ನಾಲ್ಕು ವೈಷ್ಣವ ಕ್ಷೇತ್ರಗಳಲ್ಲಿ ಒಂದಾದ ಮೇಲುಕೋಟೆಯಲ್ಲಿ ನೆಲೆ ನಿಂತಿರುವ ಚೆಲುವ ನಾರಾಯಣನಿಗೆ ವೈರಮುಡಿ ಕಿರೀಟಧಾರಣೆಯ ಸಂಭ್ರಮ ಮನೆ ಮಾಡಿದ್ದು, ಇದಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಈಗಾಗಲೇ ವೈರಮುಡಿ ಜಾತ್ರಾ ಮಹೋತ್ಸವ ಆರಂಭವಾಗಿದ್ದು ಪ್ರಮುಖ ಘಟ್ಟವಾದ ವೈರಮುಡಿ ಉತ್ಸವ ಮಾರ್ಚ್ 28ರಂದು ಶನಿವಾರ ರಾತ್ರಿ ನಡೆಯುತ್ತಿದೆ..
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿಗೆ ಸೇರಿರುವ ಮೇಲುಕೋಟೆಯು ಮಂಡ್ಯದಿಂದ 28 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು ಮೂರು ಸಾವಿರ ಅಡಿಯಷ್ಟು ಎತ್ತರದಲ್ಲಿದೆ. ಇದು ಭಾರತದಲ್ಲಿರುವ ಪವಿತ್ರ ಕ್ಷೇತ್ರಗಳ ಪೈಕಿ ಒಂದಾಗಿದ್ದು, ದಕ್ಷಿಣ ಭಾರತದ ಪ್ರಮುಖ ನಾಲ್ಕು ವೈಷ್ಣವ ಕ್ಷೇತ್ರ ( ಶ್ರೀರಂಗ, ತಿರುಪತಿ, ಕಾಂಚೀಪುರ, ಮೇಲುಕೋಟೆ)ಗಳಲ್ಲಿ ಒಂದಾಗಿದೆ.

ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆಯಾದರೂ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಾಗಿದೆ. ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ಪೌರಾಣಿಕ ಕಥೆಯಾಗಿದೆ.
ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…
ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಇದು ಹೇಗೆ ಆಚರಣೆಗೆ ಬಂತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿರುವದನ್ನು ನಾವು ಕಾಣಬಹುದಾಗಿದ್ದು, ಅದು ಹೀಗಿದೆ.
ತ್ರೇತಾಯುಗದಲ್ಲಿ ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡುತ್ತಾನೆ. ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು.

ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ಸೋದರ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು. ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನು ಎಂದು ಹೇಳಲಾಗಿದೆ.
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ…
ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.

ವೈರಮುಡಿ ಬ್ರಹ್ಮೋತ್ಸವ ಸಂದರ್ಭ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಮಾತ್ರವಲ್ಲದೆ, ಮೈಸೂರು ಅರಸರಾದ ರಾಜ ಒಡೆಯರ್ ಅರ್ಪಿಸಿದ ರಾಜಮುಡಿಯಲ್ಲದೆ, ಗಂಡಭೇರುಂಢ ಪದಕ, ಶಂಖ, ಚಕ್ರ, ಗಧೆ, ಪದ್ಮಪೀಠ, ಕರ್ಣಕುಂಡಲ ಸೇರಿದಂತೆ 14 ಆಭರಣಗಳನ್ನು ಧರಿಸಲಾಗುತ್ತದೆ.
ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ
ಹತ್ತು ದಿನಗಳ ಉತ್ಸವದಲ್ಲಿ ಪ್ರತಿದಿನವೂ ವಿವಿಧ ಕೈಂಕರ್ಯಗಳೊಂದಿಗೆ ಉತ್ಸವ ನಡೆಯುತ್ತದೆ. ಸಂಜೆ ನಡೆಯುವ ಕಲ್ಯಾಣೋತ್ಸವದ ಮೂಲಕ ಉತ್ಸವ ಆರಂಭವಾಗುತ್ತದೆ. ಧ್ವಜಾರೋಹಣದಂದು ಗರುಡನಿಗೆ ಪೂಜೆ ಸಲ್ಲಿಸುವುದರೊಂದಿಗೆ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲಾಗುವುದು. ಆ ದಿನ ಚೆಲುವರಾಯಸ್ವಾಮಿ ಹಂಸವಾಹನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಎರಡನೆಯ ದಿನ ಶ್ರೀದೇವಿ ಭೂದೇವಿಯರೊಂದಿಗೆ ಶೇಷವಾಹನದ ಸೊಬಗಾದರೆ, ಮೂರನೆಯ ದಿನ ಕಲ್ಯಾಣನಾಯಕಿ ಅಮ್ಮನವರೊಂದಿಗೆ ಬಂಗಾರದ ಪಲ್ಲಕ್ಕಿಯಲ್ಲಿ ನಾಗವಲ್ಲಿ ಮಹೋತ್ಸವದ ಮೆರವಣಿಗೆ ನಡೆಯುತ್ತದೆ. ಅಲ್ಲದೆ ಲೋಕಕಲ್ಯಾಣಾರ್ಥ ಹೋಮ ಕೂಡ ಮಾಡಲಾಗುತ್ತದೆ.

ಜಾತ್ರೆಯಲ್ಲಿ ನಾಲ್ಕನೆಯ ದಿನವು ಬಹಳ ಪ್ರಮುಖ ದಿನವಾಗಿದ್ದು ಅಂದು ರಾತ್ರಿ ಶ್ರೀದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಹಾಗೂ ಬ್ರಾಹ್ಮಿ ಮುಹೂರ್ತದಲ್ಲಿ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುತ್ತದೆ. ಐದನೆಯ ದಿನ ಸಂಜೆ ದೇಶಿಕರ ಸನ್ನಿಧಿಯಲ್ಲಿ ಪ್ರಹ್ಲಾದ ಪರಿಪಾಲನೋತ್ಸವ ನಡೆಯುತ್ತದೆ. ಅಂದು ರಾತ್ರಿ ಬಂಗಾರದ ಗರುಡವಾಹನದಲ್ಲಿ ಅಲಂಕಾರಗೊಂಡ ಚೆಲುವರಾಯಸ್ವಾಮಿ ಭಕ್ತರಿಗೆ ದರ್ಶನ ನೀಡುತ್ತಾನೆ. ಆರನೆಯ ದಿನ ಗಜೇಂದ್ರಮೋಕ್ಷ ಅಲಂಕಾರದ ವೈಭೋತ್ಸವ ಬಳಿಕ ಆನೆ, ಕುದುರೆ ಮಹೋತ್ಸವವು ನಡೆಯುತ್ತದೆ.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…
ಏಳನೆಯ ದಿನ ಶ್ರೀದೇವಿ, ಭೂದೇವಿ, ಕಲ್ಯಾಣನಾಯಕಿ ಹಾಗೂ ರಾಮಾನುಜರೊಂದಿಗೆ ಮಹಾರಥೋತ್ಸವವು ನಡೆಯುತ್ತದೆ. ರಾತ್ರಿ ಬಂಗಾರದ ಪಲ್ಲಕಿ ಸೇವೆಯೂ ಜರುಗುತ್ತದೆ. ಎಂಟನೆಯ ದಿನದಂದು ಕಲ್ಯಾಣಿಯಲ್ಲಿ ಚೆಲುವರಾಯಸ್ವಾಮಿಯ ತೆಪ್ಪೋತ್ಸವವು ನಡೆಯುತ್ತದೆ. ಒಂಭತ್ತನೆಯ ದಿನ ತೀರ್ಥಸ್ನಾನ, ಅವಬೃತ ನಂತರ ಸಂಜೆ ಪರಕಾಲ ಮಠದಲ್ಲಿ ವೈಭವದಿಂದ ಪಟ್ಟಾಭಿಷೇಕ ಜರುಗುತ್ತದೆ. ಹತ್ತನೆಯ ದಿನ ಜಾತ್ರೆಯ ಅಂತಿಮ ದಿನವಾಗಿದ್ದು ಅಂದು ಶ್ರೀಚೆಲುವರಾಯಸ್ವಾಮಿಗೆ ಮಹಾಭಿಷೇಕ ನೆರವೇರುತ್ತದೆ. ಅಲ್ಲಿಗೆ ವೈರಮುಡಿ ಜಾತ್ರೆಯ ಸಂಭ್ರಮ ಮುಗಿದು ಹೋಗುತ್ತದೆ.
B M Lavakumar








