DasaraLatest

ಮೈಸೂರು ದಸರಾ ವೈಭವದ ಆ ದಿನಗಳು ಹೇಗಿದ್ದವು? ಈಗ ಹೇಗಿದೆ? ವಿಶೇಷತೆಗಳು ಏನಿವೆ?

ಇನ್ನು ದಸರಾ ಸಮಯದಲ್ಲಿ ಮೈಸೂರು ನಗರದಲ್ಲಿ ಓಡಾಡುವುದೇ ಒಂಥರಾ ಮಜಾಕೊಡುತ್ತಿತ್ತು. ಎಲ್ಲರ ಮೊಗದಲ್ಲಿ ಸಡಗರ ಸಂಭ್ರಮ. ಇನ್ನು ನಗರದಲ್ಲಿ ದಸರದ ಕಳೆ ಮೇಳೈಸುತ್ತಿತ್ತು. ಎಲ್ಲಿ ನೋಡಿದರೂ ಸಂಭ್ರಮವೋ ಸಂಭ್ರಮ. ಆದರೆ ಇವತ್ತು ಸಂಭ್ರಮ ಎಲ್ಲಿದೆ? ಅಂದಿನ ದಸರಾ ಕುರಿತಂತೆ ಕುಮಾರಕವಿ ನಟರಾಜ್  ಮೆಲುಕು ಹಾಕುತ್ತ ನಮ್ಮನ್ನು ಅವತ್ತಿನ ದಸರಾದೊಳಗೆ ಸುತ್ತು ಹೊಡೆಸುತ್ತಾರೆ. ಅವರೊಂದಿಗೆ ನಾವೂ ಸಹ ದಸರ ವೈಭವದ ಆ.. ದಿನಗಳನ್ನು ಮನಸಾರೆ ಸವಿಯೋಣ.. ಬನ್ನಿ..!

ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ

ಮೈಸೂರು ದಸರಾ ಕುರಿತಂತೆ ಹೇಳುತ್ತಾ ಹೋದರೆ ಮೈಸೂರಿನ ಇತಿಹಾಸದಲ್ಲಿ ನಡೆದು ಹೋದ ಹಲವು ಘಟನೆಗಳು ಹೊರ ಬರುತ್ತವೆ. ಅವುಗಳನ್ನು ಹೇಳದೆ ಹೋದರೆ ದಸರಾ ಬಗ್ಗೆ ಹೇಳುವುದು ಅಪೂರ್ಣ ಆದಂತೆ.. ಇವತ್ತು ದಸರಾ ವಿಶ್ವವಿಖ್ಯಾತಿಯಾಗಿದೆ ಎಂದರೆ ಅದಕ್ಕೆ ಮೈಸೂರು ಮಹಾರಾಜರು ಕಾರಣ. ಕೃಷ್ಣದೇವರಾಯನ ಕಾಲದ ನಂತರ ದಸರಾವನ್ನು ಮೈಸೂರು ಮಹಾರಾಜರು ಮುಂದುವರೆಸಿಕೊಂಡು ಬಂದಿದ್ದು ಇವತ್ತಿನ ಪ್ರಜಾಪ್ರಭುತ್ವದಲ್ಲಿ ನಾಡಹಬ್ಬವಾಗಿ ಗಮನಸೆಳೆಯುತ್ತಿದೆ.

ಆಯಾಯ ಸರ್ಕಾರಗಳ ಅವಧಿಯಲ್ಲಿ ಕಾರ್ಯಕ್ರಮಗಳಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬರುತ್ತವೆಯಾದರೂ ದಸರಾ ಆಚರಣೆ ಮಾತ್ರ ಸಂಪ್ರದಾಯಬದ್ಧವಾಗಿ ನಡೆಯುತ್ತದೆ. ಎಲ್ಲ ಕಾಲದಲ್ಲಿಯೂ ದಸರಾ ನಡೆದಿದೆ ಎನ್ನುವುದೇ ವಿಶೇಷ. 1799-1947 ವರೆಗಿನ ಬ್ರಿಟಿಷ್‌ ಅಧೀನದಲ್ಲೂ ದಸರ ಹಬ್ಬವು ಮುಮ್ಮಡಿ ಕೃಷ್ಣರಾಜ ಒಡೆಯರ್ ಮೂಲಕ ಮುಂದುವರೆಯಿತು ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ವಿಶ್ವಖ್ಯಾತಿ ಗಳಿಸಿತ್ತು. ಸ್ವಾತಂತ್ರ್ಯಾನಂತರ ಜಯಚಾಮರಾಜ ಒಡೆಯರ್ ಕಾಲದಲ್ಲಿ ಜನಪ್ರಿಯತೆ ತಗ್ಗಿತು.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

1897ರಲ್ಲಿ  ನಾಲ್ವಡಿ ಕೃಷ್ಣರಾಜ ಒಡೆಯರ್ ಸೋದರಿಯಾದ ರಾಜಕುಮಾರಿ ಜಯಲಕ್ಷಮ್ಮಣ್ಣಿ ಮತ್ತು ಸರ್ದಾರ್ ಕಾಂತರಾಜ ಅರಸು ವಿವಾಹ ಸಂದರ್ಭದಲ್ಲಿ ಜರುಗಿದ ಅಗ್ನಿ ಆಕಸ್ಮಿಕದಲ್ಲಿ ಅಂದಿನ ಮರದ ಅರಮನೆಯು ಸುಟ್ಟು ಭಸ್ಮವಾದ ನಂತರ ಈಗಿನ ಅಂಬಾವಿಲಾಸ ಅರಮನೆಯನ್ನು ಅಂದಾಜು 45 ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ರಿಟಿಷ್ ಅಧಿಕಾರಿ ಸರ್ ಇರ್ವಿನ್ ಉಸ್ತುವಾರಿಯಲ್ಲಿ 16ವರ್ಷ [1897-1912] ಅವಧಿಯಲ್ಲಿ ನಿರ್ಮಿಸಲಾಯ್ತು. ಸುಟ್ಟುಹೋದ ಹಳೆ ಅರಮನೆಯ ತೈಲವರ್ಣ ಚಿತ್ರವನ್ನು ಇವತ್ತಿಗೂ ಇವತ್ತಿನ ಅರಮನೆಯ “ಜಯರಾಮ”ದ್ವಾರದ ಬಳಿ ನೋಡಬಹುದಾಗಿದೆ.

14ನೇ ಶತಮಾನದಲ್ಲಿ ವಿಜಯನಗರ ಚಕ್ರವರ್ತಿಗಳಿಂದ ಪ್ರಾರಂಭಗೊಂಡ ದಸರದ ಆಚರಣೆ ಪದ್ಧತಿಯು ಮೈಸೂರು ಮಹಾರಾಜರುಗಳಿಂದ 1971ವರೆಗೆ ಆಚರಿಸಲ್ಪಟ್ಟಿತು. 10ದಿನದ ದಸರ ಪ್ರತಿವರ್ಷ ಆಶ್ವೀಜಮಾಸ ಮಹಾಲಯ ಅಮಾವಾಸ್ಯೆಯಂದು ಪ್ರಾರಂಭವಾಗಿ, ಅಷ್ಟಮಿ ದಿನ ಆದಿಶಕ್ತಿಯ 8 ಅವತಾರದ ದುರ್ಗೆ, ಲಕ್ಷ್ಮಿ, ಸರಸ್ವತಿ, ಚಂಡಿ, ಚಾಮುಂಡಿ, ಕಾಳಿ, ಗಾಯತ್ರಿ, ಭುವನೇಶ್ವರಿ, ಅಷ್ಟದೇವತೆಯರನ್ನು ಪೂಜಿಸಲಾಗುತ್ತದೆ. ನವರಾತ್ರಿಯ 9 ದಿನವೂ ಪ್ರತಿದಿನ ಸಂಜೆ 7ರಿಂದ 8ರವರೆಗೆ ರಾಜ ದರ್ಬಾರ್ ನಲ್ಲಿ ವಿವಿಧ ಸಂಗೀತ, ನೃತ್ಯ, ವಾದ್ಯ, ಕವಿಗೋಷ್ಠಿ, ಮುಂತಾದ ಸಾಂಸ್ಕೃತಿಕ ಮತ್ತು ಮನರಂಜನಾತ್ಮಕ ಕಾರ್ಯಕ್ರಮ ಜರುಗುತ್ತದೆ. ಮಹಾನವಮಿಯಂದು ಬೆಳಗ್ಗೆ ಆಯುಧ ಪೂಜೆ ನಡೆಯುತ್ತದೆ.

ಇದನ್ನೂ ಓದಿ: ಮೈಸೂರಿನಲ್ಲಿ ಅಡ್ಡಾಡುವುದು ಪ್ರವಾಸಿಗರಿಗೆ ಇಷ್ಟ ಏಕೆ? ನೋಡಬಹುದಾದ ತಾಣಗಳು ಯಾವುವು?

10ನೇ ದಿನ ನಂದಿಕಂಬ ನವಕುಂಭ ಅಷ್ಠಕಳಶ ನಿತ್ಯಮುತ್ತೈದೇರು ಷಷ್ಟ್ಯಾರ್ಚಕರು ಸಕಲ ಕಲಾಕೋವಿದರು ವಿದ್ಯಾಪಾರಂಗತರು ಶ್ರೇಷ್ಠ ಕವಿಗಳು ಜೇಷ್ಠ ಅವಧಾನಿಗಳು ಹೊಗಳುಭಟ್ಟರು ಶಿಸ್ತಿನ ಸಿಪಾಯಿಗಳು ಮಂತ್ರಿಮಾಂಡಲಿಕರು ಕುಲಬಾಂಧವರು ಸೇನಾಪತಿದಂಡು ಒಂಟೆದಳ ಅಶ್ವದಳ ಗಜದಳ ರಕ್ಷಕಭಟರದಳ ಶಸ್ತ್ರಾಸ್ತ್ರ ಮದ್ದುಗುಂಡಿನಗಾಡಿ ಆನೆಗಾಡಿ ಜೋಡಿಬಸವ ಪಟ್ಟದಾನೆ ಪಟ್ಟದಕುದುರೆ ಸಿಂಹವಾಹಿನಿರಥ ಚಿನ್ನದರಥ ಬೆಳ್ಳಿರಥ ರಾಣಿಮೇನೆ ಕರ್ನಾಟಕ ಸಂಗೀತ ವಾದ್ಯಗೋಷ್ಠಿ ಪೈಲ್ವಾನ್‌ತಂಡ ಜಾನಪದ ಕಲಾತಂಡ ಗೃಹರಕ್ಷಕದಳ ಅಗ್ನಿಶಾಮಕ ದಳ ಮರಗಾಲು ಮನುಷ್ಯ ಭೂತಾಕಾರ ಬೊಂಬೆ ದಂಪತಿ ಡೊಳ್ಳು ಕುಣಿತ ಕಿರುಬನ ಕುಣಿತ ಮಾರಿ ಕುಣಿತ ಸ್ಥಬ್ಧಚಿತ್ರ ಹುಲಿವೇಷ ಮುಂತಾದವು ಮೈಸೂರಿನ ಸಂಸ್ಕೃತಿ- ಇತಿಹಾಸ ನೆನಪಿಸುವಂತೆ ಸಾಲಂಕೃತವಾಗಿ ಅರಮನೆಯಿಂದ ಹೊರಟು ಶಿಸ್ತಿನಿಂದ ಸಯ್ಯಾಜಿರಾವ್ ರಸ್ತೆ ಮೂಲಕ  5 ಕಿ.ಮೀ.ದೂರದ ಬನ್ನಿಮಂಟಪ ಮೈದಾನ ತಲುಪುತ್ತದೆ(ಬಹಳ ವರ್ಷಕಾಲ ದೊಡ್ಡಪೇಟೆ ಅಶೋಕರಸ್ತೆ ಮೂಲಕ ತಲುಪುತ್ತಿತ್ತು).

ಮಹಾರಾಜರ ಜಂಬೂಸವಾರಿ ಕಣ್ತುಂಬಿಕೊಳ್ಳಲು ಪ್ರಪಂಚದ ಎಲ್ಲಕಡೆಯಿಂದ ಬಂದ ಲಕ್ಷಾಂತರ ಮಂದಿ ಬೆಳಗ್ಗೆಯಿಂದಲೆ ರಸ್ತೆ-ವೃತ್ತ- ಮರ- ಕಟ್ಟಡ-ಮುಂತಾದ ಎಲ್ಲೆಡೆ ಜಮಾವಣೆಗೊಂಡು ಎಳ್ಳು ಎರಚಿದರೆ ನೆಲಕ್ಕೆ ಬೀಳದಷ್ಟು ಜನಜಂಗುಳಿ ಇರುತ್ತಿತ್ತು! ಎಲ್ಲೆಲ್ಲು ಹೊಸಬಟ್ಟೆ ಹೊಸತಿಂಡಿ ಹೊಸನೋಟ ಹೊಸಜೋಡಿ ಇಡೀ ಪರಿಸರ ಜಾತ್ರೆ ವಾತಾವರಣದಿಂದ ತುಂಬಿ ತುಳುಕುತ್ತಿತ್ತು! ಯುದ್ಧಪೂರ್ವದ-ಯುದ್ಧನಂತರದ ವಿಜಯೀಯಾತ್ರೆ ಪದ್ಧತಿಯಂತೆ ಮಹಾರಾಜರು ಶಮೀವೃಕ್ಷಕ್ಕೆ ಪೂಜೆ ಮಾಡಿದ ನಂತರ ಬನ್ನಿಮಂಟಪದ ವೇದಿಕೆಯಲ್ಲಿ ಅರ್ಹರಿಗೆ ಬಿರುದು ಬಹುಮಾನ ಪ್ರಶಸ್ತಿ ತಾಮ್ರಪತ್ರಗಳನ್ನು ಕೊಡಮಾಡುತ್ತಿದ್ದರು. ಜಯಚಾಮರಾಜ ಒಡೆಯರ್ ಕಾಲದಲ್ಲೂ ದತ್ತಿ ದಾನ ಧರ್ಮಗಳ ಸತ್ಕಾರ್ಯದೊಂದಿಗೆ ಭವ್ಯ ಪರಂಪರೆಯ ಮೈಸೂರು ದಸರ ವಿಜೃಂಭಣೆಯಿಂದ ಮುಕ್ತಾಯ ಆಗುತ್ತಿತ್ತು.

ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ಮೈಸೂರು ವಾಸುದೇವಾಚಾರ್ಯ ಜಯಚಾಮರಾಜ ಒಡೆಯರ್ ರಚಿಸಿದ ಶ್ರೀಚಾಮುಂಡೇಶ್ವರಿ… ಮುಂತಾದ ಗೀತಗಾಯನದ ಮೂಲಕ ವಿಪ್ರೋತ್ತಮರು ಮಂಗಳ ಹಾಡುತ್ತಿದ್ದರು. ಕಾಲಕ್ರಮೇಣ ಬ್ರಿಟಿಷ್ ಆಡಳಿತದಲ್ಲಿ ಟಾರ್ಚ್‌ ಲೈಟ್ ಪರೇಡ್, ಎಗ್ಜಿಬಿಶನ್, ಫ಼್ಲವರ್‌ಶೋ, ಇಂಗ್ಲಿಷ್‌ ಬ್ಯಾಂಡ್ ಆರ್ಕೆಷ್ಟ್ರ,  ರಿಸರ್ವ್ ಪೊಲೀಸ್, ಲ್ಯಾಂಡ್‌ ಆರ್ಮಿ, ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್, ಇತ್ಯಾದಿಗಳು ಪ್ರಾರಂಭವಾದವು.

ಆ ಕಾಲದಲ್ಲಿ ಪ್ರತಿಸಂಜೆ 7 ಗಂಟೆಗೆ ಸರಿಯಾಗಿ ಸಂಪ್ರದಾಯಬದ್ಧ ಮಹಾರಾಜರು ಸಕಲ ವೈಭವದಿಂದ ರತ್ನಖಚಿತ ಸಿಂಹಾಸನದಲ್ಲಿ ಕುಳಿತಾಕ್ಷಣ ದಿಗ್ಗನೆ ಹೊತ್ತಿಕೊಳ್ಳುತ್ತಿದ್ದ 9ಲಕ್ಷ ಬಲ್ಬುಗಳು ಇಡೀ ಅರಮನೆಯನ್ನು 9ಗಂಟೆವರೆಗೆ ಬೆಳಗುತ್ತಿದ್ದವು. ಮಾಂಡಲೀಕರು ಆಸ್ಥಾನ ವಿದ್ವಾಂಸರು  ಬಂಧು ಮಿತ್ರರು ಸಖಿ ಸೈನಿಕರು ಮುಂತಾದವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಾಜದರ್ಬಾರ್ ಜಬರ್ರಾಗಿ ಜರುಗುತ್ತಿತ್ತು.1970ರವರೆಗೂ ಜಂಬೂಸವಾರಿ ಮೆರವಣಿಗೆ ಚಿನ್ನದ ಅಂಬಾರಿಯೊಳಗೆ ಮುಂದುಗಡೆಯಲ್ಲಿ ಮಹಾರಾಜರೂ ಹಿಂದಗಡೆಯಲ್ಲಿ ಅವರ ಸೋದರಮಾವನೂ ಕುಳಿತಿರುತ್ತಿದ್ದರು. ಅನಿರೀಕ್ಷಿತವಾಗಿ 1971ರಿಂದ ಕೇಂದ್ರ ಸರ್ಕಾರವು ಮಹಾರಾಜರ ದರ್ಬಾರ್ ರದ್ದುಪಡಿಸಿ ಮಹಾರಾಜರನ್ನೂ ಶ್ರೀಸಾಮಾನ್ಯ ಎಂದು ಪರಿಗಣಿಸಿ ರಾಜಧನ ಜಾರಿಗೊಳಿಸಿ ರಾಜ ಪ್ರಭುತ್ವದ ಆಳ್ವಿಕೆಯನ್ನೇ ಮುಗಿಸಿತು!

ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?

1972ರಿಂದ ಪ್ರಜಾಪ್ರಭುತ್ವದ ಜನತಾ ದಸರ ಪ್ರಾರಂಭವಾಗಿ ರಾಜ್ಯಸರ್ಕಾರದ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿಯ ಅಂಬಾರಿ, ಮೇಯರ್ ಕುದುರೆಸವಾರಿ ರಾಜಕಾರಣಿ ತಂಡ, ಟ್ಯಾಬುಲೊ, ಗೋಲ್ಡನ್ ಸಿಲ್ವರ್‌ಕಾರ್ಡ್ ವಿ.ಐ.ಪಿ. ಟಿಕೆಟ್, ಲೈವ್ ‌ಟೆಲಿಕಾಸ್ಟ್ ವೀಕ್ಷಕ ವಿವರಣೆ, ಮುಂತಾದ ಅ[ನಾ]ವಶ್ಯಕತೆಗಳು ಸೇರಿಸಲ್ಪಟ್ಟವು? ಹತ್ತು ದಿನ ಪರ್ಯಂತ ಮೈಸೂರು ನಗರವು ಮದುಮಗನಂತೆ ಸಿಂಗಾರಗೊಂಡು ನೋಡುಗರ ಕಣ್ಮನ ಸೂರೆಗೊಳ್ಳುವಂತೆ ಇರುತ್ತಿತ್ತು.

admin
the authoradmin

7 Comments

  • All the DASARA articles are Top class and Super quality articles. Very very thanks for both LAVAKUMAR and KUMARAKAVI for their efforts 👌 I LOVE to subscribe and read your beautiful newspaper Janamana Kannada.

  • ದಸರ ಹಬ್ಬದ ಲೇಖನ ಅತಿ ಉತ್ತಮವಾದ ರೀತಿಯಲ್ಲಿ ಬರೆಯಲಾಗಿದ್ದು ಬಹಳ ಸುಂದರವಾಗಿ ಪಬ್ಲಿಶ್ ಮಾಡಿದ್ದಾರೆ, ಧನ್ಯವಾದ

  • ಫಸ್ಟ್ ಕ್ಲಾಸ್ ಬರವಣಿಗೆಯ ಏ-1 ಪಬ್ಲಿಕೇಶನ್, ನಿಮ್ಮ ಪತ್ರಿಕೆಯವರಿಗೆ ದೊಡ್ಡ ನಮಸ್ಕಾರ ಮತ್ತು ಅನೇಕ ಧನ್ಯವಾದಗಳು

  • ದಸರ ಹಬ್ಬದ ಲೇಖನ ತುಂಬ ಚೆನ್ನಾಗಿ ಮೂಡಿಬಂದಿದೆ

Leave a Reply