Crime

ಮೈಸೂರಿನಲ್ಲಿ  ಪತ್ತೆಯಾಯ್ತು ಡ್ರಗ್ಸ್ ಫ್ಯಾಕ್ಟರಿ… ನಾಲ್ವರ ಬಂಧನ… 10ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

 ಮೈಸೂರು: ಮೈಸೂರಿಗೆ ಏನಾಗಿದೆ? ಇಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಕೆಟ್ಟು ಹೋಯಿತಾ? ಪೊಲೀಸರು ಏನು ಮಾಡುತ್ತಿದ್ದರು? ಸಿಎಂ ತವರಲ್ಲೇ ಡ್ರಗ್ಸ್ ಫ್ಯಾಕ್ಟರಿ ಇತ್ತು ಅಂದ್ರೆ ಬೇರೆಡೆ ಕಥೆ ಏನು? ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದು ಇದಕ್ಕೆಲ್ಲ ಕಾರಣವಾಗಿರುವುದು ಅದೊಂದು ಸುದ್ದಿ!

ಮೈಸೂರಲ್ಲಿ ಡ್ರಗ್ಸ್ ಪ್ರಯೋಗಾಲಯ ಇತ್ತು ಎಂಬುದನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ(ಎನ್‌ಸಿಬಿ) ಇದೀಗ ಖಚಿತಪಡಿಸಿದ್ದು, ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ರಹಸ್ಯ ಉತ್ಪಾದನಾ ಪ್ರಯೋಗಾಲಯದ ಮೇಲೆ ದಾಳಿ ನಡೆಸಲಾಗಿತ್ತು  ರಾಜಸ್ಥಾನ ಮೂಲದ ನಾಲ್ವರನ್ನು ಬಂಧಿಸಿ, 10 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿದೆ. 35 ಕೆ.ಜಿ ಮೆಫೆಡ್ರೋನ್(ಎಂಡಿ) ಇದ್ದ ಕರ್ನಾಟಕ ನೋಂದಣಿಯ ಫಾರ್ಚ್ಯುನರ್ ಕಾರನ್ನು ಅಧಿಕಾರಿಗಳು ಜನವರಿ 28ರಂದು ಗುಜರಾತ್‌ನಲ್ಲಿ ಪತ್ತೆಹಚ್ಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ವೇಳೆ ಮೈಸೂರಿನಲ್ಲಿ ಅವರು ಪ್ರಯೋಗಾಲಯ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.

ಈ ಮಾದಕ ವಸ್ತು ಸಾಗಣೆ ಜಾಲದ ಮಾಸ್ಟರ್‌ಮೈಂಡ್ ಎನ್ನಲಾದ ಮಹೀಂದ್ರ ಕುಮಾರ್ ವಿಷ್ಣೋಯಿ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಗಜಪತ್‌ಲಾಲ್ ಎಂಬಾತನನ್ನು ಬಂಧಿಸಲಾಗಿದೆ.  ಸ್ವಚ್ಛತೆಗೆ ಬಳಸುವ ರಾಸಾಯನಿಕ ವಸ್ತುಗಳ ತಯಾರಿಕಾ ಘಟಕದ ಹೆಸರಿನಲ್ಲಿ ಆರೋಪಿಗಳು 2024ರಲ್ಲಿ ಪ್ರಯೋಗಾಲಯ ನಿರ್ಮಿಸಿದ್ದರು. ಆರೋಪಿಗಳಲ್ಲಿ ಒಬ್ಬರಾದ ವಿಷ್ಣೋಯಿ ಸಂಬಂಧಿ ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು ಎಂದು ಎನ್‌ಸಿಬಿ ಪ್ರಕಟಣೆ ತಿಳಿಸಿದೆ.

10ಕೋಟಿ ಮೌಲ್ಯದ ಮಾದಕವಸ್ತು, 25.6 ಲಕ್ಷ ನಗದು, ಒಂದು ಎಸ್‌ಯುವಿ ಮತ್ತು 500 ಕೆ.ಜಿ ರಾಸಾಯನಿಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿರುವ ವಿಷ್ಣೋಯಿ, ರಹಸ್ಯ ಪ್ರಯೋಗಾಲಯಗಳಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಯೋಜನೆಯನ್ನು ಜೈಲಿನಲ್ಲಿ ಇದ್ದಾಗ ರೂಪಿಸಿದ್ದ. ಆತನ ವಿರುದ್ಧ ರಾಜಸ್ಥಾನದಲ್ಲಿ ಮೂರು ಮತ್ತು ಗುಜರಾತ್ ಒಂದು ಪ್ರಕರಣ ದಾಖಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

ರಾಸಾಯನಿಕ ವಸ್ತುಗಳು ಪತ್ತೆ: ಮಾದಕ ವಸ್ತು ತಯಾರಿಕೆ ಶಂಕೆ ಮೇರೆಗೆ ಮನೆಯೊಂದರ ಮೇಲೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಡ್ರಗ್ಸ್‌ಗೆ ಬಳಸುವ ರಾಸಾಯನಿಕ ವಸ್ತುಗಳು ಪತ್ತೆಯಾಗಿವೆ. ಮೈಸೂರು ತಾಲೂಕಿನ ಯಾಂದಳ್ಳಿ ಗ್ರಾಮದ ಸಪ್ತ ಮಾತೃಕೆ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ.

ಕಟ್ಟಡವನ್ನು ಬಾಡಿಗೆಗೆ ಪಡೆದಿದ್ದ ಎನ್‌ಸಿಬಿ ತಂಡದ ವಶದಲ್ಲಿರುವ ಗಣಪತ್ ಲಾಲ್ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಗಿರೀಶ್ ಬಾಬು ಎಂಬುವರಿಗೆ ಸೇರಿದ ಕಟ್ಟಡವನ್ನು ಗಣಪತ್ ಬಾಡಿಗೆಗೆ ಪಡೆದಿದ್ದರು. ಆ ಕಟ್ಟಡದಲ್ಲಿ ಮಾದಕ ವಸ್ತು ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಎಂ.ಎಲ್.ಶೇಖರ್ ನೇತೃತ್ವದ ಪೊಲೀಸರ ತಂಡ ಶುಕ್ರವಾರ ರಾತ್ರಿ 7.15ಕ್ಕೆ ದಾಳಿ ನಡೆಸಿದೆ. ಕಟ್ಟಡದ ಒಂದನೇ ಅಂತಸ್ತಿನ ಕೊಠಡಿಯ ವಾಡ್ರೂಬ್‌ ನ ಸೆಲ್ಫ್‌ ಗಳಲ್ಲಿ ನಾನಾ ಕಂಪನಿಯ 11 ಸ್ಮಾರ್ಟ್ ಫೋನ್ ಪತ್ತೆಯಾಗಿವೆ.

ಕೆಳಭಾಗದಲ್ಲಿ ಕಪ್ಪು ಬಣ್ಣದ 360 ಗ್ರಾಂ ತೂಕದ ಪುಡಿ, 54ಗ್ರಾಂ ತೂಕದ ಬಿಳಿ ಬಣ್ಣದ ಪುಡಿ, 957 ಗ್ರಾಂ ತೂಕದ ಬಿಳಿ ಬಣ್ಣದ ಪುಡಿ, 2933 ಗ್ರಾಂ ತೂಕದ ಗಸೆಗಸೆ ಮಾದರಿ ವಸ್ತು, ಕಪ್ಪು ಬಣ್ಣದ ಪೇಸ್ಟ್ ಮಾದರಿಯ ವಸ್ತು, ಬೋರಿಕ್ ಆಸಿಡ್ ಪತ್ತೆಯಾಗಿದೆ.  ಇದರೊಂದಿಗೆ 13 ನೀಲಿ ಬಣ್ಣದ ಕ್ಯಾನ್‌ಗಳಲ್ಲಿ ಬಿಳಿ ಬಣ್ಣದ ಪೌಡರ್ ಸಿಕ್ಕಿದ್ದು, ಅವುಗಳನ್ನು ವಶಪಡಿಸಿಕೊಂಡು ಎಎಸ್‌ಎಲ್ ಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ. ಮನೆ ಬಾಡಿಗೆ ಪಡೆದಿದ್ದ ಗಣಪತ್ ಲಾಲ್, ಅಲ್ಲಿ ವಾಸವಿದ್ದ ಭಜನ್ ಲಾಲ್ ಮತ್ತು ಆತನ ಪತ್ನಿ ವಿರುದ್ಧ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want