟ್ಟು ಓದಿಸುತ್ತಿದ್ದರು. ಇವರು ಚಿಕ್ಕಹೆಜ್ಜೂರಿನ ಅಡಿಕೆ ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡಿಕೊಂಡು ಹೋಗುತ್ತಿದ್ದರು. ಆದರೆ ಸಲ್ಲಾಪುರಿಗೆ ಮಾತ್ರ ತಮ್ಮ ಬದುಕಿನ ಬಗ್ಗೆ ಬೇಸರವಿತ್ತು. ತಾನು ಜಾಲಿಯಾಗಿ ಜೀವನ ನಡೆಸಬೇಕೆಂದು ಬಯಸಿದ್ದಳು. ಆದರೆ ಹಣ ಬರುವ ದಾರಿ ಮಾತ್ರ ಇರಲಿಲ್ಲ.
ಇದನ್ನೂ ಓದಿ: ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು! ಗಂಡನ ಬಿಟ್ಟು ಬಂದವಳನ್ನು ಪ್ರಿಯಕರ ಕೊಂದು ಬಿಟ್ಟ!
ಆಕೆಯ ಹುಚ್ಚು ಆಸೆಯ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳಗಳು ನಡೆಯುತ್ತಿದ್ದವು. ಆದರೆ ಹಣವಿದ್ದವರು ಓಡಾಡುವುದನ್ನು ನೋಡಿದ ಆಕೆಗೆ ಏನು ಮಾಡಿದರೆ ತಾನು ಹಣ ಪಡೆಯಬಹುದು ಎಂದು ಯೋಚಿಸುತ್ತಿದ್ದಳು. ಈ ನಡುವೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಲಿ, ಆನೆ ದಾಳಿಯಿಂದ ಮೃತಪಟ್ಟವರಿಗೆ ಸರ್ಕಾರ ನೀಡುವ ಪರಿಹಾರದ ಬಗ್ಗೆ ಅರಿತಿದ್ದ ಆಕೆಗೆ ಗಂಡ ವೆಂಕಟಸ್ವಾಮಿ ಜತೆ ಇದ್ದಷ್ಟು ದಿನ ಯಾರದ್ದೋ ತೋಟದಲ್ಲಿ ಕೆಲಸ ಮಾಡಿಕೊಂಡು ಹೋಗುವುದು ನಿಲ್ಲುವುದಿಲ್ಲ. ನಾನು ಶ್ರೀಮಂತಳಾಗುವುದಿಲ್ಲ ಎಂಬುದು ಅವಳಿಗೆ ಖಾತ್ರಿಯಾಗಿತ್ತು.
ಈ ನಡುವೆ ಗಂಡ ಹೆಂಡತಿ ನಡುವೆ ಜಗಳಗಳು ತಾರಕಕ್ಕೇರಿದ್ದರಿಂದ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿತು. ಸಲ್ಲಾಪುರಿಗೆ ಗಂಡ ವೆಂಕಟಸ್ವಾಮಿ ಮೇಲೆ ಪ್ರೀತಿಗಿಂತ ದ್ವೇಷವೇ ಹೆಚ್ಚಾಯಿತು. ಹೀಗಾಗಿ ಆತ ಇರೋದಕ್ಕಿಂತ ಇಲ್ಲದಿದ್ದರೆ ನಾನು ಮಕ್ಕಳು ನೆಮ್ಮದಿಯಾಗಿ ಬದುಕ ಬಹುದೆಂಬ ಕೆಟ್ಟ ಆಲೋಚನೆಯೊಂದು ಅವಳ ಮನಸ್ಸಲ್ಲಿ ಗಿರಕಿ ಹೊಡೆಯಲಾರಂಭಿಸಿತು. ಹೀಗಿರುವಾಗಲೇ ಅವಳ ಮನಸ್ಸಿನಲ್ಲೊಂದು ಯೋಚನೆ ಬಂದಿತಲ್ಲದೆ, ಅದು ಅವಳನ್ನು ಹಂತಕಿಯಾಗುವ ಹಂತಕ್ಕೆ ಕೊಂಡೊಯ್ದಿತು.
ಆ ಕ್ಷಣಕ್ಕೆ ಅವಳಿಗೆ ನಾನು ಮಾಡಲು ಹೊರಟಿರುವುದು ಘೋರ ಅಪರಾಧ ಎಂದೆನಿಸಲೇ ಇಲ್ಲ. ಬದಲಿಗೆ ಅದನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಐಡಿಯಾಗಳನ್ನು ಹುಡುಕಲಾರಂಭಿಸಿದಳು. ಈ ನಡುವೆ ಆಕೆ ವನ್ಯ ಪ್ರಾಣಿಗಳ ದಾಳಿಯಿಂದ ಸತ್ತರೆ ಸರ್ಕಾರದಿಂದ ಪರಿಹಾರ ಎಷ್ಟು ಸಿಗುತ್ತದೆ ಎಂಬುದನ್ನು ಹಲವರಿಂದ ಕೇಳಿ ತಿಳಿದುಕೊಂಡಿದ್ದಳಂತೆ. 15 ಲಕ್ಷ ಸಿಗುತ್ತದೆ ಎಂಬುದು ಗೊತ್ತಾಗುತ್ತಿದ್ದಂತೆಯೇ ಗಂಡ ವೆಂಕಟಸ್ವಾಮಿಗೆ ಸ್ಕೆಚ್ ಹಾಕಿದ್ದಳು. ಇದಕ್ಕಾಗಿ ಮುಹೂರ್ತ ಫಿಕ್ಸ್ ಮಾಡಿದ್ದಳು.
ಎಂದಿನಂತೆ ತೋಟದಲ್ಲಿ ಕೆಲಸ ಮುಗಿಸಿ ಕೆಲಸ ಮಾಡಿದ ಸುಸ್ತು ಹೋಗಲಾಡಿಸಲು ಎಣ್ಣೆ ಹೊಡೆಯುವುದು ವೆಂಕಟಸ್ವಾಮಿಯ ಅಭ್ಯಾಸವಾಗಿತ್ತು. ಮನೆಗೆ ಹೋದರೆ ಹೆಂಡತಿಯೊಂದಿಗೆ ಕಿರಿಕ್ ಮಾಡಿಕೊಳ್ಳುವುದು ಮಾಮೂಲಿಯಾಗಿತ್ತು. ಆದರೆ ತನ್ನ ಮೇಲೆ ಹೆಂಡತಿ ಕಣ್ಣಿಟ್ಟಿದ್ದಾಳೆ ಎಂಬ ಚಿಕ್ಕ ಅನುಮಾನವೂ ಬಂದಿರಲಿಲ್ಲ. ಅವತ್ತು ಸೆಪ್ಟಂಬರ್ 8, ಸೋಮವಾರ ರಾತ್ರಿ ಮನೆಗೆ ಎಂದಿನಂತೆ ಎಣ್ಣೆ ಬಿಟ್ಟುಕೊಂಡು ವೆಂಕಟಸ್ವಾಮಿ ಬಂದಿದ್ದನು. ಅವತ್ತು ರಾತ್ರಿ ಅಡುಗೆ ಮಾಡಿದ ಸಲ್ಲಾಪುರಿ ಗಂಡನಿಗೆ ಕೊಡುವ ಊಟಕ್ಕೆ ವಿಷ ಬೆರೆಸಿದಳು. ಆದರೆ ಹೆಂಡತಿ ತನಗೆ ವಿಷ ಬೆರೆಸಿಕೊಟ್ಟಿದ್ದಾಳೆ ಚಿಕ್ಕ ಅನುಮಾನವೂ ಆತನಿಗೆ ಇರಲಿಲ್ಲ. ಹೀಗಾಗಿ ಹೊಟ್ಟೆ ತುಂಬ ಉಂಡಿದ್ದನು.
ವಿಷ ಹೊಟ್ಟೆಗೆ ಹೋಗುತ್ತಿದ್ದಂತೆಯೇ ಆತನಿಗೆ ನರಕ ಕಂಡಿತ್ತು. ಆತ ಅಸ್ವಸ್ಥನಾಗಿ ಪ್ರಜ್ಞೆ ತಪ್ಪುತ್ತಿದ್ದಂತೆಯೇ ರೌದ್ರಾವತಾರ ತಾಳಿದ ಪತ್ನಿ ಸಲ್ಲಾಪುರಿ ಆತನ ಖಾಸಗಿ ಅಂಗಕ್ಕೆ ಒದ್ದಿದಲ್ಲದೆ, ದಿಂಬನ್ನು ಮೂಗಿಗೆ ಒತ್ತಿ ಹಿಡಿದಿದ್ದಾಳೆ. ಹೀಗೆ ಮಾಡಿದ್ದರಿಂದ ಆತ ಕಮಕ್ ಕಿಮಕ್ ಎನ್ನದೆ ಪ್ರಾಣ ಬಿಟ್ಟಿದ್ದಾನೆ. ಆ ನಂತರ ರಾತ್ರಿಯೇ ಮನೆಯಿಂದ ಆತನನ್ನು ಕಷ್ಟಪಟ್ಟು ಎಳೆದುಕೊಂಡು ಹೊರಗೆ ಹೋದ ಆಕೆ ಮನೆಗೆ ಸಮೀಪದಲ್ಲಿದ್ದ ತಿಪ್ಪೆಗುಂಡಿಯನ್ನು ಅಗೆದು ಅಲ್ಲಿ ಹಳ್ಳತೋಡಿ ಶವವನ್ನು ಹಾಕಿ ಮುಚ್ಚಿ ಅದರ ಮೇಲೆ ಎಲೆಗಳು ಮತ್ತು ಜೋಳದ ಹುಲ್ಲು ದಂಟನ್ನು ಹರಡಿ ಯಾವುದೇ ಅನುಮಾನ ಬಾರದಂತೆ ಮಾಡಿದ್ದಾಳೆ.
ಮಾರನೆಯ ದಿನ ಸೆಪ್ಟಂಬರ್ 9 ಮಂಗಳವಾರ ನನ್ನ ಗಂಡನನ್ನು ಹುಲಿ ಎಳೆದೊಯ್ದಿದೆ ಎಂಬ ಕಥೆ ಕಟ್ಟಿ ಜನರ ಮುಂದೆ ಕಣ್ಣೀರಿಟ್ಟಿದ್ದಾಳೆ. ವಿಷಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆಗೂ ತಲುಪಿದೆ. ಸುತ್ತಮುತ್ತಲಿನ ಜನರೂ ಓಡಿ ಬಂದಿದ್ದಾರೆ. ಏನಾಯಿತು ಎಂದು ಕೇಳಿದಾಗ ಮೊದಲೇ ತಯಾರು ಮಾಡಿಕೊಂಡಿದ್ದ ಕಥೆಯನ್ನು ಅವರ ಮುಂದೆ ಬಿಚ್ಚಿಟ್ಟಿದ್ದಾಳೆ.
ಸೋಮವಾರ ರಾತ್ರಿ ಹುಲಿ ಘರ್ಜಿಸಿದ ಸದ್ದಾಯಿತು. ಮನೆಯೊಳಗಿದ್ದ ಗಂಡ ವೆಂಕಟಸ್ವಾಮಿ ಮನೆಯ ಬಾಗಿಲು ತೆಗೆದು ಹೊರಗೆ ಹೋಗಿ ಏನಾಗಿದೆ ಎಂದು ನೋಡಿಕೊಂಡು ಬರುತ್ತೇನೆ. ನೀನು ಮನೆಯೊಳಗಿರು ಎಂದು ಹೇಳಿ ಹೊರಗೆ ಹೋಗಿದ್ದು ಆ ನಂತರ ಮರಳಿ ಮನೆಗೆ ಬರಲೇ ಇಲ್ಲ. ಆತನನ್ನು ಹುಲಿಯೇ ಹೊತ್ತುಕೊಂಡು ಹೋಗಿದೆ ಎಂದು ಗೋಳಾಡಿದ್ದಾಳೆ. ಊರಿನವರು, ಪೊಲೀಸರು, ಅರಣ್ಯ ಇಲಾಖೆಯವರು ಆಕೆಗೆ ಸಮಾಧಾನ ಮಾಡಿ ವೆಂಕಟಸ್ವಾಮಿ ಶವ ಮತ್ತು ಹುಲಿಗಾಗಿ ಹುಡುಕಾಟ ಆರಂಭಿಸಿದ್ದರು.
ಅರಣ್ಯ ಇಲಾಖೆ ಜೊತೆಗೆ ಗ್ರಾಮಸ್ಥರು ಸೇರಿ ಸುಮಾರು 60 ಮಂದಿ ತೋಟ, ಹೊಲ ಎಂಬಂತೆ ಎಲ್ಲೆಡೆ ಜಾಲಾಡಿದ್ದಾರೆ. ಆದರೆ ಎಲ್ಲಿಯೂ ಹುಲಿಯ ಹೆಜ್ಜೆಯಾಗಲೀ, ವೆಂಕಟಸ್ವಾಮಿಯನ್ನು ಹುಲಿಯೇ ಹೊತ್ತೊಯ್ದಿದೆ ಎಂಬುದಕ್ಕೆ ಎಳೆದೊಯ್ದ ಗುರುತು, ರಕ್ತದ ಕಲೆ ಹೀಗೆ ಯಾವುದೇ ಕುರುಹು ಪತ್ತೆಯಾಗಲಿಲ್ಲ. ಇದೇ ವೇಳೆಗೆ ಸಲ್ಲಾಪುರಿ ಇನ್ನಷ್ಟು ನಂಬಿಸುವ ಸಲುವಾಗಿ ಗೋಳಾಡುತ್ತಾ ತಮ್ಮ ತೋಟಕ್ಕೆ ಆನೆ ಬಂದಿತ್ತು ಎಂಬುದನ್ನು ತೋರಿಸಿದ್ದಳು. ಆದರೆ ಅದು ಬಂದು ಹೋಗಿ ಬಹಳ ದಿನಗಳೇ ಕಳೆದು ಹೋಗಿದ್ದವು. ಹೀಗಾಗಿ ಆಕೆಯ ಮೇಲೆಯೇ ಸಂಶಯ ಬರಲಾರಂಭಿಸಿತು.
ಆಕೆಯನ್ನು ಪ್ರಶ್ನಿಸಿದಾಗಲೆಲ್ಲ ಹಾರಿಕೆಯ ಉತ್ತರ ಹೇಳುತ್ತಿದ್ದಳಲ್ಲದೆ, ಅವಳು ನೀಡುತ್ತಿದ್ದ ಉತ್ತರಗಳಲ್ಲಿ ಒಂದಕ್ಕೊಂದು ಸಂಬಂಧವೇ ಇರುತ್ತಿರಲಿಲ್ಲ. ಹೀಗಾಗಿ ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ಮುನಿಯಪ್ಪ ಅವರಿಗೆ ಸಂಶಯ ಬಂದು ಅವರಿದ್ದ ಅಡಿಕೆ ತೋಟವನ್ನು ಸಂಪೂರ್ಣವಾಗಿ ಹುಡುಕುವಂತೆ ಹೇಳಿದ್ದಾರೆ. ಹೀಗೆ ಹುಡುಕುವಾಗ ಅನುಮಾನ ಪಡುವಂತಹ ಕುರುಹು ಅಲ್ಲಿ ಪತ್ತೆಯಾಗಿತ್ತು. ಅದೇನೆಂದರೆ ಮನೆಯಿಂದ ಸೆಗಣಿ ಗುಂಡಿಯ ಕಡೆಗೆ ಮನುಷ್ಯಬ ಹೆಜ್ಜೆ ಗುರುತು ಕಾಣಿಸಿತ್ತಲ್ಲದೆ, ಏನನ್ನೋ ಎಳೆದೊಯ್ದ ಗುರುತು ಕಾಣಿಸಿತ್ತು. ಆದರೆ ಮಳೆಗೆ ಅಳಿಸಿದಂತಾಗಿತ್ತು. ಇನ್ನು ತೋಟಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಅನುಮಾನ ಹುಟ್ಟಿಸುವಂತಹ ಚಲನವಲನಗಳು ಸೆರೆಯಾಗಿದ್ದವು. ಅಲ್ಲದೆ ಸಲ್ಲಾಪುರಿ ಏಕಾಂಕಿಯಾಗಿ ಅಡ್ಡಾಡುತ್ತಿದ್ದದ್ದು ಕಂಡು ಬಂದಿತ್ತು. ಹೀಗಾಗಿ ಆಕೆಯ ಮೇಲೆಯೇ ಅನುಮಾನ ಗಟ್ಟಿಯಾಗಿತ್ತು. ಆದ್ದರಿಂದ ಆಕೆಯನ್ನು ಪೊಲೀಸ್ ಸ್ಟೈಲ್ ನಲ್ಲಿ ವಿಚಾರಿಸಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ.
ಸಲ್ಲಾಪುರಿ ಮಾಡಿದ ಕಿತಾಪತಿ ಬಹಿರಂಗವಾಗುತ್ತಿದ್ದಂತೆಯೇ ಎಸ್ಪಿ ವಿಷ್ಣುವರ್ಧನ್ ಅವರ ನಿರ್ದೇಶನದಂತೆ ಎಎಸ್ಪಿ ಸಿ. ಮಲ್ಲಿಕ್, ಹುಣಸೂರು ಉಪ ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ, ಹುಣಸೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಧಾ, ಜಿಲ್ಲಾ ಬೆರಳಚ್ಚು ಘಟಕದ ಇನ್ಸ್ ಪೆಕ್ಟರ್ ಎಂ.ಆರ್. ಬಾಲಸುಬ್ರಹ್ಮಣ್ಯ, ಸಹಾಯಕ ಸಬ್ ಇನ್ಸ್ ಪೆಕ್ಟರ್ ಹೆಚ್. ಆರ್. ಹರೀಶ್, ಮುಖ್ಯಪೇದೆ ಹೆಚ್.ಮಧುಚಂದ್ರ, ಸೀನ್ ಆಫ್ ಕ್ರೈಂ ಅಧಿಕಾರಿ ಆದರ್ಶ ಮತ್ತು ಮೋಹಿತ್ ಅವರು ಸ್ಥಳಕ್ಕೆ ಭೇಟಿ ನೀಡಿ ಹುಣಸೂರು ಉಪವಿಭಾಗಾಧಿಕಾರಿ ವಿಜಯ್ ಕುಮಾರ್ ಸಮ್ಮುಖದಲ್ಲಿ ತಿಪ್ಪೆಗುಂಡಿಯನ್ನು ಅಗೆದಿದ್ದು ಈ ವೇಳೆ ಮೊದಲಿಗೆ ವೆಂಕಟಸ್ವಾಮಿಯ ಕೈ ಕಂಡಿದೆ. ಆ ನಂತರ ಅಗೆದು ಶವವನ್ನು ಹೊರತೆಗೆದು ಮಹಜರು ನಡೆಸಿ ಶವದ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಾಸುದಾರರಿಗೆ ನೀಡಲಾಗಿದೆ.
ಸದ್ಯ ಹಣದಾಸೆಗಾಗಿ ಗಂಡನನ್ನು ಕೊಂದು ಹುಲಿಹೊತ್ತೊಯ್ದಿದೆ ಎಂದು ಕಥೆ ಕಟ್ಟಿದ ಸಲ್ಲಾಪುರಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಈಕೆ ಮಾಡಿದ ಕೃತ್ಯದಿಂದ ಇದೀಗ ಮಕ್ಕಳಿಬ್ಬರು ಅಪ್ಪ ಅಮ್ಮನಿಲ್ಲದೆ ತಬ್ಬಲಿಯಾಗಿವೆ. ಇಡೀ ಪ್ರಕರಣವನ್ನು ನೋಡಿದಾಗ ಹಣದಾಸೆಗೆ ಹೀಗೂ ಮಾಡುತ್ತಾರಾ? ಎಂಬುದು ಅಚ್ಚರಿಯಾಗಿಯೇ ಉಳಿಯುತ್ತದೆ.
-ಬಿ.ಎಂ.ಲವಕುಮಾರ್