ನಮ್ಮೊಳಗೆ ಸದಾ ಒಳ್ಳೆಯ ಕಲ್ಪನೆಗಳಿರಲಿ.. ಅವು ನಮ್ಮನ್ನು ಸುಖವಾಗಿಡುತ್ತವೆ.. ವಿವೇಕಾನಂದರು ಹೇಳಿದ್ದೇನು?

ಈಗೀಗ ನಾವು ಬರೀ ಕಲ್ಪನೆಯಲ್ಲಿಯೇ ಕಾಲ ಕಳೆಯುತ್ತಿದ್ದೇವೆ.. ಆ ಕಲ್ಪನೆಗಳು ಕೂಡ ಬಣ್ಣ, ಬಣ್ಣದಾಗುತ್ತಿವೆ.. ಏಕೆ ಹೀಗೆ? ನಾವೆಲ್ಲರೂ ಏನೋ ಸಾಧಿಸಬೇಕೆಂದುಕೊಂಡೇ ದಿನವನ್ನು ಆರಂಭಿಸುತ್ತಿದ್ದೇವೆ.. ಒತ್ತಡದ ಕೆಲಸಗಳ ನಡುವೆ ನಾಳಿನ ಬದುಕಿನ ಬಗೆಗಿನ ಸುಂದರ ಕಲ್ಪನೆಗಳು ನಮ್ಮನ್ನು ನಿರೀಕ್ಷೆಯ ಬದುಕಿಗೆ ಕೊಂಡೊಯ್ಯುತ್ತಿದೆ.. ಸುಂದರ ಕಲ್ಪನೆಗಳನ್ನು ಎಳೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ.. ಆದರೆ ಬರೀ ಕಲ್ಪನಾ ಲೋಕದಲ್ಲಿ ವಿಹರಿಸುವುದರಲ್ಲಿ ಅರ್ಥವಿಲ್ಲ.
ಜಾಗತೀಕರಣ, ಔದ್ಯೋಗೀಕರಣ ಪರಿಸರ ನಮ್ಮ ಬದುಕಿನ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿದೆ. ಹೀಗಾಗಿ ನಾವು ಇಂದು ದೈಹಿಕ ಶ್ರಮಕ್ಕಿಂತ ಹೆಚ್ಚಾಗಿ ಮಾನಸಿಕ ಶ್ರಮಪಡುತ್ತಿದ್ದೇವೆ. ವಿಜ್ಞಾನ ಮುಂದುವರೆದಿರುವುದರಿಂದ ಮೊದಲಿನಷ್ಟು ದೈಹಿಕ ಶ್ರಮಪಡಬೇಕಾದ ಅಗತ್ಯವಿಲ್ಲವಾದರೂ ಅದಕ್ಕಿಂತ ಎರಡರಷ್ಟು ಮಾನಸಿಕ ಶ್ರಮಪಡುತ್ತಿದ್ದೇವೆ. ಅಷ್ಟೇ ಅಲ್ಲದೆ ನಾಳಿನ ಬಗ್ಗೆ ಅನಗತ್ಯ ಕಲ್ಪನೆಗಳನ್ನು ಮಾಡಿಕೊಳ್ಳುತ್ತಾ ಸಾಗುತ್ತಿದ್ದೇವೆ. ಆದರೆ ಅವುಗಳ ಪೈಕಿ ಹೆಚ್ಚಿನವು ಅನಗತ್ಯ ಕಲ್ಪನೆಗಳೇ ತುಂಬಿಕೊಳ್ಳುತ್ತಿರುವುದರಿಂದ ಮಾನಸಿಕ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತಿದೆ.
ನಾವೆಲ್ಲರೂ ಮನುಷ್ಯರು ಹೀಗಾಗಿ ನಮಗೆ ಇವತ್ತಿನ ಬದುಕಿಗಿಂತ ನಾಳೆಯ ಬದುಕಿನ ಬಗ್ಗೆಯೇ ಚಿಂತೆ ಜಾಸ್ತಿ. ಹೀಗಾಗಿ ಆ ನಾಳೆಗಾಗಿ ಇವತ್ತೇ ಹೆಚ್ಚಿನ ಶ್ರಮ ವಹಿಸಿ ದುಡಿಯುತ್ತೇವೆ. ಅಷ್ಟೇ ಅಲ್ಲ, ನಾಳೆಗಾಗಿ ಏನೆಲ್ಲಾ ಮಾಡಬೇಕೆಂಬುವುದರ ಬಗ್ಗೆ ಇಲ್ಲ ಸಲ್ಲದ ಅನಗತ್ಯ ಕಲ್ಪನೆಗಳನ್ನು ಹುಟ್ಟು ಹಾಕಿಕೊಳ್ಳುತ್ತೇವೆ. ಅದು ಸಾಧ್ಯವಾಗದೆ ಹೋದಾಗ ನಿರಾಸೆಗೊಳಗಾಗುತ್ತೇವೆ. ಕೆಲಸದ ಮೇಲೆ ಆಸಕ್ತಿ ಕಳೆದುಕೊಳ್ಳುತ್ತೇವೆ.. ಇನ್ನೇನೋ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡು ಹೊರಳಾಡುತ್ತೇವೆ.
ಮನುಷ್ಯನಿಗೆ ಕಲ್ಪನೆ ಬೇಕು. ಆದರೆ ಕಲ್ಪನೆಯೇ ಬದುಕಾಗಬಾರದು. ಹೀಗಾದರೆ ನಾವು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ನಿಜ ಹೇಳಬೇಕೆಂದರೆ ಕಲ್ಪನಾಶಕ್ತಿ ಇದೆಯಲ್ಲ ಅದು ಮನುಷ್ಯನಿಗೆ ದೇವರು ನೀಡಿದ ವರವಂತೆ ಆದರೆ ನಾವು ಅದನ್ನು ಸದ್ವಿನಿಯೋಗ ಮಾಡಿಕೊಳ್ಳದೆ, ಗಾಳಿಗೋಪುರ ಕಟ್ಟುವುದರಲ್ಲಿ, ಹಗಲು ಕನಸು ಕಾಣುವುದರಲ್ಲಿ, ಅರ್ಥವಿಲ್ಲದ, ಉಪಯೋಗಕ್ಕೆ ಬಾರದ ವಿಚಾರಗಳನ್ನು ಕಲ್ಪಿಸಿಕೊಳ್ಳುವುದರಲ್ಲಿ ಕಳೆದು ಬಿಡುತ್ತಿದ್ದೇವೆ ಎಂಬುದು ಚಿಂತಕರ ಅಭಿಪ್ರಾಯವಾಗಿದೆ.
ನಿಜ ಹೇಳಬೇಕೆಂದರೆ ನಮ್ಮ ಕಲ್ಪನೆಗಳೆಲ್ಲವೂ ಕಾಲ್ಪನಿಕ. ಅಷ್ಟೆ ಮಾತ್ರವಲ್ಲದೆ ಅವು ನಿರಾಧಾರವೂ ಹೌದು. ಆದರೆ ಅವು ತರುವ ನಿರಾಶೆ ವಾಸ್ತವವಾದವುಗಳು… ಭಯಗಳು ನಿರಾಧಾರವಾದರೂ ಅವು ಉಂಟು ಮಾಡುವ ತಲ್ಲಣ ವಾಸ್ತವವೇ… ಹಾಗೆಂದು ಕಲ್ಪಿಸಿಕೊಳ್ಳುವುದು ತಪ್ಪೇ? ಎಂಬ ಪ್ರಶ್ನೆ ಉದ್ಭವಿಸಬಹುದು. ಇದರ ಬಗ್ಗೆ ಅಧ್ಯಾತ್ಮಿಕ ಚಿಂತಕರು ಹಲವು ರೀತಿಯಲ್ಲಿ ವಿಶ್ಲೇಷಣೆ ಮಾಡಿರುವುದನ್ನು ನಾವು ನೋಡಬಹುದಾಗಿದೆ. ಒಂದು ಕಡೆ ಸ್ವಾಮಿ ವಿವೇಕಾನಂದರು ಸರಿಯಾಗಿ ಬಳಸುವುದಾದರೆ ನಮಗೆ ಕಲ್ಪನೆಗಿಂತ ಆಪ್ತವಾದದ್ದು ಬೇರೆ ಯಾವುದೂ ಇಲ್ಲ. ಆದರೆ ನಾವು ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳದೆ ನಿರಾಶರಾಗುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಇದು ನಿಜ ತಾನೆ?
ನಿಜ ಹೇಳಬೇಕೆಂದರೆ ನಮ್ಮ ಬದುಕಿನ ಅಮೂಲ್ಯವಾದ ಭಾಗ ಕೂಡ ಕಲ್ಪನೆಯ ಲೋಕದಲ್ಲಿ ಕಳೆದು ಹೋಗಿರುತ್ತದೆ. ಆದರೆ ಅದು ನಮ್ಮ ಅರಿವಿಗೆ ಬಂದಿರುವುದಿಲ್ಲ. ಒಂದು ಮುಖ್ಯವಾದ ನೆನಪಿಡಬೇಕಾದ ಅಂಶವೆಂದರೆ, ಅನಗತ್ಯ ಕಲ್ಪನಾ ಲೋಕದಲ್ಲಿ ವಿಹರಿಸುವ ಚಟವನ್ನು ತ್ಯಜಿಸುವುದು ಒಳ್ಳೆಯದು. ಇಲ್ಲದೆ ಹೋದರೆ ನಮ್ಮನ್ನು ನಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರುವುದು ಕಷ್ಟವಾಗುತ್ತದೆ. ಇದನ್ನು ಸಾಧಿಸುವುದು ಹೇಗೆ ಎಂಬುವುದಕ್ಕೆ ದೃಷ್ಟಾಂತ ಕಥೆಯೊಂದನ್ನು ಸ್ವಾಮಿ ವಿವೇಕಾನಂದರು ನಮ್ಮ ಮುಂದಿಟ್ಟಿದ್ದಾರೆ.
ಅದು ಏನೆಂದರೆ… ಒಂದಷ್ಟು ಕುಡಿದು ಮತ್ತೇರಿದ ಸಭ್ಯ ವ್ಯಕ್ತಿಯೊಬ್ಬ ನಿಧಾನವಾಗಿ ಬೀದಿಯಲ್ಲಿ ನಡೆದು ಹೋಗುತ್ತಿದ್ದನು. ಅವನ ಕೈಯ್ಯಲ್ಲಿ ಒಂದು ಪೆಟ್ಟಿಗೆಯಿತ್ತು. ಆ ಪೆಟ್ಟಿಗೆಯ ಮುಚ್ಚಳದ ಭಾಗದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಸಾಲಾದ ರಂಧ್ರಗಳಿದ್ದವು. ನೋಡಿದರೆ ಆತ ಆ ಪೆಟ್ಟಿಗೆಯೊಳಗೆ ಏನೋ ಒಂದು ಜೀವಂತವಾದ ಪ್ರಾಣಿಯೊಂದನ್ನು ಇರಿಸಿಕೊಂಡಂತೆ ಕಾಣುತ್ತಿತ್ತು. ದಾರಿಯಲ್ಲಿ ಪರಿಚಿತನೊಬ್ಬ ತಡೆದು ಮಾತನಾಡಿಸಿ ’ಏನಿದು ನಿನ್ನ ಬುಟ್ಟಿಯೊಳಗೆ’ ಎಂದು ಕೇಳಿದನು. ಅದಕ್ಕೆ ಸಭ್ಯ ವ್ಯಕ್ತಿ ’ಇದರೊಳಗೊಂದು ಮುಂಗುಸಿಯಿದೆ’ ಎಂದನು. ’ಅದು ಸರಿ ಆ ಪೆಟ್ಟಿಗೆಯೊಳಗೆ ಏಕಿಟ್ಟಿರುವೆ’ ಎಂದು ಮತ್ತೆ ಪ್ರಶ್ನಿಸಿದನು ಪರಿಚಿತ.
’ಅದಂತೂ ಇದೆ. ಈಗ ನೋಡು ನಾನು ಕುಡಿಯುತ್ತೇನೆ. ಹಾಗೆ ನಾನು ಕುಡಿದಾಗ ನನ್ನ ಸುತ್ತ ಹಾವುಗಳು ಕಾಣಿಸಿಕೊಳ್ಳುತ್ತವೆ. ಆಗ ನನಗೆ ಭಯವಾಗುತ್ತದೆ. ಆ ಹಾವುಗಳಿಂದ ರಕ್ಷಿಸಿಕೊಳ್ಳಲು ಈ ಪೆಟ್ಟಿಗೆಯೊಳಗೆ ಮುಂಗುಸಿಯನ್ನಿರಿಸಿಕೊಂಡಿದ್ದೇನೆ’ ಎಂದನು. ಅದಕ್ಕೆ ಪರಿಚಿತ ’ಅಯ್ಯೋ ದೇವರೆ ನಿನಗೆ ಕಾಣುತ್ತದೆ ಎಂದೆಯಲ್ಲ, ಅದೆಲ್ಲವೂ ಕಲ್ಪನೆಯ ಹಾವುಗಳು’ ಎಂದನು. ಆಗ ಸಭ್ಯ ವ್ಯಕ್ತಿ ’ನನ್ನ ಪೆಟ್ಟಿಗೆಯೊಳಗೆ ಇರುವುದು ಸಹ ಕಲ್ಪನೆಯ ಮುಂಗುಸಿಯೇ’ ಎಂದನು. ನಿಜವಾಗಿ ಹೇಳಬೇಕೆಂದರೆ ಆ ಪೆಟ್ಟಿಗೆ ಖಾಲಿಯಾಗಿಯೇ ಇತ್ತು.
ಈ ಕಥೆಯ ಸಾರಾಂಶವೇನೆಂದರೆ, ನಾವು ಒಂದು ಕಲ್ಪನೆಯನ್ನು ನಿಷ್ಪಲಗೊಳಿಸಲು ಮತ್ತೊಂದು ಕಲ್ಪನೆಯನ್ನು ಅಪೇಕ್ಷಿಸುತ್ತೇವೆ. ತಪ್ಪಾದ ಕಲ್ಪನೆಯನ್ನು ತೊಡೆದು ಹಾಕಲು ಸರಿಯಾದ ಕಲ್ಪನೆ ಬೇಕು ಎಂಬುವುದಾಗಿ ಸ್ವಾಮಿ ವಿವೇಕಾನಂದರು ಇಲ್ಲಿ ದೃಷ್ಟಾಂತ ಕಥೆಯ ಮೂಲಕ ನಮ್ಮ ಮುಂದಿಟ್ಟಿದ್ದಾರೆ. ಯಾರದ್ದೋ ಬಗ್ಗೆ, ಯಾವುದೋ ವಿಚಾರದಲ್ಲಿ ಸ್ಪಷ್ಟವಾಗಿ ಅರಿಯದೆ, ತಾವೇ ತಮಗಿಷ್ಟ ಬಂದಂತೆ ಕಲ್ಪಿಸಿಕೊಳ್ಳುವುದಿದೆಯಲ್ಲ ಅದು ಮಹಾಅಪರಾಧ. ಇದಕ್ಕೆ ಭಾರೀ ಬೆಲೆ ತೆರಬೇಕಾದ ಸಮಯ ಬಂದರೂ ಬರಬಹುದು.
ಇದೆಲ್ಲ ತೊಂದರೆಗಳಿಂದ ಪಾರಾಗ ಬೇಕಾದರೆ ನಮ್ಮ ಕಲ್ಪನೆ ಸದಾ ಒಳ್ಳೆಯ ವಿಚಾರಕ್ಕೆ ಸಂಬಂಧಪಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು. ಇಷ್ಟಕ್ಕೂ ನಮ್ಮೊಳಗಿನ ಕಲ್ಪನೆ ಎಂಬುವುದು ಬುದ್ದಿಯಾಚೆಗೆ ಹಾಗೂ ಎಲ್ಲೆಲ್ಲೂ ಕರೆದೊಯ್ಯುವ ಒಂದೇ ಒಂದು ಬೆಳಕು. ಭಗವಂತನನ್ನು ಕುರಿತ ಚಿಂತನೆಯೇ ಅತ್ಯಂತ ಪರಿಶುದ್ಧವಾದ ಕಲ್ಪನೆ. ಭಗವದ್ ವಿಷಯಗಳಲ್ಲಿ ನಾವು ಮಗ್ನರಾದಷ್ಟು ನಮ್ಮ ಮನಸ್ಸಿನ ತಲ್ಲಣಗಳು ಕಡಿಮೆಯಾಗುತ್ತವೆ ಎಂಬುದಂತು ನಿಜ.. ಅದು ಏನೇ ಇರಲಿ ನಾವೆಲ್ಲರೂ ಒಳ್ಳೆಯ ಕಲ್ಪನೆಯನ್ನೇ ಮಾಡೋಣ.. ಮತ್ತು ನೆಮ್ಮದಿಯಾಗಿ ಇದ್ದು ಬಿಡೋಣ..
B.M.Lavakumar