DasaraLatest

ಮೈಸೂರು ದಸರಾಗೆ ಕಳೆಕಟ್ಟುತ್ತಿರುವ ಅಂಬಾರಿ ಸವಾರಿ… ವಿದ್ಯುದ್ದೀಪದ ಚೆಲುವು ನೋಡುವುದೇ ಎಲ್ಲಿಲ್ಲದ ಮಜಾ…

ಮೈಸೂರು ದಸರಾಕ್ಕೆ ಪ್ರವಾಸಿಗರ ದಂಡು ಇನ್ನಿಲ್ಲದಂತೆ ಹರಿದು ಬರುತ್ತಿದೆ. ಹೀಗೆ ಬರುವ ಪ್ರವಾಸಿಗರು ಅಂಬಾರಿ ಬಸ್ ನಲ್ಲಿ ಸವಾರಿ ಮಾಡುತ್ತಾ  ವಿದ್ಯುದ್ದೀಪದ ಬೆಳಕಿನಲ್ಲಿ ಮಿನುಗುವ ನಗರವನ್ನು ನೋಡಲು ಮುಗಿಬೀಳುತ್ತಿದ್ದಾರೆ. ಈ ಬಸ್ ನಲ್ಲಿ ಕುಳಿತು ಸೌಂದರ್ಯವನ್ನು ಸವಿಯುವುದು ಒಂಥರಾ ಖುಷಿಕೊಡುತ್ತಿದೆ.

ಇದನ್ನೂ ಓದಿ: ಮೈಸೂರು ದಸರೆಗೆ ಧರೆಗಿಳಿದ ಪುಷ್ಪಲೋಕ… ಫಲಪುಷ್ಪ ಪ್ರದರ್ಶನದ ಈ ಬಾರಿಯ ವಿಶೇಷತೆಗಳೇನು?

ವಿದ್ಯುದ್ದೀಪದಿಂದ ಮಿನುಗುವ ನಗರದ ಸೌಂದರ್ಯವನ್ನು ಎಲ್ಲೆಡೆ ಸುತ್ತಾಡಿ ನೋಡುವುದು ಅಷ್ಟೊಂದು ಸುಲಭವಲ್ಲ. ಹೀಗಾಗಿ ಬಹುತೇಕ ಪ್ರವಾಸಿಗರು ಅಂಬಾರಿ ಬಸ್ ನ ಮೊರೆ ಹೋಗುತ್ತಿದ್ದಾರೆ. ಈಗಂತೂ ಕತ್ತಲಾಗುತ್ತಿದ್ದಂತೆಯೇ ಇಡೀ ಮೈಸೂರು ಇಂದ್ರನ ಅಮರಾವತಿಯಂತೆ  ಜಗಮಗಿಸುತ್ತಿದೆ. ಇಲ್ಲಿ ಅಡ್ಡಾಡುವುದು ಥೇಟ್ ಸ್ವರ್ಗ ಲೋಕದಲ್ಲಿ ವಿಹರಿಸಿದ ಅನುಭವ ನೀಡುತ್ತಿದೆ.  ಇದೆಲ್ಲವನ್ನು ಡಬಲ್ ಡೆಕ್ಕರ್ ಅಂಬಾರಿ ಬಸ್ ಗಳಲ್ಲಿ ಕುಳಿತು ನೋಡುವುದು ಖುಷಿಕೊಡುತ್ತಿದೆ. ಜತೆಗೆ ಮರೆಯಲಾರದ ಸುಂದರ ಅನುಭವವೂ ಹೌದು.

ಹಾಗೆನೋಡಿದರೆ ಡಬಲ್ ಡೆಕ್ಕರ್ ಅಂಬಾರಿ ಬಸ್ ಗಳು  ಈ ಹಿಂದಿನಿಂದಲೇ ಮೈಸೂರಿನಲ್ಲಿ ನಗರ ಪ್ರದಕ್ಷಿಣೆ ಮಾಡುತ್ತಿವೆ. ನಗರದಲ್ಲಿರುವ ಪ್ರವಾಸಿ ತಾಣಗಳಿಗೆ ಕರೆದೊಯ್ದು ತೋರಿಸಿಕೊಂಡು ಬರುತ್ತಿವೆ. ಇದೀಗ ದಸರಾ ಆರಂಭವಾಗಿರುವುದರಿಂದ ರಾತ್ರಿವೇಳೆ ನಗರದಲ್ಲಿ ದೀಪಾಲಂಕಾರ ಮಾಡಲಾಗಿದ್ದು ಅದನ್ನು ನೋಡಲು ಅಂಬಾರಿ ಬಸ್ ಗಳತ್ತ ಜನ ಮುಖ ಮಾಡಿದ್ದಾರೆ.

ಇದನ್ನೂ ಓದಿ: ಕಾಕನಕೋಟೆಯ ಆ ಕಾಲದ ವೈಭವ ಹೇಗಿತ್ತು? ಆನೆಗಳನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದದ್ದು ಹೇಗೆ ಗೊತ್ತಾ?

ಡಬಲ್ ಡೆಕ್ಕರ್ ಅಂಬಾರಿ ಬಸ್ ನಲ್ಲಿ ದೀಪಾಲಂಕಾರ ನೋಡುತ್ತಾ ಪ್ರಯಾಣಿಸುವುದು ವಿಭಿನ್ನ ಅನುಭವ ನೀಡುತ್ತದೆ. ಹಗಲಿನಲ್ಲಿಯೂ ಸಂಚರಿಸುವ ಈ ಬಸ್ ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ತೆರಳುವ ಪ್ರವಾಸಿಗರನ್ನು ಹೊತ್ತೊಯ್ದು ಸ್ಥಳಪರಿಚಯ ಮಾಡಿಸಲಿದೆ. ದೂರದಿಂದ ಬರುವ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳನ್ನು ನೋಡಲು ಇದು ಅನುಕೂಲ ಮಾಡಿಕೊಡುತ್ತಿದೆ. ಹೀಗಾಗಿ ಪ್ರವಾಸಿಗರು ಡಬಲ್ ಡೆಕ್ಕರ್ ಅಂಬಾರಿ ಬಸ್ ನಲ್ಲಿ  ಪ್ರಯಾಣಿಸುವ ಮೂಲಕ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ.

ಪ್ರತಿದಿನ ನಗರದ ಅರಮನೆ ಆವರಣದಿಂದ ಹೊರಡುವ ಬಸ್ ನಗರದ ಹಲವೆಡೆ ಸುತ್ತಾಡಲಿದೆ. ಇದರಲ್ಲಿ ಪ್ರಯಾಣ ಮಾಡುತ್ತಾ ವಿದ್ಯುದ್ದೀಪದ ಅಲಂಕಾರವನ್ನು ನೋಡುವುದು ಮಜಾವೋ ಮಜಾ..  ಅಂಬಾರಿ ಬಸ್ಸಿನ ಬಗ್ಗೆ ಹೇಳುವುದಾದರೆ ಇದನ್ನು ಬೆಂಗಳೂರಿನ ಕೆಎಂಎಸ್ ಬಸ್ ಕವಚ ನಿರ್ಮಾಣ ಸಂಸ್ಥೆ ತಯಾರು ಮಾಡಿದ್ದು, ಮೇಲೆ ಮತ್ತು ಕೆಳಗೆ ಸೇರಿ  ನಲುವತ್ತು ಆಸನಗಳಿವೆ. ಸುಮಾರು ಇಪ್ಪತೈದು ಅಡಿಯಷ್ಟು ಎತ್ತರವಿದೆ. ಬಸ್ ಸಂಚರಿಸುವ ವೇಳೆ ಆಯಾಯ ಸ್ಥಳಗಳು ಬಂದಾಗ ಅದರ ಪರಿಚಯ ಬಸ್‌ನಲ್ಲಿ ಸಂಚರಿಸುವ ಪ್ರವಾಸಿಗರಿಗೆ ಮಾಡಿಕೊಡಲಾಗುತ್ತದೆ. ಮೇಲಿನ ಮಹಡಿ ತೆರೆದಿದ್ದರೆ ಕೆಳಗಿನ ಮಹಡಿ ಹವಾನಿಯಂತ್ರಿತವಾಗಿದ್ದು, ಸಿಸಿಟಿವಿ ಸೇರಿದಂತೆ ಎಲ್ಲ ಸೌಲಭ್ಯಗಳು ಇದರಲ್ಲಿದೆ.

ಇದನ್ನೂ ಓದಿ:ದಸರಾ ಬಂದಾಗಲೆಲ್ಲ ನೆನಪಾಗುವ ಅಂಬಾರಿ ಹೊತ್ತ ಆನೆಗಳು… ಈಗಲೂ ನಮ್ಮನ್ನು ಕಾಡುವ ಧೈತ್ಯ ಗಜಗಳು!

ಸದ್ಯ ದಸರಾಗೆ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಅಂಬಾರಿ ಬಸ್ ನಲ್ಲಿ ಇಡೀ ನಗರವನ್ನು ಪ್ರದಕ್ಷಿಣೆ ಮಾಡುವ ಸಲುವಾಗಿ ಮುಗಿ ಬೀಳುತ್ತಿದ್ದಾರೆ. ಇದು ದಸರಾ ನಂತರವೂ ನಗರದಲ್ಲಿ ಸಂಚಾರ ನಡೆಸುತ್ತದೆ. ಅಂಬಾರಿ ಬಸ್ ನಲ್ಲಿ ಪಯಣ ಬೆಳೆಸುವವರು ಹೆಚ್ಚಿನ ಮಾಹಿತಿಯನ್ನು  0821-2423652/ 8970656400 ನಂಬರಿಂದ ಪಡೆಯಬಹುದಾಗಿದೆ.

B M Lavakumar

 

admin
the authoradmin

Leave a Reply