DasaraLatest

ಮೈಸೂರು ದಸರಾ ಭದ್ರತೆಗೆ 7 ಸಾವಿರಕ್ಕೂ ಹೆಚ್ಚು ಪೊಲೀಸರ ಕಣ್ಗಾವಲು… ಎರಡು ಹಂತದ ಭದ್ರತೆ!

ಸೆ.22ರಿಂದ ಅ.2ರವರೆಗೆ ನಡೆಯುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಲಕ್ಷಾಂತರ ಜನರು ಮೈಸೂರಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿರುವುದರಿಂದ ಯಾವುದೇ ರೀತಿಯ ತೊಂದರೆಗಳಿಲ್ಲದೆ ನಡೆಯಲು  ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಬಿಗಿ ಭದ್ರತೆ ಕೈಗೊಂಡಿದ್ದು, ನಗರದಾದ್ಯಂತ ಪೊಲೀಸರು ನಿಗಾವಹಿಸಲಿದ್ದಾರೆ.

ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?

ಪ್ರತಿವರ್ಷವೂ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಭದ್ರತೆ ಕೈಗೊಳ್ಳಲಾಗುತ್ತಿದೆ. ಸೆ.22ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ, ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ವಸ್ತುಪ್ರದರ್ಶನ, ಕುಸ್ತಿ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಪುಸ್ತಕ ಮೇಳ, ದೀಪಾಲಂಕಾರ, ಯುವ ದಸರಾ, ಏರ್ ಶೋ, ಜಂಬೂ ಸವಾರಿ, ಬನ್ನಿಮಂಟಪದ ಪಂಜಿನ ಕವಾಯತು ಹಾಗೂ ನಗರದ ವಿವಿಧ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ

ದಸರಾ ಉದ್ಘಾಟನೆಯಿಂದ ಅ.1ರವರೆಗೆ ಮೊದಲ ಹಂತ, ಅ.2ರಂದು ಎರಡನೇ ಹಂತದ ಭದ್ರತೆ ಕೈಗೊಳ್ಳಲಾಗಿದೆ. 6384 ಪೊಲೀಸ್ ಸಿಬ್ಬಂದಿ, 35 ಕೆಸ್‌ಆರ್‌ಪಿ, 15 ಸಿಎಆರ್, ಡಿಎಆರ್, 29 ಎಎಸ್‌ಸಿ ತಂಡ, 1 ಗರುಡ ಪೊಲೀಸ್, 1 ಆರ್‌ ಎಎಫ್, 1200 ಹೋಂ ಗಾರ್ಡ್ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಕ್ಕಪಕ್ಕದ ಜಿಲ್ಲೆ, ರಾಜ್ಯಗಳಿಂದ ಅಪರಾಧಿಗಳು ಬಂದು ಅಪರಾಧ ಕೃತ್ಯ ಎಸಗುವುದನ್ನು ತಡೆಗಟ್ಟಲು ನುರಿತ ಅಪರಾಧ ವಿಭಾಗದ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

ಸೆ.22ರಿಂದ ಅ.1ರವರೆಗೆ ಸಂಚಾರ ನಿಯಂತ್ರಣಕ್ಕೆ ಎಲ್ಲಾ ಪ್ರಮುಖ ಜಂಕ್ಷನ್‌ ಗಳು, ಪ್ರವಾಸಿ ಸ್ಥಳಗಳ ಬಳಿ 43 ಟ್ರಾಫಿಕ್  ಪೊಲೀಸರು, ಅ.2ರಂದು ಜಂಬೂ ಸವಾರಿ ಸಾಗುವ ಮಾರ್ಗ, ಅರಮನೆ ದ್ವಾರಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಲು 33 ಸಿವಿಲ್ ಪೊಲೀಸರನ್ನು ನಿಯೋಜಿಸಲಾಗುತ್ತದೆ. ದಸರಾ ಭದ್ರತೆಗಾಗಿ ನಗರದಲ್ಲಿ ಈಗಾಗಲೇ ಇರುವ 30,614 ಸಿಸಿ ಕ್ಯಾಮರಾಗಳ ಜತೆಗೆ, ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ, ಇತರೇ ಪ್ರಮುಖ ಸ್ಥಳಗಳಲ್ಲಿ 200 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. 32 ಅಗ್ನಿಶಾಮಕ ದಳ, 26 ಆಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗುತ್ತದೆ.

ಪ್ರವಾಸಿಗರಿಗೆ ಮಾಹಿತಿ ನೀಡಲು, ಸಾರ್ವಜನಿಕರಿಗೆ, ಅಗತ್ಯವಿರುವವರಿಗೆ ಪೊಲೀಸ್ ಸಹಾಯ ನೀಡಲು ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಪೊಲೀಸ್ ಸಹಾಯಕೇಂದ್ರಕ್ಕೆ ನಿಯೋಜಿಸಿರುವ ಪೊಲೀಸರು, ಪ್ರವಾಸಿಮಿತ್ರರು, ಪ್ರವಾಸಿಗರಿಗೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ, ಏಕಮುಖ ಸಂಚಾರ, ರಕ್ಷಣಾ ವ್ಯವಸ್ಥೆ ಕುರಿತು ಮಾಹಿತಿ ನೀಡಲಿದ್ದಾರೆ. ಜತೆಗೆ ಸಾರ್ವಜನಿಕರಿಗೆ ಸುರಕ್ಷತೆ ಮತ್ತು ಮಾಹಿತಿಗಾಗಿ, ಯಶಸ್ವಿ ದಸರಾ ಆಚರಣೆಗೆ ಪೊಲೀಸರ ಪಾತ್ರದ ಕುರಿತು ಮಾಹಿತಿ ನೀಡದಲು ಕಿರು ಹೊತ್ತಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಡ್ರೋಣ ಕಣ್ಗಾವಲು ಇಡಲಾಗುವುದು. ನಗರದ ಲಾಡ್ಜ್ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಿ ಅನುಮಾನಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಲಾಗುವುದು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ 24×7 ಅಪರಾಧ ವಿಭಾಗದ ನಿಯೋಜನೆ ಜತೆಗೆ, ನಗರ ವ್ಯಾಪ್ತಿಯಲ್ಲಿ 24×7 ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ರೌಡಿ ಪರೇಡ್ ನಡೆಸಿ ದಸರಾ ಸಂದರ್ಭದಲ್ಲಿ ಅಪರಾಧಿಕ ಕೃತ್ಯದಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗುವುದು. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭಗಳಲ್ಲಿ ಹಾಸಿಗೆ ಕಾಯ್ದಿರಿಸಲು ಸೂಚನೆ ನೀಡಲಾಗಿದೆ.  ಜತೆಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಶಿಥಿಲಾವಸ್ಥೆಯ, ನಿರ್ಮಾಣ ಹಂತದ ಕಡ್ಡಗಳನ್ನೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಹಳೆಯ ಫೋಟೊ, ವಿಡಿಯೋಗಳನ್ನು ಹಾಕಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿಗಾ ವಹಿಸಲು ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ಗೆ 52 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ

ಇನ್ನು ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ ಹೇಗಿರಲಿದೆ ಎಂಬುದನ್ನು ನೋಡಿದ್ದೇ ಆದರೆ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಸೆ.22ರಿಂದ ಅ.2ರವರೆಗೆ ನಗರದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಅರಮನೆ ಸುತ್ತಮುತ್ತ ರಸ್ತೆಗಳು, ನ್ಯೂಎಸ್‌ ಆರ್ ರಸ್ತೆ, ಬಿ.ಎನ್.ರಸ್ತೆ, ಬನುಮಯ್ಯ ರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಈ ರಸ್ತೆಗಳ ಬದಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿಷೇಧಿಸಲಾಗಿದೆ.

ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ದೇವರಾಜ ಅರಸು ರಸ್ತೆ, ಪುರಂದರ ರಸ್ತೆ, ಬಿ.ಎನ್.ರಸ್ತೆಯಲ್ಲಿ ಗನ್‌ಹೌಸ್ ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗೆ ವಾಹನಗಳ ಪ್ರವೇಶ, ನಿಲುಗಡೆ ನಿಷೇಧಿಸಲಾಗಿದೆ. ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಅ.1 ಮತ್ತು 2ರಂದು ಸಾರಿಗೆ ಬಸ್‌ಗಳಿಗೆ ನಗರದ ಹೊರ ಭಾಗದಲ್ಲಿ ತಾತ್ಕಾಲಿಕ ಬಸ್ ನಿಲ್ದಾಣದ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಅನುಕೂಲಕ್ಕೆ ದಸರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳ ಸ್ಥಳದ ಬಳಿಯೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

admin
the authoradmin

Leave a Reply