ArticlesLatest

ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?

ಮೈಸೂರಿನ ಮುಕುಟಮಣಿಯಾಗಿರುವ ಚಾಮುಂಡಿಬೆಟ್ಟ ಇದೀಗ ಹಸಿರು ಹಚ್ಚಡದೊಂದಿಗೆ ಕಂಗೊಳಿಸುತ್ತಾ ನಿಸರ್ಗ ಪ್ರಿಯರನ್ನು ತನ್ನಡೆಗೆ ಸೆಳೆಯುತ್ತಿದೆ. ತಣ್ಣಗೆ ಬೀಸುವ ತಂಗಾಳಿ, ಆಗೊಮ್ಮೆ ಈಗೊಮ್ಮೆ ಸುರಿಯುವ ಜಿಟಿ ಜಿಟಿ ಮಳೆ… ಇಡೀ ಬೆಟ್ಟವನ್ನೇ ಮುತ್ತಿಕ್ಕುವ ಮಂಜು.. ಗಿಡಮರಗಳ ನಡುವೆ ಚಿಲಿಪಿಲಿ ಗುಟ್ಟುವ ಹಕ್ಕಿಗಳು.. ಕಣ್ಣು ಹಾಯಿಸಿದುದ್ದಕ್ಕೂ ಹಸಿರ ನೋಟ.. ಇದೀಗ ಚಾಮುಂಡಿ ಬೆಟ್ಟಕ್ಕೆ ತೆರಳಿದರೆ ಇಂತಹದೊಂದು ಸುಂದರ ನೋಟವನ್ನು ನೋಡಲು ಸಾಧ್ಯವಾಗುತ್ತದೆ.

ಜಿ.ಪಿ.ರಾಜರತ್ನಂ ಹೇಳಿರುವಂತೆ ಭೂಮಿನ್ ತಬ್ಬಿದ ಮೋಡದಂತಹ ನೋಟ ಮೈಸೂರು ನಗರದಿಂದ ನಿಂತು ಚಾಮುಂಡಿಬೆಟ್ಟದತ್ತ ಕಣ್ಣು ಹಾಯಿಸಿದಾಗ ಕಂಡು ಬರುತ್ತದೆ.. ಅದರಲ್ಲೂ ಮಳೆಗಾಲದಲ್ಲಿ ಕಂಡು ಬರುವ ಸುಂದರ ನೋಟ ನಮ್ಮ ಮೈಮನವನ್ನು ಪುಳಕಿಸುತ್ತದೆ. ಅದರಲ್ಲೂ ಮುಂಜಾನೆಯಂತು ಮಂಜಿನಿಂದ ಆವರಿಸುವ ಬೆಟ್ಟದ ಹಾದಿಯಲ್ಲಿ ನಡೆಯುವುದೇ ಒಂಥರಾ ಮಜಾ..

ನಿಜ ಹೇಳಬೇಕೆಂದರೆ ಮೈಸೂರಿಗರಿಗೆ ಚಾಮುಂಡಿಬೆಟ್ಟ ವರದಾನ… ಮುಂಜಾನೆ ನೀವು ಚಾಮುಂಡಿಬೆಟ್ಟದ ಮೆಟ್ಟಿಲೇರಿದರೆ ಸಾಕು ಅದರಾಚೆಗೆ ನೀವು ಆರೋಗ್ಯಕ್ಕಾಗಿ ಯಾವುದೇ ವ್ಯಾಯಾಮ ಮಾಡುವಂತಿಲ್ಲ. ಏಕೆಂದರೆ ಒಂದೊಂದು ಮೆಟ್ಟಿಲೇರುವಾಗ ಆಗುವ ಅನುಭವ ದೇಹಕ್ಕೂ ಮನಸ್ಸಿಗೂ ಉಲ್ಲಾಸ ತುಂಬುತ್ತದೆ. ನಿಸರ್ಗದ ನಡುವಿನ ಪ್ರತಿ ಕ್ಷಣವೂ ಆರೋಗ್ಯಕ್ಕೆ ಪೂರಕ ಶಕ್ತಿಯನ್ನು ಒದಗಿಸುತ್ತದೆ. ಇದೊಂಥರಾ ಆಮ್ಲಜನಕದ ಕಣಜ ಎಂದರೂ ತಪ್ಪಾಗಲಾರದು.

ಚಾಮುಂಡಿಬೆಟ್ಟದ ನಿಸರ್ಗ ಸುಂದರತೆ ಮತ್ತು ಮಹತ್ವವನ್ನು ಅರಿತವರು ಪ್ರತಿದಿನವೂ ಮುಂಜಾನೆ ಚಾಮುಂಡಿಬೆಟ್ಟದ ಕಡೆಗೆ ಧಾವಿಸುತ್ತಾರೆ. ಮತ್ತು ಈ ಪರಿಸರದಲ್ಲಿ ಒಂದಷ್ಟು ಸಮಯವನ್ನು ಕಳೆಯುತ್ತಾ.. ಬೆಟ್ಟದಲ್ಲಿರುವ ಒಂದೊಂದೇ ಮೆಟ್ಟಿಲನ್ನೇರುತ್ತಾ ನಿಸರ್ಗದ ನೋಟವನ್ನು ಸವಿಯುತ್ತಾ ಖುಷಿಪಡುತ್ತಾರೆ.

ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…

ಇನ್ನು ಬೆಟ್ಟದ ಮೇಲಿನ ವೀಕ್ಷಣಾ ತಾಣದಿಂದ ನಿಂತು ಒಮ್ಮೆ ಕಣ್ಣು ಹಾಯಿಸಿದರೆ ಕಾಣಸಿಗುವ ಮೈಸೂರು ನಗರದ ನೋಟ ಮುದನೀಡುತ್ತದೆ. ನಿಸರ್ಗದ ನಡುವೆ ಪ್ರಶಾಂತ ವಾತಾವರಣದಲ್ಲಿ ಒಂದಷ್ಟು ಹೊತ್ತು ಕಳೆದು ಹೋದರೆ  ನಿತ್ಯದ ಜಂಜಾಟಗಳ ನಡುವೆಯೂ ಮನಸ್ಸು ಹಗುರವಾಗುತ್ತದೆ. ಬಹಳಷ್ಟು ಜನ ಪ್ರಕೃತಿಯ ನಡುವೆ ಸಮಯ ಕಳೆಯುವ ಮೂಲಕ ಒಂದೊಳ್ಳೆಯ ಗಾಳಿ ಬೆಳಕಿಗೆ ಮೈಯೊಡ್ಡಿ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.

ದೂರದಿಂದಲೇ ಹಚ್ಚಹಸಿರನ್ನು ಹೊದ್ದು ಮಲಗಿದಂತೆ ಕಾಣುವ ಚಾಮುಂಡಿ ಬೆಟ್ಟದ ವಿಹಂಗಮ ನೋಟ ಅದರ ಮೇಲೆ ಮಂಜಿನ ತೆರೆಯ ನಾಗಾಲೋಟ ಬೆಟ್ಟದತ್ತ ಹೆಜ್ಜೆ ಹಾಕುವಂತ ಮಾಡುವುದು ಸಹಜವೇ.. ಏಕೆಂದರೆ ಬೆಟ್ಟಕ್ಕೆ ಜನರನ್ನು ಸೆಳೆಯುವ ಅಂತಹದೊಂದು ಶಕ್ತಿಯಿದೆ.. ಈ ಬೆಟ್ಟವು ಸಮುದ್ರಮಟ್ಟಕ್ಕಿಂತ 3489 ಅಡಿ ಎತ್ತರದಲ್ಲಿರುವ ಬೆಟ್ಟದಲ್ಲಿ ಪಾದದಿಂದ ದೇವಾಲಯಕ್ಕೆ ಹತ್ತಿಕೊಂಡು ಹೋಗಲು ದೊಡ್ಡದೇವರಾಜ ಒಡೆಯರ್ ಒಂದು ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಸುಮಾರು 700 ಮೆಟ್ಟಿಲುಗಳನ್ನೇರಿದಾಗ ಸಮತಟ್ಟಾದ ಸ್ಥಳ ಸಿಗುತ್ತದೆ. ಮೆಟ್ಟಿಲೇರಿ ಬಂದವರಿಗೆ ಇಲ್ಲೊಂದಿಷ್ಟು ವಿಶ್ರಾಂತಿ ಸಿಗುತ್ತದೆ. ಜತೆಗೆ ಬೀಸಿ ಬರುವ ತಂಗಾಳಿ ಸುಸ್ತಾದ ಮನಕ್ಕೆ ಉಲ್ಲಾಸವನ್ನು ನೀಡುತ್ತದೆ.

ಇದಕ್ಕೂ ಮುನ್ನ ಚಾಮುಂಡಿಬೆಟ್ಟದ ಪಾದದಿಂದ ಮೆಟ್ಟಿಲೇರುತ್ತಾ ಹೋದರೆ ಮೊದಲಿಗೆ ಕಾಳಬೈರವೇಶ್ವರನ ಪುಟ್ಟ ಗುಡಿ ಅದರ ಎದುರಿಗೆ ಸಮತಟ್ಟಾದ ಜಾಗವು ಕಾಣಿಸುತ್ತದೆ. ಇಲ್ಲಿ ಬೆಟ್ಟವೇರಿ ಸುಸ್ತಾದವರು ವಿಶ್ರಾಂತಿ ಪಡೆಯಬಹುದಾಗಿದೆ. ಅಲ್ಲಿಂದ ಮುಂದಕ್ಕೆ ಸುಮಾರು ನಾನೂರೈವತ್ತು ಮೆಟ್ಟಿಲೇರಿದರೆ ಇಲ್ಲೊಂದು ಪುಟ್ಟ ಕಲ್ಯಾಣಿ ಕಾಣಸಿಗುತ್ತದೆ. ಇದನ್ನು ಇತ್ತೀಚೆಗಿನ ವರ್ಷಗಳಲ್ಲಿ ಸಂಶೋಧಿಸಿ ಅಭಿವೃದ್ಧಿಪಡಿಸಿದ್ದು, ಇದರಲ್ಲಿ ನೀರು ತುಂಬಿರುವುದು ಕಂಡು ಬರುತ್ತಿದೆ. ಅಲ್ಲಿಂದ ಮುಂದೆ ಮೆಟ್ಟಿಲೇರುತ್ತಾ ಹೋದರೆ ನಂದಿ ಸಿಗುತ್ತದೆ.

ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…

ಇಲ್ಲಿ ಒಂದಷ್ಟು ಸ್ಥಳವಿದೆ. ಇಲ್ಲಿ ಕಲ್ಲಿನ ಮಂಟಪವಿದೆ. ಜತೆಗೆ ಗುಹಾಲಯವೂ ಇದೆ. ನಂದಿಯನ್ನು ನೋಡಲು ಪ್ರವಾಸಿಗರು, ಪೂಜಿಸಲು ಭಕ್ತರು ಬರುತ್ತಾರೆ. ಹೀಗಾಗಿ ಜನರಂತು ಇದ್ದೇ ಇರುತ್ತಾರೆ. ನಂದಿಗೆ ವಾಹದಲ್ಲಿಯೂ ಬರಬಹುದಾಗಿದೆ. ಅಲ್ಲಿಂದ ಮುಂದೆ ನಡೆದರೆ ಹಾಸುಬಂಡೆಯ ಒಂದಷ್ಟು ವಿಶಾಲ ಜಾಗ ಕಾಣಿಸುತ್ತದೆ. ಇದೊಂದು ವೀಕ್ಷಣತಾಣವಾಗಿದ್ದು, ಇಲ್ಲಿಂದ ನಿಂತು ನೋಡಿದರೆ ಮೈಸೂರು ನಗರದ ಸುಂದರ ನೋಟ ಲಭ್ಯವಾಗುತ್ತದೆ. ಜೊತೆಗೆ ದೂರದ ಕೃಷ್ಣರಾಜಸಾಗರ ಜಲಾಶಯದ ಅಲೆಯಾಡುವ ನೀರಿನ ನೋಟವೂ ಲಭ್ಯವಾಗುತ್ತದೆ.

ಇದೆಲ್ಲದರ ನಡುವೆ ರಸ್ತೆ ಮೂಲಕ ವಾಹನಗಳಲ್ಲಿ ತೆರಳಿದರೆ ಹಲವು ಕಡೆ ವ್ಯೂ ಪಾಯಿಂಟ್‌ಗಳಿದ್ದು ಅಲ್ಲಿಂದರೂ ಚಾಮುಂಡಿಬೆಟ್ಟದ ನಿಸರ್ಗ ಸೌಂದರ್ಯ ಮಾತ್ರವಲ್ಲದೆ, ಮೈಸೂರು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನೈಜ ಸುಂದರತೆ ಕಣ್ತುಂಬಿ ಬರುತ್ತದೆ. ಮೆಟ್ಟಿಲನ್ನೇರುತ್ತಾ ಚಾಮುಂಡಿಬೆಟ್ಟದತ್ತ ತೆರಳುವುದೇ ಒಂದು ವಿನೂತನ ಅನುಭವವಾಗಿದೆ.

ಮುಂಜಾನೆ ಹೊತ್ತಿನಲ್ಲಿ ಚಾಮುಂಡಿಬೆಟ್ಟದ ಮೇಲೆ ಅಡ್ಡಾಡಿದರೆ ಹೊಸದೊಂದು ಲೋಕದಲ್ಲಿ ವಿಹರಿಸಿದ ಅನುಭವವಾಗುತ್ತದೆ.. ಒಬ್ಬರಿಗೊಬ್ಬರು ಕಾಣದಂತೆ ಹರಡಿಕೊಳ್ಳುವ ಮಂಜಿನ ತೆರೆಯನ್ನು ಸೀಳಿ ಬರುವ ರವಿ ಕಿರಣಗಳು ಮೈಮನವನ್ನು ಸ್ಪರ್ಶಿಸುವ ಕ್ಷಣಗಳು ರೋಮಾಂಚನಗೊಳಿಸುತ್ತವೆ.

ಇದನ್ನೂ ಓದಿ: ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ…

ಸದಾ ಕೆಲಸ ಮತ್ತು ಇತರೆ ಒತ್ತಡದಲ್ಲಿ ಸಿಲುಕಿ ನಲುಗಿದವರು ತಮ್ಮ ಜಂಜಾಟವನ್ನೆಲ್ಲ ಬದಿಗೊತ್ತಿ ಒಂದಷ್ಟು ಸಮಯವನ್ನು ಪ್ರಕೃತಿ ಮಡಿಲಲ್ಲಿ ಕಳೆಯಬೇಕೆಂಬ ಮನಸಿದ್ದರೆ ಮುಂಜಾನೆ ಚಾಮುಂಡಿಬೆಟ್ಟದತ್ತ ಬಂದರೆ ನಿಸರ್ಗದ ಒಡನಾಟದಲ್ಲಿ ನಮ್ಮ ಒತ್ತಡಗಳು ದೂರವಾಗಿ ಮನಶಾಂತಿ ಸಿಗಲು ಸಾಧ್ಯವಾಗುತ್ತದೆ… ಇನ್ನೇಕೆ ತಡ ನೀವೊಮ್ಮೆ  ಏಕೆ ಚಾಮುಂಡಿಬೆಟ್ಟಕ್ಕೆ ಬರಬಾರದು?

 

B M Lavakumar

admin
the authoradmin

Leave a Reply