ಇವತ್ತು ವಿವಿಧ ನಮೂನೆಯ, ರುಚಿಕರವಾದ ಮೈಸೂರ್ ಪಾಕ್ ಸಿಹಿ ತಿನಿಸು ಪ್ರಿಯರ ಬಾಯಿಚಪ್ಪರಿಸುವಂತೆ ಮಾಡುತ್ತಿದೆ. ಜನಪ್ರಿಯ ಸಿಹಿ ಅಂಗಡಿಯ ಮಾಲೀಕರು ಹಳೆಯ ಮೈಸೂರ್ ಪಾಕ್ ಗೆ ಹೊಸತನ ನೀಡುವ ಮೂಲಕ ತಮ್ಮದೇ ಆದ ಸ್ವಾಧಿಷ್ಟತೆಯನ್ನು ಬೆರೆಸಿ ಮಾರಾಟ ಮಾಡುತ್ತಿದ್ದಾರೆ. ಈಗೀಗ ಮೈಸೂರ್ ಪಾಕ್ ವಿಭಿನ್ನತೆಯೊಂದಿಗೆ ಗ್ರಾಹಕರ ಕೈ ಸೇರುತ್ತಿದೆ. ಆದರೂ ಹಳೆಯ ಕಾಲದ ಅವತ್ತಿನ ಮೈಸೂರ್ ಪಾಕ್ ನ್ನು ಇಷ್ಟಪಡುವ ಜನರಿಗಾಗಿ ಅದೇ ರುಚಿಯಲ್ಲಿ ನೀಡುವ ಪ್ರಯತ್ನವನ್ನು ಕಾಕಾಸುರ ಮಾದಪ್ಪನ ವಂಶಸ್ಥರು ಮಾಡುತ್ತಲೇ ಬರುತ್ತಿದ್ದಾರೆ.
ಮೈಸೂರ್ ಪಾಕ್ ಈಗಾಗಲೇ ಮೈಸೂರನ್ನು ಮಾತ್ರವಲ್ಲ ದೇಶವನ್ನೇ ದಾಟಿ ಹೊರ ಹೋಗಿ ಸ್ವಾದಿಷ್ಟತೆಯಿಂದ ವಿಶ್ವದಾದ್ಯಂತ ಪಸರಿಸಿದೆ. ತನ್ನದೇ ಆದ ಖ್ಯಾತಿ ಹೊಂದಿರುವ ಈ ತಿನಿಸು ಇವತ್ತು ನಿನ್ನೆ ತಯಾರಾದ ಸಿಹಿತಿನಿಸಲ್ಲ. ಮೈಸೂರು ಮಹಾರಾಜರ ಕಾಲದ್ದು ಎನ್ನುವುದೇ ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಿಜ ಹೇಳಬೇಕೆಂದರೆ ಇವತ್ತು ನಾವು ಸೇವಿಸುವ ಮೈಸೂರು ಪಾಕ್ ಅವತ್ತಿನ ಮೈಸೂರು ಪಾಕ್ ಅಲ್ಲವೇ ಅಲ್ಲ. ಅವತ್ತಿನ ಮೈಸೂರ್ ಪಾಕ್ ರೂಪಾಂತರಗೊಂಡಿದೆ.
ಮೈಸೂರು ಪಾಕ್ ನ್ನು ತಯಾರಿಸಿದ ವಂಶಸ್ಥರ ಸಿಹಿತಿಂಡಿಯ ಅಂಗಡಿ ಇಂದಿಗೂ ಮೈಸೂರಿನಲ್ಲಿದ್ದು, ಅವತ್ತಿನ ಮೈಸೂರು ಪಾಕ್ ಇವತ್ತಿಗೂ ದೊರೆಯುತ್ತಿರುವುದು ವಿಶೇಷವಾಗಿದೆ. ಇನ್ನು ಅವತ್ತಿನ ಮೈಸೂರು ಪಾಕ್ ಇವತ್ತಿಗೂ ಎಲ್ಲಿ ದೊರೆಯುತ್ತದೆ ಎನ್ನುವ ಮೊದಲು ಮೈಸೂರು ಪಾಕ್ ಬಗೆಗೆ ಒಂದಿಷ್ಟು ಹೇಳಲೇ ಬೇಕಾಗುತ್ತದೆ. ಮೈಸೂರು ಪಾಕ್ ತಯಾರಿಗಿದ್ದು ಕೂಡ ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಎಂಬುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ.. ಹಾಗೆಯೇ ಅದನ್ನು ತಯಾರು ಮಾಡಿದವರು ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪನವರು ಎಂಬುದು ಕೂಡ ವಿಶೇಷವೇ…
ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?
ಕಾಕಾಸುರ ಮಾದಪ್ಪನವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಬ್ದಾರಿ ವಹಿಸಿಕೊಂಡಿದ್ದರು. ರಾಜ ಕುಟುಂಬಕ್ಕೆ ಬೇಕಾದ ಸಿಹಿ ಮತ್ತು ಖಾರವನ್ನು ಇವರೇ ತಯಾರಿಸುತ್ತಿದ್ದರು. ಒಮ್ಮೆ ಮಹಾರಾಜರು ತಿಂಡಿ ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಕಾಕಾಸುರ ಮಾದಪ್ಪನವರಿಗೆ ಹೊಸದಾದ ಯಾವುದಾದರೊಂದು ತಿಂಡಿ ತಯಾರಿಸುವಂತೆ ಆಜ್ಞೆ ಮಾಡಿದರು.
ಮಹಾರಾಜರು ಹೇಳಿದ ಮೇಲೆ ಮುಗಿಯಿತು. ಮರು ಮಾತನಾಡುವ ಹಾಗಿಲ್ಲ. ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ಕಾಕಾಸುರ ಮಾದಪ್ಪ ಮುಂದಾದರು. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಗಿ ಕಾಕಾಸುರ ಮಾದಪ್ಪನವರನ್ನು ಬೆನ್ನು ತಟ್ಟಿ ಪ್ರಶಂಶಿಸಿದರು.
ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?
ಈ ಹೊಸ ತಿಂಡಿಗೆ ಏನಾದರೊಂದು ಹೆಸರಿಡಬೇಕಲ್ಲವೆ? ಏನು ಹೆಸರು ಇಡುವುದೆಂದು ಮಹಾರಾಜರು ಆಲೋಚಿಸಿದರು. ಆಗ ಅವರಿಗೊಂದು ಯೋಚನೆ ಬಂದಿತು. ರುಚಿ ಶುಚಿಯಾದ ಅಡುಗೆಗೆ ನಳಪಾಕ ಎಂದು ಕರೆಯುತ್ತೇವೆ. ಇದು ಮೈಸೂರು ಅರಮನೆಯಲ್ಲಿ ತಯಾರಾಗಿದ್ದರಿಂದ ‘ಮೈಸೂರು ಪಾಕ’ ಎಂದು ಹೆಸರಿಡೋಣ ಎಂದು ನಿರ್ಧರಿಸಿದರು. ಅವತ್ತಿನಿಂದಲೇ ಆ ತಿಂಡಿಯನ್ನು ಮೈಸೂರು ಪಾಕ ಎಂದು ಕರೆಯಲಾಯಿತು. ಮುಂದೆ ಅದು ಮೈಸೂರ್‌ಪಾಕ್ ಆಗಿ ಮೈಸೂರಿನ ಖ್ಯಾತಿಯನ್ನು ವಿಶ್ವಕ್ಕೆ ಸಾರಿತು ಎನ್ನುವುದು ಗೊತ್ತೇ ಇದೆ ಬಿಡಿ.
ಕಾಕಾಸುರ ಮಾದಪ್ಪನವರು ಅರಮನೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ತಮ್ಮ ಷಡ್ಕ ಬಸವಲಿಂಗಪ್ಪ ಅವರು ಅಶೋಕ ರಸ್ತೆಯಲ್ಲಿ ‘ಶ್ರೀ ದೇಶಿಕೇಂದ್ರ ಸ್ವೀಟ್ಸ್ ಮಾರ್ಟ್ಸ್’ಎಂಬ ಸಿಹಿ ತಿನಿಸುಗಳ ಅಂಗಡಿ ಆರಂಭಿಸಿದರು. ಅದು ಅಂದಿನ ಕಾಲದಲ್ಲೇ ಪ್ರಸಿದ್ಧವಾಗಿತ್ತು. ಕೆಲ ವರ್ಷಗಳ ನಂತರ ಆ ಅಂಗಡಿಯನ್ನು ಬಸವಲಿಂಗಪ್ಪನವರಿಗೆ ಬಿಟ್ಟುಕೊಟ್ಟರು. ನಂತರ ಮಾದಪ್ಪನವರ ಪುತ್ರ ಬಸವಣ್ಣನವರು ಸಯ್ಯಾಜಿರಾವ್ ರಸ್ತೆಯಲ್ಲಿರುವ ಚಿಕ್ಕಗಡಿಯಾರದಲ್ಲಿ ನಗರಪಾಲಿಕೆಗೆ ಸೇರಿದ ದೇವರಾಜ ಮಾರ್ಕೆಟ್‌ಗೆ ಹೊಂದಿಕೊಂಡಂತೆ ಇರುವ ಮಳಿಗೆಯಲ್ಲಿ 1954ರಲ್ಲಿ ‘ಗುರು ಸ್ವೀಟ್ಸ್ ಮಾರ್ಟ್ಸ್’ ಎಂಬ ಸಿಹಿ ತಿನಿಸಿನ ಅಂಗಡಿಯನ್ನು ತೆರೆದರು.
ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?
ಸಂಪೂರ್ಣ ಮರದಿಂದಲೇ ಮಾಡಿದ್ದ ಆ ಚಿಕ್ಕ ಅಂಗಡಿಯಲ್ಲಿ ಗುರುಸ್ವೀಟ್ಸ್ ಮಿಠಾಯಿ ಅಂಗಡಿ ಚಿಕ್ಕದಾಗಿ ಆರಂಭಗೊಂಡು ಆ ಅಂಗಡಿಯ ಸಿಹಿ ತಿಂಡಿ ಹಾಗೂ ಮೈಸೂರ್ ಪಾಕ್‌ಗೆ ಮಾರುಹೋದ ಗ್ರಾಹಕರು ಸಿಹಿತಿಂಡಿ ಖರೀದಿಸಲು ಸಾಲುಗಟ್ಟಿ ನಿಲ್ಲುವಂತಾಯಿತು. ಉತ್ತಮಗುಣಮಟ್ಟದ ಸಿಹಿ ಖಾದ್ಯವನ್ನು ಒಳ್ಳೆಯ ಬೆಲೆಯಲ್ಲಿ ನೀಡುತ್ತಿದ್ದರಿಂದ ಕೆಲವೇ ವರ್ಷಗಳಲ್ಲಿ ಮೈಸೂರಿನ ಮನೆ ಮಾತಾಯಿತು. ಇವತ್ತಿಗೂ ಮೈಸೂರು ನಗರದಲ್ಲಿರುವ ಗುರುಸ್ವೀಟ್ಸ್ ಗೆ ಜನ ಆಗಮಿಸಿ ವಿಶೇಷವಾಗಿ ಮೈಸೂರು ಪಾಕ್ ನ್ನು ಖರೀದಿಸುವುದನ್ನು ಕಾಣಬಹುದಾಗಿದೆ.
ಅದು ಏನೇ ಇರಲಿ ಇವತ್ತಿನ ತಲೆಮಾರಿನವರಿಗೆ ಮೈಸೂರು ಪಾಕ್ ಗೊತ್ತಿದೆ. ಆದರೆ ಅದು ತಯಾರಾಗಿದ್ದರ ಹಿಂದಿನ ಕಥೆ ಹೆಚ್ಚಿನವರಿಗೆ ಗೊತ್ತಿಲ್ಲ. ಹೀಗಾಗಿ ‘ಮೈಸೂರ್ ಪಾಕ್ ‘ ಹುಟ್ಟಿದ ಕಥೆಯನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ…
B M Lavakumar
Very nice article sir thanks for the right and truthful information