LatestState

ಪತ್ರಕರ್ತರಿಗೆ ಕೃಷಿ ಮಾಧ್ಯಮ ಪ್ರಶಸ್ತಿ ಮತ್ತು ಮಾಧ್ಯಮ ಅಕಾಡೆಮಿ ಫೆಲೋಷಿಪ್ ಗೆ ಅವಕಾಶ… ಇಂದೇ ಅರ್ಜಿ ಸಲ್ಲಿಸಿ!

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಕೃಷಿ ತಂತ್ರಜ್ಞಾನಗಳ ಪ್ರಸರಣೆಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೃಷಿ ಮಾಧ್ಯಮ ಪ್ರಶಸ್ತಿಯನ್ನು ಪ್ರಾರಂಭಿಸಿದ್ದು,  “ಹೊಂಬಾಳೆ ಸಂಹಿತ ಹರಿಣಿಕುಮಾರ್ ಕೃಷಿ ಮಾಧ್ಯಮ ಪ್ರಶಸ್ತಿ-2025” ಗೆ ಅರ್ಜಿ ಆಹ್ವಾನಿಸಲಾಗಿದ್ದು, ಮುದ್ರಣ ಮತ್ತು ವಿದ್ಯಮಾನ ಮಾಧ್ಯಮದ ಪತ್ರಕರ್ತರು, ವರದಿಗಾರರು, ನಿರೂಪಕರು, ಅಧಿಕಾರಿಗಳು ಮತ್ತು ವಿಸ್ತರಣ ಕಾರ್ಯಕರ್ತರು ಅರ್ಜಿಯನ್ನು ಸಲ್ಲಿಸಬಹುದು. 

ಈ ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ರೂ.10,000/- ನಗದು ಬಹುಮಾನ ಒಳಗೊಂಡಿರುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಹಳೆಯ ವಿದ್ಯಾರ್ಥಿಗಳ ಸಂಘ (ರಿ), ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಪಶು ವೈದ್ಯಕೀಯ ಕಾಲೇಜು ಆವರಣ, ಹೆಬ್ಬಾಳ, ಬೆಂಗಳೂರು-560024 ಇವರಿಗೆ 2025 ರ ಆಗಸ್ಟ್ 14 ರೊಳಗೆ ಸಲ್ಲಿಸುವುದು.

ಭಾರತ ಕೃಷಿ ಪ್ರಧಾನ ರಾಷ್ಟ್ರ, ಶೇಕಡ 60 ರಷ್ಟು ಜನರ ಮುಖ್ಯ ಕಸುಬು ವ್ಯವಸಾಯವಾಗಿದೆ. ಕೃಷಿ ಸಂಬಂದಿತ ವಿಶ್ವವಿದ್ಯಾನಿಲಯಗಳು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯ ಅಂಗ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಮತ್ತು ರೈತರು ಕೃಷಿಯಲ್ಲಿ ನೂತನ ತಂತ್ರಜ್ಞಾನಗಳನ್ನು ಬಿಡುಗಡೆಗೊಳಿಸುತ್ತಿವೆ. ಈ ನೂತನ ತಂತ್ರಜ್ಞಾನಗಳನ್ನು ಕೃಷಿ ವಿಜ್ಞಾನ ಕೇಂದ್ರಗಳು, ವಿಸ್ತರಣಾ ಶಿಕ್ಷಣ ಘಟಕಗಳು, ಸರ್ಕಾರದ ಅಭಿವೃದ್ಧಿ ಇಲಾಖೆಗಳು ಕೃಷಿ ಪರಿಕರ ಸಂಸ್ಥೆಗಳು ಮತ್ತು ಸಮೂಹ ಮಾಧ್ಯಮಗಳು ರೈತರಿಗೆ ತಲುಪಿಸುತ್ತಿದ್ದಾರೆ.

ಆದರೂ ಸಹ ಬಹುತೇಕ ತಂತ್ರಜ್ಞಾನಗಳು ರೈತರಿಗೆ ಸಕಾಲದಲ್ಲಿ ತಲುಪದೆ ಕೃಷಿ ಅಭಿವೃದ್ಧಿ ಕುಂಟಿತವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮುದ್ರಣ ಮತ್ತು ವಿದ್ಯುನ್ಯಾನ ಮಾಧ್ಯಮಗಳು ರಾಜಕೀಯ, ಕ್ರೀಡೆ ಮತ್ತು ಮನೋರಂಜನೆಗೆ ನೀಡುವ ಮಹತ್ವವನ್ನು ಕೃಷಿ ರಂಗಕ್ಕೆ ನೀಡುತ್ತಿಲ್ಲ. ಇದನ್ನು ಮನಗಂಡು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಕೃಷಿ ಮಾಧ್ಯಮ ಪ್ರಶಸ್ತಿಯನ್ನು ಪ್ರಾರಂಭಿಸಿದ್ದು, ಅರ್ಹ ಪತ್ರಕರ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಪ್ರಶಸ್ತಿ ಕುರಿತಂತೆ  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080-23410754 ಇ-ಮೇಲ್ ವಿಳಾಸ: alumniuasb83@gmail.com   ಜಾಲತಾಣ : www.alumniuasb.in  ಗೆ ಸಂಪರ್ಕಿಸಬಹುದು ಎಂದು  ತಿಳಿಸಲಾಗಿದೆ.

ಮಾಧ್ಯಮ ಅಕಾಡೆಮಿಯಿಂದ ಫೆಲೋಷಿಪ್‍                                                                                                          

ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ಪತ್ರಕರ್ತರಿಗೆ ಆರು ವಿಷಯಗಳ ಕುರಿತ ಫೆಲೋಷಿಪ್‍ಗೆ ಅರ್ಜಿ ಆಹ್ವಾನಿಸಲಾಗಿದೆ. ಅಕಾಡೆಮಿಯ ಸಾಮಾನ್ಯ ಆಯವ್ಯಯದಡಿ ಎರಡು, ಮಹಿಳಾ ಆಯವ್ಯಯದಡಿ ಎರಡು ಹಾಗೂ ಪರಿಶಿಷ್ಟ ಜಾತಿ ಉಪಯೋಜನೆಯಡಿ ಒಂದು ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಒಂದು ಫೆಲೋಷಿಪ್ ನೀಡಲಾಗುವುದು. ಫೆಲೋಷಿಪ್ ಅವಧಿ 6 ತಿಂಗಳು.

ಕನಿಷ್ಠ ಐದು ವರ್ಷ ಸೇವಾನುಭವ ಹೊಂದಿರುವ, ಕನಿಷ್ಠ 30 ವರ್ಷದಿಂದ 50 ವರ್ಷ ವಯೋಮಿತಿಯ ಪತ್ರಕರ್ತರು ಫೆಲೋಷಿಪ್‍ಗೆ ಅರ್ಜಿ ಸಲ್ಲಿಸಬಹುದು. ಪತ್ರಕರ್ತರು ಪದವೀಧರರಾಗಿರಬೇಕು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಹಾಗೂ ಉಪಗ್ರಹ ಸುದ್ದಿವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಿರಬೇಕು. ಈ ಕುರಿತು ಸಂಪಾದಕರ ದೃಢೀಕರಣ ಪತ್ರ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಲು 2 ನೇ ಆಗಸ್ಟ್ 2025 ಕೊನೆಯ ದಿನವಾಗಿದ್ದು, ವಿಜೇತರ ಆಯ್ಕೆಯಲ್ಲಿ ಅಕಾಡೆಮಿಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.

ಫೆಲೋಷಿಪ್‍ನ ವಿಷಯಗಳು: 1. ಬಾಲ್ಯವಿವಾಹ, POCSO, ಮರ್ಯಾದೆಗೇಡು ಹತ್ಯೆ- ಮಾಧ್ಯಮ ದೃಷ್ಟಿಕೋನ, 2. ಕೃಷಿ ಸಂವಹನ- ಒಂದು ಅಧ್ಯಯನ, 3. ಕಲ್ಯಾಣ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಪಾತ್ರ, 4. ಬುಡಕಟ್ಟು ಕಾಯ್ದೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಮಾಧ್ಯಮ ನೋಟ, 5.  Role of Media in creating awareness on cyber crime and digital safety (ಇಂಗ್ಲಿಷ್ ನಲ್ಲಿ ಅಧ್ಯಯನ ವರದಿ ಸಲ್ಲಿಸುವುದು), 6. ಮಾಧ್ಯಮ ಶಿಕ್ಷಣ ಮತ್ತು ವೃತ್ತಿ ನಡುವಿನ ಅಂತರ: ಕಾರಣಗಳು, ಪರಿಣಾಮ ಹಾಗೂ ಪರಿಹಾರ.

ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‍ಸೈಟ್ mediaacademy.karnataka.gov.in ನಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರಕ ದಾಖಲೆಗಳು ಹಾಗೂ ಅಧ್ಯಯನ ಕುರಿತ ಟಿಪ್ಪಣಿಯೊಂದಿಗೆ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಗೋಪುರ, ಡಾ. ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು 560001 ಇವರಿಗೆ ಕಳುಹಿಸಬಹುದು ಅಥವಾ kmafellowship2025@gmail.com ಗೆ ಇ-ಮೇಲ್ ಮೂಲಕ ಕಳಿಸಬಹುದಾಗಿದೆ.

 

 

admin
the authoradmin

Leave a Reply