LatestMysore

ವಿವೇಕಾನಂದ- ಸಾವಿತ್ರಿಬಾಯಿ ಫುಲೆಯ ಸಾಧನೆ ಸ್ಮರಿಸಿ, ಸಾಧಕರನ್ನು ಸನ್ಮಾನಿಸಿದ ಮೈಸೂರು ಕನ್ನಡ  ವೇದಿಕೆ

ಮೈಸೂರು: ಮೈಸೂರು ಕನ್ನಡ ವೇದಿಕೆ ವತಿಯಿಂದ ಸ್ವಾಮಿ ವಿವೇಕಾನಂದ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜಯಂತ್ಯುತ್ಸವ ಆಚರಿಸುವ ಮೂಲಕ ಸ್ಮರಿಸಲಾಯಿತಲ್ಲದೆ, ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ಕೆಲಸವನ್ನು ಮಾಡಲಾಯಿತು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಮತ್ತು ಸಾವಿತ್ರಿ ಬಾಯಿ ಫುಲೆ ಅವರನ್ನು ಸ್ಮರಿಸಿ ಅವರ ತತ್ವ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಕರೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ  ಮೈಸೂರು ವಿಶ್ವವಿದ್ಯಾನಿಲಯದ  ಸಿಂಡಿಕೇಟ್ ಮಾಜಿ ಸದಸ್ಯ ಡಾ. ಈ ಸಿ ನಿಂಗರಾಜ್ ಗೌಡ ಅವರು ಸ್ವಾಮಿ ವಿವೇಕಾನಂದರ ಕುರಿತಂತೆ ಮಾತನಾಡಿ  ಸ್ವಾಮಿ ವಿವೇಕಾನಂದ ಚಿಂತನೆ ಇಂದಿಗೂ ಶಿಕ್ಷಣ, ಸೇವೆ ಮತ್ತು ಸ್ವಾಭಿಮಾನದ ಮೂಲಕ ಸಮಾಜವನ್ನು ಮುನ್ನಡೆಸುವಲ್ಲಿ ಶಕ್ತಿಯಾಗಿವೆ ಎಂದರು. ಅಲ್ಲದೆ ಸಾವಿತ್ರಿ ಬಾಯಿ ಫುಲೆ ಅವರನ್ನು ಸ್ಮರಿಸುತ್ತಾ ಅವರ ಜೀವನವು ಶಿಕ್ಷಣವೇ ಸಾಮಾಜಿಕ ಕ್ರಾಂತಿಯ ಮೂಲ  ಎಂಬ ಸಂದೇಶವನ್ನು ನೀಡುತ್ತವೆ ಎಂದರು.

ವಿವೇಕಾನಂದರು ಭಾರತೀಯ ಆತ್ಮಚಿಂತನೆಯ ಜಾಗತಿಕ ರಾಯಭಾರಿಯಾಗಿದ್ದು, ಯುವ ಶಕ್ತಿಗೆ ದಾರಿ ತೋರಿದ ಗುರು ಮಾತ್ರವಲ್ಲದೆ, ರಾಷ್ಟ್ರ ನಿರ್ಮಾಣಕ್ಕೆ ಆಧ್ಯಾತ್ಮಿಕ ನೆಲೆ ನೀಡಿದ ಚಿಂತಕ ಎಂದರಲ್ಲದೆ, ಭಾರತ ದೇಶದ ತಾಕತ್ತನ್ನು ಇಡೀ ವಿಶ್ವಕ್ಕೆ  ಸಾರಿದವರು, ಯುವಕರಿಗೆ ಸ್ಪೂರ್ತಿದಾತರು. ಗುರು ರಾಮಕೃಷ್ಣಪರಮಹಂಸರು ಕಟ್ಟಿದ ರಾಮಕೃಷ್ಣ ಆಶ್ರಮವನ್ನು ದೇಶದ ಉನ್ನತಿಗೆ ಕೊಂಡೊಯ್ದವರಾಗಿದ್ದು, ಇವತ್ತು ಆಶ್ರಮ ಸೇವೆಯಲ್ಲಿ ನಿರತವಾಗಿವೆ ಎಂದರು.

ಇದೇ ವೇಳೆ ಸಾವಿತ್ರಿಬಾಯಿ ಫುಲೆ ಅವರ ಕುರಿತು ಮಾತನಾಡಿ ದೇಶದ ಮೊದಲ ಶಿಕ್ಷಕಿಯಾಗಿ ಸಮಾಜವನ್ನು ಸುಧಾರಿಸಿದವರು, ಇಮವರು ಮಹಿಳಾ ಶಿಕ್ಷಣ, ದಲಿತರ ಹಕ್ಕುಗಳು ಮತ್ತು ಸಾಮಾಜಿಕ ಸಮಾನತೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದವರಾಗಿದ್ದು ಅವರ ತತ್ವ ಆದರ್ಶನಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವನ್ನು ಆಯೋಜಿಸಿದ್ದ ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮಾತನಾಡಿ ನಾಡು ನುಡಿಗೆ ಧಕ್ಕೆಯಾದಾಗ ನಾವು ಸುಮ್ಮನಿರುವುದಿಲ್ಲ. ಎಲ್ಲ ಮಹನೀಯರ ಬಗ್ಗೆಯೂ ನಮಗೆ ಗೌರವವಿದೆ. ಹೀಗಾಗಿಯೇ ಅವರೆಲ್ಲರ ಜನ್ಮ ಜಯಂತಿಯನ್ನು ಆಚರಿಸಿ ಅವರ ಸಾಧನೆ ಮತ್ತು ತತ್ವ ಚಿಂತನೆಗಳನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜ ಸೇವಕರಾದ ಪಾರ್ವತಮ್ಮ, ಸಹಶಿಕ್ಷಕರಾದ ಎಲ್.ಕೆ.ರೂಪಾ ಪ್ರಮೋದ್, ಪೌರಕಾರ್ಮಿಕ ಮಹಿಳೆ ಮಂಜುಳಾ ಅವರಿಗೆ ಸಾವಿತ್ರಿಬಾಯಿಫುಲೆ ಪ್ರಶಸ್ತಿಯನ್ನು ಮತ್ತು ಪತ್ರಕರ್ತ ಎಂ.ಮಹೇಶ್ ಭಗೀರಥ, ಜ್ಯೋತಿಷಿ ಕೆ.ಎನ್ ಸುಬ್ರಹ್ಮಣ್ಯ ಶಾಸ್ತ್ರಿ, ಸಾಮಾಜಿಕ ಹೋರಾಟಗಾರ ಸಾಯಿ ಚಾಮರಾಜ, ಉದ್ಯಮಿ ನಂದಕುಮಾರ್ ಅವರಿಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿಯನ್ನು ಪ್ರಧಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್,  ಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ರೈತ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಉಪಸ್ಥಿತರಿದ್ದರು ನಿವೃತ್ತ  ಶಿಕ್ಷಕ ಮನೋಹರ್ ನಿರೂಪಿಸಿದರೆ, ಭವಾನಿ ಪ್ರಾರ್ಥಿಸಿದರು.

 

admin
the authoradmin

Leave a Reply

Translate to any language you want