DasaraLatest

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಏನಿದೆ ಏನಿಲ್ಲ..? ದಸರೆಯ ಸಂಭ್ರಮದಲ್ಲಿ ತೇಲೋಣ ಬನ್ನಿ

ಮೈಸೂರು ದಸರಾ ಆರಂಭವಾಯಿತೆಂದರೆ ಇಡೀ ನಗರದಲ್ಲಿ ಸಂಭ್ರಮ ಸಡಗರ ಮನೆ ಮಾಡಿ ಬಿಡುತ್ತದೆ. ವಿದ್ಯುದ್ದೀಪದ ಬೆಳಕಲ್ಲಿ ಇಡೀ ನಗರದಲ್ಲಿ ಸುತ್ತಾಡುವುದೇ ಒಂಥರಾ ಮಜಾ ಕೊಡುತ್ತದೆ. ದಸರಾ ಉದ್ಘಾಟನೆಯಿಂದ ಆರಂಭವಾಗಿ ವಿಜಯದಶಮಿಯ ಪಂಜಿನ ಕವಾಯತ್ ತನಕ ಪ್ರತಿದಿನವೂ ನಗರದಲ್ಲಿ ಒಂದಲ್ಲ ಒಂದು ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಅದರಾಚೆಗೆ ವಸ್ತುಪ್ರದರ್ಶನ ಮುಗಿಯುವ ವರೆಗೂ ಸಂಭ್ರಮಕ್ಕೇನು ಕೊರತೆಯಿಲ್ಲ.

ಇದನ್ನೂ ಓದಿ: ಮೈಸೂರು ದಸರ ಬರೀ ಉತ್ಸವವಲ್ಲ… ಇದು ಪೌರಾಣಿಕ, ಐತಿಹಾಸಿಕ ಸಾಂಸ್ಕೃತಿಕ ಮೆರವಣಿಗೆ

ದಸರಾ ವಸ್ತುಪ್ರದರ್ಶನ ಸಾಮಾನ್ಯವಾಗಿ  ಮೂರ್ನಾಲ್ಕು ತಿಂಗಳ ಕಾಲ ಇರುತ್ತದೆ  ಸಂಜೆಯಾಗುತ್ತಿದ್ದಂತೆಯೇ ಜನ ಅತ್ತ ಕಡೆಗೆ ಧಾವಿಸುವುದರಿಂದ ಜನಜಂಗುಳಿಯಿಂದ ಕಳೆಕಟ್ಟುವುದು  ಮಾಮೂಲಿಯಾಗಿರುತ್ತದೆ. ಸಂಜೆಗತ್ತಲಲ್ಲಿ ಸಡಗರ ಪ್ರತಿಬಿಂಬಿಸುವ ರಂಗುರಂಗಿನ ದೀಪಾಲಂಕಾರ ಬಣ್ಣಬಣ್ಣದ ಉಡುಗೆತೊಡುಗೆ ಬಾಯಿಚಪ್ಪರಿಸುವಂಥ ತಿಂಡಿತಿನಿಸು ಕಣ್ಮನಸೆಳೆವ ವಸ್ತು-ವಸ್ತ್ರರಾಶಿ ಇವಕ್ಕೆಲ್ಲ ಪೂರಕವಾದಂತೆ ಕಲಾಕ್ಷೇತ್ರ್ರದ ಮನರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ವಯಸ್ಸಿನವರ ತನುಮನ ಸೆಳೆಯುತ್ತದೆ.

ಇನ್ನು ದಸರಾ ಆರಂಭದ ಕೊನೆಯವರೆಗೆ ಅಂಬಾವಿಲಾಸ ಅರಮನೆ ಪಕ್ಕದ ’ಲಾರ್ಡ್‌ ಕರ್ಜ಼ನ್’ ಪಾರ್ಕ್‌ನಲ್ಲಿ  ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆ ಏರ್ಪಡಿಸುತ್ತದೆ. ತರಾವರಿ ಹಣ್ಣುಗಳ ಮತ್ತು ಹೂವುಗಳ ಪ್ರದರ್ಶನ-ಮಾರಾಟ ಇರುತ್ತದೆ. ಇದಕ್ಕೆ ಮೆರುಗು ನೀಡುವಂತೆ ಪ್ರತಿಸಂಜೆ ಹಳೇ-ಹೊಸ ಎರಡೂಬಗೆ ಆರ್ಕೆಷ್ಟ್ರಾ (ವಾದ್ಯಗೋಷ್ಥಿ) ನೃತ್ಯ ಸಂಗೀತ ಮುಂತಾದ ಆಕರ್ಷಣೀಯ ಮನರಂಜನಾ ಕಾರ್ಯಕ್ರಮ ನಡೆಯುತ್ತದೆ. ದಸರವೈಭವದ [ಪ್ರ]ದರ್ಶನಗಳು ವಿವಿಧ ದೇಶ ಭಾಷೆ ಜಾತಿ ಮತ ಪಂಡಿತ ಪಾಮರ ಮಗು ವೃದ್ಧ ಆದಿಯಾಗಿ ಪ್ರತಿಯೊಬ್ಬರನ್ನು ಕೈಬೀಸಿ ಕರೆಯುತ್ತದೆ.

ಇದನ್ನೂ ಓದಿ: ಮೈಸೂರು ದಸರಾ ವೈಭವದ ಆ ದಿನಗಳು ಹೇಗಿದ್ದವು? ಈಗ ಹೇಗಿದೆ? ವಿಶೇಷತೆಗಳು ಏನಿವೆ?

ದಸರಾದಲ್ಲಿ ಮೈಸೂರು ಜಂಗೀಕುಸ್ತಿ ಸಾಂಪ್ರದಾಯಿಕ ಕ್ರೀಡೆ ಸೇರಿದಂತೆ ಅನೇಕ ರೀತಿಯ ಆಟೋಟ ಸ್ಫರ್ಧೆಗಳು ಇರುತ್ತದೆ. ರಾಜ್ಯ ರಾಷ್ಟ್ರ ಅಂತರ್‌ ರಾಷ್ಟ್ರ ಕ್ರೀಡಾಪಟುಗಳು ಪಾಲ್ಗೊಂಡು ದಸರಾಕೇಸರಿ, ದಸರಾಕುಮಾರ, ದಸರಾಶ್ರೀ ಮುಂತಾದ ಪ್ರಮುಖ, ಟ್ರೋಫಿ, ಪ್ರಶಸ್ತಿ, ಗಳಿಸಿ ಕ್ರೀಡಾಭಿಮಾನಿಗಳನ್ನು ಉಲ್ಲಾಸ ಪಡಿಸುವರು. ಇಲ್ಲಿ ವಿಜೇತರಾದ ಅಥವ ಗುರುತಿಸಿಕೊಂಡ ಅನೇಕ ಪ್ರತಿಭೆಗಳು ಪ್ರಖ್ಯಾತ ಕ್ರೀಡಾಪಟುಗಳಾಗಿ ಖ್ಯಾತರಾದ ಸಾವಿರಾರು ಉದಾಹರಣೆ ಇವೆ. ಸಿನಿರಸಿಕರಿಗೆ ನಗರ ಚಿತ್ರಮಂದಿರಗಳಲ್ಲಿ ಕಡಿಮೆ ಪ್ರವೇಶ ದರವಿದ್ದು ದೇಶ ವಿದೇಶಗಳ ರಾಷ್ಟ್ರ, ಅಂತರ್ರಾಷ್ಟ್ರ ಪ್ರಶಸ್ತಿ ವಿಜೇತ ವಿವಿಧ ಭಾಷೆಯ ಜತೆಗೆ ಕನ್ನಡದ ಹಳೆ, ಹೊಸ ಚಲನಚಿತ್ರಗಳ ಪ್ರದರ್ಶನ ಇರುತ್ತದೆ.

ಕೆಲವು ವರ್ಷದಿಂದ ಮಕ್ಕಳ ಚಿತ್ರೋತ್ಸವವನ್ನೂ ಆಯೋಜಿಸಲಾಗುತ್ತಿದೆ. ಎಳೆ ಗೆಳೆಯರ ತನುಮನ ಮುದಗೊಳಿಸುವ, ಜ್ಞಾನ-ವಿಜ್ಞಾನ ವೃದ್ಧಿಗೊಳಿಸುವ ಚಲನಚಿತ್ರ ಪ್ರದರ್ಶನವಿದ್ದು,  ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತದೆ. ಆ ಮೂಲಕ ಕನ್ನಡಿಗರಿಗೆ ಇತರೆ ದೇಶ, ಜನ, ಸಂಸ್ಕೃತಿ, ನಾಗರಿಕತೆ ಬಗ್ಗೆ ಪರಿಚಯವಾಗುತ್ತದೆ. ಕನ್ನಡ ಚಿತ್ರೋದ್ಯಮಿಗೆ ಅನ್ಯಭಾಷೆ [ಪ್ರ]ದೇಶಗಳ ಚಿತ್ರ ನಿರ್ಮಾಣ, ತಾಂತ್ರಿಕತೆ, ಇತ್ಯಾದಿ ಬಗ್ಗೆ ಅರಿವುಂಟಾಗುತ್ತದೆ. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು  ಕಾಪಾಡಿಕೊಂಡಿದೆ ಎಂಬುದನ್ನು ಸಾಬೀತು ಪಡಿಸುವಂತೆ ಮತ್ತು ಚಿತ್ರರಸಿಕರ ತನುಮನ ಸೂರೆಗೊಳ್ಳುವಂತೆ ದಸರ ಚಲನಚಿತ್ರೋತ್ಸವ ಜರುಗುತ್ತದೆ.

ಇದನ್ನೂ ಓದಿ: ಮೈಸೂರಿಗೆ ದಸರಾ ಕಳೆ ಬರುತ್ತಿದೆ… ನೀವು ಬನ್ನಿ… ಇಷ್ಟಕ್ಕೂ ಮೈಸೂರು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?

“ಎಲ್ಲರಿಗಾಗಿ ಒಬ್ಬರು-ಒಬ್ಬರಿಗಾಗಿ ಎಲ್ಲರು” ನಾಣ್ಣುಡಿಗೆ ಒತ್ತು ಕೊಡುವಂತೆ ಮತ್ತು ಯುವ ಜನತೆ ಕುಣಿದು ಕುಪ್ಪಳಿಸುವ ಯುವದಸರ ಕಾರ್ಯಕ್ರಮಗಳು ಆರಂಭಗೊಂಡವು. ನವ ಪ್ರತಿಭೆಗಳನ್ನು ಗುರ್ತಿಸಲು ಹೊಸ ವೇದಿಕೆ ಹುಟ್ಟಿಕೊಂಡಿತು. ಯುವ ಪೀಳಿಗೆಗೆಂದೇ ಮೀಸಲಾದ ಇಲ್ಲಿ ಯುವಕ-ಯುವತಿಯರು, ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸಾರ್ಥಕತೆ ಪಡೆಯುತ್ತಿದ್ದಾರೆ. ಕಲೆ, ಸಾಹಿತ್ಯ, ನಟನೆ, ನಾಟ್ಯ ಮುಂತಾದ ನೂರಾರು ವಿಭಾಗದಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿ ಯಶಸ್ವಿಯಾಗುತ್ತಿದ್ದರು.

ಯುವಕರಲ್ಲಿ ಭಾರತೀಯ ಐಕ್ಯತೆ ಮೈಗೂಡಿಸಿ ಕೊಳ್ಳಲು ನೆರವಾಗುವಂಥ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ, ಶೈಕ್ಷಣಿಕ, ಸಾಂಸ್ಕೃತಿಕ, ಸರ್ವ ಭಾಷಾ ಗೋಷ್ಠಿ ಮುಂತಾದವು ಇರುತ್ತಿತ್ತು. ಆ ಮೂಲಕ ಅನೇಕ ಯುವ ಪ್ರತಿಭೆಗಳು ಗುರುತಿಸಲ್ಪಟ್ಟು ರಾಷ್ಟ್ರ, ಅಂತರ್‌ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತಂದಿರುವ ಉದಾಹರಣೆಗಳಿವೆ. ಎಲ್ಲ ವಯಸ್ಸಿನವರನ್ನೂ ಆಕರ್ಷಿಸಿ ಖುಷಿ ಕೊಡುವ ಸಹಜ ಕಲಾವಿದರ ನೈಜ ಪ್ರದರ್ಶನವೆ ಸರ್ಕಸ್!  ಇದೊಂದು ಅಧ್ಭುತ ಚಾಕ ಚಕ್ಯತೆಯ ಸಾಹಸ ಗಾಥೆ!

ಇದನ್ನೂ ಓದಿ: ಮೈಸೂರಲ್ಲಿ ಯದುವಂಶ ಉದಯವಾಗಿದ್ದು ಹೇಗೆ? ಮಹಾರಾಜರುಗಳ ಕುರಿತಂತೆ ಇತಿಹಾಸ ಹೇಳುವುದೇನು?

ಇಂಥ ಮನರಂಜನೆ ಆಟದಿಂದ ನೂರಾರು ಮನುಷ್ಯ, ಪ್ರಾಣಿ, ಪಕ್ಷಿಗೆ ಸಾಕಷ್ಟು ನೋ[ನಲಿ]ವು ಇರುತ್ತದೆ.  ಕೆಲವು ವ್ಯಾಯಾಮ ಅಚ್ಚರಿ ಗೊಳಿಸಿದರೆ, ಇನ್ನು ಕೆಲವು ಉಸಿರು ಕಟ್ಟಿಸುತ್ತವೆ.  (ಈ ಬಾರಿ ಜೆಮಿನಿ ಸರ್ಕಸ್ ನಡೆಯಲಿದೆ) ಹಲವು ವೈರುದ್ಧಗಳ ನಡುವೆ ಸರ್ಕಸ್ ನೇಪಥ್ಯಕ್ಕೆ ಸರಿಯುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೈಸೂರು ನಗರದಲ್ಲಿ ಮಾತ್ರವಲ್ಲದೆ ಹಳೇ ಮೈಸೂರು ರಾಜ್ಯದ ಎಲ್ಲ ಭಾಗದಲ್ಲೂ ಮನೆಮನೆಯಲ್ಲಿ ದಸರಾ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ, ಪದ್ಧತಿ ಇವತ್ತಿಗೂ ರೂಢಿಯಲ್ಲಿದೆ! ಪ್ರತಿಯೊಂದು ಮನೆಯಲ್ಲು ವಿಶೇಷದ ತರಾವರಿ ಬೊಂಬೆಗಳು  ಕಣ್ಮನ ಸೆಳೆಯುತ್ತವೆ.  ಮೋಟಾರ್ ಕಾರ್ ರೇಸ್, ಕುದುರೆ ರೇಸ್, ಕರಕುಶಲ, ಲಲಿತಕಲೆ, ಕುಂಚಕಲೆ, ಚಿತ್ರಕಲೆ, ರಂಗೋಲಿ, ಪ್ರತಿಭಾ ಪ್ರದರ್ಶನದ ಸ್ಫರ್ಧೆ ಇರುತ್ತದೆ!  ಸೌಂದರ್ಯ ಸ್ಪರ್ಧೆ ಮಿಸ್‌ ದಸರಾ ಮಿಸೆಸ್‌ ದಸರಾ, ಇತ್ಯಾದಿ ನಾಡ ಕ್ರೀಡೆ,  ಸ್ಥಳೀಯ ಕ್ರೀಡೆ, ಗ್ರಾಮೀಣ ಕ್ರೀಡೆ, ಸ್ಪರ್ಧೆ ನಾಟಕ, ನೃತ್ಯ, ಸಂಗೀತ, ಗಾಯನ, ವಾದನ, ಜಾನಪದ, ಮುಂತಾದ ಗೋಷ್ಠಿ, ಸ್ಫರ್ಧೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಥವರನ್ನೂ ಆಕರ್ಷಿಸುತ್ತೆ.

ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ತಯಾರಾದ ‘ಸಿಹಿ’ಪಾಕ ‘ಮೈಸೂರು’ ಪಾಕ ಆಗಿದ್ದೇಗೆ? ಇಲ್ಲಿದೆ ಕಥೆ

ಚಿಣ್ಣರಿಗೆ ಮೀಸಲಿರುವ ಮಕ್ಕಳಲೋಕ, ಬಾಲೋದ್ಯಾನ, ಮಿನಿ ಆಟೋಟ ಸ್ಪರ್ಧೆ, ಬುದ್ದಿಗೆ ಗುದ್ದು, ಜ್ಞಾಪಕಶಕ್ತಿ, ಸಾಮಾನ್ಯಜ್ಞಾನ ಪ್ರದರ್ಶನ, ಸ್ಫರ್ಧೆ, ಪರೀಕ್ಷೆ ಮುಂತಾದವು ಪುಟಾಣಿಗಳಿಗೆ ಅದ್ಭುತ ಮನರಂಜನೆ ನೀಡಿ ಅರೆಕ್ಷಣ ಆನಂದಲೋಕಕ್ಕೆ ಕರೆದೊಯ್ಯುತ್ತದೆ. ಇಡೀ ಕುಟುಂಬಕ್ಕೆ ಅಪರೂಪದ ಅಪರಿಮಿತ ಆನಂದ ನೀಡುತ್ತಿತ್ತು. ಕಳೆದ ಎರಡು ವರ್ಷದಿಂದ ಪರಂಪರೆ ಪದ್ದತಿಯ ದಸರ ಉತ್ಸವ ಕಾರ್ಯಕ್ರಮವು ಅರಮನೆಗಷ್ಟೆ ಸೀಮಿತವಾಗಿದೆ! ಆದರೂ ಇಡೀ ಮೈಸೂರು ನಗರವನ್ನು ಬೆಳಗುವ ವಿದ್ಯುದ್ದೀಪದ ಬೆಳಕು ಜನತಾ ದಸರಕ್ಕೆ, ಸರ್ಕಾರದ ದಸರಕ್ಕೆ  ಮೆರಗು ನೀಡುತ್ತಿದೆ ಎಂಬುದು ವಾಸ್ತವಾಂಶ. ಅದೂ ಇಲ್ಲದೆ ಹೋಗಿದ್ದರೆ ಮೈಸೂರಿನಲ್ಲಿ ದಸರ ಉತ್ಸವ ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲವೇನೋ?!

admin
the authoradmin

2 Comments

Leave a Reply