ಮೈಸೂರು ದಸರಾ ಒಂದೇ ಆದರೂ ಅದರ ಸುತ್ತ ಹರಡಿಕೊಂಡಿರುವ ಮನರಂಜನೆಗೆ ಲೆಕ್ಕವಿಲ್ಲ… ನೀವೂ ಬನ್ನಿ

ಮೈಸೂರು ದಸರಾ ಕುರಿತಂತೆ ಎಷ್ಟೇ ಹೇಳಿದರೂ ಮುಗಿಯುವುದೇ ಇಲ್ಲ. ಹೀಗಾಗಿ ತಾವು ಕಾಣುತ್ತಿರುವ ಮೈಸೂರು ದಸರಾ ಬಗ್ಗೆ ಬರಹಗಾರರಾದ ಕಾಳಿಹುಂಡಿ ಶಿವಕುಮಾರ್ ಅವರು ಓದುಗರಿಗಾಗಿ ತಮ್ಮದೇ ಶೈಲಿಯಲ್ಲಿ ವಿವರಿಸುತ್ತಾ ಹೋಗಿದ್ದಾರೆ. ತಪ್ಪದೇ ಓದಿ…
ಈ ಬಾರಿ (2025) ಸೆಪ್ಟಂಬರ್ 22 ರ ಸೋಮವಾರದಿಂದ ಅಕ್ಟೋಬರ್1ರ ಬುಧವಾರದವರೆಗೆ ಮೈಸೂರು ರಂಗಾಗಿರುತ್ತದೆ. ಅಕ್ಟೋಬರ್ 2 ಗಾಂಧಿ ಜಯಂತಿ ದಿನವೇ ವಿಜಯದಶಮಿ. ಜಂಬೂಸವಾರಿಯ ವೈಭವದ ಮೆರವಣಿಗೆ ಕಣ್ಮನ ಸೆಳೆಯುತ್ತದೆ. ಈ ಬಾರಿ ದಸರಾ ಒಂದು ದಿನ ಹೆಚ್ಚಾಗಿ ಬಂದಿದೆ. ನವರಾತ್ರಿ ಈಗ ದಶರಾತ್ರಿಯಾಗಿದೆ. ಮೈಸೂರು ದಸರಾ ಉದ್ಘಾಟನೆ ಗೊಳ್ಳಲು ಕ್ಷಣಗಣನೆ ಆರಂಭವಾಗುತ್ತಿದೆ. ನವರಾತ್ರಿಯ ವೈಭವ ಕಣ್ಮನ ಸೂರೆಗೊಳ್ಳಲು ಸಿದ್ಧವಾಗಿದೆ!. ಈಗ ಮೈಸೂರು ನಗರ ನವ ವಧುವಿನಂತೆ ಸಿಂಗಾರಗೊಂಡಿದೆ!!.
ನವರಾತ್ರಿಗೆ ಗೊಂಬೆಗಳ ಮೆರವಣಿಗೆಯೂ ಕೂಡ ನಗರದ ಅನೇಕ ಬಡಾವಣೆಗಳಲ್ಲಿ, ಮನೆಗಳಲ್ಲಿ ಸಾಂಪ್ರದಾಯಕವಾಗಿ ಅಚ್ಚುಕಟ್ಟಾಗಿ ಜೋಡಿಸಲಾಗಿರುತ್ತದೆ!. ಆ ಗೊಂಬೆಗಳನ್ನು ನೋಡಲು ಎರಡು ಕಣ್ಣು ಸಾಲದು!. ಮೈಸೂರಿನ ಸುತ್ತಮುತ್ತಲ ಜಿಲ್ಲೆಗಳಿಂದ ರಾಜ್ಯ ಅಲ್ಲದೆ, ಹೊರ ರಾಜ್ಯ, ವಿದೇಶಗಳಿಂದಲೂ ಜನರುಗಳು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ನಮ್ಮ ನಾಡಿನ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಆಚರಿಸಲ್ಪಡುವ ದಸರಾ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ. 1610 ರಲ್ಲಿ ಮೈಸೂರಿನ ಅರಸರಾಗಿದ್ದ ಒಂದನೇ ರಾಜ ಒಡೆಯರ್ ಕಾಲದಲ್ಲಿ ವಿಜಯನಗರ ಪ್ರತಿನಿಧಿ ಶ್ರೀರಂಗರಾಯರು ಅಂದು ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ಮಾಡಿದರು. ಬಳಿಕ 1799 ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ರವರು ರಾಜಧಾನಿಯನ್ನು ಮೈಸೂರಿಗೆ ಸ್ಥಳಾಂತರಿಸಲ್ಪಟ್ಟಿದ್ದರಿಂದ ದಸರಾ ಕೂಡ ಶ್ರೀರಂಗಪಟ್ಟಣದಿಂದ ಮೈಸೂರಿನಲ್ಲಿ ನಡೆಯಲು ಪ್ರಾರಂಭವಾಯಿತು.
ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?
ನವರಾತ್ರಿ ತುಂಬಿದ ಬಳಿಕ ಬರುವುದೇ ವಿಜಯದಶಮಿ ಹಬ್ಬ ಅಂದು ಜಂಬೂಸವಾರಿಯ ವೈಭವವನ್ನು ನೋಡಲು ಎರಡು ಕಣ್ಣು ಸಾಲದು!. ಹಿಂದೆ ರಾಜರು ಅಂಬಾರಿಯಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗುವ ಬರುತ್ತಿದ್ದರು. 1969ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ರಾಜರಿಗೆ ನೀಡುತ್ತಿದ್ದ ರಾಜಧನ ವನ್ನ ನಿಲ್ಲಿಸಿದರು. ಇದರ ಪ್ರಯುಕ್ತ ರಾಜರು ಸಾಮಾನ್ಯ ಪ್ರಜೆಗಳು ಇದರಿಂದಾಗಿ ಅಂಬಾರಿಯಲ್ಲಿ ಕೂರಬಾರದು ಎಂಬ ಕೂಗಿಗೆ ಆ ವರ್ಷ ಜಯಚಾಮರಾಜ ಒಡೆಯರ್ ರವರು ಸ್ವತಂತ್ರ ಭಾರತದಲ್ಲಿ ನಾನು ಒಬ್ಬ ಸಾಮಾನ್ಯ ಪ್ರಜೆ ಇನ್ನು ಮುಂದೆ ಅಂಬಾರಿಯಲ್ಲಿ ಕೂರುವುದಿಲ್ಲ ದಸರಾ ಮೆರವಣಿಗೆ ನಡೆಸುವುದಿಲ್ಲ ಎನ್ನುವ ನಿರ್ಧಾರವನ್ನು ಮಾಡಿದರು.
1970ರಲ್ಲಿ ಕೆಲವು ಗಣ್ಯರೇ ಸೇರಿ ದಸರಾ ಸಂಪ್ರದಾಯ ನಿಲ್ಲಬಾರದು ಮರದ ಅಂಬಾರಿಯಲ್ಲಿ ಭುವನೇಶ್ವರಿಯ ಮೂರ್ತಿ ಇಟ್ಟು ಆನೆ ಮೇಲೆ ಮೆರವಣಿಗೆ ನಡೆಸುವ ಮೂಲಕ ಜನರ ದಸರಾ ಆಚರಿಸಿದರು. 1973 ರಲ್ಲಿ ಅಂದಿನ ಮುಖ್ಯಮಂತ್ರಿ ಡಿ ದೇವರಾಜ ಅರಸ್ ರವರು ದಸರಾ ಪರಂಪರೆ ಮುಂದುವರಿಸಬೇಕು ಎಂಬ ಉದ್ದೇಶದಿಂದ ಸರ್ಕಾರದಿಂದ ಶುರು ಮಾಡಿದರು. ರಾಜವಂಶಸ್ಥರನ್ನು ಮನವೊಲಿಸಿ ಚಿನ್ನದ ಅಂಬಾರಿ ಪಡೆದ ದಸರಾ ಜಂಬೂಸವಾರಿ ಮೆರವಣಿಗೆ ನಡೆಸಿದರು. ಅಂಬಾರಿಯಲ್ಲಿ ಚಾಮುಂಡೇಶ್ವರಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಿದರು. ನಂತರ 1990 ರಲ್ಲಿ ಚೋಳ ಶೈಲಿಯ ಚಾಮುಂಡೇಶ್ವರಿಯ ವಿಗ್ರಹವನ್ನು ಹೊಯ್ಸಳ ಶೈಲಿಗೆ ಬದಲಾಯಿಸಲಾಯಿತು. ಅಂದಿನಿಂದ ಇಂದಿನವರೆಗೂ ಕೂಡ ಇದೇ ವಿಗ್ರಹವನ್ನು ಚಿನ್ನದಂಬಾರಿಯಲ್ಲಿ ಇಟ್ಟು ಮೆರವಣಿಗೆ ನಡೆಸಲಾಗುತ್ತಿದೆ.
ದಕ್ಷಿಣ ಭಾರತದ ಹೃದಯ ಭಾಗದಲ್ಲಿರುವ ನಮ್ಮ ಮೈಸೂರು ಜಿಲ್ಲೆಯ ಒಳ- ಹೊರಗಿನ ಬಗ್ಗೆ ಎಷ್ಟು ಹೇಳಿದರೂ ಸಾಲದು!. ಪ್ರವಾಸಿಗರ ಸ್ವರ್ಗ, ರಾಜರಾಳಿದ ನಾಡು, ಮೈಸೂರಿನ ಅಧಿದೇವತೆ ಚಾಮುಂಡಿ, ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಮೈಸೂರು ಒಳಗಿರುವ ಪ್ರಸಿದ್ಧ ಸ್ಥಳ ಪುರಾಣಗಳು, ಮೈಸೂರಿನ ಹೆಸರಿನೊಂದಿಗಿನ ವಿಶೇಷತೆಗಳು, ಮೈಸೂರು ಕುರಿತು ಬಂದಿರುವ ಚಲನಚಿತ್ರ ಗೀತೆಗಳು, ಇವುಗಳೆಲ್ಲದರ ನಡುವೆ ಕರ್ನಾಟಕದ ಮೊದಲ ರಾಜಧಾನಿ ಮತ್ತು ಈಗ ಸಾಂಸ್ಕೃತಿಕ ರಾಜಧಾನಿ ನಮ್ಮ ಮೈಸೂರು ಎನ್ನುವ ವಿಶೇಷ!.
ಮೈಸೂರು ಪಿಂಚಣಿದಾರರ ಸ್ವರ್ಗ ಕೂಡ. ಮೈಸೂರಿನಲ್ಲಿ ಸಂಗೀತ, ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಮನ್ನಣೆ ಇದೆ. ಜೊತೆಗೆ ಇಲ್ಲಿ ಅನೇಕ ಸಾಹಿತಿಗಳು, ಸಂಗೀತಗಾರರು ವಾಸವಾಗಿದ್ದಾರೆ. ಅಲ್ಲದೆ ಮೈಸೂರು ಹಲವು ಪ್ರಥಮಗಳಿಗೆ ನಾಂದಿಯಾಗಿದೆ. ಮುಖ್ಯವಾಗಿ ಮೈಸೂರು ದಸರಾ ಎಲ್ಲರ ಕಣ್ಮನ ಸೆಳೆಯುತ್ತದೆ. ಈ ಹೊತ್ತಲ್ಲಿ ಮೈಸೂರಿನ ಸವಿ ಸವಿ ನೆನಪುಗಳ ಮೆರವಣಿಗೆ ನಿಮಗಾಗಿ…..!.
ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ
ಮೈಸೂರು ದೇಶದ “ನಂಬರ್ ಒನ್ ಸ್ವಚ್ಛ ನಗರ” ಎಂಬ ಗರಿ ಹೊಂದಿರುವ ಊರು ಕೂಡ ಆಗಿದೆ. ಮೈಸೂರಿನ ಸುತ್ತಮುತ್ತ ಅನೇಕ ಗ್ರಾಮ್ಯ ಭಾಷೆಗೆ ಹೆಸರುವಾಸಿಯಾಗಿದೆ. ಮೈಸೂರು” ಎಂಬ ಮೂರಕ್ಷರ ಕೇಳಿದೊಡನೆ ಏನೋ ಒಂದು ರೀತಿಯಲ್ಲಿ ಹೆಮ್ಮೆ ನಮಗೆ!. ಜೊತೆಗೆ ನಾವು ಮೈಸೂರಿನಲ್ಲಿ ಇರುವುದು ಕೂಡ ನಮ್ಮಗಳ ಪುಣ್ಯವೇ ಸರಿ. ಮೊದಲು ನಾವು ಮೈಸೂರಿನ ಹೆಸರಿನೊಂದಿಗೆ ಇರುವ ಸ್ಥಳ, ವಿಶೇಷತೆಗಳ ಬಗ್ಗೆ ತಿಳಿಯಲೇಬೇಕು.
ಮೈಸೂರಿನ ಅರಮನೆ ಯೊಂದಿಗೆ ನಮ್ಮ ಪಯಣ ಪ್ರಾರಂಭವಾಗುತ್ತದೆ. ಮೈಸೂರಿನ ಪಾರಂಪರಿಕ ಕಟ್ಟಡಗಳು, ಮೈಸೂರು ಪೇಟ, ಮೈಸೂರು ವೀಳ್ಯದೆಲೆ, ಮೈಸೂರ್ ಪಾಕ್, ಮೈಸೂರು ಮಲ್ಲಿಗೆ, ಮೈಸೂರು ಬದನೆಕಾಯಿ, ಮೈಸೂರು ರೇಷ್ಮೆ, ಮೈಸೂರು ಶ್ರೀಗಂಧ. ಮೈಸೂರು ದಸರಾ, ಮೈಸೂರು ಸಾಂಪ್ರದಾಯಿಕ ವರ್ಣ ಚಿತ್ರಗಳು, ಮೈಸೂರು ಗಂಜೀಫಾ ಕಾರ್ಡ್ ಗಳು, ಮೈಸೂರು ಮಹಾರಾಜರು, ಮೈಸೂರು ಮಸಾಲಾ ದೋಸೆ, ಮೈಸೂರು ಅಗರಬತ್ತಿ, ಮೈಸೂರು ಬಿಟೆಯ ಕೆತ್ತನೆಗಳು, ಮೈಸೂರು ಆಕಾಶವಾಣಿ, ಮೈಸೂರು ಟಾಂಗಾ, ಮೈಸೂರು ಮೃಗಾಲಯ, ರೈಲ್ವೆ ಮ್ಯೂಸಿಯಂ, ಒಂಟಿಕೊಪ್ಪಲು ಪಂಚಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು ಮಹಾರಾಜ ಮತ್ತು ಮಹಾರಾಣಿ ಕಾಲೇಜು, ಮೈಸೂರು ಗರಡಿ ಮನೆ, ಮೈಸೂರು ನೋಟು ಮುದ್ರಣಾಲಯ, ಮೈಸೂರು ಲ್ಯಾಂಪ್ಸ್, ಮೈಸೂರು ದಸರಾ ಗೊಂಬೆ, ಮೈಸೂರು ರಂಗಾಯಣ, ಕೆ ಆರ್ ಆಸ್ಪತ್ರೆ, ಹೀಗೆ ಒಂದೇ ಎರಡೇ? ಸ್ಥಳ ವಿಶೇಷತೆಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ!.
ಮುಂದುವರೆದಂತೆ ಮೈಸೂರಿನ ರಸ್ತೆಗಳು ಕೂಡ ನಮ್ಮ ಕಣ್ಮಣ ಸೆಳೆಯುತ್ತವೆ. ಜೊತೆಗೆ ಆ ರಸ್ತೆಯ ಇಕ್ಕಡೆಗಳಲ್ಲಿ ಪಾರಂಪರಿಕ ಕಟ್ಟಡಗಳು ಕೂಡ ಇತಿಹಾಸ ಸಾರುತ್ತವೆ. ಮೈಸೂರಿನ ರೈಲ್ವೆ ಸ್ಟೇಷನ್ ನಿಂದ ಸಾಗಿ ಮೆಟ್ರೋಪಾಲ್…. ರಾಮಸ್ವಾಮಿ ಸರ್ಕಲ್….. ಚಾಮುಂಡಿಪುರಂ ಸರ್ಕಲ್….. ಎಲೆ ತೋಟ….. ನಂಜನಗೂಡು ರಸ್ತೆ……. ನಂತರ ಸಿಗುವ ಚಾಮುಂಡಿ ಬೆಟ್ಟದ ಮೆಟ್ಟಿಲು ಸ್ಥಳದವರೆಗೂ ಕೂಡ “ಜೆ ಎಲ್ ಬಿ” (ಝಾನ್ಸಿ ಲಕ್ಷ್ಮೀಬಾಯಿ ರಸ್ತೆ) ರಸ್ತೆ ಪ್ರಸಿದ್ಧಿಯಾಗಿದೆ. ಇದು ಮೈಸೂರಿನ ಅತ್ಯಂತ ಉದ್ದನೆಯ ರಸ್ತೆ. ಜೊತೆಗೆ ನಮ್ಮ ಮೈಸೂರಿನಲ್ಲಿ ಪುರಾತನ ದೇವಾಲಯಗಳು, ಚರ್ಚುಗಳು, ಮಸೀದಿಗಳು, ಕೋಟೆ ಕೊತ್ತಲಗಳು, ಅಲ್ಲದೆ ರಸ್ತೆಯ ಎಲ್ಲಾ ಸರ್ಕಲ್ ಗಳಿಗೂ ಕೂಡ ಗಣ್ಯ ವ್ಯಕ್ತಿಗಳ ಹೆಸರಿಟ್ಟಿರುವುದು, ಹಲವು ಸ್ಮಾರಕಗಳು, ಗಣ್ಯ ವ್ಯಕ್ತಿಗಳ ಪ್ರತಿಮೆಗಳು, ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ ಸಂತೆಪೇಟೆ, ಮಾರುಕಟ್ಟೆ, ಮನ್ನಾರ್ಸ್ ಮಾರ್ಕೆಟ್….. ಮುಂತಾದ ವ್ಯಾಪಾರ ಕೇಂದ್ರದ ರಸ್ತೆಗಳು, ಅಂಗಡಿಗಳು. ಗುರು ಸ್ವೀಟ್, ಮಹಾಲಕ್ಷ್ಮಿ ಸ್ಪೀಟ್, ಮುಂತಾದ ಬೇಕರಿ ತಿನಿಸುಗಳು.
ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?
ಪ್ರಸಿದ್ಧ ಹೋಟೆಲ್ ಗಳು, ದೊಡ್ಡ ದೊಡ್ಡ ಮಾಲ್ಗಳು, ಸಿನಿಮಾ ಥಿಯೇಟರ್ ಗಳು, ಹೀಗೆ ನಮ್ಮ ಮೈಸೂರಿನಲ್ಲಿ ಅಡಿಯಿಂದ ಮುಡಿವರೆಗೆ ಎನ್ನುವಂತೆ ಎಲ್ಲವುಗಳು ಒಂದಲ್ಲ ಒಂದು ರೀತಿಯಲ್ಲಿ ಮೈ-ಮನಗಳಿಗೆ ಮುದ ನೀಡುತ್ತವೆ. ವಿಶ್ವವಿಖ್ಯಾತ ಮೈಸೂರು ದಸರಾದ ಈ ಸಂದರ್ಭದಲ್ಲಿ ಮೈಸೂರಿನ ಇಕ್ಕೆಡೆಗಳಲ್ಲಿ ರಸ್ತೆಗಳು, ಕಟ್ಟಡಗಳು, ಮರಗಳು ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಇನ್ನು ಮೈಸೂರಿನ ಅರಮನೆಯ ಸುತ್ತಲಿನ ರಸ್ತೆ ಧರೆಯೇ ಸ್ವರ್ಗದಂತೆ ಕಾಣುತ್ತಿವೆ!. ಇನ್ನು ಮೈಸೂರಿನ ಹೆಸರಿನೊಂದಿಗೆ ಚಲನಚಿತ್ರಗಳಲ್ಲಿ ಪ್ರಸಿದ್ಧ ವಾಗಿರುವ ಅನೇಕ ಹಾಡುಗಳು ಸದಾ ಗುನುಗುವಂತೆ ಮಾಡುತ್ತವೆ!. ಅವುಗಳನ್ನೆಲ್ಲ ಕೇಳುತ್ತ ಹೋದಂತೆ ನಮ್ಮ ಮೈಸೂರಿನ ಪ್ರೀತಿ ಹೆಚ್ಚುತ್ತದೆ!. ಮೈಸೂರು ದಸರಾ ಎಷ್ಟೊಂದು ಸುಂದರ”- ಎಂಬ “ಕರುಳಿನ ಕರೆ” ಚಿತ್ರದ ಗೀತೆ ದಸರಾ ಬಂದಾಗ ಮೊದಲು ನೆನಪಾಗುತ್ತದೆ!!.