DasaraLatest

ದಸರಾ ವೇಳೆ ಮೈಸೂರು ಅರಮನೆಯಲ್ಲಿ ನಡೆಯುತ್ತಿದ್ದ ದರ್ಬಾರ್… ಅವತ್ತು ಹೇಗಿತ್ತು? ಇವತ್ತು ಹೇಗಿದೆ?

ಮೈಸೂರು ದಸರಾದಲ್ಲಿ ನಡೆಯುವ ಧಾರ್ಮಿಕ ವಿಧಿ ವಿಧಾನಗಳಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್  ಪ್ರಮುಖ ಆಕರ್ಷಣೆಯಾಗಿದ್ದು, ಇದು ರಾಜರ ಕಾಲದಿಂದಲೂ ನಡೆದು ಬಂದಿದ್ದಾಗಿದೆ. ಅವತ್ತು ನಡೆಯುತ್ತಿದ್ದ ದರ್ಬಾರ್ ನ್ನು ಇವತ್ತಿಗೂ ನಡೆಸಿಕೊಂಡು ಬರಲಾಗುತ್ತಿದ್ದು, ದಸರಾ ವೇಳೆ  ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವ ರಾಜಾಡಳಿತದ ಗತವೈಭವವನ್ನೂ ನೆನಪಿಸುವ ಕಾರ್ಯಕ್ರಮವಾಗಿ ಆಕರ್ಷಿಸುತ್ತಿದೆ.

ಅತ್ತ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಕ್ಕೆ ಚಾಲನೆ ನೀಡಿದರೆ ಇತ್ತ  ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸವನ್ನೇರಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಪೋಷಾಕು ಧರಿಸಿ 11ನೇ ಬಾರಿಗೆ ದರ್ಬಾರ್ ನಡೆಸಲಿದ್ದಾರೆ. ಇವರು ಸಂಸದರಾದ ಬಳಿಕ ಎರಡನೇ ದರ್ಬಾರ್ ಆಗಿದೆ. ಖಾಸಗಿ ದರ್ಬಾರ್ ವೇಳೆ ಪತ್ನಿ ತ್ರಿಷಿಕಾಕುಮಾರಿ, ಪುತ್ರ ಆದ್ಯವೀರ್ ಒಡೆಯರ್ ಜತೆಗೂಡಿ ಸಂಪ್ರದಾಯದಂತೆ ಕಂಕಣ ಕಟ್ಟಲಿದ್ದಾರೆ. ಅದರಂತೆ ಈ ದರ್ಬಾರಿನಲ್ಲಿ ಸಾಂಪ್ರದಾಯಿಕವಾಗಿ ಪಾದಪೂಜೆ ನಡೆಯಲಿದೆ.

ಇನ್ನು ಆರಂಭದ ದಿನದ ಶಾಸ್ತ್ರ ಸಂಪ್ರದಾಯ ಹೇಗಿರಲಿದೆ ಎಂದು ನೋಡುವುದಾದರೆ, ಅಂದು ಬೆಳಿಗ್ಗೆ  ಎಣ್ಣೆ ಶಾಸ್ತ್ರ ಕಾರ್ಯ ನೆರವೇರಲಿದ್ದು,  5:30 ರಿಂದ 5:45ರ ಒಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಬಳಿಕ 9:55 ರಿಂದ 10:15ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ವಾಣಿವಿಲಾಸ ದೇವರ ಮನೆಯಲ್ಲಿ ಕಂಕಣ ಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 11:35ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿಯಿಂದ ಪಟ್ಟದ ಆನೆ ಹಾಗೂ ಕುದುರೆ, ಹಸು ಸೇರಿದಂತೆ ಕಳಸ ಹೊತ್ತು ಸುಮಂಗಲಿಯರು ಬರುತ್ತಾರೆ. ಮಂಗಳವಾದ್ಯದೊಂದಿಗೆ ಸವಾರಿ ತೊಟ್ಟಿಯ ಬಳಿ ಪೂಜಾ ಕಂಕೈರ್ಯಗಳು ನೆರವೇರಲಿವೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

ಮಧ್ಯಾಹ್ನ 12:42ರಿಂದ 12:58ರ ಒಳಗಿನ ಶುಭ ಲಗ್ನದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರತ್ನ ಖಚಿತ ಸಿಂಹಾಸನವನ್ನೇರಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಮಧ್ಯಾಹ್ನ 2:05ರ ಒಳಗೆ ಚಾಮುಂಡೇಶ್ವರಿ ಅಮ್ಮನವರನ್ನು ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ಬಿಜಯಂಗೈಲಾಗುತ್ತದೆ. ಸೆ.23ರಿಂದ 29ರವರೆಗೆ ಸಂಜೆ ವೇಳೆ ಖಾಸಗಿ ದರ್ಬಾರ್ ನಡೆಸುವರು. ಸೆ.29 ರಂದು ಬೆಳಗ್ಗೆ 10:10ರಿಂದ 10:30ರ ಒಳಗೆ ಸರಸ್ವತಿ ಪೂಜೆ ನೆರವೇರಿಸುವರು. ಅಂದು ರಾತ್ರಿ ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ.

ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನೆರವೇರಿಸಲಿದ್ದಾರೆ. ಆಯುಧ ಪೂಜೆಯ ದಿನದಂದು ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ, ಬೆಳಗ್ಗೆ 7:30 ರಿಂದ 7:42ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕಳುಹಿಸಿ ಪೂಜೆ ಸಲ್ಲಿಕೆಯಾಗಲಿದೆ. ಬೆಳಗ್ಗೆ 8ರಿಂದ 8:40ರ ಒಳಗೆ ಪಟ್ಟದ ಕತ್ತಿ ಹಾಗೂ ಖಾಸಾ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತಂದು ಪೂಜೆ ನೆರವೇರಿಸುವರು. ಬೆಳಗ್ಗೆ 10:35ಕ್ಕೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಿಸಲಿದೆ. ಸಂಜೆ ಸಿಂಹಾಸನಕ್ಕೆ ಅಳವಡಿಸಿರುವ ಸಿಂಹ ಹಾಗೂ ಯದುವೀರ್-ತ್ರಿಷಿಕಾ ಕುಮಾರಿ ಒಡೆಯರ್ ಅವರ ಕಂಕಣ ವಿಸರ್ಜನೆ ಮಾಡಲಾಗುತ್ತದೆ.

ಅ.2ರಂದು 10 ಗಂಟೆಗೆ ವಿಜಯದಶಮಿಯ ಪೂಜಾ ಕೈಂಕರ್ಯಗಳು ನೆರವೇರಲಿದ್ದು, 10:55ರಿಂದ ವಿಜಯಯಾತ್ರೆ ನಡೆಸುವರು. ರಾಜಮನೆತನದ ಎಲ್ಲಾ ಪೂಜಾ ವಿಧಿಗಳು ಮುಗಿದ ಬಳಿಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಗುತ್ತದೆ.

ರಾಜರ ಕಾಲದಲ್ಲಿ ದರ್ಬಾರ್ ಹೇಗಿರುತ್ತಿತ್ತು?

ಪ್ರಜಾಪ್ರಭುತ್ವಕ್ಕೆ ಮುನ್ನ ಮಹಾರಾಜರ ಕಾಲದಲ್ಲಿ ಹೇಗೆ ನಡೆಯುತ್ತಿತ್ತು ಎಂಬುದನ್ನು ನೋಡಿದ್ದೇ ಆದರೆ ನವರಾತ್ರಿಯ ಮೊದಲನೆಯ ದಿನ ಅಂದರೆ ಪಾಡ್ಯದ ದಿನ ಪ್ರಸ್ತುತ ಮಹಾರಾಜರಾಗಿ ಖಾಸಗಿ ದರ್ಬಾರ್ ನಡೆಸುವ ಮಹಾರಾಜರು ಬೆಳಿಗ್ಗೆ ಎದ್ದ ತಕ್ಷಣವೇ ಆರತಿ ಎತ್ತಿ ಎಣ್ಣೆ ಶಾಸ್ತç ಮಾಡಿ, ಅರಮನೆಗೇ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳಸ್ನಾನ ಮಾಡಿಸಲಾಗುವುದು.  ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು  ಆರತಿ ಬೆಳಗುತ್ತಿದ್ದರು.

ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

ಆನಂತರ ಪೂಜೆಗೆ ಅಣಿಯಾಗುತ್ತಿದ್ದ  ಮಹಾರಾಜರು ಮೊದಲಿಗೆ ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ಬಳಿಕ ಕಳಶಪೂಜೆ, ಕಂಕಣಪೂಜೆ ನಡೆಸಿ ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಿದ್ದರು. ಮಹಾರಾಜರ ಪತ್ನಿ ಕೂಡ ರಾಜಮನೆತನದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ತಾವೂ ಕಂಕಣ ಧರಿಸುತ್ತಿದ್ದರು.  ಅಲ್ಲಿಂದ ಎಲ್ಲಾ ರೀತಿಯ ಕಠಿಣವ್ರತಗಳನ್ನೂ ಅರಮನೆಯ ಸಂಪ್ರದಾಯದಂತೆ ಚಾಚೂ ತಪ್ಪದೆ ನಡೆಸುತ್ತಿದ್ದರು.

ದುರ್ಗೆಯ ದಿವ್ಯಸ್ವರೂಪಗಳಾದ ಬ್ರಹ್ಮಾಣಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ, ಮಹೇಶ್ವರಿ, ದುರ್ಗಾ, ಕಾಳಿ, ಚಂಡಿಕೆ ಹೀಗೆ ಎಲ್ಲಾ ಶಕ್ತಿದೇವತೆಗಳನ್ನೂ ಆರಾಧಿಸಿ ಶಿವಸನ್ನಿಧಿ, ಕೃಷ್ಣಸನ್ನಿಧಿ, ಚಾಮುಂಡಿ ಸನ್ನಿಧಿ ಮುಂತಾದ ದೇವ-ದೇವಿಯರ ಸನ್ನಿಧಿಗಳಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಇದರ ನಂತರ ದೇವೀ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯುತ್ತಿತ್ತು. ಬಳಿಕ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳು ನಡೆದು ಅಷ್ಟೋತ್ತರವಾಗುತ್ತಿತ್ತು.

ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಅನೇಕ ಪೂಜಾವಿಧಿಗಳು ಸಾಂಗೋಪವಾಗಿ ನಡೆದು ದೇವೀ ಭಾಗವತವನ್ನು ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತಿತ್ತು.ಇದಕ್ಕಾಗಿ ಮರದಿಂದ ಮಹಿಷಾಸುರನ ಪ್ರತಿಕೃತಿಯನ್ನು ತಯಾರಿಸಿ ಅದಕ್ಕೆ ಕುಂಕುಮದ ರಕ್ತವರ್ಣವನ್ನು ಸುರಿಯಲಾಗುತ್ತಿತ್ತು. ಕಾಳಿಕಾ ಪುರಾಣದ ಪ್ರಕಾರ ವೈದಿಕವಾಗಿ ಅರಮನೆಯೊಳಗೆ ಕಾರ್ಯಕ್ರಮ ನಡೆಸುವ ಮುನ್ನ ಬೆಳಿಗ್ಗೆ ರತ್ನಸಿಂಹಾಸನಕ್ಕೂ ಪೂಜೆ ಸಲ್ಲಿಸಲಾಗುತ್ತದೆ.

ದರ್ಬಾರಿಗೆ ಬರುವುದಕ್ಕೂ ಮೊದಲು ಮಹಾರಾಜರಿಗೆ ಮಹಾರಾಣಿಯರು ಸುಮಂಗಲೆಯರೊಡನೆ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ.  ಹತ್ತು ದಿನಗಳೂ ಒಡೆಯರ್‌ಗೆ ಈ ರೀತಿ ಪಾದಪೂಜೆ ಮಾಡಲಾಗುತ್ತಿತ್ತು.  ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ನಡೆಯುತ್ತಿತ್ತು. ಈ ಎಲ್ಲಾ ವಿಧಿ-ವಿಧಾನ ಪೂಜೆಗಳ ಜೊತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆತೊಟ್ಟಿಯಲ್ಲಿ ಜೋಡಿಸಿ ಕೂರಿಸಿ ಗೊಂಬೆ ಆರತಿ ಮಾಡಲಾಗುತ್ತಿತ್ತು. ಆ ನಂತರ ರಾಜಗಾಂಭೀರ್ಯದಿಂದದ ರತ್ನಸಿಂಹಾಸನ ಏರಿ ಆ ಸ್ಥಾನಕ್ಕೆ ಬಲಗೈ ಎತ್ತಿ ಸಲ್ಯೂಟ್ ಮಾಡಿ ಗತ್ತಿನಿಂದ ಕುಳಿತುಕೊಳ್ಳುತ್ತಿದ್ದರು. ಆಗ ಹೊಗಳು ಭಟರು  ರಾಜಾಧಿರಾಜ … ರಾಜ ಮಾರ್ತಾಂಡ … ಶ್ರೀಮನ್ಮಹಾರಾಜ … ಬಹುಪರಾಕ್ … ಮುಂತಾದ ಪರಾಕುಗಳನ್ನು ಮೊಳಗಿಸುತ್ತಿದ್ದರು. ನವರಾತ್ರಿಯ ಮೊದಲನೆ ದಿನ ಅಂದರೆ ಪಾಡ್ಯದ ದಿನದ ಬೆಳಿಗ್ಗೆಯಿಂದಲೇ ದರ್ಬಾರ್ ನಡೆಯುತ್ತಿತ್ತು. ದ್ವಾರಪಾಲಕರು, ಪರಾಕು ಹೇಳುವವರು, ಒಡೆಯರ್ ಆಪ್ತ ಸಿಬ್ಬಂದಿ, ರಾಜದಂಡ ಹಿಡಿದ ಆಸ್ಥಾನ ಅಧಿಕಾರಿಗಳು, ರಾಜಪುರೋಹಿತರು, ವಿದ್ವಾಂಸರು, ಒಡೆಯರ್ ವಂಶಸ್ಥರು, ಬಂಧುಮಿತ್ರರು ಆಹ್ವಾನಿತರು ಸೇರುತ್ತಿದ್ದರು.

ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?
ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳಿಗೆ ಅಲಂಕಾರ ಮಾಡಿ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ನಂತರ ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ದರ್ಬಾರ್ ಆರಂಭವಾಗುತ್ತಿತ್ತು. ಸಿಂಹಾಸನಾರೂಢರಾದ ಮಹಾರಾಜರು ದೇವಾಲಯಗಳಿಂದ ಆಗಮಿಸಿದ ಪುರೋಹಿತರು ಪ್ರಸಾದ ಮತ್ತು ಮಂತ್ರಪುಷ್ಪ ಹಾಗೂ ಮಂಗಳಾಕ್ಷತೆ ನೀಡುವುದು, ನಜರ್ ಒಪ್ಪಿಸುವುದು ನಡೆಯುತ್ತಿತ್ತು.  ನಂತರ ಸಿಂಹಾಸನಾರೂಢ ಮಹಾರಾಜರು ಅವರು ರಾಜಪರಿವಾರದ ಮಂದಿಗೆ ಕಾಣಿಕೆ ನೀಡುತ್ತಾರೆ. ಪ್ರತಿ ದಿನವೂ ಸಂಪ್ರದಾಯ ಬದ್ಧವಾಗಿ ದರ್ಬಾರ್ ನಡೆಯುತ್ತಿತ್ತು.

ದರ್ಬಾರ್ ಸಂದರ್ಭ  108 ಸಲ ದೇವಿ ಭಾಗವತ ಪಠಣ, 10 ಮಂದಿ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿಯ ರಾತ್ರಿ ಆಲಮೇಲಮ್ಮನ ದೇವಸ್ಥಾನದಲ್ಲಿ ಪೂಜೆ, ಆಯುಧಶಾಲೆಯಲ್ಲಿ ಆಯುಧಪೂಜೆ, ವಿಜಯದಶಮಿಯ ದಿನ ಜಟ್ಟಿಗಳ ವಜ್ರಮುಷ್ಠಿ ಕಾಳಗ, ಇದೇ ದಿನ ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಗಳನ್ನು ಶ್ರದ್ಧಾಭಕ್ತಿಗಳಿಂದ  ನಡೆಸಲಾಗುತ್ತಿತ್ತು. ಅವತ್ತು ರಾಜಪ್ರಭುತ್ವವಿತ್ತು. ಮಹಾರಾಜರು ಇದನ್ನು ನೆರವೇರಿಸುತ್ತಿದ್ದರು. ಅವತ್ತು ಏನು ನಡೆಯುತ್ತಿತ್ತೋ ಅದನ್ನು ಇವತ್ತು ಖಾಸಗಿಯಾಗಿ ರಾಜಮನೆತನದವರು ನಡೆಸುತ್ತಿದ್ದು, ಅದು ಖಾಸಗಿ ದರ್ಬಾರ್ ಆಗಿ ಖ್ಯಾತಿಯಾಗಿದೆ.

B M Lavakumar

admin
the authoradmin

Leave a Reply