DasaraLatest

ಮೈಸೂರಲ್ಲಿ ಅಡ್ಡಾಡುತ್ತಾ ದಸರಾವನ್ನು ಸಂಭ್ರಮಿಸೋಣ ಬನ್ನಿ…  ದಸರಾ ನೆನಪುಗಳ ಮೆಲುಕು!

ಮೈಸೂರು ದಸರಾಕ್ಕೆ ಹಿಂದಿನಿಂದಲೂ ಅತಿಥಿಗಳು ಬರುತ್ತಲೇ ಇದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಅತಿಥಿಗಳ ಸಂಖ್ಯೆ ಹೆಚ್ಚಾಗಿದ್ದು ಎಲ್ಲರೂ ದಸರಾದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಇದರ ನಡುವೆ ದಸರಾದಿಂದ ಹಲವರು ತಮ್ಮದೇ ಆದ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎನ್ನುವುದು ಅಷ್ಟೇ ಸತ್ಯ. ದಸರಾಕ್ಕೆ ಬರುವ ಪ್ರವಾಸಿಗರನ್ನು ಅತಿಥಿದೇವರೆಂದು ಸತ್ಕರಿಸುವವರು, ಪ್ರತಿಯೊಬ್ಬ ಯಾತ್ರಿಕರನ್ನು ಪ್ರೀತಿವಿಶ್ವಾಸ ಗೌರವಾದರದಿಂದ ಕಂಡು ಸಚ್ಚಾರಿತ್ರ್ಯದ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಎಚ್ಚರ ವಹಿಸುತ್ತಾರೆ.

ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ

ಟಾಂಗಾ ಆಟೋರಿಕ್ಷಾ ಟ್ಯಾಕ್ಸಿ ಬಸ್ ಡ್ರೈವರ್-ಗೈಡ್ ಆದಿಯಾಗಿ ಪ್ರತಿಯೊಬ್ಬರೂ ಸುಸಂಸ್ಕೃತರಾಗಿ ವರ್ತಿಸುವವರು, ದಸರಾ ವೀಕ್ಷಣೆಗೆ ಬಂದವರು ವಿ(ಸ್ವ)ದೇಶಿ ಯಾರೇ ಇರಲಿ ಅದರಲ್ಲೂ ಮಹಿಳಾ ಪ್ರವಾಸಿಗರನ್ನು ಮಾತೆ, ಸೋದರಿಯಂತೆ ಭಾವಿಸಿ ಶೋಷಣೆ ಮಾಡದೆ ಜವಾಬ್ಧಾರಿ ನಾಗರಿಕರಂತೆ ನಡೆದುಕೊಳ್ಳುವವರು, ಅರಮನೆಗಳ ನಗರದ ಮೈಸೂರಿಗರ ಬಗ್ಗೆ ಇರುವ ಗೌರವ ನಂಬಿಕೆ ಉಳಿ(ಬೆಳೆ)ಸಿಕೊಳ್ಳುವವರು, ಇವತ್ತಿಗೂ ಇದ್ದಾರೆ. ಅನೇಕ ಸರ್ಕಾರಿ- ಖಾಸಗಿ ಸಹಾಯವಾಣಿ, ಮಾರ್ಗದರ್ಶನ, ಊಟವಸತಿ, ಕೇಂದ್ರ (ಧರ್ಮಛತ್ರ)ಗಳು ಇವೆ.

ಇದನ್ನೂ ಓದಿ: ಮೈಸೂರು ದಸರಾ ವೈಭವದ ಆ ದಿನಗಳು ಹೇಗಿದ್ದವು? ಈಗ ಹೇಗಿದೆ? ವಿಶೇಷತೆಗಳು ಏನಿವೆ?

ಅಂಬಾವಿಲಾಸ ಪ್ಯಾಲೆಸ್, ಜಗನ್ಮೋಹನ ಪ್ಯಾಲೆಸ್, ವಸಂತಮಹಲ್, ಲಲಿತಮಹಲ್, ಚಿತ್ತರಂಜನ ಮಹಲ್, ಜಯಲಕ್ಷ್ಮಿ ವಿಲಾಸ, ರಾಜೇಂದ್ರ ವಿಲಾಸ, ಚೆಲುವಾಂಬ ವಿಲಾಸ (CFTRI), ಅಲೋಕ (ಹಿನಕಲ್)! ಇವುಗಳ ಜತೆಗೇ ಪ್ರಖ್ಯಾತ ಸಂತ ಫಿಲೋಮಿನ ಚರ್ಚ್, ಚಾಮರಾಜೇಂದ್ರ ಮೃಗಾಲಯ (ZOO) ರೇಷ್ಮೆಕಾರ್ಖಾನೆ, ಗಂಧದಣ್ಣೆ ಕಾರ್ಖಾನೆ ರೈಲ್ ಮ್ಯೂಸಿಯಂ, ರೈಲ್ವೆ ವರ್ಕ್ ಷಾಪ್, ಪ್ರೀಮಿಯರ್‌ (ಫಿಲಂ) ಸ್ಟುಡಿಯೊ, ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯ, ಮೈಸೂರು ವಿಶ್ವವಿದ್ಯಾನಿಲಯ (ಕ್ರಾಫರ್ಡ್ ಭವನ ಮತ್ತು ಮಾನಸ ಗಂಗೋತ್ರಿ) ಕ.ರಾ.ಮು.ವಿ., ಗಂಗೂಬಾಯಿ ಹಾನಗಲ್‌ ಸಂಗೀತ ವಿ.ವಿ, ಜೆಎಸ್‌ಎಸ್ ‌ವಿ.ವಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ, ಇನ್ಫೋಸಿಸ್ (Infosys) ಚಾಮುಂಡಿಬೆಟ್ಟ, ನಂಜನಗೂಡು, ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ (K.R.S), ರಂಗನತಿಟ್ಟು ಪಕ್ಷಿಧಾಮ (BIRD SANCTUARY) ಶಿವನಸಮುದ್ರ ಬಳಿಯಿರುವ ಗಗನಚುಕ್ಕಿ-ಭರಚುಕ್ಕಿ ಜಲಪಾತ, ಮುಂತಾದ ಅದ್ಭುತ ಸ್ಥಳಗಳು ನೋಡಲೇಬೇಕಾದ ಪ್ರವಾಸಿ ತಾಣಗಳಾಗಿವೆ.

1399- 1947ವರೆಗೆ ಯದುಕುಲದ 25 ಮಹಾರಾಜರು ಗಂಡುಭೇರುಂಡ ಲಾಂಛನದಿಂದ ಮೈಸೂರು ಸಾಮ್ರಾಜ್ಯ ಆಳಿದರು. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಒಂದು ಪ್ರಮುಖ ಸಂಸ್ಥಾನ, ಪ್ರಾಂತ್ಯವಾಗಿತ್ತು, 9ಜಿಲ್ಲೆಗಳ ಹಳೇ ಮೈಸೂರು ರಾಜ್ಯ 26-01-1950 ರಲ್ಲಿ ಭಾರತದ ರಾಜ್ಯಗಳ ಪುನರ್ ವಿಂಗಡಣೆ ಆದಾಗ 1.11.1956 ರಲ್ಲಿ 18 ಜಿಲ್ಲೆಗಳಿಂದ ಕೂಡಿ ವಿಶಾಲ ಮೈಸೂರು ರಾಜ್ಯ (New Mysore State) ಉದಯವಾಯ್ತು. ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾಲದಲ್ಲಿ ದಿ.1.11.1973ರಿಂದ ಕರ್ನಾಟಕ ಎಂದು ಪುನರ್‌ ನಾಮಕರಣಗೊಂಡಿತು. ಇಷ್ಟೆಲ್ಲ ಆದರೂ ಕರ್ನಾಟಕ ಘನ ಸರ್ಕಾರದ ಲಾಂಛನವು ಮಾತ್ರ ಬದಲಾಗಲಿಲ್ಲ.

ಇದನ್ನೂ ಓದಿ: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ..? ದಸರೆಯ ಸಂಭ್ರಮದಲ್ಲಿ ತೇಲೋಣ ಬನ್ನಿ

ನಗರದ ದಕ್ಷಿಣಕ್ಕೆ ನಂಜನಗೂಡು ರಸ್ತೆಬಳಿ ರಾಜಕುಟುಂಬಕ್ಕೆ ಮೀಸಲಾದ ಸ್ಮಶಾನವಿದೆ. ಪ್ರಾರಂಭಕ್ಕೆ ಯದುವನ, ಮನುವನ ಎಂದಿದ್ದುದು ಕಾಲಕ್ರಮೇಣ ಮಧುವನವೆಂದಾಯ್ತು? ಇದರ ಪಕ್ಕದಲ್ಲೆ ಸಾರ್ವಜನಿಕ ಸ್ಮಶಾನವಿದೆ. ಇವೆರಡರಮಧ್ಯೆ ಸತ್ಯಹರಿಶ್ಚಂದ್ರ ಮತ್ತು ಸ್ಮಶಾನರುದ್ರನ ದೇವಾಲಯಗಳಿದ್ದು, ಹೊಂದಿಕೊಂಡಂತೆ ಅನೇಕ ದೇವಸ್ಥಾನ-ಮಠಗಳೂ ಇವೆ. ಸಾಮಾನ್ಯವಾಗಿ ಭಾರತ, ಕರ್ನಾಟಕ ರಾಜ-ಮಹಾರಾಜರ ಸಮಾಧಿಗಳು ಸ್ಮಾರಕವಾಗಿರುವುದು ಸತ್ಯ? ಆದರೆ ಮೈಸೂರು ದೊರೆಗಳ ಮಧುವನ ಕಡೆಗಣಿಸಲ್ಪಟ್ಟಿದೆ.

ರಾಜ ಕುಟುಂಬ ದವರಾಗಲೀ ರಾಜಕಾರಣಿಗಳಾಗಲೀ ಇತ್ತ ಗಮನ ಹರಿಸದೆ ಕಾಗೆ ಗೂಬೆಗಳ ನೆಲೆಯಾಗಿ ಮೈಸೂರು ನಾಗರಿಕರಾದಿ ಇಡೀ ರಾಜ್ಯದ ಎಲ್ಲರೂ ವಿಷಾದ ಪಡುವಂತಾಗಿದೆ. ಈಗಲಾದರೂ ಮಧುವನದ ನಿರ್ವಹಣೆ ಜವಾಬ್ಧಾರಿಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳುವರೇ? 10.11.2013 ರಂದು ವಿಧಿವಶರಾದ ಯದುವಂಶದ ಕೊನೆಯಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂತಿಮ ಸಂಸ್ಕಾರವು ಮಧುವನದಲ್ಲಿ ಜರುಗಿದಾಗ ಅದರ ಅವನತಿ ಕಂಡು ಹಿರಿತಲೆಗಳು ಮಮ್ಮಲ ಮರುಗಿ ಕಣ್ಣೀರು ಸುರಿಸಿದರು. ಶ್ರೀರಂಗಪಟ್ಟಣದ ಗುಂಬಜ಼್ ತರಹವೇ ಮೈಸೂರು ಮಹಾರಾಜರುಗಳನ್ನು ನೆನಪಿಸುವ ಸಮಾಧಿಗಳನ್ನು ಇಲ್ಲಿ ನಿರ್ಮಿಸಿ ಪ್ರತಿಯೊಂದಕ್ಕೂ ಮಾಹಿತಿ ಫಲಕ ಹಾಕಿ ಐತಿಹಾಸಿಕ ಸ್ಮಾರಕವನ್ನಾಗಿಸಲಿ! ಇದು ಯಾರ ಹೊಣೆ ಎಂಬುದೇ ಯಕ್ಷಪ್ರಶ್ನೆ?

ಇದನ್ನೂ ಓದಿ: ಮೈಸೂರಲ್ಲಿ ಅಡ್ಡಾಡುತ್ತಾ ದಸರಾವನ್ನು ಸಂಭ್ರಮಿಸೋಣ ಬನ್ನಿ… ದಸರಾ ನೆನಪುಗಳ ಮೆಲುಕು!

admin
the authoradmin

15 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want